ಪ್ರವಾಸ ಎಂದರೆ ಹಲವರ ಪಾಲಿಗೆ ವಿದೇಶವೇ! ನಮ್ಮ ದೇಶದಲ್ಲಿ ನೋಡಬಹುದಾದ ಜಾಗಗಳು ಎಷ್ಟೇ ಇದ್ದರೂ, ಪ್ರವಾಸವೆಂಬ ಹೆಸರಿನಲ್ಲಿ ಬೇರೆ ದೇಶದ ಬೀಚುಗಳನ್ನೋ, ವನ್ಯಜೀವಿ ತಾಣಗಳನ್ನೋ, ಅಥವಾ ಅಲ್ಲಿನ ನೈಟ್ ಲೈಫ್‌ಗಳನ್ನು ಅನುಭವಿಸಿಕೊಂಡು ಬರುವುದಷ್ಟೇ ಮುಖ್ಯ ಉದ್ದೇಶವಾಗಿಬಿಡುತ್ತದೆ. ಆದರೆ ನಿಮಗೆ ಗೊತ್ತೇ? ಭಾರತದಲ್ಲೂ ಕೆಲವೊಂದು ಅದ್ಭುತ ಸ್ಥಳಗಳಿವೆ. ಈ ಸ್ಥಳಗಳು ವಿದೇಶವೇಕೆ, ಬೇರೆಯೇ ಗ್ರಹದಲ್ಲಿದ್ದಂತೆ ಕಾಣುತ್ತದೆ ಎಂದು ವಿವರಿಸಿದರೂ ಅತಿಶಯೋಕ್ತಿಯಲ್ಲ. ಹಾಗಾದರೆ ಬನ್ನಿ, ನಮ್ಮದೇ ದೇಶದ ಬೇರೆಯೇ ಜಗತ್ತಿನ ಅನುಭವ ನೀಡುವ ಕೆಲವು ಸ್ಥಳಗಳನ್ನೊಮ್ಮೆ ಸುತ್ತು ಹಾಕಿಕೊಂಡು (Travel Tips) ಬರೋಣ. ನೀವು ನಿಜವಾಗಿಯೂ ಪ್ರವಾಸ ಪ್ರಿಯರಾಗಿದ್ದರೆ ಖಂಡಿತವಾಗಿಯೂ ಈ ಜಾಗಗಳಿಗೆ (travel places) ಜೀವನದಲ್ಲೊಮ್ಮೆಯಾದರೂ ಹೋಗದೆ ಇರಲಾರಿರಿ!
1. ಪುಗಾ ಕಣಿವೆ, ಲಡಾಖ್: ಲಡಾಖ್ (ladakh) ಎಂಬ ಹೆಸರು ಕೇಳಿದೊಡನೆಯೇ ರೋಮಾಂಚನಗೊಳ್ಳುವ ಮಂದಿ ಖಂಡಿತ ನೋಡಬೇಕಾದ ಜಾಗ ಇದು. ಲಡಾಖ್‌ನ ಸಾಲ್ಟ್ ಲೇಕ್ ವ್ಯಾಲಿಯ ಪಕ್ಕದಲ್ಲೇ ಇರುವ ಪುಗಾ ವ್ಯಾಲಿ ಕೂಡಾ ಒಂದು ನೋಡಲೇಬೇಕಾದ ಅದ್ಭುತ ಕಣಿವೆ. ನೀವೇನಾದರೂ ಪ್ರಾಣಿ ಪಕ್ಷಿ ಪ್ರಿಯರಾಗಿದ್ದರಂತೂ, ಅವುಗಳ ವೀಕ್ಷಣೆಗೆ ಇದು ಹೇಳಿ ಮಾಡಿಸಿದಂತಹ ಜಾಗ. ಬಿಸಿನೀರಿನ ಬುಗ್ಗೆಗಳಿರುವ ಈ ಜಾಗ ಬೇರೆಯೇ ತೆರನಾಗಿ ನಿಮ್ಮ ಕಣ್ಣಿಗೆ ಕಂಡರೆ ಆಶ್ಚರ್ಯವಿಲ್ಲ.
2. ಧನುಷ್ಕೋಡಿ, ತಮಿಳುನಾಡು: ಪಾಂಬನ್ ದ್ವೀಪದಲ್ಲಿರುವ ಧನುಷ್ಕೋಡಿ (Dhanushkodi) ಎಂಬ ಹೆಸರನ್ನು ಪುರಾಣದಲ್ಲಿ ಆಸಕ್ತಿಯಿರುವ ಮಂದಿಯಂತೂ ಕೇಳೇ ಇರುತ್ತೀರಿ. ರಾಮಾಯಣದಲ್ಲಿ ರಾಮ ಇಲ್ಲಿಂದಲೇ ಲಂಕೆಗೆ ಸೇತುವೆ ಕಟ್ಟಿದ ಎಂಬ ನಂಬಿಕೆಯಿದೆ. ಈಗ ಧನುಷ್ಕೋಡಿ ಪಾಳು ಬಿದ್ದ ಊರಾಗಿದ್ದು, ರಾಮೇಶ್ವರದಿಂದ ಇಲ್ಲಿಗೆ ವೀಕ್ಷಣೆಗೆ ತೆರಳಬಹುದಾಗಿದೆ. ಮುರಿದು ಬಿದ್ದ ದೇವಾಲಯಗಳು, ಚರ್ಚ್‌ಗಳು, ಮನೆ, ಶಾಲೆಗಳು, ರೈಲ್ವೇ ಹಳಿಗಳು ೧೯೬೪ರಲ್ಲಿ ನಡೆದ ಚಂಡಮಾರುತದ ದುರಂತ ಕಥೆಯನ್ನು ಹೇಳುತ್ತದೆ. ಚಂದನೆಯ ಸಮುದ್ರ, ಮರುಳುಗಾಡು, ರಾಮಸೇತುವೆಯ ಜಾಗವನ್ನೆಲ್ಲ ನೋಡಿಕೊಂಡು, ಬರಬಹುದಾದ ಅದ್ಭುತ ಜಾಗವಿದು.
