ಕರ್ನಾಟಕ ಒಂದು ರೀತಿಯಲ್ಲಿ ವಿಶೇಷ ಸೌಂದರ್ಯವನ್ನು ಹೊತ್ತಿರುವ ನಾಡು. ಒಂದತ್ತ ಬೆಟ್ಟ ಗುಡ್ಡಗಳ ಸಾಲಾದರೆ ಇನ್ನೊಂದತ್ತ ರಮಣೀಯ ಕಡಲ ಸಾಲು. ನಿಸರ್ಗ ದೇವಿ ಮೈತಳೆದು ನಿಂತಿರುವ ನಮ್ಮ ರಾಜ್ಯದಲ್ಲಿ ಹಲವಾರು ಪ್ರಸಿದ್ಧ ಬೀಚ್‌ಗಳಿವೆ. ಸಂಜೆಯ ಸೂರ್ಯಾಸ್ತ ತೋರುತ್ತಾ ಮನಸ್ಸಿನ ನೋವನ್ನೂ ಮರೆಸುವ ಕಡಲ ಕಿನಾರೆಗಳಿವೆ. ಅಂತಹ ಅದ್ಭುತ ಹತ್ತು ಬೀಚ್‌ಗಳ ಬಗ್ಗೆ ಇಲ್ಲಿದೆ (Top 10 beaches in Karnataka) ವಿವರ.
ಓಂ ಬೀಚ್:
ದಕ್ಷಿಣ ಭಾರತದ ಕಾಶಿ ಎಂದು ಕರೆಸಿಕೊಳ್ಳುವುದು ಗೋಕರ್ಣ. ಸಹ್ಯಾದ್ರಿ ಗಿರಿ ಸಾಲೆ ಮತ್ತು ಅರಬ್ಬಿ ಸಮುದ್ರದ ನಡುವಿನ ತೊಟ್ಟಿಲಂತಿರುವ ಈ ಗೋಕರ್ಣದಲ್ಲಿ ನಿಮಗೆ ಕಾಣಸಿಗುವುದು ಓಂ ಬೀಚ್. ಇಲ್ಲಿನ ಕಡಲ ದಡ ಓಂ ಆಕಾರದಲ್ಲಿ ಇದೆಯಾದ್ದರಿಂದ ಈ ಬೀಚ್‌ಗೆ ಓಂ ಬೀಚ್ ಎನ್ನುವ ಹೆಸರು ಬಂದಿದೆ. ಈ ಬೀಚ್‌ನ ಹತ್ತಿರದಲ್ಲೇ ಇನ್ನೂ ಕೆಲವು ಬೀಚ್‌ಗಳಿವೆ. ದೂರದಿಂದ ಬರುವ ಪ್ರವಾಸಿಗರಿಗೆ ವಾಸ್ತವ್ಯ ಹೂಡುವುದಕ್ಕೆ ನೆಲೆ ನೀಡುವ ನಿಟ್ಟಿನಲ್ಲಿ ಇಲ್ಲಿ ಹಲವು ರೆಸಾರ್ಟ್‌ಗಳು, ಹೋಟೆಲ್‌ಗಳು ಮತ್ತು ಹೋಂ ಸ್ಟೇಗಳೂ ಇವೆ. ಕರಾವಳಿಯ ಸೌಂದರ್ಯ ಸವಿಯುವುದರ ಜತೆ ಗೋಕರ್ಣದ ದೇಗುಲ ದರ್ಶನ ಮಾಡುವ ಅವಕಾಶ ಇಲ್ಲಿಗೆ ಬರುವ ಪ್ರವಾಸಿಗರಿಗೆ ಸಿಗುತ್ತದೆ.
ಕುಡ್ಲೆ ಬೀಚ್:
ಗೋಕರ್ಣದಲ್ಲಿಯೇ ನಿಮಗೆ ಸಿಗುವ ಇನ್ನೊಂದು ಪ್ರಸಿದ್ಧ ಬೀಚ್ ಎಂದರೆ ಅದು ಕುಡ್ಲೆ ಬೀಚ್. ಇಲ್ಲಿ ಬೀಚ್ ವ್ಯೂವ್ ರೆಸಾರ್ಟ್, ಸ್ಪಾ ಎಲ್ಲವೂ ನಿಮಗೆ ಲಭ್ಯ. ಈ ಬೀಚ್ ಗೋಕರ್ಣ ನಗರದಿಂದ ಸುಮಾರು ಏಳು ಕಿ.ಮೀ. ದೂರದಲ್ಲಿದೆ. ನಿಮ್ಮ ಕುಟುಂಬದೊಂದಿಗೆ ತೆರಳಿ ಬೀಚ್‌ನಲ್ಲಿ ಆಟವಾಡಿ, ದೇವರ ದರ್ಶನ ಪಡೆದು ಬರುವುದಕ್ಕೆ ಇದು ಸೂಕ್ತ ಸ್ಥಳವೆನ್ನಬಹುದು.
