Site icon Vistara News

Shivamogga Summer Tour: ಜೋಗ ಮಾತ್ರವಲ್ಲ, ಶಿವಮೊಗ್ಗ ಜಿಲ್ಲೆಯಲ್ಲಿ ನೀವು ನೋಡಲೇಬೇಕಾದ ಪ್ರವಾಸಿ ತಾಣಗಳು ಹಲವು!

Shivamogga tourism

ದಟ್ಟವಾದ ಹಚ್ಚ ಹಸುರಿನ ಕಾಡುಗಳಲ್ಲಿ ಸುತ್ತುವುದು ಯಾರಿಗಿಷ್ಟವಿಲ್ಲ ಹೇಳಿ? ಹೀಗಾಗಿಯೇ ಬೇಸಿಗೆಯಲ್ಲಿ ಪ್ರವಾಸ ಹೋರಡಬೇಕು ಎನ್ನುವಾಗ ಕರ್ನಾಟಕದ (karnataka) ಸೊಂಪಾದ ಮಲೆನಾಡು (malenadu) ಪ್ರದೇಶದಲ್ಲಿ ನೆಲೆಯಾಗಿರುವ ಶಿವಮೊಗ್ಗ (Shivamogga Summer Tour) ನೆನಪಾಗುತ್ತದೆ. ಹಚ್ಚ ಹಸುರಿನ ದಟ್ಟವಾದ ಕಾಡುಗಳು, ಧುಮ್ಮಿಕ್ಕುವ ಜಲಪಾತ ಮತ್ತು ಹಳ್ಳಿಗಾಡಿನ ಸೌಂದರ್ಯವನ್ನು ಶಿವಮೊಗ್ಗ ಬರಸೆಳೆದು ಅಪ್ಪಿಕೊಂಡಂತಿದೆ.

ಅಪಾರವಾದ ನೈಸರ್ಗಿಕ ಸಂಪತ್ತನ್ನು ಹೊಂದಿರುವ ಶಿವಮೊಗ್ಗ ಒಂದು ಕಾಲದಲ್ಲಿ ಕೆಳದಿ ಆಡಳಿತಗಾರರ ರಾಜಧಾನಿಯಾಗಿತ್ತು. ಇಂದು ಇದು ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಪ್ರವಾಸಿಗರಿಗೆ ಅತ್ಯಾಧುನಿಕ ಸೌಕರ್ಯಗಳೊಂದಿಗೆ ಪಾರಂಪರಿಕ ನೆನಪುಗಳನ್ನು ಜೊತೆಯಾಗಿಸಿ ಕೊಡುತ್ತದೆ. ಜಲಪಾತ, ಐತಿಹಾಸಿಕ ತಾಣಗಳು ಸೇರಿದಂತೆ ರಜಾ ದಿನಗಳನ್ನು ಕಳೆಯಲು ಇದು ಸೂಕ್ತ ತಾಣವಾಗಿದೆ. ಇಲ್ಲಿಗೆ ಪ್ರವಾಸ ಹೊರಡುವ ಮುನ್ನ ಇಲ್ಲಿನ ಕೆಲವೊಂದು ವಿಶೇಷಗಳನ್ನು ತಿಳಿದುಕೊಳ್ಳೋಣ.


ಜೋಗ ಜಲಪಾತ (jog falls)

