ಮನುಷ್ಯ ತನ್ನ ಸಾಧ್ಯತೆಗಳನ್ನು ಭೂಮಿಯಿಂದಾಚೆಗೆ ವಿಸ್ತರಿಸಿದ್ದಾನೆ. ಚಂದ್ರನ ನೆಲವನ್ನೂ ಮೆಟ್ಟಿ ಬಂದಿದ್ದಾನೆ. ಎಲ್ಲ ವಿಭಾಗಗಳಲ್ಲೂ ಅಸಾಮಾನ್ಯ ಸಾಧನೆ ಮಾಡಿದ್ದಾನೆ ನಿಜ. ಆದರೆ ಭೂಮಿಯ ಮೇಲಿನ ಕೆಲವು ಜಾಗಗಳಿಗೆ ಮನುಷ್ಯನಿಗಿನ್ನೂ ತನ್ನ ಕಾಲೂರಲು ಸಾಧ್ಯವಾಗಿಲ್ಲ ಎಂದರೆ ನಂಬಲೇಬೇಕು. ಇಂದಿಗೂ ಭೂಮಿಯ ಕೆಲವು ಭಾಗಗಳಲ್ಲಿ ಕಾಲಿಡುವಲ್ಲಿ ಮನುಷ್ಯ ಸೋತಿದ್ದಾನೆ. ಇಂದಿಗೂ ಕೆಲವು ಪ್ರದೇಶಗಳು ಸಾಮಾನ್ಯ ಮನುಷ್ಯನಿಗೆ ನಿರ್ಬಂಧಿತವಾಗಿಯೇ ಇದೆ. ಹಲವು ಪ್ರದೇಶಗಳಿನ್ನೂ ಮನುಷ್ಯನ ತರ್ಕಕ್ಕೆ ನಿಲುಕಿಲ್ಲ. ಇನ್ನು ಪ್ರವಾಸಿಗರಿಗಂತೂ ದೂರದ ಮಾತು. ಬನ್ನಿ, ಪ್ರಪಂಚದ ಯಾವೆಲ್ಲ ಪ್ರದೇಶಗಳನ್ನು ಇಂದಿಗೂ ಪ್ರವಾಸಿಗರು ನೋಡಲು ಸಾಧ್ಯವಿಲ್ಲ (Travel Destinations) ಎಂಬುದನ್ನು ನೋಡೋಣ.
1. ಸರ್ಟ್‌ಸೀ, ಐಸ್‌ಲ್ಯಾಂಡ್: ಐಸ್‌ಲ್ಯಾಂಡಿನ ಸರ್ಟ್‌ಸೀ ಎಂಬ ಈ ಪ್ರದೇಶವು 1963- 67ರ ನಡುವೆ ಅಗ್ನಿಪರ್ವತಗಳ ಚಿಮ್ಮುವಿಕೆಯಿಂದ ಸೃಷ್ಠಿಯಾದ ಭೂಭಾಗ. ಸಾಮಾನ್ಯ ಜನರು ಇಲ್ಲಿಗೆ ಇಂದಿಗೂ ಹೋಗಲಾಗುವುದಿಲ್ಲ. ಅಲ್ಲಿನ ಸರ್ಕಾರ ಪ್ರವೇಶವನ್ನು ನಿಷೇಧಿಸಿದೆ. ಕೇವಲ ಕೆಲವೇ ಕೆಲವು ವಿಜ್ಞಾನಿಗಳು ಮಾತ್ರ ಈ ಭೂಭಾಗಕ್ಕೆ ಹೋಗಬಹುದಾಗಿದ್ದು, ಅವರಿಗೂ ಕೂಡಾ ಇಲ್ಲಿನ ಭೌಗೋಳಿಕ ವಿಶೇಷತೆಯ ಸಂಶೋಧನೆಯ ದೃಷ್ಠಿಯಿಂದ ಮಾತ್ರ ಪ್ರವೇಶ ನೀಡಲಾಗಿದೆ.
