ಬಹಳಷ್ಟು ಜನರ ಪ್ರವಾಸಪ್ರಿಯರ ದೂರು ಎಂದರೆ ಎಲ್ಲಿಗೇ ಪ್ರವಾಸ ಮಾಡಿ ಬಂದರೆ ಸಾಕು, ಕೂದಲು ಹಾಗೂ ಚರ್ಮ ಹಾಳಾಗಿ ಹೋಯಿತು ಎಂದು ಅಲವತ್ತುಕೊಳ್ಳುತ್ತಾರೆ. ಪ್ರವಾಸ ಮಾಡುವುದೇನೋ ಸರಿ, ಆದರೆ ಬಂದ ಮೇಲೆ ನಮ್ಮ ಮುಖವನ್ನು ನಾವೇ ಕನ್ನಡಿಯಲ್ಲಿ ನೋಡಲಾಗುವುದಿಲ್ಲ, ಅಷ್ಟು ಟ್ಯಾನ್ ಆಗಿಬಿಟ್ಟಿರುತ್ತದೆ ಎಂಬುದು ಹಲವರ ದೂರಾದರೆ, ಬಿಸಿಲಿಗೆ, ನೀರಿನ ಬದಲಾವಣೆಯಿಂದ ಕೂದಲು ಯದ್ವಾತದ್ವಾ ಉದುರುತ್ತಿವೆ, ಹೀಗೆ ಆದರೆ, ಒಂದು ದಿನ ನಮ್ಮ ತಲೆ ಬೊಕ್ಕತಲೆಯಾಗಿಬಿಡುತ್ತದೆ ಎಂದು ಗಾಬರಿಯಾಗುವ ಮಂದಿಯೂ ಇದ್ದಾರೆ. ವಿಷಯ ಏನೇ ಇದ್ದರೂ, ಪ್ರವಾಸ ಮಾಡಿ ಬಂದರೆ, ಎಲ್ಲಾದರೂ ಚಾರಣ ಮಾಡಿ ಬಂದರೆ, ಚರ್ಮ, ಕೂದಲು ಹದಗೆಟ್ಟು ಹೋಗುವುದು ನಿಜ. ಬೇರೆಯ ತಾಪಮಾನ, ಹವಾಮಾನ, ಎತ್ತರದ ಪ್ರದೇಶದಲ್ಲಿ ಹೆಚ್ಚು ಸೂರ್ಯ ರಶ್ಮಿ ಚರ್ಮ ಸ್ಪರ್ಷಿಸುವ ಕಾರಣ, ಇಡೀ ದಿನ ಬಿಸಿಲಿನಲ್ಲೇ ಕಳೆಯುವುದರಿಂದ, ತಿರುಗಾಟದಿಂದ ನಮ್ಮ ದೇಹದ ಬಗ್ಗೆ ಗಮನ ಕೊಡಲಾಗದೇ ಇರುವುದು ಸೇರಿದಂತೆ ನಾನಾ ಕಾರಣಗಳಿಂದ ನಮ್ಮ ಚರ್ಮ (Skin care) ಹಾಗೂ ಕೂದಲು (Hair Care) ಎಂದಿನಂತೆ ಇರುವುದಿಲ್ಲ. ಆದರೆ, ಇವೆಲ್ಲವನ್ನೂ ಮರೆತರೆ ದಕ್ಕುವ ಪ್ರವಾಸದ ಅನುಭವ ಅಲ್ಲಿ ಮುಖ್ಯವಾಗುತ್ತದೆ ಎಂಬುದು ಸತ್ಯ.
ಏನೇ ಇರಲಿ, ಸ್ವಲ್ಪ ಮುತುವರ್ಜಿ, ಕಾಳಜಿ ವಹಿಸಿದರೆ ಚರ್ಮ ಹಾಗೂ ಕೂದಲ ಮೇಲಾಗುವ ಹಾನಿಯನ್ನು ಬಹುತೇಕ ತಗ್ಗಿಸಬಹುದು. ಹಾಗಾದರೆ, ಪ್ರವಾಸದ ಸಮಯದಲ್ಲಿ ನಮ್ಮ ಚರ್ಮ ರಕ್ಷಣೆ ಹೇಗೆ ಎಂದು ನೋಡೋಣ ಬನ್ನಿ.
