ವಿದೇಶ ಸುತ್ತುವಷ್ಟೆಲ್ಲ ದುಡ್ಡಿಲ್ಲ, ಆದರೆ, ಭಾರತದೊಳಗೇ ಎಲ್ಲಾದರೂ ಈ ಬೇಸಿಗೆಯಲ್ಲಿ ಸುತ್ತಿ ಬರಬೇಕು ಅಂದುಕೊಂಡಿದ್ದೀರಾ? ಹಾಗಿದ್ದರೆ ಬೇಕಾದಷ್ಟು ತಂಪು ತಂಪು ತಾಣಗಳು ಪ್ರತಿ ರಾಜ್ಯದಲ್ಲೂ ಸಿಕ್ಕೇ ಸಿಗುತ್ತವೆ. ಭಾರತದ ವಿಶೇಷತೆಯೇ ಅಂಥದ್ದು. ಇಲ್ಲಿ ಎಲ್ಲ ಬಗೆಯ ಪ್ರವಾಸೀ ತಾಣಗಳೂ ಇವೆ! ವಿದೇಶ ಬೇಡ, ಸ್ವದೇಶದಲ್ಲೇ ಸ್ವರ್ಗ ಸದೃಶ ಜಾಗಗಳನ್ನು ಕಣ್ತುಂಬಿಕೊಳ್ಳಬೇಕು ಎಂದು ನಿಮಗೆ ಆಸೆಯಿದ್ದರೆ ಈ ಜಾಗಗಳು (Summer Tourism) ನಿಮ್ಮನ್ನು ನಿರಾಸೆ ಮಾಡಲಾರವು.
ಲೇಹ್
ಲೇಹ್ ಲಡಾಕಿನ ಸೌಂದರ್ಯವನ್ನು ಶಬ್ದಗಳಲ್ಲಿ ಹಿಡಿದಿಡುವುದು ಕಷ್ಟ. ಬೈಕರ್‌ಗಳ ಮೆಚ್ಚಿನ ತಾಣವಾದ ಲೇಹ್‌ಗೆ ಒಮ್ಮೆ ಹೋಗಿ ಬಂದವರು ಜೀವನದುದ್ದಕ್ಕೂ ತಮ್ಮ ಈ ಪ್ರವಾಸದ ನೆನಪುಗಳನ್ನು ಮತ್ತೆ ಮತ್ತೆ ರಿವೈಂಡ್ ಮಾಡಿ ನೆನಪಿಸಿಕೊಳ್ಳಲು ಇಷ್ಟಪಡುತ್ತಾರೆ. ಲೇಹ್ ಲಡಾಕಿನ ಬಣ್ಣಬಣ್ಣದ ವಾಸ್ತುಶಿಲ್ಪವಿರುವ ಬೌದ್ಧಸ್ತೂಪಗಳು, ಅರಮನೆಗಳು, ಬಹಳ ವಿಶೇಷವೆನಿಸುವ ಪ್ರಕೃತಿ ಸೌಂದರ್ಯ, ಹಿಮಚ್ಛಾದಿತ ಪರ್ವತಗಳು ಎಲ್ಲವೂ ವಾಹ್ ಎಂಬ ಅನುಭವವನ್ನು ಕೊಡುತ್ತವೆ.
