Site icon Vistara News

Top 11 Honeymoon Places In India : ಭಾರತದ ಸ್ವರ್ಗಸದೃಶ ಹನಿಮೂನ್‌ ತಾಣಗಳಿವು

Dal lake at Srinagar, Kashmir, India India Tourism

ಮದುವೆ ಸೀಸನ್‌ ಶುರುವಾಗಿದೆ. ನವದಂಪತಿಗಳು ಹನಿಮೂನ್‌ಗೆ ತೆರಳಲಾರಂಭಿಸಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ದಾಂಪತ್ಯಕ್ಕೆ ಕಾಲಿಡುತ್ತಿರುವ ಯುವಕ, ಯುವತಿಯರು ಯಾವ ಸ್ಥಳಕ್ಕೆ ಹನಿಮೂನ್‌ ಹೋಗಬೇಕು ಎನ್ನುವ ಯೋಚನೆ ಮಾಡುತ್ತಿದ್ದಾರೆ. ಅಂಥವರಿಗೆಂದೇ ಭಾರತದ ಟಾಪ್‌ ಹನಿಮೂನ್‌ (Top 11 Honeymoon Places) ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

ಗೋವಾ, ಕೇರಳ, ಮಂಗಳೂರಿನ ಬೀಚ್‌ಗಳನ್ನು ನೋಡಿದವರಿಗೆ ಬೇರೆ ರೀತಿಯ ಬೀಚ್‌ ಯಾವುದಾದರೂ ನೋಡಬೇಕು ಎನ್ನುವ ಆಸೆಯಿದ್ದರೆ ಅಂಡಮಾನ್‌ ನಿಕೋಬಾರ್‌ ಸೂಕ್ತವಾದ ಆಯ್ಕೆಯಾಗಿದೆ. ದ್ವೀಪಸಮೂಹವಾಗಿರುವ ಇದರಲ್ಲಿ ಸುಮಾರು 300 ದ್ವೀಪಗಳಿವೆ. ಐಷಾರಾಮಿ ರೆಸಾರ್ಟ್‌ಗಳು, ಹೋಂ ಸ್ಟೇಗಳ ಸಾಲುಗಳೇ ಇಲ್ಲಿವೆ. ಜಲ ಕ್ರೀಡೆಗಳನ್ನು ಇಷ್ಟ ಪಡುವವರಿಗೆ ಇದು ಹೇಳಿ ಮಾಡಿಸಿದ ಜಾಗವೆನ್ನಬಹುದು. ಇಲ್ಲಿಗೆ ಬೆಂಗಳೂರು, ದೆಹಲಿ, ಕೋಲ್ಕೊತಾದಿಂದ ನೇರ ವಿಮಾನಗಳ ಸಂಪರ್ಕವಿದೆ. ಅಕ್ಟೋಬರ್‌ನಿಂದ ಫೆಬ್ರವರಿ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.

ಶ್ರೀನಗರ

ಜಮ್ಮು ಮತ್ತು ಕಾಶ್ಮೀರದಲ್ಲಿರುವ ಶ್ರೀನಗರ ಭೂಲೋಕದ ಸ್ವರ್ಗ ಎಂದೇ ಹೇಳಬಹುದು. ಇಲ್ಲಿ ಸೊಂಪಾದ ಕಣಿವೆಗಳು, ಮೈದುಂಬಿ ಹರಿವ ಸರೋವರಗಳು, ಎತ್ತರದ ಹಿಮಾವೃತ ಪರ್ವತಗಳನ್ನು ನೀವು ನೋಡಬಹುದು. ಬಾಲಿವುಡ್‌, ಹಾಲಿವುಡ್‌ ಸೇರಿದಂತೆ ಭಾರತದ ಎಲ್ಲ ಚಿತ್ರರಂಗದವರು ಇಲ್ಲಿ ಸಿನಿಮಾಗಳ ಚಿತ್ರೀಕರಣ ಮಾಡಿದ್ದಾರೆ. ಇಲ್ಲಿ ಹೌಸ್‌ ಬೋಟಿಂಗ್‌ ಕೂಡ ಇದ್ದು, ನೀವು ನೀರಿನ ಮೇಲೇ ಉಳಿದುಕೊಳ್ಳಬಹುದು. ಏಪ್ರಿಲ್‌ನಿಂದ ಅಕ್ಟೋಬರ್‌ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.