ಭಾರತದಲ್ಲೇ ಅತೀ ಎತ್ತರದ ಜಲಪಾತಗಳಲ್ಲಿ ಒಂದಾಗಿರುವ ಜೋಗ ಜಲಪಾತವು ಶಿವಮೊಗ್ಗದ ನೈಸರ್ಗಿಕ ಆಕರ್ಷಣೆಯಾಗಿದೆ. ಭಾರತದ ಪ್ರಧಾನ ಜಲವಿದ್ಯುತ್ ಶಕ್ತಿಯ ಪ್ರಮುಖ ಉತ್ಪಾದನಾ ಕೇಂದ್ರವಾಗಿದ್ದು, 830 ಅಡಿ ಎತ್ತರದಿಂದ ಬಂಡೆಗಳ ಮೇಲೆ ಹರಿಯುವ ಪ್ರಬಲವಾದ ಶರಾವತಿ ನದಿಯಿಂದ ರೂಪುಗೊಂಡ ಜೋಗ ಜಲಪಾತವು ರಾಜ, ರಾಣಿ, ರೋರರ್, ರಾಕೆಟ್ ಎಂಬ ನಾಲ್ಕು ಧಾರೆಯಾಗಿ ಮೇಲಿನಿಂದ ಕೆಳಗೆ ಧುಮ್ಮಿಕಿ ಹರಿಯುತ್ತದೆ. ಪ್ರಕೃತಿ ಪ್ರಿಯರಿಗೆ ಇಲ್ಲಿ ಮಳೆ, ಗುಡುಗಿನ ಅನುಭವ, ರಭಸವಾದ ಗಾಳಿ, ಜಲಪಾತದ ನಡುವೆ ಕಾಣಿಸುವ ಮಳೆಬಿಲ್ಲು ಆಕರ್ಷಕ ನೋಟವನ್ನು ಒದಗಿಸುತ್ತದೆ. ವರ್ಷದಲ್ಲಿ ಸುಮಾರು 2೦ ಲಕ್ಷಕ್ಕೂ ಹೆಚ್ಚು ಸಂದರ್ಶಕರು ಇಲ್ಲಿಗೆ ಆಗಮಿಸುತ್ತಾರೆ.

ಕೆಳದಿ ರಾಜವಂಶದ ಕುರುಹು

ವಿಜಯನಗರ ಸಾಮ್ರಾಜ್ಯದ ವಿಭಜನೆಯ ಅನಂತರ 18ನೇ ಶತಮಾನದವರೆಗೆ ಶಿವಮೊಗ್ಗವನ್ನು ಆಳಿದವರು ಕೆಳದಿಯ ರಾಜವಂಶ. ಇಲ್ಲಿ ಭವ್ಯವಾದ ದೇಗುಲಗಳನ್ನು ನಿರ್ಮಿಸಿದ್ದಾರೆ. ಕೃಷಿಯಲ್ಲಿ ಹೊಸಹೊಸ ಪ್ರಯೋಗಗಳನ್ನು ಜಾರಿಗೆ ತಂದ ಇವರು ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ ರಾಜವಂಶ ಎಂಬ ಖ್ಯಾತಿ ಪಡೆದಿದೆ. ಇವರ ಕಾಲದಲ್ಲಿ ಚಾಳುಕ್ಯ ಹೊಯ್ಸಳರ ವಾಸ್ತುಶಿಲ್ಪದಲ್ಲಿ ರಾಜಮನೆತನದ ದೇವಾಲಯವಾಗಿ ಅಘೋರೇಶ್ವರ ದೇವಾಲಯ, ರಾಮೇಶ್ವರ ದೇವಾಲಯ ಇಂದಿಗೂ ತನ್ನ ರಾಜ ವೈಭವವನ್ನು ಉಳಿಸಿಕೊಂಡಿದೆ.

ಇದನ್ನೂ ಓದಿ: Tigers fasting: ವಾರದಲ್ಲೊಂದು ದಿನ ಉಪವಾಸ ಮಾಡುತ್ತಿವೆ ಈ ಹುಲಿಗಳು!

ಚಾರಣಕ್ಕೆ ಸೂಕ್ತ

ನಿತ್ಯಹರಿದ್ವರ್ಣದ ಕಾಡುಗಳು, ಹುಲ್ಲಿನ ಜೌಗು ಪ್ರದೇಶಗಳು ಮತ್ತು ಎತ್ತರದ ಶಿಖರಗಳನ್ನು ಒಳಗೊಂಡಿರುವ ಶಿವಮೊಗ್ಗವು ಚಾರಣ ಪ್ರಿಯರಿಗೆ ಇಷ್ಟವಾಗುವುದು. 1895 ಮೀಟರ್ ಎತ್ತರದ ಕೊಡಚಾದ್ರಿಯು ಅಪರೂಪದ ಪಕ್ಷಿಗಳು ಮತ್ತು ಅದ್ಬುತವಾದ ಆರ್ಕಿಡ್ ಗಳಿಗೆ ಹೆಸರುವಾಸಿಯಾಗಿದೆ.
ಭದ್ರಾ ನದಿಯಲ್ಲಿ ದೊಡ್ಡಮಕ್ಕಲಿಯಿಂದ ಭದ್ರಾವತಿ ಅಣೆಕಟ್ಟಿನವರೆಗೆ ರಿವರ್ ರಾಫ್ಟಿಂಗ್‌ ನಡೆಸಬಹುದು. ಶರಾವತಿ ವನ್ಯಜೀವಿ ಅಭಯಾರಣ್ಯದಲ್ಲಿ ಉಂಚಳ್ಳಿ ಜಲಪಾತ, ವನ್ಯಜೀವಿಗಳ ವೀಕ್ಷಣೆಯೊಂದಿಗೆ ಚರಣಕ್ಕೂ ಅವಕಾಶವಿದೆ.


