ವಿದೇಶಕ್ಕೆ ಪ್ರವಾಸ ಮಾಡಲಿಚ್ಛಿಸುವ ಬಜೆಟ್ ಪ್ರವಾಸಿಗರಿಗೆ ಅಂದರೆ ಕಡಿಮೆ ವೆಚ್ಚದಲ್ಲಿ ಪ್ರವಾಸ ಮಾಡಬಯಸುವ ಎಲ್ಲರಿಗೂ ಸಿಗುವ ಮೊದಲ ಆಯ್ಕೆ ಥಾಯ್ಲೆಂಡ್. ಪಿಕ್ಚರ್ ಪರ್ಫೆಕ್ಟ್ ಪೋಸ್ಟ್‌ಕಾರ್ಡ್‌ನ ದೃಶ್ಯಗಳಂತೆ ಕಣ್ಮನ ತಣಿಸುವ ಸುಂದರ ದೃಶ್ಯಗಳಿಂದ ಹಿಡಿದು, ಝಗಮಗಿಸುವ ನೈಟ್‌ಲೈಫ್‌ವರೆಗೆ, ಮನಮೋಹಕ ಬೀಚ್‌ನಿಂದ ಸಮುದ್ರತೀರಗಳಿಂದ ಹಿಡಿದು ಪುರಾತನ ದೇವಾಲಯಗಳವರೆಗೆ ಎಲ್ಲವನ್ನೂ ತನ್ನೊಳಗೆ ಬಚ್ಚಿಟ್ಟಿರುವ ಥಾಯ್ಲೆಂಡ್ ಎಂಬ ಪುಟ್ಟ ದೇಶಕ್ಕೆ ಎಲ್ಲ ಬಗೆಯ ಪ್ರವಾಸಿಗರನ್ನೂ ಸೆಳೆಯುವಂಥ ಮೋಹಕ ಶಕ್ತಿಯಿದೆ. ʻಲ್ಯಾಂಡ್ ಆಫ್ ಸ್ಮೈಲ್ಸ್ʼ ಎಂದೇ ಕರೆಸಿಕೊಳ್ಳುವ ಇದು ಪ್ರವಾಸಿಗರಿಗೆ ಬಗೆಬಗೆಯ ಸಂಸ್ಕೃತಿಯನ್ನು ಪರಿಚಯಿಸುವ ಶಾಂತಿಯ ತಾಣ.
ಇಂಥ ಥಾಯ್ಲೆಂಡಿಗೆ ಕಡಿಮೆ ವೆಚ್ಚದಲ್ಲಿ ಹೋಗಬಯಸುವ ಪ್ರವಾಸೀ ಪ್ರಿಯರು ಹೋಗುವ ಮೊದಲು ಕೆಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬಹುದು.
ಥಾಯ್ಲೆಂಡಿಗೆ ಹೋಗಲಿಚ್ಛಿಸುವ ಮಂದಿ ಮೊದಲು ಬಜೆಟ್ ಎಷ್ಟು ಅದಕ್ಕಾಗಿ ತೆಗೆದಿರಿಸಬಹುದು ಎಂಬುದನ್ನು ಲೆಕ್ಕಾಚಾರ ಹಾಕುವುದು ಒಳ್ಳೆಯದು. ನಮ್ಮ ಬಜೆಟ್‌ಗೆ ಅನುಸಾರವಾಗಿ ಪ್ಲಾನ್ ಮಾಡಬಹುದಾದ ದೇಶವಿದು. ಸೋಲೋ ಮಂದಿಗೂ, ಕುಟುಂಬ ಸಮೇತರಾಗಿ ಪ್ರವಾಸ ಮಾಡುವವರಿಗೂ ಅಥವಾ ಜೋಡಿಗಳಿಗೂ ಇದು ಉತ್ತಮ ತಾಣ. ಥಾಯ್ಲೆಂಡಿನಲ್ಲಿ ಒಂದು ದಿನಕ್ಕೆ ಕಡಿಮೆ ಎಂದರೆ ಸುಮಾರು ೧,೬೫೦ ರೂಪಾಯಿಗಳಿಂದ ಹಿಡಿದು ೩೩,೦೦೦ ರೂಪಾಯಿಗಳವರೆಗೂ ಖರ್ಚು ಮಾಡಬಹುದು. ವಿಮಾನ ಆಯ್ಕೆಯ ವೇಳೆ ಕಡಿಮೆ ವೆಚ್ಚದಲ್ಲಿ ಮುಗಿಯಬೇಕಿದ್ದರೆ, ಮುಖ್ಯ ವಿಮಾನ ನಿಲ್ದಾಣಕ್ಕೇ ಬುಕ್ ಮಾಡಿಕೊಂಡು ಅಲ್ಲಿಂದ ರಸ್ತೆಯ ಮೂಲಕ ಬೇಕಾದೆಡೆಗಳಿಗೆ ಪಯಣಿಸಬಹುದು.