1. ಎಲ್ಲೇ ಹೋಗುವುದಿದ್ದರೂ ಆಯಾ ಪ್ರದೇಶದಲ್ಲಿ ವಾತಾವರಣ ಹೇಗಿದೆ ಎಂಬುದನ್ನು ಅಂತರ್ಜಾಲದಲ್ಲಿ ಮೊದಲೇ ನೋಡಿ ತಿಳಿದುಕೊಳ್ಳಿ. ಆ ಜಾಗದ ಹವಾಮಾನ ಹಾಗೂ ಇತರೇ ಮಾಹಿತಿಗಳನ್ನು ಕಲೆ ಹಾಕಿ. ಅಲ್ಲಿನ ತಾಪಮಾನಕ್ಕೆ ತಕ್ಕ ಹಾಗೆ ಚರ್ಮದ ರಕ್ಷಣೆಗೆ ಅಗತ್ಯ ಬೇಕಾಗಿರುವ ವಸ್ತುಗಳನ್ನು ತೆಗೆದುಕೊಳ್ಳಿ. ಉದಾಹರಣೆಗೆ, ನಿಮ್ಮ ನಿತ್ಯವೂ ಬಳಸುವ ಮಾಯ್‌ಶ್ಚರೈಸರ್, ಸನ್‌ಸ್ಕ್ರೀನ್ ಲೋಶನ್ ಇತ್ಯಾದಿಗಳನ್ನು ಮರೆಯಬೇಡಿ.
2. ನೀವು ನಿತ್ಯವೂ ನಿಮ್ಮ ಚರ್ಮದ ರಕ್ಷಣೆಗಾಗಿ ಮನೆಯಲ್ಲಿ ಮಾಡಿಕೊಳ್ಳುವ ಅಭ್ಯಾಸವನ್ನು ಪ್ರವಾಸದಲ್ಲಿ ಬಿಡಬೇಡಿ. ಮನೆಯಲ್ಲಿ ಎದ್ದ ಕೂಡಲೇ, ಚೆನ್ನಾಗಿ ಮುಖ ತೊಳೆದ ಮೇಲೆ ಬಳಸುವ ಕ್ರೀಮ್, ಸನ್‌ಸ್ಕ್ರೀನ್ ಲೋಶನ್, ಇತ್ಯಾದಿಗಳ ಬಳಕೆಯನ್ನು ಇಲ್ಲೂ ಮಾಡಿ. ನೀವು ಬಂದ ಸ್ಥಳ ಸೂರ್ಯನ ಬಿಸಿಲು ಹೆಚ್ಚು ಬೀಳುವ ತಾಣವಾಗಿದ್ದರೆ, ಆ ಜಾಗಕ್ಕೆ ಅಗತ್ಯವಿರುವಷ್ಟು ಎಸ್‌ಪಿಎಫ್ ಮಟ್ಟವಿರುವ ಲೋಶನ್ ಬಳಸಿಕೊಳ್ಳಿ. ರಾತ್ರಿ ಮಲಗುವಾಗಲೂ ನೀವು ಮನೆಯಲ್ಲಿ ಮಾಡುವ ಕ್ರಮಗಳನ್ನೇ ಇಲ್ಲೂ ಫಾಲೋ ಮಾಡಿ. ಮೇಕಪ್, ಮೇಕಪ್ ವೈಪ್, ನೈಟ್ ಕ್ರೀಮುಗಳು ಎಲ್ಲವೂ ಇರಲಿ.
3. ಪ್ರವಾಸದಲ್ಲಿ ಹೊರಗೆ ಹೋಗುವಾಗ ನಿಮ್ಮ ಪರ್ಸ್‌ನಲ್ಲಿ ಮಾಯ್‌ಶ್ಚರೈಸರ್ ಹಾಗೂ ಸನ್‌ಸ್ಕ್ರೀನ್ ಲೋಶನ್ ಇಟ್ಟುಕೊಂಡಿರಿ. ಹಾಗೂ ಅಗತ್ಯ ಬಂದಲ್ಲಿ ಬಳಸಿ.
4. ಎಲ್ಲಕ್ಕಿಂತ ಮುಖ್ಯವಾಗಿ ಪ್ರವಾಸದಲ್ಲಿ ಹಾಳುಮೂಳು ತಿನ್ನುವುದೂ ಕೂಡಾ ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ನಿಮ್ಮ ಚರ್ಮದ ಆರೋಗ್ಯಕ್ಕೆ ಹೊಂದದ ಆಹಾರಗಳಿಂದ ದೂರವಿರಿ.