ಕಾಫಿ ತೋಟಗಳು

ಶಿವಮೊಗ್ಗದ ಮತ್ತೊಂದು ವಿಶೇಷತೆ ಎಂದರೆ ಕಾಫಿಯ ಬೀಜಗಳು. ಇಲ್ಲಿನ ಪರಿಮಳಯುಕ್ತವಾದ ಕಾಫಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಸಾಂಪ್ರದಾಯಿಕವಾಗಿ‌ ಬೀಜಗಳನ್ನು ಹುರಿದು ತಯಾರಿಸುವ ಕಾಫಿಯ ರುಚಿಯನ್ನು ಅನುಭವಿಸುವುದೇ ಸ್ವರ್ಗ ಸುಖ.
ಹೇರಳವಾದ ಕಾಫಿ ತೋಟಗಳನ್ನು ಇಲ್ಲಿ ಕಣ್ತುಂಬಿಸಿಕೊಳ್ಳಬಹುದು. ಸೊಂಪಾದ ಪೊದೆಗಳ ನಡುವೆ ಅಥವಾ ಬ್ರಿಟಿಷರು ನಿರ್ಮಿಸಿದ ಪ್ಲಾಂಟೇಶನ್ ಬಂಗಲೆಗಳು, ಹೋಮ್‌ಸ್ಟೇಗಳನ್ನು ಇಲ್ಲಿ ಕಾಣಬಹುದಾಗಿದೆ.

ವನ್ಯಜೀವಿಗಳಿಗೆ ಆಶ್ರಯ

ಶಿವಮೊಗ್ಗದಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟಗಳು ವನ್ಯಜೀವಿಗಳಿಗೆ ಆಶ್ರಯ ತಾಣವಾಗಿದೆ. ಭದ್ರಾ ವನ್ಯಜೀವಿ ಅಭಯಾರಣ್ಯದಲ್ಲಿ ಹುಲಿ, ಚಿರತೆ, ಕಾಡು ನಾಯಿಗಳನ್ನು ಕಾಣಬಹುದು.
ಶಿವಮೊಗ್ಗ ಪಟ್ಟಣಕ್ಕೆ ಹೊಂದಿಕೊಂಡಿರುವ ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯವು ವಿವಿಧ ಜಾತಿಯ ಹಕ್ಕಿಗಳನ್ನು ಸೆಳೆಯುತ್ತದೆ. ಮುಂಜಾನೆ ಹಿನ್ನೀರಿನಲ್ಲಿ ವಲಸೆ ಹಕ್ಕಿಗಳನ್ನು ಕಾಣಬಹುದಾಗಿದೆ.
ಜೋಗ ಜಲಪಾತದ ಬಳಿ ಇರುವ ಶರಾವತಿ ವ್ಯಾಲಿ ಲಯನ್ ಸಫಾರಿಯ ಹುಲ್ಲುಗಾವಲಿನಲ್ಲಿ ಸಿಂಹ, ಜಿಂಕೆ ಮತ್ತು ಕರಡಿಗಳನ್ನು ಕಾಣಬಹುದು. ಇಲ್ಲಿರುವ ಪುಟ್ಟ ಪ್ರಾಣಿಸಂಗ್ರಹಾಲಯ ಪ್ಯಾಂಥರ್ಸ್, ಸರೀಸೃಪಗಳು ಮತ್ತು ನಿಶಾಚರ ಜೀವಿಗಳನ್ನು ಒಳಗೊಂಡಿದೆ.