ತಣ್ಣೀರಭಾವಿ ಬೀಚ್:
ಮಂಗಳೂರಿನಲ್ಲಿ ತಣ್ಣೀರಭಾವಿ ಬೀಚ್ ಇದೆ. ಕಡಲ ತೀರದಲ್ಲಿ ಸಣ್ಣ ಪುಟ್ಟಗಳು ಮರಗಳು ಇರುವುದರಿಂದ ಈ ಬೀಚ್‌ನ ನೀರು ಹೆಚ್ಚೇ ನೀಲಿಯಾಗಿ ಕಾಣಿಸುತ್ತದೆ. ಸ್ವಚ್ಛವಾಗಿರುವ ಈ ಬೀಚ್‌ನಲ್ಲಿ ಪಾರ್ಕಿಂಗ್ ಸ್ಥಳ, ಶೌಚಾಲಯ, ಸಣ್ಣ ಪುಟ್ಟ ಅಂಗಡಿಗಳಿವೆ. ಹಾಗೆಯೇ ಯಾರಿಗಾದರೂ ತೊಂದರೆಯುಂಟಾದರೆ ಅವರನ್ನು ಕಾಪಾಡಲೆಂದೇ ಜೀವರಕ್ಷಕರನ್ನೂ ನಿಯೋಜಿಸಲಾಗಿದೆ. ಬೀಚ್ ಹತ್ತಿರವೇ 15 ಎಕರೆ ವಿಶಾಲವಾದ ಮರಗಳ ಪಾರ್ಕ್ ಕೂಡ ಇದೆ. ಇಲ್ಲಿಂದ ನಿಮಗೆ ಪಣಂಬೂರು ಬೀಚ್, ಸೋಮೇಶ್ವರ ಬೀಚ್, ಕದ್ರ ಮಂಜುನಾಥ ದೇವಸ್ಥಾನ, ಸುಲ್ತಾನ್ ಬತ್ತೇರಿ ಎಲ್ಲವೂ ಹತ್ತಿರವೇ ಇರುವುದರಿಂದ ಈ ಎಲ್ಲ ಸ್ಥಳಗಳಿಗೂ ನೀವು ಭೇಟಿ ನೀಡಬಹುದು.
ಹಾಫ್ ಮೂನ್ ಬೀಚ್:
ಇದೂ ಕೂಡ ಗೋಕರ್ಣದಲ್ಲಿಯೇ ಇರುವ ಬೀಚ್‌ಗಳಲ್ಲಿ ಒಂದಾಗಿದೆ. ಈ ಬೀಚ್‌ಗೆ ಬೇರೆ ಬೀಚ್‌ಗಳಂತೆ ರಸ್ತೆ ಮಾರ್ಗವಾಗಿ ಹೋಗುವುದಕ್ಕೆ ಸಾಧ್ಯವಿಲ್ಲ. ಸುಮಾರು ಒಂದು ಕಿ.ಮೀ. ದೂರ ಟ್ರೆಕ್ಕಿಂಗ್ ಮಾಡಿದ ಮೇಲೆ ಸಿಗುವಂತಹ ಬೀಚ್ ಇದು. ಈ ಬೀಚ್‌ಗೆ ಹೋಗುವುದಕ್ಕೆ ಇನ್ನೊಂದು ದಾರಿಯೂ ಇದೆ. ಓಂ ಬೀಚ್‌ನಿಂದ ನಿಮಗೆ ಈ ಹಾಫ್ ಮೂನ್ ಬೀಚ್‌ಗೆ ಬೋಟಿಂಗ್ ಸೌಲಭ್ಯ ಇರುತ್ತದೆ. ಬೋಟ್ ಮೂಲಕ ಕೂಡ ಇಲ್ಲಿಗೆ ತಲುಪಬಹುದು.