ಆಹಾರಪ್ರಿಯರಿಗೆ ಥಾಯ್ಲೆಂಡ್ ಹಬ್ಬದೂಟವನ್ನೇ ನೀಡುತ್ತದೆ. ಯಾಕೆಂದರೆ ಇಲ್ಲಿ ಎಲ್ಲ ಬಗೆಯ ಪ್ರವಾಸಿಗರೂ ಬರುವುದರಿಂದ ಈ ದೇಶದಲ್ಲಿ ಎಲ್ಲ ಬಗೆಯ ಕಾಂಟಿನೆಂಟಲ್ ಆಹಾರದ ಆಯ್ಕೆಯಿದೆ.
ಇನ್ನು ಉಳಿದುಕೊಳ್ಳುವ ವಿಚಾರಕ್ಕೆ ಬಂದರೆ ಕಡಿಮೆ ಎಂದರೆ ೫೦೦ ರೂಪಾಯಿಗಳಿಂದ ಹಿಡಿದು ೮೦,೦೦೦ ರೂಪಾಯಿಗಳವರೆಗೆ ಪ್ರತಿ ರಾತ್ರಿಗೆ ಖರ್ಚು ಮಾಡಲು ನೀವು ರೆಡಿಯಿದ್ದರೆ ಬೇಕಾದ ಆಯ್ಕೆಯ ಹೊಟೇಲುಗಳು ಇಲ್ಲಿ ಲಭ್ಯವಿವೆ.
ಥಾಯ್ಲೆಂಡಿನಲ್ಲಿ ತಿರುಗಾಡಲು ಟ್ಯಾಕ್ಸಿಗಳು ಸುಲಭವಾಗಿ ಕಡಿಮೆ ದರದಲ್ಲಿ ಸಿಗುತ್ತದೆ. ರೈಲು ಸೇವೆ, ಬಸ್ ವ್ಯವಸ್ಥೆ ಎಲ್ಲವೂ ಇವೆ. ಸಾರ್ವಜನಿಕ ಸಂಚಾರವನ್ನು ಬಳಸಿದರೆ ಬಜೆಟ್ ಪ್ರವಾಸಿಗರು ಕಡಿಮೆ ವೆಚ್ಚದಲ್ಲಿ ತಿರುಗಾಡಬಹುದು. ಕಡಿಮೆ ಎಂದರೆ ದಿನಕ್ಕೆ ವ್ಯಕ್ತಿಯೊಬ್ಬರಿಗೆ ೮೦ ರೂಪಾಯಿಗಳಿಂದ ೨೦೦ ರೂಪಾಯಿಗಳವರೆಗೆ ಖರ್ಚು ತಗಲಬಹುದು.
ಇದನ್ನೂ ಓದಿ: Astro tourism: ರಾಜಸ್ಥಾನಕ್ಕೆ ಪ್ರವಾಸ ಮಾಡಿ: ರಾತ್ರಿಗಳಲ್ಲಿ ನಕ್ಷತ್ರ ಪುಂಜ ಕಣ್ತುಂಬಿಕೊಳ್ಳಿ!