ಶಿಮ್ಲಾ
ಹಿಮಾಚಲ ಪ್ರದೇಶದ ರಾಜಧಾನಿಯಾಗಿರುವ ಶಿಮ್ಲಾ ಪ್ರೇಮಿಗಳ ಸ್ವರ್ಗ. ಕೇವಲ ಪ್ರೇಮಿಗಳಷ್ಟೇ ಅಲ್ಲ, ಕುಟುಂಬ ಸಮೇತರಾಗಿ ಹೋಗುವ ಮಂದಿಗೆ, ಯುವ ಉತ್ಸಾಹಿಗಳಿಗೆ, ಮಕ್ಕಳಿಗೆ, ಸೋಲೋ ಪ್ರವಾಸಿಗರಿಗೆ ಹೀಗೆ, ಪ್ರತಿಯೊಬ್ಬರನ್ನೂ ತನ್ನಲ್ಲಿಗೆ ಸೆಳೆಯುವ ತಾಕತ್ತು ಶಿಮ್ಲಾಕ್ಕಿದೆ. ಇಲ್ಲಿನ ಮಾನಸ ದೇವಿ ದೇವಸ್ಥಾನದ ಭೇಟಿ, ಮಾಲ್ ರಸ್ತೆಯಲ್ಲಿ ಶಾಪಿಂಗ್ ಹಿಮಾಚಲದ ಸಂಸ್ಕೃತಿ ಅರಿಯುವ ವಿಶೇಷ ಅನುಭವ ನಿಮ್ಮದಾಗುತ್ತದೆ.
ಮಡಿಕೇರಿ
ನಮ್ಮ ಕರ್ನಾಟಕದ ಕೊಡಗು ಜಿಲ್ಲೆ ಕೂಡಾ ಬೇಸಿಗೆಯನ್ನು ಕಳೆಯಲು ಹತ್ತಿರದಲ್ಲೇ ಸಿಗುವ ಸೂಕ್ತ ಜಾಗಗಳಲ್ಲಿ ಒಂದು. ಕೊಡಗು ಜಿಲ್ಲೆಯಲ್ಲಿ ನೋಡಬೇಕಾದ ಹಲವು ಪ್ರವಾಸೀ ತಾಣಗಳಿವೆ. ಮುಖ್ಯವಾಗಿ ಪ್ರಕೃತಿ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಜಾಗ.
ಮನಾಲಿ
ಪ್ರೇಮಿಗಳ ಇನ್ನೊಂದು ಸ್ವರ್ಗವಾದ ಈ ಮನಾಲಿ ಕೇವಲ ಪ್ರೇಮಿಗಳಷ್ಟೇ ಅಲ್ಲ, ಎಲ್ಲ ಬಗೆಯ ಪ್ರವಾಸಿಗರನ್ನೂ ತನ್ನ ಬಳಿಗೆ ಸೆಳೆಯುವ ಮಾಂತ್ರಿಕ ಶಕ್ತಿಯನ್ನು ಹೊಂದಿದೆ. ಸಿನಿಮಾ ಶೂಟಿಂಗ್‌ಗಳಿಂದಾಗಿ ಸಾಕಷು ಜನಪ್ರಿಯವಾಗಿರುವ ಈ ಜಾಗ ಸಾಹಸಪ್ರಿಯರಿಗೂ ಸ್ವರ್ಗವೇ. ಚಾರಣಕ್ಕೂ ಇಲ್ಲಿ ಬೇಕಾದಷ್ಟು ಆಯ್ಕೆಗಳಿವೆ. ರೋಹ್ತಂಗ್ ಪಾಸ್ ಮೇಲೇರಿದರೆ, ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಹಿಮಚ್ಛಾದಿತ ಬೆಟ್ಟಗಳಿಂದ ಸುತ್ತುವರಿದಿರುವ ಮನಾಲಿ ವರ್ಷದ ಎಲ್ಲ ಕಾಲದಲ್ಲೂ ಪ್ರವಾಸಿಗರಿಂದ ಗಿಜಿಗುಡುತ್ತಿರುತ್ತದೆ.