ಮಲ್ಪೆ ಬೀಚ್:
ಕರಾವಳಿ ಭಾಗದಲ್ಲಿ ಅತ್ಯಂತ ಪ್ರಸಿದ್ಧ ಬೀಚ್‌ಗಳಲ್ಲಿ ಒಂದು ಮಲ್ಪೆ ಬೀಚ್. ಈ ಬೀಚ್ ಉಡುಪಿ ನಗರದಿಂದ ಸುಮಾರು ಆರು ಕಿಲೋಮೀಟರ್ ದೂರದಲ್ಲಿದೆ. ಈ ಬೀಚ್‌ನಿಂದ ನೀವು ಸೇಂಟ್ ಮೇರಿಸ್ ದ್ವೀಪಕ್ಕೂ ಹೋಗಬಹುದು. ಅಲ್ಲಿಗೆ ಹೋಗುವುದಕ್ಕೆ ಬೋಟ್ ವ್ಯವಸ್ಥೆಯಿದ್ದು, ಬೋಟ್‌ನಲ್ಲಿ ಪ್ಲೇ ಆಗುವ ದೊಡ್ಡ ಸದ್ದಿನ ಮ್ಯೂಸಿಕ್‌ಗೆ ಕುಣಿಯುತ್ತ ಮತ್ತು ಸುತ್ತಲಿನ ಕಡಲ ಸೌಂದರ್ಯವನ್ನು ಸವಿಯುತ್ತ ನೀವು ದ್ವೀಪವನ್ನು ತಲುಪಬಹುದು. ಈ ಬೀಚ್‌ಗೆ ಬಂದವರು ಉಡುಪಿ ಶ್ರೀ ಕೃಷ್ಣನ ದರ್ಶನವನ್ನೂ ಮಾಡಬಹದಾಗಿದೆ.
ಕಾಸರಕೋಡು ಬೀಚ್:
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡು ಗ್ರಾಮದಲ್ಲಿ ಅದ್ಭುತವಾದ ಬೀಚ್ ಇದೆ. ಕರ್ನಾಟಕದಲ್ಲಿ ಬ್ಲೂ ಫ್ಲಾಗ್ ಪ್ರಮಾಣೀಕೃತ ಬೀಚ್‌ಗಳಲ್ಲಿ ಇದೂ ಒಂದು. ಫೌಂಡೇಶನ್ ಫಾರ್ ಎನ್ವಿರಾನ್ಮೆಂಟಲ್ ಎಜುಕೇಶನ್ ಪರಿಸರ ನಿರ್ವಹಣೆ ಮಾನದಂಡವನ್ನು ಲೆಕ್ಕಿಸಿ ಈ ಪ್ರಮಾಣಪ್ರವನ್ನು ನೀಡುತ್ತದೆ. ಈ ಕಾಸರಕೋಡು ಬೀಚ್ ಸುಂದರವಾಗಿರುವುದಷ್ಟೇ ಅಲ್ಲದೆ ಸ್ವಚ್ಛವಾಗಿದ್ದು, ಉತ್ತಮವಾಗಿ ನಿರ್ವಹಿಸಲ್ಪಟ್ಟಿದೆ.
ಪಡುಬಿದ್ರಿ ಬೀಚ್:
ಇದೂ ಕೂಡ ಕರ್ನಾಟಕದಲ್ಲಿ ಬ್ಲೂ ಫ್ಲಾಗ್ ಪ್ರಮಾಣೀಕೃತ ಬೀಚ್‌ಗಳಲ್ಲಿ ಒಂದಾಗಿದೆ. ಈ ಪಡುಬಿದ್ರಿ ಬೀಚ್ ಉಡುಪಿ ಜಿಲ್ಲೆಯಲ್ಲಿದೆ. ಉಡುಪಿ ನಗರದಿಂದ ಈ ಬೀಚ್‌ಗೆ 29 ಕಿಲೋಮೀಟರ್ ಅಂತರವಿದೆ. ಸ್ವಚ್ಛವಾಗಿರುವ ಈ ಬೀಚ್‌ನಲ್ಲಿ ನೀರು ನೀಲಿಯಾಗಿ ಕಾಣಿಸಿಕೊಳ್ಳುವುದರಿಂದ ಬೀಚ್‌ನ ಸೌಂದರ್ಯ ಇಮ್ಮಡಿಯಾದಂತೆ ಕಾಣುತ್ತದೆ. ಆಟವಾಡುವುದಕ್ಕೂ ಕೂಡ ಇದು ಸುರಕ್ಷಿತ ಬೀಚ್ ಆಗಿದೆ.