2. ಸ್ನೇಕ್ ಐಲ್ಯಾಂಡ್, ಬ್ರೆಜಿಲ್: ಬ್ರೆಜಿಲ್‌ನ ಸ್ನೇಕ್ ಐಲ್ಯಾಂಡ್ ಹೆಸರಿನಂತೆಯೇ ಹಾವುಗಳ ದ್ವೀಪ. ಈ ಪುಟ್ಟ ದ್ವೀಪದಲ್ಲಿ ಸಾವಿರಗಟ್ಟಲೆ ವಿಷಕಾರಿ ಹಾವುಗಳು ತುಂಬಿರುವುದರಿಂದ ಸಾಮಾನ್ಯ ಮನುಷ್ಯನಿಗೆ ಇಲ್ಲಿಗೆ ಕಾಲಿಡಲು ಸಾಧ್ಯವಾಗಿಲ್ಲ. ಯಾಕೆಂದರೆ, ಒಮ್ಮೆ ಇಲ್ಲಿಗೆ ಕಾಲಿಟ್ಟರೆ, ಜೀವಂತವಾಗಿ ವಾಪಸ್ ಬರುವುದು ದೂರದ ಮಾತು. ಹೀಗಾಗಿ ಬ್ರೆಜಿಲ್ ಸರ್ಕಾರವೇ ಈ ಜಾಗಕ್ಕೆ ಮನುಷ್ಯರ ಪ್ರವೇಶವನ್ನು ನಿರ್ಬಂಧಿಸಿದೆ. ದಾಖಲೆಯ ಪ್ರಕಾರ ಈ ದ್ವೀಪದಲ್ಲಿ ಸುಮಾರು ನಾಲ್ಕು ಸಾವಿರ ಗೋಲ್ಡನ್ ಲ್ಯಾನ್ಸ್‌ಹೆಡ್ ಹಾವುಗಳಿದ್ದು, ಈ ಹಾವುಗಳು ಭೂಮಿಯಲ್ಲಿರುವ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದು.
3. ಕ್ವಿನ್ ಶಿ ಹುವಾಂಗ್ ಸಮಾಧಿ, ಚೈನಾ: ಲಿಶಾನ್ ಪರ್ವತಗಳಿಂದ ಉತ್ತರಕಿರುವ ಈ ಪ್ರದೇಶದಲ್ಲಿ ಚಕ್ರವರ್ತಿ ಕ್ವಿನ್ಶಿನ್ ಹುವಾಂಗ್ ಅವರ ಸಮಾಧಿಯಿದೆ. ಚೈನಾದ ಇತಿಹಾಸದಲ್ಲಿ ಕ್ರಿಸ್ತಪೂರ್ವ ಮೂರನೇ ಶತಮಾನದಲ್ಲಿ ಇಡಿಯ ಚೈನಾವನ್ನು ಆಳಿದ ಮೊದಲ ಚಕ್ರವರ್ತಿ ಎಂಬ ಹೆಗ್ಗಳಿಕೆಯೂ ಈತನಿಗಿದೆ. ಈ ಸಮಾಧಿಗೂ ಕೂಡಾ ಸಾರ್ವಜನಿಕರಿಗೆ ಪ್ರವೇಶ ನಿಷಿದ್ಧ. 2,200 ವರ್ಷಕ್ಕೂ ಹಳೆಯ ಈ ಐತಿಹಾಸಿಕ ಸ್ಥಳದ ಸಂರಕ್ಷಣೆ ಮಾತ್ರವಷ್ಟೇ ಅಲ್ಲ, ಇಲ್ಲಿನ ನಿಗೂಢತೆಯೂ ಕೂಡಾ ಇದನ್ನು ಸಾರ್ವಜನಿಕರಿಗೆ ತೆರೆಯುವಲ್ಲಿ ಹಿಂದೇಟು ಹಾಕಲು ಕಾರಣವಾಗಿದೆ.
