ಈಗ ಎಲ್ಲರಿಗೂ ಪ್ರವಾಸದ ಮೂಡ್. ನಿಮಗೂ ಕೂಡ ಎಲ್ಲಾದರೂ ಪ್ರವಾಸಕ್ಕೆ ಹೋಗಬೇಕು ಎನಿಸುತ್ತಿರಬಹುದು. ಮುಂದಿನ ತಿಂಗಳು, ಅಂದರೆ ಆಗಸ್ಟ್‌ನಲ್ಲಿ ಪ್ರವಾಸ ಮಾಡೋಣ ಎನ್ನುವ ಯೋಚನೆಯಲ್ಲಿ ನೀವಿರಬಹುದು. ಅದಕ್ಕಾಗಿಯೇ ನಾವಿಲ್ಲಿ ನಿಮಗಾಗಿ ವಿಶೇಷ ಮಾಹಿತಿಗಳೊಂದಿಗೆ ಬಂದಿದ್ದೇವೆ. ಆಗಸ್ಟ್‌ನಲ್ಲಿ ಪ್ರವಾಸ (Best Places to visit in August in India) ಮಾಡಬಹುದಾದ ಸ್ಥಳಗಳ ಬಗ್ಗೆ ಇಲ್ಲಿದೆ ಮಾಹಿತಿ.
ಲೋನಾವಾಲಾ
ವಾಣಿಜ್ಯ ನಗರಿ ಮುಂಬೈನಲ್ಲಿರುವವರಿಗೆ ಸಮೀಪದ ಪ್ರಸಿದ್ಧ ಪ್ರವಾಸಿ ತಾಣವೆಂದರೆ ಅದು ಲೋನಾವಾಲಾ. ಜಲಪಾತಗಳು, ಸರೋವರಗಳು ಮತ್ತು ಬೆಟ್ಟಗಳಿರುವ ಸ್ಥಳವಿದು. ಇಲ್ಲಿ ನೀವು ಕ್ಯಾಂಪಿಂಗ್, ಟ್ರೆಕ್ಕಿಂಗ್ ಜತೆ ಹಲವು ಸಾಹಸ ಕ್ರೀಡೆಗಳನ್ನು ಆಡಬಹುದಾಗಿದೆ. ಭಾಜಾ ಗುಹೆಗಳು, ಬುಶಿ ಅಣೆಕಟ್ಟು, ಕಾರ್ಲಾ ಗುಹೆಗಳು, ರಾಜ್ಮಾಚಿ ಕೋಟೆ, ರೈವುಡ್ ಸರೋವರ ಇತ್ಯಾದಿಗಳು ಲೋನಾವಾಲಾದ ಜನಪ್ರಿಯ ಪ್ರವಾಸಿ ಆಕರ್ಷಣೆಗಳಾಗಿವೆ. ಇಲ್ಲಿನ ಅಮ್ಯೂಸ್‌ಮೆಂಟ್ ಪಾರ್ಕ್ ಮತ್ತು ವ್ಯಾಕ್ಸ್ ಮ್ಯೂಸಿಯಂ ಅನ್ನು ನೀವು ವೀಕ್ಷಿಸಲೇಬೇಕು. ವರ್ಷ ಪೂರ್ತಿ ಈ ಸ್ಥಳಕ್ಕೆ ನೀವು ಭೇಟಿ ನೀಡಬಹುದಾಗಿದೆ.
ವಯ್ನಾಡು
ಕೇರಳದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು ವಯ್ನಾಡು. ಬೆಟ್ಟ ಗುಡ್ಡಗಳಿಂದ ಆವರಿಸಿಕೊಂಡಿರುವ ಈ ತಾಣ ಮಳೆಗಾಲದ ಸಮಯದಲ್ಲಂತೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಇಲ್ಲಿ ಟೀ, ಕಾಫಿ, ರಬ್ಬರ್ ಮತ್ತು ಹಲವು ಮಸಾಲೆ ಪದಾರ್ಥಗಳನ್ನು ಬೆಳೆಯುವ ತೋಟಗಳನ್ನು ನೀವು ಕಾಣಬಹುದು. ವಯ್ನಾಡಿನಲ್ಲಿ ಲೆಕ್ಕಕ್ಕೆ ಸಿಗದಷ್ಟು ವ್ಯೂವ್ ಪಾಯಿಂಟ್‌ಗಳಿದ್ದು, ಎಲ್ಲ ಸ್ಥಳಗಳಿಂದ ನೀವು ನಿಸರ್ಗ ದೇವತೆಯ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದು. ವಯ್ನಾಡಿಗೆ ಹೋದಾಗ ಅಲ್ಲಿನ ವನ್ಯಜೀವಿ ಅಭಯಾರಣ್ಯ, ಪೂಕೊಡೆ ಸರೋವರ, ಎಡಕ್ಕಲ್ ಗುಹೆ, ನೀಲಿಮಾಲಾ ವ್ಯೂವ್ ಪಾಯಿಂಟ್, ಮೀನ್ಮುಟ್ಟಿ ಜಲಪಾತ, ಬಾಣಾಸುರ ಸಾಗರ ಆಣೆಕಟ್ಟು, ಛೇಂಬ್ರಾ ಪೀಕ್‌ಗಳನ್ನು ನೋಡಲು ಮರೆಯದಿರಿ.