ಗೋವಾ

ಕಡಲ ತೀರದ ನಗರ ಗೋವಾ. ಇದು ಅತ್ಯುತ್ತಮ ಹನಿಮೂನ್‌ ಸ್ಥಳಗಳಲ್ಲಿ ಒಂದು. ಇಲ್ಲಿ ಬೀಚ್‌ ಬದಿಯಲ್ಲಿ ಅನೇಕ ಜಲ ಕ್ರೀಡೆಗಳನ್ನು ಆಡುವುದಕ್ಕೂ ನಿಮಗೆ ಅವಕಾಶ ಸಿಗುತ್ತದೆ. ಬೀಚ್‌ ಬದಿಯಲ್ಲಿ ಹಲವಾರು ರೆಸಾರ್ಟ್‌ಗಳು ಮತ್ತು ಹೋಂ ಸ್ಟೇಗಳು ಇದ್ದು, ನೀವು ಆರಾಮವಾಗಿ ನಿಮ್ಮ ಸಮಯವನ್ನು ಕಳೆಯಬಹುದಾಗಿದೆ. ಇಲ್ಲಿಗೂ ಕೂಡ ನಿಮಗೆ ವಿಮಾನ ಸಂಪರ್ಕವಿದೆ. ಹಾಗೆಯೇ ರೈಲು ಅಥವಾ ಬಸ್ಸಿನಲ್ಲೂ ಗೋವಾಕ್ಕೆ ಪ್ರಯಾಣ ಮಾಡಬಹುದಾಗಿದೆ. ಅಕ್ಟೋಬರ್‌ನಿಂದ ಜನವರಿ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.

ಮಡಿಕೇರಿ

ಬೇರೆ ರಾಜ್ಯ ಬೇಡ, ಕರ್ನಾಟಕದಲ್ಲೇ ಹನಿಮೂನ್‌ಗೆ ಹೋಗುತ್ತೇವೆ ಎನ್ನುವವರಿಗೆ ಮಡಿಕೇರಿ ಬೆಸ್ಟ್‌ ಆಯ್ಕೆ. ಇಲ್ಲಿನ ಕಾಫಿ ಎಸ್ಟೇಟ್‌, ಟೀ ಎಸ್ಟೇಟ್‌ಗಳು ನಿಮ್ಮನ್ನು ಮೂಕವಿಸ್ಮಿತ ಮಾಡುತ್ತವೆ. ಹಸಿರುಮಯವಾಗಿರುವ ಈ ಸ್ಥಳದಲ್ಲಿ ನೀವು ಏಕಾಂತವಾಗಿ ಸಮಯ ಕಳೆಯಬಹುದಾಗಿದೆ. ಮೈಸೂರಿನ ತನಕ ರೈಲಿನಲ್ಲಿ ಪ್ರಯಾಣ ಮಾಡಿ ಅಲ್ಲಿಂದ ಮುಂದೆ ಬಸ್ಸಿನಲ್ಲಿ ಪ್ರಯಾಣ ಮಾಡಿ ಹೋಗಬಹುದು. ಇಲ್ಲಿ ಹಲವಾರು ಜಲಪಾತಗಳನ್ನೂ ನೀವು ಕಾಣಬಹುದು. ಹಾಗೆಯೇ ಟ್ರೆಕ್ಕಿಂಗ್‌ ಮಾಡುವುದಕ್ಕೂ ಅವಕಾಶವಿದೆ. ಅಕ್ಟೋಬರ್‌ನಿಂದ ಜನವರಿ ಮತ್ತು ಮೇಯಿಂದ ಮಾರ್ಚ್‌ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.

ನೈನಿತಾಲ್

ಉತ್ತರಾಖಂಡದಲ್ಲಿರುವ ಅದ್ಭುತ ಸ್ಥಳ ನೈನಿತಾಲ್‌. ಗಿರಿಧಾಮಗಳಿರುವ ಇದು ನವದಂಪತಿಯ ಹನಿಮೂನ್‌ಗೆ ಸೂಕ್ತವಾದ ಸ್ಥಳ. ಭವ್ಯವಾದ ಪರ್ವತಗಳು ಮತ್ತು ಪ್ರಾಚೀನ ದೇವಾಲಯಗಳು ಇಲ್ಲಿನ ಆಕರ್ಷಣೆ. ಇಲ್ಲಿನ ಸರೋವರಗಳಲ್ಲಿ ದೋಣಿ ವಿಹಾರವನ್ನೂ ಮಾಡಬಹುದು. ಕತ್ಗೊಡಮ್‌ ರೈಲು ನಿಲ್ದಾಣ ನೈನಿತಾಲ್‌ಗೆ ಹತ್ತಿರದ ರೈಲು ನಿಲ್ದಾಣ. ಅಲ್ಲಿಂದ 23 ಕಿ.ಮೀ. ಪ್ರಯಾಣ ಮಾಡಿದರೆ ನಿಮಗೆ ನೈನಿತಾಲ್‌ ಸಿಗುತ್ತದೆ. ಇಲ್ಲಿಗೆ ಭೇಟಿ ನೀಡಲು ಅಕ್ಟೋಬರ್‌ನಿಂದ ಏಪ್ರಿಲ್‌ವರೆಗೆ ಸೂಕ್ತ ಸಮಯವಾಗಿದೆ.