ಥಾಯ್ಲೆಂಡ್ ಪ್ರವಾಸಕ್ಕೆ ಸೂಕ್ತ ಸಮಯ ನವೆಂಬರ್ ತಿಂಗಳಿಂದ ಏಪ್ರಿಲ್ ತಿಂಗಳವರೆಗೆ. ಆಗ ಥಾಯ್ಲೆಂಡ್ ಬಹಳ ಸುಂದರವಾಗಿ ಕಾಣುತ್ತದೆ. ಸ್ವಚ್ಛ ಶುಭ್ರ ಆಕಾಶ, ನೀಲಿ ಹಸಿರು ಸಮುದ್ರಗಳು, ಹೆಚ್ಚು ಬಿಸಿಲೂ ಇಲ್ಲದೆ, ಮಳೆಯೂ ಇಲ್ಲದೆ ಆರಾಮವಾಗಿ ತಿರುಗಾಡಬಹುದಾದ ವಾತಾವರಣ ಈ ಸಮಯದಲ್ಲಿ ಸಿಗುತ್ತದೆ. ಆದರೆ, ಈ ಕಾಲ ಪ್ರವಾಸಿಗರಿಂದ ತುಂಬಿ ಹೋಗುವುದರಿಂದ ವೆಚ್ಚ ಅಧಿಕವಾಗಬಹುದು. ಹೊಟೇಲ್ ದರ, ಪ್ರಯಾಣ ವೆಚ್ಚ ಎಲ್ಲವೂ ಸ್ವಲ್ಪ ಹೆಚ್ಚೇ ಖರ್ಚಾಗುತ್ತದೆ. ಹಾಗಾಗಿ ಕಡಿಮೆ ಖರ್ಚಿನಲ್ಲಿ ಪ್ರವಾಸ ಮಾಡುವವರಿಗೆ ಜುಲೈ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗಿನ ಕಾಲ ಅತ್ಯಂತ ಸೂಕ್ತ. ಈ ಸಮಯದಲ್ಲಿ ಯಾವ ಪ್ರವಾಸಿಗ ಗಿಜಿಗಿಜಿಯೂ ಇಲ್ಲದೆ, ಸಾವಕಾಶವಾಗಿ, ಡಿಸ್ಕೌಂಟ್‌ನಲ್ಲಿ ಸಿಗುವ ಚಂದನೆಯ ಹೊಟೇಲುಗಳಲ್ಲಿ ಉಳಿದುಕೊಂಡು ಥಾಯ್ಲೆಂಡಿನ ಸೌಂದರ್ಯ ಆಸ್ವಾದಿಸಿ ಬರಬಹುದು.
ಥಾಯ್ಲೆಂಡಿಗೆ ಭಾರತೀಯರಿಗೆ ವೀಸಾ ಆನ್ ಅರೈವಲ್ ಮಾದರಿಯಲ್ಲಿ ಸಿಗುತ್ತದೆ. ಇದಕ್ಕೆ ಪ್ರತಿಯೊಬ್ಬರೂ ಅಂದಾಜು ಸುಮಾರು ೪,೪೬೦ ರೂಪಾಯಿಗಳನ್ನು ಅಂದರೆ ಸುಮಾರು ೨೦೦೦ ಟಿಎಚ್‌ಬಿ ಹಣ ತೆರಬೇಕಾಗುತ್ತದೆ. ಇ-ವಿಸಾ ಆನ್ ಅರೈವಲ್ ಕೂಡಾ ಲಭ್ಯವಿರುವಿರುವಿದರಿಂದ ಇದು ಸುಲಭವಾಗಿ ಆಗುತ್ತದೆ. ಒಂದು ಟ್ರಾವೆಲ್ ಇನ್ಶೂರೆನ್ಸ್, ಆರೋಗ್ಯ ತಪಾಸಣೆಗಳು ಇತ್ಯಾದಿಗಳನ್ನು ಮೊದಲೇ ಮಾಡಿಕೊಳ್ಳುವುದು ಒಳ್ಳೆಯದು.
ಇನ್ನು ಥಾಯ್ಲೆಂಡಿನಲ್ಲಿ ನೋಡಬೇಕಾದ ಸ್ಥಳಗಳು ಎಂದು ಪಟ್ಟಿಮಾಡ ಹೊರಟರೆ ಎಲ್ಲವೂ ಅದ್ಭುತ ಸ್ಥಳಗಳೇ. ಅದಕ್ಕಾಗಿ ಅವರವರ ಆಸಕ್ತಿಗೆ ಅನುಗುಣವಾಗಿ ಮೊದಲೇ ಕೊಂಚ ಗೂಗಲ್ ಸರ್ಚ್ ಮಾಡಿಟ್ಟುಕೊಂಡು ರೆಡಿಯಾದರೆ ಉತ್ತಮ. ಕಡಿಮೆ ಎಂದರೂ ಒಂದು ವಾರವಾದರೂ ಇದ್ದು ಬಂದರೆ ಹೋದದ್ದಕ್ಕೂ ಸಾರ್ಥಕ!