ಪಂಚಗನಿ
ಮಹಾರಾಷ್ಟ್ರದ ಪ್ರವಾಸಿ ತಾಣಗಳಲ್ಲಿ ಒಂದು ಪಂಚಗನಿ. ಪಂಚಗನಿ ಮಹಾಬಲೇಶ್ವರ ದೇಗುಲದ ಸಮೀಪದಲ್ಲಿರುವ ಜನಪ್ರಿಯ ಗಿರಿಧಾಮವಿದು. ಇಲ್ಲಿಂದ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡಬಹುದಾಗಿದೆ. ಭಾರೀ ಮಳೆ ಬೀಳುವ ಪ್ರದೇಶವಾಗಿರುವ ಈ ಸ್ಥಳ ಮಂಜಿನಿಂದ ಮುಚ್ಚಿಕೊಂಡಿರುತ್ತದೆ. ಆ ರೀತಿಯ ವಾತಾವರಣವನ್ನು ಇಷ್ಟಪಡುವವರು ಈ ಸ್ಥಳಕ್ಕೆ ಭೇಟಿ ನೀಡಬಹುದು. ಟ್ರೆಕ್ಕಿಂಗ್, ಪ್ಯಾರಾಗ್ಲೈಡಿಂಗ್, ಸ್ಟ್ರಾಬೆರಿ ಶಾಪಿಂಗ್ ಸೇರಿ ಅನೇಕ ಕೆಲಸಗಳನ್ನು ನೀವಿಲ್ಲಿ ಮಾಡಬಹುದು.
ಕನ್ಯಾಕುಮಾರಿ
ಭಾರತದ ದಕ್ಷಿಣ ದಿಕ್ಕಿನ ತುದಿಯಲ್ಲಿರುವ ನಗರ ಕನ್ಯಾಕುಮಾರಿ. ಇದು ಭಾರತದಲ್ಲಿ ಹೆಚ್ಚು ಪ್ರವಾಸಿಗರು ಹೋಗುವ ತಾಣವೂ ಹೌದು. ಅರೇಬಿಯನ್ ಸಮುದ್ರ, ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರ ಸಂಗಮವಾಗಿರುವ ಈ ಸ್ಥಳ ಮಳೆಗಾಲದಲ್ಲಿ ಇನ್ನಷ್ಟು ಚೆನ್ನಾಗಿ ಕಾಣಿಸಿಕೊಳ್ಳುತ್ತದೆ. ಈ ಸ್ಥಳದಲ್ಲಿ ಹಲವು ದೇವಸ್ಥಾನಗಳೂ ಇವೆ. ಕನ್ಯಾಕುಮಾರಿಯಲ್ಲಿ ವಿವೇಕಾನಂದ ಕಲ್ಲಿನ ಸ್ಮಾರಕ, ಥಿರುವಲ್ಲೂರು ಪ್ರತಿಮೆ, ಥಿರ್ಪಾರಪ್ಪು ಜಲಪಾತ, ಕುಮಾರಿ ಅಮ್ಮನ್ ದೇವಸ್ಥಾನ, ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ವಟ್ಟಕೋಟೈ ಕೋಟೆ ಮತ್ತು ಥನುಮಲಯನ್ ದೇವಸ್ಥಾನವಿದ್ದು, ಈ ಸ್ಥಳಗಳನ್ನು ನೀವು ಮರೆಯದೆ ಭೇಟಿ ಕೊಡಿ. ಮಳೆ ಹೆಚ್ಚಿರುವ ಕಾರಣ ಅಲೆಗಳ ಸೆಳೆತವೂ ಹೆಚ್ಚಿದ್ದು, ಕಡಲ ಕಿನಾರೆಯಲ್ಲಿ ಆದಷ್ಟು ಜಾಗೃತರಾಗಿರಿ.