ಜೈಸಲ್ಮೇರ್

ನಿಮ್ಮ ಹನಿಮೂನ್‌ಗೆ ರಾಯಲ್‌ ಸ್ಪರ್ಶ ನೀಡಬೇಕೆಂದರೆ ನೀವು ರಾಜಸ್ಥಾನದ ಜೈಸಲ್ಮೇರ್‌ಗೆ ಹೋಗಬೇಕು. ಇಲ್ಲಿ ಅರಮನೆಗಳು, ಕೋಟೆಗಳನ್ನು ಕಣ್ತುಂಬಿಸಿಕೊಳ್ಳಬಹುದು. ಆನೆ ಮತ್ತು ಒಂಟೆ ಸವಾರಿ ಮಾಡಬಹುದು. ಥಾರ್‌ ಮರುಭೂಮಿ ವೀಕ್ಷಣೆ ಮಾಡಬಹುದು. ಸಾಂಸ್ಕೃತಿಕ ಸ್ಥಳ ಎಂದು ಕರೆಸಿಕೊಳ್ಳುತ್ತಿರುವ ಅಲ್ಲಿ ರಾಜಸ್ಥಾನಿ ಜಾನಪದ ನೃತ್ಯಗಾರರು ಮತ್ತು ಸಂಗೀತಗಾರರು ಪ್ರದರ್ಶನ ನೀಡುತ್ತಾರೆ. ಇದಕ್ಕೆ ಜೋಧ್‌ಪುರ ವಿಮಾನ ನಿಲ್ದಾಣ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಇಲ್ಲಿಗೆ ಭೇಟಿ ನೀಡಲು ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಸೂಕ್ತ ಸಮಯವಾಗಿದೆ.

ಶಿಮ್ಲಾ

ಹಿಮಾವೃತವಾದ ಶಿಮ್ಲಾ ಹನಿಮೂನ್‌ಗೆ ಸೂಕ್ತವಾದ ಸ್ಥಳಗಳಲ್ಲಿ ಒಂದು. ಇಲ್ಲಿನ ಗಿರಿಧಾಮಗಳೆಲ್ಲವು ಹಿಮಾವೃತವಾಗಿರುತ್ತವೆ. ಇಲ್ಲಿ ಐಸ್‌ ಟ್ರೆಕ್ಕಿಂಗ್‌, ಹೈಕಿಂಗ್‌, ಪ್ಯಾರಾಗ್ಲೈಡಿಂಗ್‌ ಸೇರಿ ಅನೇಕ ಚಟುವಟಿಕೆಗಳನ್ನು ಮಾಡಬಹುದಾಗಿದೆ. ಇಲ್ಲಿಗೆ ಭೇಟಿ ನೀಡಲು ಮಾರ್ಚ್‌ನಿಂದ ಜೂನ್‌ ಸೂಕ್ತ ಸಮಯವಾಗಿದೆ.

ಲಕ್ಷದ್ವೀಪ ದ್ವೀಪಗಳು

ಭಾರತದ ಚಿಕ್ಕ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ. ಕಡಲತೀರಗಳನ್ನು ಇಷ್ಟಪಡುವವರು ಇಲ್ಲಿಗೆ ಹೋಗಬಹುದಾಗಿದೆ. ಲಕ್ಷದ್ವೀಪದಲ್ಲಿ ಅಗತ್ತಿ ವಿಮಾನ ನಿಲ್ದಾಣವಿದೆ. ಇಲ್ಲಿಗೆ ಕೊಚ್ಚಿನ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ ಸಂಪರ್ಕವಿದೆ. ಇಲ್ಲಿ ಅನೇಕ ರೀತಿಯ ಜಲ ಕ್ರೀಡೆಗಳನ್ನು ನೀವು ಆಡಬಹುದಾಗಿದೆ.