4. ನಿಹಾವ್ ಐಲ್ಯಾಂಡ್, ಯುಎಸ್‌ಎ: 160 ಕುಟುಂಬಗಳು ಮಾತ್ರ ವಾಸವಾಗಿರುವ ಚೈನಾದ ಈ ಊರಿಗೆ ಬೇರೆಯವರು ಬರುವಂತಿಲ್ಲ. ಇಲ್ಲಿಗೆ ಬರಲು ಅನುಮತಿ ಪಡೆಯುವುದೂ ಕೂಡಾ ಸುಲಭದ ಮಾತಲ್ಲ. ಹಾಗೆ ಸಿಕ್ಕಸಿಕ್ಕವರಿಗೆಲ್ಲ ಅನುಮತಿ ಸಿಗುವುದೂ ಇಲ್ಲ. ಇಲ್ಲಿನ ಭೇಟಿಗೆ ಅನುಮತಿ ಪಡೆಯಲು ಒಂದೋ ಇಲ್ಲಿನ ಮಂದಿಯ ಕುಟುಂಬದ ಜೊತೆ ಸಂಬಂಧವಿರಬೇಕು ಇಲ್ಲವೇ, ಯುಎಸ್ ನೇವಿ ಜೊತೆಗೆ ಉತ್ತಮ ಬಾಂಧವ್ಯವಿರಬೇಕು. ಈ ದ್ವೀಪದ ಭೌಗೋಳಿಕ ವಿಶೇಷತೆಗಳು ಹಾಗೂ ಜೀವವೈವಿಧ್ಯದ ಉಳಿವಿಗೆ ಇಲ್ಲಿನ ಸರ್ಕಾರ ಈ ವಿಶೇಷ ನಿಯಮಗಳನ್ನು ಜಾರಿಗೆ ತಂದಿದೆ.
5. ಡೂಮ್ಸ್‌ಡೇ ವಾಲ್ಟ್, ನಾರ್ವೆ: ಗ್ಲೋಬಲ್ ಸೀಡ್ ವಾಲ್ಟ್ ಎಂದೇ ಪ್ರಸಿದ್ಧವಾಗಿರುವ ಈ ಜಾಗ ಬಹಳ ಒಳ್ಳೆಯ ಮಾನವೀಯ ಉದ್ದೇಶದಿಂದ ಮಾಡಲ್ಪಟ್ಟಿದೆ. ಜಗತ್ತಿನ ಎಲ್ಲೆಡೆಯಿಂದ ಸಂಗ್ರಹಿಸಲಾದ ಸುಮಾರು 100 ಮಿಲಿಯನ್‌ಗೂ ಹೆಚ್ಚು ಬೀಜಗಳನ್ನು ಇಲಲಿ ಸಂರಕ್ಷಿಸಿ ಇಡಲಾಗಿದ್ದು, ಭೂಕಂಪ, ಸ್ಪೋಟ ಇತ್ಯಾದಿ ಏನೇ ಅವಘಡಗಳಿಂದ ಸೃಷ್ಟಿಯ ಅಪರೂಪದ ಸಸ್ಯಪ್ರಬೇಧಗಳು ಮರೆಯಾಗಬಾರದೆಂಬ ಉದ್ದೇಶದಿಂದ ಸಂರಕ್ಷಿಸಿ ಇಡಲಾಗಿದೆ. 2008ರಲ್ಲಿ ಇದನ್ನು ನಿರ್ಮಿಸಿದ್ದು, ಸುಮಾರು 200೦ ವರ್ಷಗಳ ಕಾಲ ಇವು ಉಳಿಯಬಲ್ಲವು.
ಕೇವಲ ಇಷ್ಟೇ ಅಲ್ಲ, ಇಂತಹ ಭೂಮಿಯ ಮೇಲಿನ ನೂರಾರು ಜಾಗಗಳಿಗೆ ಇನ್ನೂ ಮನುಷ್ಯ ಕಾಲಿಟ್ಟಿಲ್ಲ. ಸಾಧ್ಯವಾಗುವುದೂ ಕೂಡಾ ದೂರದ ಮಾತು. ಇವು ಕೇವಲ ಉದಾಹರಣೆಗಳಷ್ಟೇ.
ಇದನ್ನೂ ಓದಿ: Travel Tips: ಇವು ಬೇರೆ ಗ್ರಹದ ಜಾಗಗಳಲ್ಲ, ನಮ್ಮದೇ ದೇಶದ ಅದ್ಭುತ ತಾಣಗಳು!