ಕುಮಾರಕಮ್
ಕೇರಳದ ವೆಂಬನಾಡ್ ಹೊಳೆ ದಡದಲ್ಲಿ ನಿಮಗೆ ಕುಮಾರಕಮ್ ಹೆಸರಿನ ಗ್ರಾಮ ಸಿಗುತ್ತದೆ. ಪ್ರಕೃತಿ ಮಾತೆಯೇ ಇಲ್ಲಿ ನೆಲೆಸಿರುವಂತೆ ನಿಮಗೆ ಕಂಡುಬರುತ್ತದೆ. ಈ ಹಳ್ಳಿಯಲ್ಲಿ ನಿಮಗೆ ವಿಶೇಷವಾಗಿ ಬೋಟ್ ಹೌಸ್‌ಗಳು ಸಿಗುತ್ತವೆ. ಅದರಲ್ಲೂ ಈ ಸಮಯದಲ್ಲಿ ಕುಮಾರಕಮ್‌ಗೆ ಪ್ರವಾಸ ಹೋಗುವವರ ಸಂಖ್ಯೆ ಕಡಿಮೆಯಿರುತ್ತದೆಯಾದ್ದರಿಂದ ಹೋಟೆಲ್‌ಗಳು ಬೆಲೆಯೂ ಕಡಿಮೆಯಿರುತ್ತದೆ. ಅದಲ್ಲದೆ ಬೋಟ್ ಹೌಸ್ ಕೂಡ ನಿಮಗೆ ಸುಲಭವಾಗಿ ಲಭ್ಯವಾಗುತ್ತದೆ. ಕುಮಾರಕಮ್‌ನಲ್ಲಿ ಪಕ್ಷಿಗಳ ಅಭಯಾರಣ್ಯವಿದೆ. ಹಾಗೆಯೇ ಅರುವಿಕ್ಕುಜಿ ಜಲಪಾತ, ಬೇ ಐಲ್ಯಾಂಡ್ ಡ್ರಿಫ್ಟ್‌ವುಡ್ ಮ್ಯೂಸಿಯಂ, ಕುಮಾರಕಂ ಕ್ರಾಫ್ಟ್ ಮ್ಯೂಸಿಯಂ ಎಲ್ಲವೂ ಸಮೀಪದಲ್ಲೇ ಇವೆ. ಇಲ್ಲಿ ಕೆಲವು ಆಯುರ್ವೇದಿಕ್ ಸ್ಪಾ ಕೂಡ ಇದ್ದು, ನೀವು ಆಯುರ್ವೇದಿಕ್ ಚಿಕಿತ್ಸೆಯನ್ನೂ ಪಡೆಯಬಹುದಾಗಿದೆ.
ಮೌಂಟ್ ಅಬು
ರಾಜಸ್ಥಾನದ ಏಕೈಕ ಗಿರಿಧಾಮವೆಂದರೆ ಅದು ಮೌಂಟ್ ಅಬು. ಈ ಗಿರಿಧಾಮದಲ್ಲಿ ವೈವಿಧ್ಯಮಯ ಸಸ್ಯಗಳನ್ನು ಕಾಣಬಹುದು. ಶ್ರೀಮಂತ ಇತಿಹಾಸವನ್ನು ಹೊಂದಿರುವ ಈ ಸ್ಥಳದಲ್ಲಿ ನೀವು ಅತ್ಯಂತ ಅದ್ಭುತವಾದ ವಾಸ್ತುಶಿಲ್ಪವನ್ನು ನೋಡಬಹುದು. ಪ್ರಾಚೀನ ಕಟ್ಟಡಗಳಿರುವ ಈ ಸ್ಥಳದಲ್ಲಿ ಸಾಹಸಮಯ ಕ್ರೀಡೆಗಳಿಗೂ ಅವಕಾಶವಿದೆ. ಬೋಟಿಂಗ್, ಹೈಕಿಂಗ್, ಟ್ರೆಕ್ಕಿಂಗ್, ರಾಕ್ ಕ್ಲೈಂಬಿಂಗ್, ಕ್ಯಾಂಪಿಂಗ್ ಅನ್ನು ನೀವಿಲ್ಲಿ ಮಾಡಬಹುದು. ಹಾಗೆಯೇ ವಿಶೇಷ ರೀತಿಯ ವಸ್ತುಗಳ ಶಾಪಿಂಗ್ ಅನ್ನೂ ಮಾಡಬಹುದಾಗಿದೆ.
ಖಜುರಾಹೊ
ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ಖಜರಾಹೊ ದೇವಸ್ಥಾನದ ಸಂಕೀರ್ಣವಿದೆ. ಇದು ಯುನೆಸ್ಕೋ ಪಟ್ಟಿ ಮಾಡಿರುವ ದೇಗುಲಗಳ ಪಟ್ಟಿಯಲ್ಲೂ ಸೇರಿಕೊಂಡಿದೆ. ಆಧ್ಯಾತ್ಮದತ್ತ ಹೆಚ್ಚಿನ ಒಲವಿರುವವರಿಗೆ ಇದು ಹೇಳಿ ಮಾಡಿಸಿದ ಸ್ಥಳ ಎನ್ನಬಹುದು. ಅದರಲ್ಲೂ ಈ ಮಳೆಗಾಲದ ಸಮಯದಲ್ಲಿ ಇಲ್ಲಿಗೆ ಕಡಿಮೆ ಪ್ರಮಾಣದಲ್ಲಿ ಪ್ರವಾಸಿಗರು ಹೋಗುತ್ತಾರಾದ್ದರಿಂದ ನೀವು ಅರಾಮವಾಗಿ ದೇಗುಲವನ್ನು ಸುತ್ತಬಹುದು. ಇದು ಹಿಂದೂ ಮತ್ತು ಜೈನ ದೇಗುಲಗಳಿರುವ ಸಂಕೀರ್ಣವಾಗಿದೆ. ಈ ಸಂಕೀರ್ಣಕ್ಕೆ ಸಮೀಪದಲ್ಲಿ ರೆನೇಹ್ ಜಲಪಾತ, ಆದಿವಾಸಿ ಮತ್ತು ಜನಪದ ಕಲೆಗಳ ವಸ್ತು ಸಂಗ್ರಹಾಲಯ, ಗಂಗಾವ್ ಅಣೆಕಟ್ಟು, ಬೇನಿ ಸಾಗರ ಆಣೆಕಟ್ಟು, ಮಸ್ತಾನಿ ಮೆಹಲ್ ಇವೆ. ಈ ಎಲ್ಲ ಸ್ಥಳಗಳಿಗೆ ನೀವು ಭೇಟಿ ನೀಡಬಹುದು.
