ಕೆಲವು ಊರುಗಳಿಗೆ ತಿನ್ನುವುದಕ್ಕಾಗಿಯೇ ಹೋಗಬೇಕು! ಪ್ರವಾಸ ಎಂದರೆ ಕೇವಲ ಟೂರಿಸ್ಟ್ ಗೈಡ್ ಹಾಕಿಕೊಟ್ಟ, ಅಥವಾ ಮಧ್ಯವರ್ತಿಗಳು ಹಾಕಿಕೊಟ್ಟ ಪ್ಯಾಕೇಜಿನಂತೆ ಒಂದಿಷ್ಟು ಸ್ಥಳಗಳನ್ನು ನೋಡಿಕೊಂಡು, ಅಲ್ಲೊಂದಿಷ್ಟು ಭಂಗಿಗಳಲ್ಲಿ ಫೋಟೋ ತೆಗೆದುಕೊಂಡು ಬರುವುದಷ್ಟೇ ಅಲ್ಲ, ಈಗ ಪ್ರವಾಸದ ರೂಪುರೇಷೆಗಳು (Travel Guide) ಸಾಕಷ್ಟು ವಿಸ್ತಾರಗೊಂಡಿದೆ. ಜನರು, 50 ರೂಪಾಯಿಯ ಪುಚ್ಕಾ ತಿನ್ನಲು ಕೋಲ್ಕತ್ತಾಕ್ಕೆ ಹೋಗುತ್ತಾರೆ. ಬಿರಿಯಾನಿ ತಿನ್ನಲು ಹೈದರಾಬಾದ್ ವಿಮಾನ ಹತ್ತುತ್ತಾರೆ. ಹಾಗೆಯೇ ಒಂದು ರುಚಿಕರವಾದ ಚಾಕೋಲೇಟ್ (delicious chocolates) ತಿನ್ನಲು ನೀವು ಈ ಜಾಗಗಳಿಗೆ (chocolate travel) ಹೋಗಬಾರದ್ಯಾಕೆ ಹೇಳಿ!
ಚಾಕೋಲೇಟ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಈಗ ಹುಟ್ಟಿದ ಮಗುವಿನಿಂದ ಹಿಡಿದು, ಹಾಸಿಗೆ ಹಿಡಿದ ವಯೋವೃದ್ಧರವರೆಗೆ ಚಾಕೋಲೇಟ್ ಸಿಹಿಗೆ ಮಾರುಹೋಗದವರಿಲ್ಲ. ಅಂತಹ ಚಾಕೋಲೇಟ್ ಜಗತ್ತಿನ ಮೂಲೆ ಮೂಲೆಯಲ್ಲೂ ಸಿಗುತ್ತದೆ ಎಂಬುದು ನಿಜವಾದರೂ, ಕೆಲವು ಜಾಗಗಳಲ್ಲಿ ಸಿಗುವ ಚಾಕೋಲೇಟ್‌ನ ವೆರೈಟಿಯೂ ರುಚಿಯೂ ಬೇರೆಯೇ. ಬೆಲ್ಜಿಯಂ, ಇಟಲಿ, ಸ್ವಿಟ್ಜರ್‌ಲ್ಯಾಂಡ್, ಪ್ಯಾರಿಸ್ ಮುಂತಾದೆಡೆಗಳಲ್ಲೆಲ್ಲ ಥರಹೇವಾರಿ ಸಕೋಲೇಟ್ ಸಿಗುವುದು ಲೋಕಮಾನ್ಯವಾದರೂ, ನಮ್ಮ ಭಾರತದಲ್ಲೂ ಕೆಲವು ಸ್ಥಳಗಳು ಚಾಕೋಲೇಟ್‌ಗಳಿಗೆ ಬಲು ಪ್ರಸಿದ್ಧಿ. ಬನ್ನಿ, ಐವೆಲ್ಲ ಜಾಗಗಳ ಚಾಕೋಲೇಟ್‌ಗೆ ಹೆಚ್ಚು ರುಚಿ ಎಂಬುದನ್ನು ನೋಡೋಣ.
