Site icon Vistara News

Travel Tips: ಮಕ್ಕಳಲ್ಲಿ ಕಾಡಿನ ಬಗ್ಗೆ ಪ್ರೀತಿ ಬೆಳೆಸಲು ಈ ಬೇಸಿಗೆಯಲ್ಲಿ ಕಾಡಿಗೆ ಕರೆದೊಯ್ಯದಿದ್ದರೆ ಹೇಗೆ?!

jungle safari

ಹೆತ್ತವರಾಗಿ ಬೇಸಿಗೆಯಲ್ಲಿ ಮಕ್ಕಳನ್ನು ಯಾವುದಾದರೂ ವನ್ಯಜೀವಿಗಳಿರುವ ರಾಷ್ಟ್ರೀಯ ಉದ್ಯಾನಕ್ಕೋ, ವನ್ಯಜೀವಿಧಾಮಕ್ಕೋ ಹೋಗಬೇಕೆಂದುಕೊಂಡರೂ ಬಹಳ ಸಾರಿ ಈ ಋತು ವನ್ಯಜೀವಿ ವೀಕ್ಷಣೆಗೆ ಸಕಾಲವೋ ಅಲ್ಲವೋ ಎಂಬ ಗೊಂದಲಗಳಾಗುವುದುಂಟು. ಬೇಸಿಗೆ ರಜೆಯನ್ನು ಮಕ್ಕಳ ಕಲಿಕೆಗೆ ಪೂರಕವಾಗುವಂತೆ, ಪ್ರಕೃತಿ, ಅರಣ್ಯ, ಕಾಡು ಪ್ರಾಣಿಗಳ ಬಗ್ಗೆ ಪ್ರೀತಿಯನ್ನು ಮಕ್ಕಳಿಗೆ ಬೆಳೆಸಲು ರಜೆಯಲ್ಲಿ ಅವರೊಂದಿಗೆ ಇಂತಹ ತಾಣಗಳಿಗೆ ಹೆತ್ತವರು ಕರೆದುಕೊಂಡು ಹೋಗುವುದು (jungle safari) ಅತ್ಯಂತ ಮುಖ್ಯ. ಹಾಗಾದರೆ ಬನ್ನಿ, ಯಾವೆಲ್ಲ ರಾಷ್ಟ್ರೀಯ ಉದ್ಯಾನಗಳಿಗೆ ಈಗ ಭೇಟಿ ನೀಡಬಹುದು (travel tips) ಎಂಬುದನ್ನು ನೋಡೋಣ.

1. ರಣಥಂಬೋರ್‌ ರಾಷ್ಟ್ರೀಯ ಉದ್ಯಾನ: ರಾಜಸ್ಥಾನದಲ್ಲಿರುವ ರಣಥಂಬೋರ್‌ ರಾಷ್ಟ್ರೀಯ ಉದ್ಯಾನ ಅತ್ಯಂತ ಪ್ರಸಿದ್ಧವಾದದ್ದು ಅಷ್ಟೇ ಅಲ್ಲ ಅಷ್ಟೇ ಪ್ರಾಮುಖ್ಯತೆಯನ್ನೂ ಪಡೆದಿರುವಂಥದ್ದಾಗಿದೆ. ಈ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಲು ಅಕ್ಟೋಬರ್‌ ತಿಂಗಳಿಂದ ಮಾರ್ಚ್‌ವರೆಗೆ ಸಕಾಲವಾದರೂ, ಎಪ್ರಿಲ್‌ ಗೂ ಮೇ ತಿಂಗಳಲ್ಲೂ ಭೇಟಿ ನೀಡಬಹುದಂತೆ. ವಿಪರೀತ ಸುಡು ಸುಡು ಬೇಸಿಗೆಯಿದ್ದರೂ, ವನ್ಯಜೀವಿಧಾಮ ಕಾಡುಪ್ರಿಯರಿಗಾಗಿ ತೆರೆದೇ ಇರುತ್ತದೆ. ಹುಲಿ ಸೇರಿದಂತೆ ವನ್ಯಮೃಗಗಳ ವೀಕ್ಷಣೆಯ ಸಾಧ್ಯತೆ ಅತ್ಯಂತ ಹೆಚ್ಚಿರುವ ಈ ತಾಣ ವನ್ಯಜೀವಿ ಛಾಯಾಗ್ರಾಹಕರ ಅಚ್ಚುಮೆಚ್ಚಿನ ತಾಣ.

2. ಕನ್ಹಾ ರಾಷ್ಟ್ರೀಯ ಉದ್ಯಾನ: ರುಡ್ಯಾರ್ಡ್‌ ಕಿಪ್ಲಿಂಗ್‌ ಅವರ ಖ್ಯಾತ ಕೃತಿ ʻದಿ ಜಂಗಲ್‌ ಬುಕ್‌ʼನ ಕತೆ ಅಖಾಡ ಇದೇ ಕನ್ಹಾ ರಾಷ್ಟ್ರೀಯ ಉದ್ಯಾನವಂತೆ. ಹಾಗಾಗಿ ಕನ್ಹಾದಲ್ಲಿ ತಿರುಗಾಡುವಾಗ ಮೌಗ್ಲಿಯನ್ನೂ ಶೇರ್‌ ಖಾನ್‌ನನ್ನು ನೆನಪಾದರೆ ಆಶ್ಚರ್ಯವಿಲ್ಲ. ಇದರ ಹೊರತಾಗಿಯೂ ಇದು ಇಂದಿಗೂ ಹುಲಿಗಳನ್ನು ಕಾಣುವ ಸಾಧ್ಯತೆ ಹೆಚ್ಚಿರುವ ಉದ್ಯಾನ. ವನ್ಯಜೀವಿ ಛಾಯಾಗ್ರಾಹಕರ ಪಾಲಿಗೆ ಪ್ರಿಯವಾದ ಜಾಗ. ಇಲ್ಲಿಯೂ ಹುಲಿಯ ಹೊರತಾಗಿ ನಾನಾ ಕಾಡುಮೃಗಗಳನ್ನು ಕಾಣುವ ಸಾಧ್ಯತೆ ಇದೆ.

3. ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನ: ಭಾರತದ ಅತ್ಯಂತ ಹಳೆಯ ರಾಷ್ಟ್ರೀಯ ಉದ್ಯಾನ ಈ ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನವಾಗಿದೆ. ೧೯೩೬ರಲ್ಲಿ ಹೈಲಿ ರಾಷ್ಟ್ರೀಯ ಉದ್ಯಾನ ಎಂಬ ಹೆಸರಿನಲ್ಲಿ ಹುಟ್ಟಿಕೊಂಡ ಈ ರಾಷ್ಟ್ರೀಯ ಉದ್ಯಾನವನನು ೧೯೫೦ರಲ್ಲಿ ದಂತಕತೆಯಾದ ಬೇಟೆಗಾರನೊಬ್ಬ ಸಂರಕ್ಷಕನಾಗಿ ಬದಲಾದ ಜಿಮ್‌ ಕಾರ್ಬೆಟ್‌ ಹೆಸರಿಗೆ ಬದಲಾಯಿಸಲಾಯಿತು. ಹಿಮಾಲಯದ ತಪ್ಪಲಲ್ಲಿರುವ, ಉತ್ತರಾಖಂಡದಲ್ಲಿರುವ ಈ ರಾಷ್ಟ್ರೀಯ ಉದ್ಯಾನ ೫೦೦ ಚದರ ಕಿಲೋಮೀಟರ್‌ ವ್ಯಾಪ್ತಿಯುಳ್ಳದ್ದು. ವನ್ಯಜೀವಿ ಛಾಯಾಗ್ರಾಹಕರ ಮತ್ತೊಂದು ಫೇವರಿಟ್!‌

4. ಪೆರಿಯಾರ್‌ ರಾಷ್ಟ್ರೀಯ ಉದ್ಯಾನ: ಹುಲಿ ಸಫಾರಿ ಹೊರತು ಪಡಿಸಿದರೆ, ಕೇರಳದ ಪೆರಿಯಾರ್‌ ರಾಷ್ಟ್ರೀಯ ಉದ್ಯಾನದಲ್ಲಿ ಕ್ಯಾಂಪಿಂಗ್‌, ಚಾರಣ ಇತ್ಯಾದಿಗಳನ್ನೂ ಎಂಜಾಯ್‌ ಮಾಡಬಹುದು. ಮಕ್ಕಳಲ್ಲಿ ಕಾಡಿನ ಪ್ರೀತಿ ಜಿನುಗಿಸಲು ಇದು ಅತ್ಯಂತ ಸೂಕ್ತ ಜಾಗ. ಇದೂ ಕೂಡಾ ಭಾರತದ ಅತ್ಯಂತ ಹಳೆಯ ಹುಲಿ ರಕ್ಷಿತಾರಣ್ಯ.

5. ದಿ ಗ್ರೇಟ್‌ ಹಿಮಾಲಯನ್‌ ನ್ಯಾಷನಲ್‌ ಪಾರ್ಕ್:‌ ೨೦೧೪ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ಈ ಉದ್ಯಾನದಲ್ಲಿ ಹಿಮಾಲಯ ವ್ಯಾಪ್ತಿ ಪ್ರದೇಶಕ್ಕೆ ಬರುವಂತದ್ದು. ಹಾಗಾಗಿ, ಅದೃಷ್ಟವಿದ್ದರೆ, ಅಪರೂಪದ ಪ್ರಾಣಿಗಳನ್ನೂ ಇಲ್ಲಿ ವೀಕ್ಷಿಸಬಹುದು. ಇದಷ್ಟೇ ಅಲ್ಲ, ಇದು ಚಾರಣ, ಕ್ಯಾಂಪಿಂಗ್‌ ಇತ್ಯಾದಿಗಳಿಗೂ ಸೂಕ್ತ ತಾಣ.

6. ಕುದುರೆಮುಖ ರಾಷ್ಟ್ರೀಯ ಉದ್ಯಾನ: ನಮ್ಮ ಕರ್ನಾಟಕದಲ್ಲಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನ್ನೇ ನಾವು ಮರೆತರೆ ಹೇಗೆ? ಅತ್ಯಂತ ಸುಂದರ ದಟ್ಟ ಕಾಡುಗಳನ್ನು ಹೊಂದಿರುವ ಈ ತಾಣ ನಮ್ಮ ಮಕ್ಕಳಲ್ಲಿ ಎಳವೆಯಲ್ಲಿಯೇ ಕಾಡಿನ ಪ್ರೀತಿ ಬೆಳೆಸಲು ಅತ್ಯಂತ ಸೂಕ್ತ. ಇಲ್ಲಿ ಪ್ರಾಣಿ ವೀಕ್ಷಣೆಯಲ್ಲದೆ, ಕ್ಯಾಂಪಿಂಗ್‌, ಚಾರಣ ಇತ್ಯಾದಿ ಚಟುವಟಿಕೆಗಳಿಗೂ ಅವಕಾಶವಿದೆ. 

ಇದನ್ನೂ ಓದಿ: Jungle safari tips | ಕಾಡಿನ ಸಫಾರಿಗೆ ಹೊರಡುವ ಮುನ್ನ ಇವಿಷ್ಟು ಗೊತ್ತಿರಲಿ!

Exit mobile version