ಚಿಕ್ಕಮಗಳೂರು
ಕೊಡಗು ಜಿಲ್ಲೆಯ ಕಡೆ ಸಾಧ್ಯವಾಗದಿದ್ದರೆ, ಕನ್ನಡಿಗರಿಗೆ ಸುಲಭವಾಗಿ ದಕ್ಕುವ ಇನ್ನೊಂದು ಸ್ಥಳ ಎಂದರೆ ಚಿಕ್ಕಮಗಳೂರು. ಈ ಕಾಫಿನಾಡು ಕೂಡಾ ತನ್ನಲ್ಲಿಗೆ ಬಂದ ಯಾರೊಬ್ಬರನ್ನೂ ನಿರಾಸೆ ಮಾಡಿ ಕಳುಹಿಸಿಲ್ಲ. ಜಲಪಾತಗಳು, ಕಿಟಕಿ ತೆರೆದರೆ ಕಾಣುವ ಮನಮೋಹಕ ಕುದುರೆಮುಖ ಬೆಟ್ಟದ ಸಾಲು, ಕಾಫಿ ತೋಟಗಳ ಹಸಿರು, ದಟ್ಟ ಕಾಡು ಹೀಗೆ ಚಿಕ್ಕಮಗಲೂರು ಕೂಡಾ ಬೇಸಿಗೆಯಲ್ಲಿ ಕೊಂಚ ತಂಪು ಕುಡಿಯಲು ಹೋಗು ಬರುವ ತಾಣಗಳಲ್ಲಿ ಬಹುಮುಖ್ಯ ಸ್ಥಾನ ಪಡೆದಿದೆ.
ಕಾಶ್ಮೀರ
ಭೂಮಿಯ ಮೇಲಿನ ಸ್ವರ್ಗ ಎಂದರೆ ಅದು ಕಾಶ್ಮೀರವೇ. ಇದನ್ನು ಅಲ್ಲಗಳೆಯಲು ಯಾರಿಂದಲೂ ಸಾಧ್ಯವಿಲ್ಲ. ಕಾಶ್ಮೀರದ ನದಿ ಕಣಿವೆಗಳು, ಹಿಮಬೆಟ್ಟಗಳು ಎಲವೂ ಕಣ್ಣಿಗೆ ಹಬ್ಬ. ಗುಲ್ಮಾರ್ಗ್, ಸೋನಮಾರ್ಗ್, ಪೆಹಲ್ಗಾಂನಂತಹ ಸುಂದರ ಪ್ರವಾಸೀ ತಾಣಗಳಲ್ಲದೆ, ಕಾಶ್ಮೀರದಲ್ಲಿ ಎಲ್ಲಿ ಸಂಚರಿಸಿದರೂ ಸ್ವರ್ಗ ಧರೆಗಿಳಿದಂತ ಭಾವ. ಬೇಸಿಗೆಯಲ್ಲಿ ಹೂವರಳಿದ ಕಾಶ್ಮೀರ ನೋಡಲು ಇನ್ನೂ ಸೊಗಸು.
ಗ್ಯಾಂಗ್ಟಕ್
ಬೇಸಿಗೆಯ ತಾಣಗಳ ಬಗ್ಗೆ ಮಾತನಾಡುವ ಸಂದರ್ಭ ಸಿಕ್ಕಿಂನ ಗ್ಯಾಂಗ್‌ಟಕ್ ಅನ್ನೇ ಬಿಟ್ಟರೆ ಹೇಗೆ? ಈಶಾನ್ಯ ರಾಜ್ಯಗಳ ಪೈಕಿ ಸಿಕ್ಕಿ ಕೂಡಾ ಒಂದು. ಹಿಮಾಲಯದ ಸೌಂದರ್ಯವನ್ನೂ ತನ್ನೊಳಗೆ ಇಟ್ಟುಕೊಂಡಿರುವ ಈ ನಗರವು ಬೇಸಿಗೆಯಲ್ಲಿ ಹಿತವಾದ ಚಳಿಯನ್ನು ಹಂದಿರುವ ತಾಣ. ಸರೋವರಗಳು, ಕಣಿವೆಗಳು, ಹಿಮಚ್ಛಾದಿತ ಬೆಟ್ಟಗಳು, ಟಿಬೆಟಿಯನ್ ಬೌದ್ಧ ಸ್ತೂಪಗಳು ಹೀಗೆ ಎಲ್ಲವೂ ಕೂಡ ಸಿಕ್ಕಿಂನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿವೆ.