1. ಊಟಿ: ತಮಿಳುನಾಡಿನ ಊಟಿ (ooty travel) ದಕ್ಷಿಣ ಭಾರತೀಯರ ಮಧುಚಂದ್ರದ ಫೆವರಿಟ್ ತಾಣ. ಉತ್ತರ ಭಾರತದ ಹಿಮಚ್ಛಾದಿತ ಊರುಗಳಿಗೆ ಮಧುಚಂದ್ರಕ್ಕೆ ಹೋಗಲಾರದ ಹಲವರು, ಊಟಿಯ ಚಳಿಯಲ್ಲಿ ಸ್ವರ್ಗಸುಖ ಕಾಣುತ್ತಾರೆ. ಕಣ್ಮನ ತಣಿಸುವ ಊಟಿಯ ಹಸಿರನ್ನು, ಹೂಗಳ ರಾಶಿಯನ್ನಷ್ಟೆ ನೋಡಿ ಮನತಣಿಸಿದರೆ ಸಾಕೇ? ಹೊಟ್ಟೆಯನ್ನೂ ತಣಿಸಲು ಇಲ್ಲಿನ ಚಾಕೋಲೇಟ್‌ಗಳನ್ನೂ ಸವಿಯಬೇಕು. ಊಟಿಯಲ್ಲಿ ಎಲ್ಲೇ ತಿರುಗಾಡಿದರೂ, ಹೋಮ್‌ಮೇಡ್ ಚಾಕೋಲೇಟುಗಳನ್ನು (ooty chocolates) ಮಾರುವುದನ್ನು ನೀವು ಕಾಣಬಹುದು. ಬಗೆಬಗೆಯ ರುಚಿಯ ಒಂದಷ್ಟು ಚಾಕೋಲೇಟ್ ತಿಂದು, ಮತ್ತೊಂದಿಷ್ಟು ಮನೆಗೂ ಒಯ್ಯಲು ಊಟಿ ಬೆಸ್ಟ್!
2. ಲೋನವಾಲ: ಮಹಾರಾಷ್ಟ್ರದ ಲೋನವಾಲ ಚಂದನೆಯ ಪರ್ವತದೂರುಗಳಲ್ಲಿ ಒಂದು. ಲೋನವಾಲವೂ ಕೂಡಾ ಊಟಿಯಂತೆಯೇ ಚಾಕೋಲೇಟ್ ಸ್ವರ್ಗ. ಇಲ್ಲಿನ ಚಾಕೋಲೇಟ್ ಫಡ್ಜ್ ಹಾಗೂ ಬಗೆಬಗೆಯ ಚಿಕ್ಕಿಗಳು ಬಲು ರುಚಿ. ಬಗೆಬಗೆಯ ಒಣಬೀಜಗಳಿಂದ ಮಾಡಿದ ಚಿಕ್ಕಿ ಹಾಗೂ ಒಣಬೀಜಗಳನ್ನು ಸ್ಟಫ್ ಮಾಡಿದ ಚಾಕೋಲೇಟುಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಚಾಕೋಲೇಟ್‌ಗಾಗಿಯೇ ಇಲ್ಲಿಗೆ ರೈಲು ಹತ್ತಿ ಬಂದಿಳಿಯಬಹುದು!
3. ಅಲ್ಮೋರಾ: ಉತ್ತರಾಖಂಡ ದೇವಭೂಮಿ. ಇಂತಹ ದೇವಭೂಮಿಯ ಸೌಂದರ್ಯ ಆಸ್ವಾದಿಸುತ್ತಾ ಲೋಕ ಮರೆತರೆ, ಈ ಚಾಕೋಲೇಟುಗಳು ಬೇರೆಲ್ಲೂ ಸಿಕ್ಕದು! ಹಾಗಾಗಿ, ಚಾಕೋಲೇಟ್ ತಿನ್ನುವ ಆಸೆಯನ್ನಿಟ್ಟುಕೊಂಡೇ ಉತ್ತರಾಖಂಡದ ಅಲ್ಮೋರಕ್ಕೊಮ್ಮೆ ಭೇಟಿ ಕೊಡಬೇಕು. ಇಲ್ಲಿನ ಬಾಲ ಮಿಠಾಯಿ ಎಂಬ ಚಾಕೋಲೇಟು ಹೆಸರುವಾಸಿ. ರೋಸ್ಟೆಡ್ ಖೋವಾದ ಸಿಹಿ ತಿನಿಸೊಂದು ಚಾಕೋಲೇಟ್ ಫಡ್ಜ್‌ಅನ್ನೂ ಕೂಡಾ ನಿವಾಳಿಸಿ ಎಸೆದೀತು, ಅಂತಹ ರುಚಿ. ಇಷ್ಟೇ ಅಲ್ಲ, ಬಗೆಬಗೆಯ ಹೋಮ್‌ಮೇಡ್ ಚಾಕೋಲೇಟ್‌ಗಳೂ (homemade chocolates) ಇಲ್ಲಿ ಲಭ್ಯ. ಅಲ್ಮೋರಾ ಬಿಟ್ಟು ಬೇರೆಲ್ಲಾದರೂ ಇದು ಸಿಕ್ಕೀತು ಎಂದು ನೀವಂದುಕೊಂಡರೆ ನಿಮ್ಮ ಎಣಿಕೆ ತಪ್ಪು. ಇವನ್ನು ತಿನ್ನಲು ಅಲ್ಮೋರಾಕ್ಕೇ ಹೋಗಬೇಕು!