ಊಟಿ

ತಮಿಳುನಾಡಿ ಊಟಿ ಕೂಡ ಹನಿಮೂನ್‌ಗೆ ಸೂಕ್ತವಾದ ಸ್ಥಳ. ಇಲ್ಲಿ ಬಟಾನಿಕಲ್‌ ಗಾರ್ಡನ್ಸ್‌, ರೋಸ್‌ ಗಾರ್ಡನ್‌, ಊಟಿ ಸರೋವರ ಸೇರಿ ಅನೇಕ ಪ್ರವಾಸಿ ತಾಣಗಳಿವೆ. ಕೊಯಮತ್ತೂರು ವಿಮಾನ ನಿಲ್ದಾಣದಿಂದ ಊಟಿ 85 ಕಿ.ಮೀ. ದೂರದಲ್ಲಿದೆ. 40 ಕಿ.ಮೀ ದೂರದಲ್ಲಿ ಮೆಟ್ಟುಪಾಳ್ಯಂ ರೈಲು ನಿಲ್ದಾಣವಿದೆ. ಇಲ್ಲಿನ ಚಹಾ ತೋಟಗಳು, ಬೆಟ್ಟಗಳು, ನೀಲಗಿರಿ ಪರ್ವತ, ಸರೋವರಗಳ ಸೌಂದರ್ಯವನ್ನು ನೀವು ಕಣ್ತುಂಬಿಸಿಕೊಳ್ಳಬಹುದು. ಮಾರ್ಚ್‌ನಿಂದ ಜೂನ್‌ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.

ಡಾರ್ಜಿಲಿಂಗ್

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ ಕೂಡ ಹನಿಮೂನ್‌ಗೆ ಹೆಸರಾದ ಸ್ಥಳಗಳಲ್ಲಿ ಒಂದು. ಇಲ್ಲಿ ಎಕರೆಗಟ್ಟಲೆ ಚಹಾ ತೋಟಗಳಿವೆ. ಇಲ್ಲಿ ಯಾವಾಗಲೂ ಚಳಿಯ ವಾತಾವರಣವಿರುತ್ತದೆ. ಇಲ್ಲಿಂದ 70 ಕಿಲೋ ಮೀಟರ್‌ ದೂರದಲ್ಲಿ ಬಾಗ್ಡೋಗ್ರಾ ವಿಮಾನ ನಿಲ್ದಾಣವಿದೆ. ಡಾರ್ಜಿಲಿಂಗ್‌ಗೆ ಹತ್ತಿರದ ರೈಲು ನಿಲ್ದಾಣ ನ್ಯೂ ಜಲ್ಪೈಗುರಿ ರೈಲು ನಿಲ್ದಾಣ. ಇಲ್ಲಿ ನಿಮಗೆ ಟ್ರೆಕ್ಕಿಂಗ್‌ ಮಾಡುವುದಕ್ಕೂ ಅವಕಾಶವಿದೆ.

ಕೇರಳ

ಕೇರಳವನ್ನು ದೇವರ ನಾಡು ಎಂದೂ ಕರೆಯಲಾಗುತ್ತದೆ. ಇದೂ ಕೂಡ ಹನಿಮೂನ್‌ ಸ್ಪಾಟ್‌. ಇಲ್ಲಿ ಅನೇಕ ಸರೋವರುಗಳು, ನದಿಗಳನ್ನು ನೀವು ನೋಡಬಹುದು. ಇಲ್ಲಿ ಬೋಟ್‌ ಹೌಸ್‌ಗಳು ಇದ್ದು, ನೀವು ನೀರಿನ ಮೇಲೆಯೇ ದಿನ ಕಳೆಯಬಹುದು. ಇಲ್ಲಿಗೆ ರೈಲು, ವಿಮಾನ, ಬಸ್ಸಿನ ಸಂಪರ್ಕವಿದೆ. ಕೇರಳದ ಕಡಲತೀರಗಳಲ್ಲಿ ಜಲ ಕ್ರೀಡೆಗಳನ್ನೂ ಆಡಬಹುದು. ಜೂನ್‌ನಿಂದ ಆಗಸ್ಟ್‌ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ.

ಇದನ್ನೂ ಓದಿ: Wildlife Tourism: ವನ್ಯಜೀವಿ ಪ್ರಿಯರೇ, ಪೆಂಚ್‌ ಹುಲಿಧಾಮದ ಕಾಡೊಳಗೆ ಸೈಕಲ್‌ ಸಫಾರಿ ಮಾಡಿ!

Exit mobile version