ದೇವಬಾಗ್ ಬೀಚ್:
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ದೇವಬಾಗ್ ಬೀಚ್ ಕಾಣಸಿಗುತ್ತದೆ. 20ನೇ ಶತಮಾನದ ಆರಂಭದಲ್ಲಿ ಕಾರವಾರಕ್ಕೆ ಭೇಟಿ ನೀಡಿದ ಕವಿ ರವೀಂದ್ರನಾಥ ಠಾಗೋರ್ ಅವರಿಗೆ ಈ ಬೀಚ್ ಸ್ಫೂರ್ತಿ ತುಂಬಿತ್ತು ಎಂದು ಹೇಳಲಾಗುತ್ತದೆ. ಇಲ್ಲಿ ನಿಮಗೆ ಆಟವಾಡಲು ಅನೇಕ ವಾಟರ್ ಗೇಮ್ಸ್‌ಗಳೂ ಇವೆ. ಹಾಗೆಯೇ ಇಲ್ಲಿಂದ ನೀವು ಕುರುಮ್ಗಡ್ ದ್ವೀಪಕ್ಕೂ ಭೇಟಿ ನೀಡಬಹುದು. ಆ ದ್ವೀಪದಲ್ಲಿರುವ ನರಸಿಂಗ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಾಪಸು ಬೋಟ್ ಮೂಲಕ ಬೀಚ್‌ಗೆ ಬರಬಹುದು. ಇಲ್ಲಿ ಅನೇಕ ರೀತಿಯ ಅಂಗಡಿ, ಸಣ್ಣ ಪುಟ್ಟ ಹೋಟೆಲ್‌ಗಳೂ ಇದ್ದು, ನೀವು ವಿವಿಧ ಖಾದ್ಯಗಳನ್ನು ಸವಿಯಬಹುದು.
ಪಣಂಬೂರು ಬೀಚ್:
ಕರ್ನಾಟಕದ ಅತ್ಯಂತ ಸ್ವಚ್ಛ ಮತ್ತು ಸುರಕ್ಷಿತ ಬೀಚ್‌ಗಳಲ್ಲಿ ಒಂದು ಎನ್ನುವ ಖ್ಯಾತಿ ಪಡೆದಿರುವುದು ಪಣಂಬೂರು ಬೀಚ್. ಇದು ಮಂಗಳೂರಿನಲ್ಲಿದೆ. ಇಲ್ಲಿ ನೀವು ಅರಬ್ಬಿ ಸಮುದ್ರದೊಳಗೆ ಸೂರ್ಯ ಮುಳುಗಿ ಹೋಗುವುದನ್ನು ಕಣ್ತುಂಬಿಸಿಕೊಳ್ಳಬಹುದು. ಮಕ್ಕಳೊಂದಿಗೆ ಅರಾಮವಾಗಿ ಬೀಚ್‌ನಲ್ಲಿ ಆಟವಾಡುವುದಕ್ಕೆ ಇದು ಸೂಕ್ತ ಸ್ಥಳ. ಇದು ಮಂಗಳೂರಿಗರಿಗೆ ಪ್ರಸಿದ್ಧ ಪಿಕ್ನಿಕ್ ತಾಣವೂ ಹೌದು.
ಪ್ಯಾರಡೈಸ್ ಬೀಚ್:
ಪಾಂಡಿಚೆರಿಯಲ್ಲಿಯೂ ಪ್ಯಾರಡೈಸ್ ಹೆಸರಿನ ಬೀಚ್ ಇದೆ. ಅದೇ ರೀತಿಯಲ್ಲಿ ಗೋಕರ್ಣದಲ್ಲಿ ಕೂಡ ಪ್ಯಾರಡೈಸ್ ಬೀಚ್ ಇದೆ. ಈ ಬೀಚ್ ಸುಮಾರು 150 ಮೀಟರ್‌ನಷ್ಟು ಉದ್ದವಿದೆ. ಅದರಲ್ಲಿ ಶೇ. 70ರಷ್ಟು ಭಾಗ ಕಲ್ಲುಬಂಡೆಗಳಿಂದ ಕೂಡಿರುವುದರಿಂದ ಇನ್ನುಳಿದ ಜಾಗದಲ್ಲಿ ನೀವು ಸಮುದ್ರದ ನೀರಿನೊಂದಿಗೆ ಆಟವಾಡಬಹುದು. ಕಲ್ಲುಬಂಡೆಗಳ ಮೇಲೆ ಕುಳಿತು ಫೋಟೋಶೂಟ್ ಕೂಡ ಮಾಡಿಸಿಕೊಳ್ಳಬಹುದು.