ಮುನ್ನಾರ್
ದಕ್ಷಿಣ ಭಾರತದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು ಮುನ್ನಾರ್. ಕೇರಳದಲ್ಲಿರುವ ಈ ತಾಣ ಇದರ ವಿಶೇಷ ವಾತಾವರಣಕ್ಕೆ, ಟೀ ಎಸ್ಟೇಟ್‌ಗಳಿಗೆ ಹೆಸರುವಾಸಿ. ಗುಡ್ಡಗಾಡುಗಳಲ್ಲಿ ಹಚ್ಚ ಹಸುರಾಗಿ ಬೆಳೆದು ನಿಂತ ಟೀ ಎಸ್ಟೇಟ್‌ಗಳನ್ನು ನೀವಿಲ್ಲಿ ಕಣ್ತುಂಬಿಸಿಕೊಳ್ಳಬಹುದು. ಇಲ್ಲಿ ಮಳೆ ಕೂಡ ಹೆಚ್ಚಾಗಿಯೇ ಸುರಿಯುವುದರಿಂದ ಮಳೆಗಾಲವನ್ನು ಇಷ್ಟಪಡುವವರಿಗೆ ಈ ಸ್ಥಳ ಇಷ್ಟವಾಗುತ್ತದೆ. ಇಲ್ಲಿಗೆ ಭೇಟಿ ನೀಡಿದಾಗ ಹತ್ತಿರದಲ್ಲೇ ಇರುವ ಅತುಕ್ಕಡ ಜಲಪಾತ, ಎರವಿಕುಲಂ ರಾಷ್ಟ್ರೀಯ ಉದ್ಯಾನವನ, ಕುಂಡಲ ಅಣೆಕಟ್ಟು, ಚಿನ್ನಾರ್ ವನ್ಯಜೀವಿ ಅಭಯಾರಣ್ಯ, ಚಿನ್ನಕನನಾಲ್ ಜಲಪಾತ, ಮತ್ತುಪೆಟ್ಟಿ ಆಣೆಕಟ್ಟು ಮತ್ತು ಅನಮುಡಿ ಬೆಟ್ಟಕ್ಕೆ ಭೇಟಿ ಕೊಡುವುದನ್ನು ಮರೆಯದಿರಿ.
ಜೋಧ್‌ಪುರ
ರಾಜಸ್ಥಾನದ ಕಡೆ ಪ್ರವಾಸ ಹೋಗಬೇಕು ಎಂದುಕೊಳ್ಳುತ್ತಿದ್ದರೆ ಜೋಧ್‌ಪುರ ಒಳ್ಳೆಯ ಆಯ್ಕೆ ಎನ್ನಬಹುದು. ರಾಯಲ್ ಆಗಿರುವ ಈ ನಗರದಲ್ಲಿ ಅರಮನೆಯೊಂದಿದೆ. ಹಾಗೆಯೇ ಐತಿಹಾಸಿಕ ಕೋಟೆ, ಅನೇಕ ದೇವಸ್ಥಾನಗಳಿವೆ. ಇಲ್ಲಿನ ಶಾಪಿಂಗ್ ಮಾರ್ಕೆಟ್‌ನಲ್ಲಿ ರಾಜಸ್ಥಾನಿ ಶೈಲಿಯ ಕಲಾಕೃತಿಗಳನ್ನು, ಆಭರಣಗಳನ್ನು ಖರೀದಿಸಬಹುದು. ಈ ನಗರದಲ್ಲಿ ಉಮೈದ್ ಭವಾನ್ ಅರಮನೆ, ಮೆಹ್ರಾನ್‌ಗರ್ ಕೋಟೆ ಮತ್ತು ವಸ್ತು ಸಂಗ್ರಹಾಲಯ, ಜಸ್ವಂತ್ ಥಡ, ಮಂಡೋರ್ ಗಾರ್ಡನ್ಸ್, ಚಾಮುಂಡಿ ಮಾತಾ ದೇವಸ್ಥಾನ, ಬಲ್ಸಮಂದ್ ಹೊಳೆ ಮತ್ತು ಕೈಲಾನ ಹೊಳೆಗಳಿವೆ. ಈ ಎಲ್ಲ ಸ್ಥಳಗಳಿಗೆ ನೀವು ಪ್ರವಾಸ ಮಾಡಬಹುದು.