ಔಲಿ
ಉತ್ತರಾಖಂಡದ ಔಲಿ ಚಳಿಗಾಲದಲ್ಲಿ ಹಿಮಚ್ಛಾದಿತವಾಗಿಯೂ, ಬೇಸಿಗೆಯಲ್ಲಿ ತಂಪಾಗಿರುವ ಆದರೆ, ಸುತ್ತಮುತ್ತಲ ಬೆಟ್ಟಗಳನ್ನೆಲ್ಲ ಹಿಮಾವೃತವಾಗಿರುವುದನ್ನು ಕಣ್ತುಂಬಿಕೊಳ್ಳಬಲ್ಲ ತಾಣ. ಇಲ್ಲಿಂದ ಅದ್ಭುತವಾಗಿ ತಲೆಯೆತ್ತಿ ನಿಂತಿರುವ ನಂದಾದೇವಿ ಪರ್ವತವನ್ನು ಕಣ್ತುಂಬಿಕೊಳ್ಳಬಹುದು. ತಣ್ಣಗೆ ಹಿತವಾಗಿ ಇದ್ದು ಬರಬಹುದಾದ ತಾಣಗಳ ಪೈಕಿ ಔಲಿಗೆ ಮಹತ್ವದ ಸ್ಥಾನವಿದೆ.
ಕಾಲಿಂಪಾಂಗ್
ಇದು ಪಶ್ಚಿಮ ಬಂಗಾಳದ ಮತ್ತೊಂದು ಅದ್ಭುತ ತಾಣ. ಪುರಾತನ ಸಿಲ್ಕ್ ರೂಟ್ ಎಂದೇ ಪ್ರಸಿದ್ಧವಾಗಿರುವ ಇದು ಪ್ರವಾಸಿಗರು ಅಷ್ಟಾಗಿ ಭೇಟಿ ಕೊಡದ ಅತ್ಯದ್ಭುತ ಪ್ರಕೃತಿ ಸೌಂದರ್ಯ ಹೊಂದಿರುವ ಊರು. ಪ್ರವಾಸಿಗರಿಂದ ಗಿಜಿಗುಡದ ಶಾಂತಿಯುತ ತಾಣ ಬೇಕೆಂದು ಇಷ್ಟಪಡುವ ಮಂದಿಗೆ ಇದು ಹೇಳಿ ಮಾಡಿಸಿದ ತಾಣ. ನಿಯೋರಾ ರಾಷ್ಟ್ರೀಯ ವನ್ಯಧಾಮ, ತೀಸ್ತಾ ನದಿಯ ನೀಲಿ ಬಣ್ಣದ ನೀರು, ಬೆಟ್ಟ ಗುಡ್ಡಗಳಲ್ಲಿ ತೆವಳುವ ಹಾದಿ ಎಲ್ಲವೂ ಅದ್ಭುತ ಅನುಭವ ನೀಡುವಂಥದ್ದು.
ಮೌಂಟ್ ಅಬು
ರಾಜಸ್ಥಾನದ ಮರುಳುಗಾಡಿಗೆ ಬೇಸಿಗೆಯಲ್ಲಿ ಮಾತ್ರ ಹೋಗಬಾರದು ಎಂದುಕೊಂಡರೆ, ಅಲ್ಲೂ ನಿಮ್ಮನ್ನು ಸೆಳೆಯುವ ಜಾಗವೊಂದಿದೆ. ಅದು ಮೌಂಟ್ ಅಬು. ರಾಜಸ್ಥಾನದಲ್ಲಿರುವ ಬೆಟ್ಟದೂರು. ಬೇಸಿಗೆಯಲ್ಲಿ ತಂಪಾಗಿರುವ ಇದು ಇಲ್ಲಿನ ಜೈನ ಮಂದಿರಗಳಿಗೆ, ಚಂದನೆಯ ಸರೋವರಗಳಿಗೆ ಪ್ರಸಿದ್ಧ.
ಇದನ್ನೂ ಓದಿ: Wildlife Tourism: ನೀವು ವನ್ಯಜೀವಿ ಪ್ರಿಯರೇ? ಹಾಗಿದ್ದರೆ ಪ್ರವಾಸಕ್ಕೆ ಮಾರ್ಚ್ ತಿಂಗಳು ಸಕಾಲ!