ಆಕರ್ಷಿಸುವ ದೇವಾಲಯಗಳು

ಶಿವಮೊಗ್ಗ ಪಟ್ಟಣದಲ್ಲೇ ಭವ್ಯವಾದ ದೇವಾಲಯಗಳಿವೆ. ಶಿವಪ್ಪ ನಾಯಕನ ಅರಮನೆಯ ಅವಶೇಷಗಳು, ನಂದಿ ಪ್ರತಿಮೆ ಮತ್ತು ಹೊಯ್ಸಳ-ಕದಂಬ ವಿನ್ಯಾಸಗಳನ್ನು ಒಳಗೊಂಡಿರುವ ಪಡುತೇಶ್ವರ ಸ್ವಾಮಿ ದೇವಾಲಯ ಇಲ್ಲಿನ ಆಕರ್ಷಣೆಯಾಗಿದೆ.
12 ನೇ ಶತಮಾನದಲ್ಲಿ ಸ್ಥಾಪಿಸಲಾದ ಸಿದ್ಧಾರೂಢ ಮಠದ ಸಂಕೀರ್ಣವು ಆಧ್ಯಾತ್ಮಿಕ ಗುರು ಸಿದ್ಧಾರೂಢರ ಸಮಾಧಿ, ದೇಗುಲವನ್ನು ಒಳಗೊಂಡಿದೆ. ಇಲ್ಲಿ ಅವರ ಆತ್ಮಚರಿತ್ರೆ, ವಸ್ತುಗಳು, ಕಲ್ಲಿನ ಶಾಸನಗಳನ್ನು ಕಾಣಬಹುದಾಗಿದೆ.

ಸಾಂಪ್ರದಾಯಿಕ ಖಾದ್ಯ

ಸಾಂಪ್ರದಾಯಿಕ ಖಾದ್ಯಗಳಿಗೂ ಶಿವಮೊಗ್ಗ ಹೆಸರುವಾಸಿಯಾಗಿದೆ. ಮಸಾಲೆಯುಕ್ತ ಉಪ್ಪಿಟ್ಟು ,ಅಕ್ಕಿ ರೊಟ್ಟಿ, ಕಡುಬು, ದೊನ್ನೆ ಬಿರಿಯಾನಿಯನ್ನು ಬಾಳೆ ಎಲೆಯಲ್ಲಿ ನೀಡುವ ಸಂಪ್ರದಾಯವಾಗಿದೆ. ಇವುಗಳ ರುಚಿಯನ್ನು ಆಸ್ವಾದಿಸುವುದೇ ಒಂದು ಹಬ್ಬ. ಗುಳ್ಳಬದನೆಯ ಖಾದ್ಯಗಳು, ಮೆಂತೆ ಚಟ್ನಿ ಇಲ್ಲಿ ಜನಪ್ರಿಯವಾಗಿದೆ.
ಮೈಸೂರ್ ಪಾಕ್, ಚಾಕಲೇಟ್, ಒಣ ಹಣ್ಣುಗಳು, ತುಪ್ಪದಿಂದ ಮಾಡಿರುವ ಚಿರೋಟಿ ಪುರಿ, ತಾಜಾ ಹಲಸಿನ ಹಣ್ಣುಗಳು, ಮಾವಿನ ಹಣ್ಣು, ಬಾಳೆಹಣ್ಣುಗಳ ರುಚಿಯನ್ನು ಇಲ್ಲಿ ಸವಿಯಬಹುದು.


ಪ್ರಯಾಣಕ್ಕಿರುವ ಅನುಕೂಲತೆಗಳು

ಶಿವಮೊಗ್ಗ ವಿಮಾನ ನಿಲ್ದಾಣವು ಬೆರಳೆಣಿಕೆಯಷ್ಟು ವಿಮಾನಗಳನ್ನು ಮಾತ್ರ ಹೊಂದಿದೆ. ಶಿವಮೊಗ್ಗ ಪಟ್ಟಣದಿಂದ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಜಂಕ್ಷನ್‌ಗಳಿಗೆ ಮೀಟರ್ ಗೇಜ್ ರೈಲುಗಳ ಮೂಲಕ ಸಂಪರ್ಕ ಕಲ್ಪಿಸುತ್ತವೆ. ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ಗಳು ರಾಜ್ಯದ ಬಹುತೇಕ ಎಲ್ಲ ನಗರಗಳಿಗೂ ಸಂಪರ್ಕ ಕಲ್ಪಿಸುತ್ತವೆ.

Exit mobile version