ಧರ್ಮಶಾಲಾ
ಹಿಮಾಚಲ ಪ್ರದೇಶದಲ್ಲಿ ಶಿಮ್ಲಾದಂತೆಯೇ ಪ್ರಸಿದ್ಧವಾಗಿರುವ ಇನ್ನೊಂದು ತಾಣ ಧರ್ಮಶಾಲಾ. ಸಮುದ್ರ ಮಟ್ಟದಿಂದ ಹೆಚ್ಚು ಎತ್ತರದಲ್ಲಿರುವ ಈ ಸ್ಥಳದಲ್ಲಿ ಮಳೆಯೂ ಹೆಚ್ಚಾಗಿಯೇ ಸುರಿಯುತ್ತದೆ. ಇಲ್ಲಿ ಟಿಬೆಟಿಯನ್ ಮಠವಿದೆ. ಇಲ್ಲಿ ನೀವು ಟಿಬೆಟಿಯನ್ ಸಂಸ್ಕೃತಿಯನ್ನು ಕಾಣಬಹುದು ಹಾಗೆಯೇ ಅವರ ಇತಿಹಾಸ ಬಗ್ಗೆಯೂ ತಿಳಿದುಕೊಳ್ಳಬಹುದು. ಕಂಗ್ರಾ ಕಲಾ ವಸ್ತು ಸಂಗ್ರಹಾಲಯಕ್ಕೆ ಹೋದರಂತೂ ಟಿಬೆಟಿಯನ್ ಬಗ್ಗೆ ನಿಮಗೆ ಸಾಕಷ್ಟು ಮಾಹಿತಿ ಸಿಗುತ್ತದೆ. ಇಲ್ಲಿಂದ ನೀವು ನಮ್ಗ್ಯಾಲ್ ಮಠ, ಭಾಗ್ಸುನಾಗ್ ದೇವಸ್ಥಾನ, ತ್ಸುಗ್ಲಾಗ್‌ಖಾಂಗ್ ಕಾಂಪ್ಲೆಕ್ಸ್, ಗ್ಯುಟೊ ಮಠ, ಕಂಗ್ರಾ ಕೋಟೆ, ಮಸ್ರೂರ್ ರಾಕ್ ಕಟ್ ದೇವಸೃಥಾನ ಮತ್ತು ಲೈಬ್ರರಿ ಆಫ್ ಟಿಬೆಟಿಯನ್ ವರ್ಕ್ಸ್ ಮತ್ತು ಆರ್ಕೈವ್ಸ್‌ಗೆ ಭೇಟಿ ನೀಡಬಹುದು. ಭಾಗ್ಸುನಾಗ್‌ನಲ್ಲಿ ಜಲಪಾತವೂ ಇದ್ದು, ಅದನ್ನು ನೋಡಲು ಮರೆಯದಿರಿ.
ಆಗುಂಬೆ
ದಕ್ಷಿಣ ಭಾರತದ ಚಿರಾಪುಂಜಿ ಎಂದು ಕರೆಸಿಕೊಳ್ಳುವುದು ಶಿವಮೊಗ್ಗ ಜಿಲ್ಲೆಯಲ್ಲಿರುವ ಆಗುಂಬೆ. ಚಿಕ್ಕ ಹಳ್ಳಿಯಾಗಿರುವ ಇಲ್ಲಿ ಅತ್ಯಧಿಕ ಮಳೆ ಸುರಿಯುತ್ತದೆ. ಭಾರತದಲ್ಲಿ ಅತಿ ಹೆಚ್ಚು ಮಳೆಯಾಗುವ ಎರಡನೇ ಪ್ರದೇಶ ಇದಾಗಿದೆ. ಇಲ್ಲಿನಿಂದ ಸೂರ್ಯಾಸ್ತವನ್ನು ನೋಡುವುದು ಒಂದು ಅದ್ಭುತವನ್ನು ನೋಡಿದಂತೆಯೇ ಸರಿ. ಮಳೆಗಾಲಯದಲ್ಲಿ ಈ ಪ್ರದೇಶ ಪೂರ್ತಿಯಾಗಿ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಎಲ್ಲೆಡೆ ಬೆಟ್ಟಗಳಿಂದ ಕೆಳಗೆ ಹರಿಯುವ ನೀರು ಚಿಕ್ಕ ಚಿಕ್ಕ ಜಲಪಾತಗಳಂತೆಯೇ ಕಾಣಿಸಿಕೊಳ್ಳುತ್ತವೆ.
ಚಿರಾಪುಂಜಿ
ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸ್ಥಳ ಮೇಘಾಲಯದ ಚಿರಾಪುಂಜಿ. ಪ್ರಾಚೀನ ಕಾಲದಿಂದಲೂ ಪ್ರಸಿದ್ಧವಾಗಿರುವ ಇದು ಅತ್ಯಂತ ಸ್ವಚ್ಛ ಸ್ಥಳವೂ ಹೌದು. ಹಚ್ಚ ಹಸಿರು, ಅಲ್ಲಲ್ಲಿ ಕಾಣುವ ಜಲಪಾತಗಳನ್ನು ನೋಡುವುದೇ ಚಂದ. ಮಳೆಗಾಲದಲ್ಲಿ ಈ ಚಿರಾಪುಂಜಿಯ ಸೌಂದರ್ಯ ಇಮ್ಮಡಿಯಾಗಿರುತ್ತದೆ. ಇಲ್ಲಿ ಟ್ರೆಕ್ಕಿಂಗ್ ಮಾಡುವುದಕ್ಕೂ ಅವಕಾಶವಿರುತ್ತದೆ. ಚಿರಾಪುಂಜಿಯಲ್ಲಿ ನೀವು ನೊಹ್ಕಾಲಿಕೈ ಜಲಪಾತ, ಡಬಲ್ ಡೆಕ್ಕರ್ ಲಿವಿಂಗ್ ರೂಟ್ ಬ್ರಿಡ್ಜ್, ಮೌಸಿನ್ರಾಮ್ ಗ್ರಾಮ, ಸೆವೆನ್ ಸಿಸ್ಟರ್ಸ್ ಫಾಲ್ಸ್, ಮಾವ್ಸ್ಮೈ ಗುಹೆ, ದಿ ಇಕೋ ಪಾರ್ಕ್, ಮೌಕ್‌ಡಾಕ್ ಡಿಂಪೆಪ್ ವ್ಯಾಲಿ, ಥಾಂಗ್ ಖರಂಗ್ ಪಾರ್ಕ್, ಖಾಸಿ ಮೊನೊಲಿತ್ಸ್, ಮೌಸಿನ್ರಾಮ್ ಮೀಸಲು ಅರಣ್ಯಕ್ಕೆ ಭೇಟಿ ನೀಡಬಹುದು.