ಇದನ್ನೂ ಓದಿ: Travel Tips: ಮಕ್ಕಳಲ್ಲಿ ಕಾಡಿನ ಬಗ್ಗೆ ಪ್ರೀತಿ ಬೆಳೆಸಲು ಈ ಬೇಸಿಗೆಯಲ್ಲಿ ಕಾಡಿಗೆ ಕರೆದೊಯ್ಯದಿದ್ದರೆ ಹೇಗೆ?!
5. ಹೆಚ್ಚು ನೀರು ಕುಡಿಯಿರಿ. ಪ್ರವಾಸದಲ್ಲಿ ಬಹುತೇಕರು ನೀರು ಕುಡಿಯುವುದನ್ನೇ ಮರೆಯುತ್ತಾರೆ. ಆದರೆ, ದೇಹಕ್ಕೆಪ್ರವಾಸದ ಸಂದರ್ಭ ನೀರಿನ ಅವಶ್ಯಕತೆ ಹೆಚ್ಚಿರುತ್ತದೆ. ಹಾಗಾಗಿ ನೀರು ಕುಡಿಯುವುದು ಅತ್ಯಂತ ಮುಖ್ಯ.
6. ಕೂದಲು ಹಾಳಾಗುತ್ತದೆ ಎಂಬ ಭಯ ನಿಮ್ಮದಾಗಿದ್ದರೆ, ತಲೆಯನ್ನು ಶಾಲಿನಿಂದ ಮುಚ್ಚಿಕೊಳ್ಳುವುದು ಅಥವಾ ಸ್ಕಾರ್ಫ್‌ನಿಂದ ಸುತ್ತಿಕೊಳ್ಳಬಹುದು.
7. ಕೂದಲನ್ನು ಹರವಿಕೊಳ್ಳುವ ಬದಲು, ಕಟ್ಟಿ. ಪೋನಿಟೇಲ್ ಹಾಕಿ. ಫೋಟೋ ಹಾಗೂ ಅಗತ್ಯ ಸಂದರ್ಭಗಳಿಗೆ ಮಾತ್ರ ಕೂದಲನ್ನು ಬೇಕಿದ್ದರೆ ಹರವಿಕೊಳ್ಳಿ. ಯಾಕೆಂದರೆ ಹರಡಿಕೊಂಡ ಕೂದಲು ಬೇಗ ಸಿಕ್ಕುಗಟ್ಟುತ್ತದೆ. ಧೂಳು, ಕಶ್ಮಲಗಳು ಸೇರಿಕೊಂಡು ಕೂದಲು ಬೇಗ ಹಾಳಾಗುತ್ತದೆ.
8. ಮುಖ್ಯವಾಗಿ ಪ್ರವಾಸದಿಂದ ಮನೆಗೆ ಬಂದ ಮೇಲೆ ನಿಮ್ಮ ಕೂದಲು ಹಾಗೂ ಚರ್ಮಕ್ಕೆ ಸ್ವಲ್ಪ ಹೆಚ್ಚೇ ಕಾಳಜಿ ಆರೈಕೆ ಮಾಡಿ. ಕೂದಲಿಗೆ ಚೆನ್ನಾಗಿ ಎಣ್ಣೆ ಹಚ್ಚಿ ಮಸಾಜ್ ಮಾಡಿ ಒಂದೆರಡು ಗಂಟೆ ಬಿಟ್ಟು ಸ್ನಾನ ಮಾಡಿಕೊಳ್ಳಬಹುದು. ಮುಖದ ಚರ್ಮಕ್ಕೂ ಮಸಾಜ್ ಮಾಡಿಕೊಳ್ಳಬಹುದು ಹಾಗೂ ಫೇಸ್ ಪ್ಯಾಕ್ ಹಚ್ಚಿಕೊಳ್ಳಬಹುದು.
ಇದನ್ನೂ ಓದಿ: Travel Tips: ಬೇಸಿಗೆಯಲ್ಲಿ ಹಿಮಬೆಟ್ಟ: ಕಣ್ಣಿಗೂ ಮನಸ್ಸಿಗೂ ತಂಪು ತಂಪು ಕೂಲ್ ಕೂಲ್!