ಇದನ್ನೂ ಓದಿ: Monsoon Travel Tips: ʻಮಳೆಗಾಲದಲ್ಲಿ ಪ್ರವಾಸʼ ಎಂಬ ದಿವ್ಯಾನುಭೂತಿ: ಹೊರಡುವಾಗ ಇವಿಷ್ಟು ನೆನಪಿರಲಿ!
4. ಕೊಡೈಕೆನಾಲ್: ತಮಿಳುನಾಡಿನ ಕೊಡೈಕೆನಾಲ್ (Kodaikanal) ಕೂಡಾ, ಊಟಿಯಂತೆಯೇ ಚಾಕೋಲೇಟುಗಳಿಗೂ ಪ್ರಸಿದ್ಧಿವೆತ್ತ ಪರ್ವತದೂರು. ಕೊಡೈಕನಾಲ್‌ನ ರಮಣೀಯ ದೃಶ್ಯಗಳಿಗೆ ಮಾರು ಹೋಗಿ ಇಹವ ಮರೆಯುವ ಮೊದಲು ಚಾಕೋಲೇಟು ಇಲ್ಲಿ ಖರೀದಿಸಿಟ್ಟುಕೊಳ್ಳಿ. ಸ್ವರ್ಗಸದೃಶ ದೃಶ್ಯಗಳನ್ನು ಈ ಬೆಟ್ಟದೂರಿನಿಂದ ನೋಡುತ್ತಾ ಚಾಕೋಲೇಟ್ ಮೆಲ್ಲುತ್ತಾ ಸ್ವರ್ಗದ ನಿಜವಾದ ಆನಂದವನ್ನೂ ಅನುಭವಿಸುವಿರಿ!
5. ಅರಕು ವ್ಯಾಲಿ: ಆಂಧ್ರಪ್ರದೇಶ ಅರಕು ವ್ಯಾಲಿ (araku valley) ಕೂಡಾ ಚಾಕೋಲೇಟುಗಳಿಗೆ ಹೆಸರುವಾಸಿ. ಇಲ್ಲಿಯೇ ಬೆಳೆದ ಕೊಕೋ ಬೀಜಗಳಿಂದ ತಯಾರಾದ ಚಾಕೋಲೇಟುಗಳನ್ನು ಇಲ್ಲಿಯೇ ಖರೀದಿಸಿ ಸವಿಯುವುದೇ ಮಜಾ. ಒಂದೇ ರುಚಿಯ ಬಗೆಬಗೆಯ ಬ್ರಾಂಡ್‌ಗಳ ಪ್ಯಾಕೆಟ್ಟುಗಳಲ್ಲಿ ಚಾಕೋಲೇಟ್ ಖರೀದಿಸಿ ತಿನ್ನುವುದಕ್ಕೂ, ಹೋಮ್‌ಮೇಡ್ ಚಾಕೋಲೇಟ್ ಸವಿಯುವುದಕ್ಕೂ ಬಹಳ ವ್ಯತ್ಯಾಸವಿದೆ. ಹಾಗಾಗಿ ನಿಮ್ಮ ಪ್ರಿಯವಾದ ಚಾಕೋಲೇಟ್‌ನ ಹೆಸರಿನಲ್ಲಾದರೂ, ಈ ಜಾಗಗಳಿಗೊಮ್ಮೆ ನೀವು ಪ್ರವಾಸ ಮಾಡಿಬಿಡಿ!
ಇದನ್ನೂ ಓದಿ: Travel Tips: ಇವು ಬೇರೆ ಗ್ರಹದ ಜಾಗಗಳಲ್ಲ, ನಮ್ಮದೇ ದೇಶದ ಅದ್ಭುತ ತಾಣಗಳು!