ಕೊಡಗು
ಕರ್ನಾಟಕದಲ್ಲಿ ನೀವು ಆಗಸ್ಟ್ ತಿಂಗಳಲ್ಲಿ ಭೇಟಿ ನೀಡಬಹುದಾದ ಅದ್ಭುತ ಸ್ಥಳಗಳಲ್ಲಿ ಒಂದೆಂದರೆ ಅದು ಕೊಡಗು. ಹಸಿರೇ ತುಂಬಿರುವ ಈ ಪುಟ್ಟ ಪಟ್ಟಣದಲ್ಲಿ ನೀವು ನಿಸರ್ಗ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದು. ಪುಟ್ಟ ಪುಟ್ಟ ಬೆಟ್ಟಗಳು, ಅದನ್ನು ಆವರಿಸಿಕೊಂಡಿರುವ ಮಂಜು ಎಲ್ಲವೂ ನಿಮ್ಮನ್ನು ಆಕರ್ಷಿಸುತ್ತದೆ. ಇಲ್ಲಿ ಅತ್ಯದ್ಭುತ ರೆಸಾರ್ಟ್‌ಗಳೂ ಇದ್ದು, ನೀವು ಒಂದೆರೆಡು ದಿನಗಳ ಮಟ್ಟಿಗೆ ಅರಾಮಾವಾಗಿ ಇಲ್ಲಿದ್ದುಬರಬಹುದು. ಇಲ್ಲಿ ಆನೆ ಸವಾರಿ, ರಿವರ್ ರಾಫ್ಟಿಂಗ್, ಟ್ರೆಕ್ಕಿಂಗ್, ಕ್ಯಾಂಪಿಂಗ್, ಬೋಟಿಂಗ್, ಜೀಪ್ ಸಫಾರಿಯನ್ನು ನೀವು ಮಾಡಬಹುದು. ಕೊಡಗಿಗೆ ಭೇಟಿ ಕೊಟ್ಟಾಗ ಅಬ್ಬೆ ಫಾಲ್ಸ್, ತಡಿಯಂಡಮೋಲ್ ಶಿಖರ, ಮಲ್ಲಳ್ಳಿ ಜಲಪಾತ, ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ, ಕುಮಾರ ಪರ್ವತ ಬೆಟ್ಟ, ರಾಜಾ ಸೀಟ್, ಬ್ರಹ್ಮಗಿರಿ ಬೆಟ್ಟ, ಕಾಫಿ ತೋಟ, ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ಕೊಡಲು ಮರೆಯದಿರಿ.
ಅಂಡಮಾನ್
ಕಡಲ ದಡಗಳಲ್ಲಿ ಕುಳಿತು ಮನಸ್ಸಿಗೆ ನೆಮ್ಮದಿ ತಂದುಕೊಳ್ಳಬೇಕೆನ್ನುವ ಮನಸ್ಸಿದ್ದರೆ ಅಂಡಮಾನ್‌ನತ್ತ ಪ್ರಯಾಣ ಬೆಳೆಸಿ. ಇದು ಒಂದು ರೀತಿಯಲ್ಲಿ ಮನಮೋಹಕವಾದ ದ್ವೀಪವಾಗಿದೆ. ಇಲ್ಲಿ ನೀವು ಸೂರ್ಯೋದಯ, ಸೂರ್ಯಾಸ್ತಮಾನದ ವಿಹಂಗಮ ನೋಟವನ್ನು ಕಣ್ತುಂಬಿಸಿಕೊಳ್ಳುವುದಷ್ಟೇ ಅಲ್ಲದೆ ಹಲವಾರು ರೀತಿಯ ವಾಟರ್ ಗೇಮ್ಸ್‌ಗಳನ್ನು ಆಡಬಹುದು. ಇಲ್ಲಿ ನೀವು ಹ್ಯಾವ್ಲಾಕ್ ದ್ವೀಪ, ನೀಲ್ ದ್ವೀಪ, ರಾಸ್ ದ್ವೀಪ, ನಾರ್ತ್ ಬೇ ಐಲ್ಯಾಂಡ್, ಬಾರಾತಂಗ್ ದ್ವೀಪ, ಮೌಂಟ್ ಹ್ಯಾರಿಯೆಟ್ ರಾಷ್ಟ್ರೀಯ ಉದ್ಯಾನವನ, ಚಿಧಿಯಾ ಟಪ್ಪು, ಧನಿನಲ್ಲ ಮ್ಯಾಂಗ್ರೋವ್ ನೇಚರ್ ವಾಕ್ ವೇ, ಪಂಚವಟಿ ಜಲಪಾತಗಳು, ಕತ್ಬರ್ಟ್ ಬೇ ವನ್ಯಜೀವಿ ಅಭಯಾರಣ್ಯ, ಎಲೆಫೆಂಟ್ ಬೀಚ್‌ಗೆ ಭೇಟಿ ನೀಡಬಹುದು. ಸ್ಕೂಬಾ ಡೈವಿಂಗ್‌ನಂತಹ ಆಟವನ್ನು ನೀವಲ್ಲಿ ಆಡಬಹುದು.
ಕೊಡೈಕೆನಾಲ್
ತಮಿಳುನಾಡಿನ ಪ್ರಸಿದ್ಧ ಕೊಡೈಕೆನಾಲ್ ಭಾರತದಲ್ಲಿ ಅತ್ಯಂತ ಪ್ರಸಿದ್ಧ ಹನಿಮೂನ್ ತಾಣಗಳಲ್ಲಿ ಒಂದಾಗಿದೆ. ಲೇಕ್‌ಸೈಡ್ ರೆಸಾರ್ಟ್‌ಗಳಿಂದಲೇ ತುಂಬಿಕೊಂಡಿರುವ ಈ ಪಟ್ಟಣದಲ್ಲಿ ನೀವು ಮಂಜು ತುಂಬಿದ ಬೆಟ್ಟಗಳನ್ನು, ಜಲಪಾತಗಳನ್ನು ಕಾಣಬಹುದು. ಪಳನಿ ಬೆಟ್ಟಗಳ ಇಳಿಜಾರಿನಲ್ಲಿರುವ ಈ ಪಟ್ಟಣ ಸಮುದ್ರ ಮಟ್ಟದಿಂದ 7200 ಅಡಿ ಎತ್ತರದಲ್ಲಿದೆ. ಇಲ್ಲಿ ನೀವು ಬೆಟ್ಟಗಳನ್ನು ಹತ್ತುವುದರೊಂದಿಗೆ ಸೈಕ್ಲಿಂಗ್, ಹೈಕಿಂಗ್, ಟ್ರೆಕ್ಕಿಂಗ್ ಮಾಡಬಹುದಾಗಿದೆ. ಇಲ್ಲಿಂದ ನೀವು ಮನ್ನವನೂರ್ ಹೊಳೆ, ಬೆರಿಜಮ್ ಹೊಳೆ, ಪೈನ್ ಫಾರೆಸ್ಟ್, ಡಾಲ್ಫಿನ್ಸ್ ನೋಸ್, ಪಿಲ್ಲರ್ ರಾಕ್ಸ್, ಬ್ರ್ಯಾಂಟ್ ಪಾರ್ಕ್, ಗ್ರೀನ್ ವ್ಯಾಲಿ ವ್ಯೂ, ಚೆಟ್ಟಿಯಾರ್ ಪಾರ್ಕ್‌ಗೆ ಭೇಟಿ ನೀಡಬಹುದು.
ಮಾವ್ಲಿನ್ನಾಂಗ್
ಮಾವ್ಲಿನ್ನಾಂಗ್ ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮವಾಗಿದೆ. ಇದನ್ನು ದೇವರ ಸ್ವಂತ ಉದ್ಯಾನ ಎಂದೂ ಕರೆಯಲಾಗುತ್ತದೆ. ಒಂದು ಸಮುದಾಯ ಒಟ್ಟಾಗಿ ಕೆಲಸ ಮಾಡಿದರೆ ಊರನ್ನು ಹೇಗೆ ಇಟ್ಟುಕೊಳ್ಳಬಹುದು ಎನ್ನುವುದಕ್ಕೆ ಈ ಊರು ಸಾಕ್ಷಿ. ಅತ್ಯದ್ಭುತವಾದ ಮನೆಗಳು, ಹಚ್ಚ ಹಸಿರಿನಿ ನಡುವೆ ಧುಮ್ಮಿಕ್ಕುವ ಜಲಪಾತಗಳು, ವಿಸ್ಮಯವೆನಿಸುವಂತಹ ಬೇರು ಸೇತುವೆಗಳನ್ನು ನೀವಿಲ್ಲಿ ಕಾಣಬಹುದು. ಮಳೆಗಾಲದ ಸಮಯದಲ್ಲಿ ಇದು ಸ್ವರ್ಗದಂತೆಯೇ ಕಾಣುತ್ತದೆ. ಇಲ್ಲಿ ನೀವು ನೋಡಬೇಕಾದ ಸ್ಥಳಗಳೆಂದರೆ ಮಾವ್ಲಿನ್ನಾಂಗ್ ಜಲಪಾತ, ಜಿಂಗ್‌ಮಹಮ್ ಲಿವಿಂಗ್ ರೂಟ್ ಬ್ರಿಡ್ಜ್, ಉಮ್‌ಗೋಟ್ ನದಿ, ಬೋಫಿಲ್ ಜಲಪಾತ, ಮಾವ್ಲಿನ್‌ನಾಂಗ್ ಸೇಕ್ರೆಡ್ ಫಾರೆಸ್ಟ್, ನೊಹ್ವೆಟ್ ವ್ಯೂವ್ ಪಾಯಿಂಟ್.
ವಾರಾಣಸಿ
ಧಾರ್ಮಿಕ ಪ್ರಿಯರಿಗೆ ಇಷ್ಟವಾಗುವ ಸ್ಥಳ ವಾರಾಣಸಿ. ಗಂಗಾ ನದಿಯ ದಡದಲ್ಲಿರುವ ಈ ಐತಿಹಾಸಿಕ ನಗರವು ಭಾರತದ ಅತ್ಯಂತ ಪವಿತ್ರ ನಗರವೆಂದು ಕರೆಸಿಕೊಳ್ಳುತ್ತದೆ. ಇಲ್ಲಿನ ಘಾಟ್‌ಗಳಲ್ಲಿ ಸಂಜೆ ಹೊತ್ತಿನಲ್ಲಿ ನಡೆಸಲಾಗುವ ಗಂಗಾ ಆರತಿಯನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ. ಎಲ್ಲರೂ ನಿಸರ್ಗ ದೇವತೆಯನ್ನು ಹುಡುಕಿಕೊಂಡು ಹೋಗುತ್ತಿರುತ್ತಾದ್ದರಿಂದ ವಾರಾಣಸಿಯಲ್ಲಿ ಈ ಸಮಯದಲ್ಲಿ ಹೆಚ್ಚು ಪ್ರವಾಸಿಗರು ಇರುವುದಿಲ್ಲ. ಹಾಗಾಗಿ ನೀವು ಅರಾಮವಾಗಿ ಇಲ್ಲಿಗೆ ಭೇಟಿ ನೀಡಬಹುದು. ಇಲ್ಲಿ ನೀವು ದಶಾಶ್ವಮೇಧ ಘಾಟ್, ಅಸ್ಸಿ ಘಾಟ್, ಮಣಿಕರ್ಣಿಕಾ ಘಾಟ್, ಧಮೇಕ್ ಸ್ತೂಪ, ಶ್ರೀ ಕಾಶಿ ವಿಶ್ವನಾಥ ದೇವಾಲಯ, ಶ್ರೀ ದುರ್ಗಾ ದೇವಾಲಯ, ರಾಮನಗರ ಕೋಟೆ, ಬ್ರಿಜ್ರಾಮ ಅರಮನೆಗೆ ಭೇಟಿ ನೀಡಬಹುದು.
ಊಟಿ
ಪ್ರಕೃತಿ ಪ್ರೇಮಿಗಳಿಗೆ ಇಷ್ಟವಾಗುವ ತಾಣ ಊಟಿ. ಕರ್ನಾಟಕದ ನೆರೆ ರಾಜ್ಯ ತಮಿಳುನಾಡಿನಲ್ಲಿರುವ ಇಲ್ಲಿ ಅನೇಕ ಬೆಟ್ಟ ಗುಡ್ಡಗಳಿದ್ದು, ಈ ಸಮಯದಲ್ಲಿ ಎಲ್ಲವೂ ಹಚ್ಚ ಹಸಿರಿನಿಂದ ಕೂಡಿರುತ್ತವೆ. ಅದಲ್ಲದೆ ಇಲ್ಲಿನ ಸರೋವರದಲ್ಲಿ ದೋಣಿ ವಿಹಾರವನ್ನೂ ಮಾಡಬಹುದು. ಇಲ್ಲಿನ ಟೀ ಮ್ಯೂಸಿಯಂಗೆ ಭೇಟಿ ನೀಡುವುದನ್ನು ಮರೆಯಬೇಡಿ. ಇಲ್ಲಿರುವ ದೊಡ್ಡಬೆಟ್ಟದಲ್ಲಿ ಸ್ಕೇಲಿಂಗ್ ಮಾಡಬಹುದು. ಪೈಕಾರಾ ಜಲಪಾತದಲ್ಲಿ ನೀರಿನಲ್ಲಿ ಆಟವಾಡಬಹುದು. ಪೈನ್ ಕಾಡಿನಲ್ಲಿ ಕುಳಿತು ಸ್ಥಳೀಯ ಖಾದ್ಯಗಳನ್ನು ತಿನ್ನಬಹುದಾಗಿದೆ. ಇಲ್ಲಿ ನೀವು ಊಟಿ ಸರೋವರ್, ಬೊಟಾನಿಕಲ್ ಗಾರ್ಡನ್ಸ್, ದೊಡ್ಡಬೆಟ್ಟ ಶಿಖರ, ರೋಸ್ ಗಾರ್ಡನ್, ಪೈಕರ ಸರೋವರ ಮತ್ತು ಜಲಪಾತ, ಸರ್ಕಾರಿ ವಸ್ತುಸಂಗ್ರಹಾಲಯವನ್ನು ನೋಡಬಹುದು.