3. ಶೇಷನಾಗ್, ಕಾಶ್ಮೀರ: ಕಾಶ್ಮೀರದ (kashmir) ಅತ್ಯಂತ ಸುಂದರ ಸರೋವರಗಳಲ್ಲೊಂದು ಶೇಷನಾಗ್ (Sheshanag). ಅನಂತನಾಗ್ ಜಿಲ್ಲೆಯಲ್ಲಿರುವ ಇದು ಕಾಶ್ಮೀರದ ಪ್ರಸಿದ್ಧ ಅಮರನಾಥ ಯಾತ್ರೆಯ (Amaranath yatra) ಹಾದಿಯಲ್ಲಿ ಸಿಗುತ್ತದೆ. ಪೆಹಲ್‌ಗಾಂವ್‌ನಿಂದ ೨೩ ಕಿಮೀ ದೂರದಲ್ಲಿರುವ ಇದಕ್ಕೆ ಚಾರಣದ ಮೂಲಕ ಭೇಟಿ ಕೊಡಬಹುದು. ಸುಮಾರು ಏಳು ಕಿಮೀ ದೂರ ಕ್ರಮಿಸಿ ಸಾಗಿದರೆ ಶೇಷನಾಗದ ಅದ್ಭುತ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.
ಇದನ್ನೂ ಓದಿ: Monsoon Travel Tips: ʻಮಳೆಗಾಲದಲ್ಲಿ ಪ್ರವಾಸʼ ಎಂಬ ದಿವ್ಯಾನುಭೂತಿ: ಹೊರಡುವಾಗ ಇವಿಷ್ಟು ನೆನಪಿರಲಿ!
4. ನುಬ್ರಾ ಕಣಿವೆ, ಲಡಾಖ್: ಲಡಾಖ್ ಬಗ್ಗೆ ಮೋಹವನ್ನಿಟ್ಟುಕೊಂಡ ಪ್ರತಿಯೊಬ್ಬರೂ ನುಬ್ರಾ ಕಣಿವೆಯ (nubra valley) ಬಗ್ಗೆ ಕೇಳೇ ಕೇಳಿರುತ್ತೀರಿ. ಲಡಾಖಿನ ಅತ್ಯಂತ ಸುಂದರ ಜಾಗಗಳಲ್ಲೊಂದು ಈ ನುಬ್ರಾ ಕಣಿವೆ. ವಿಶ್ವದ ಎರಡನೇ ಅತ್ಯಂತ ಎತ್ತರದ ವಾಹನ ಸಂಪರ್ಕ ಸಾಧಿಸಬಹುದಾದ ಖರ್ದುಂಗ್ಲಾ ಪಾಸ್‌ಗೆ ಹೋಗಬೇಕಾದರೆ ನುಬ್ರಾ ದಾಟಿಕೊಂಡೇ ಹೋಗಬೇಕು. ೨೦೧೦ರವರೆಗೂ ಪ್ರವಾಸಿಗರು ನೋಡದೇ ಇದ್ದ ಟುರ್ಟುಕ್ ಎಂಬ ಹಳ್ಳಿಯನ್ನೂ ಈ ಮೂಲಕ ನೋಡಬಹುದು. ಅತ್ಯಂತ ಸುಂದರವಾದ, ವಿಶೇಷ ಸಂಸ್ಕೃತಿಯನ್ನು ಹೊಂದಿರುವ ಶೀತ ಮರುಭೂಮಿ ಈ ನುಬ್ರಾ ಕಣಿವೆ. ಜೀವನದಲ್ಲೊಮ್ಮೆ ನೋಡಬೇಕಾದ ಜಾಗವೂ ಹೌದು.
5. ಅಮ್ಕೊಯ್, ಮೇಘಾಲಯ: ಮೇಘಾಲಯದ ಜೈಂತ್ಯ ಪರ್ವತ ಪ್ರಾಂತ್ಯದಲ್ಲಿರುವ ಅಮ್ಕೋಯ್ ಎಂಬ ಜಾಗವೂ ಧರೆಯಲ್ಲಿರುವ ಸ್ವರ್ಗ ಎಂದರೆ ತಪ್ಪಾಗಲಾರದು. ಮಳೆನಾಡಾಗಿರುವ ಮೇಘಾಲಯದ ಶಿಲ್ಲಾಂಗ್‌ನಿಂದ ೪೭ ಕಿಮೀ ದೂರದಲ್ಲಿದೆ. ಈ ಜಾಗದಲ್ಲಿರುವ ಬಂಡೆಕಲ್ಲುಗಳ ವಿನ್ಯಾಸ, ಅತ್ಯಂತ ಪರಿಶುದ್ಧವಾಗಿರುವಂತೆ ಸ್ಪಟಿಕಶುದ್ಧವಾಗಿರುವ ಹಸಿರು ಹಸಿರಾದ ನದೀ ನೀರು ಎಲ್ಲವೂ ಈ ಜಾಗವನ್ನು ದಿವ್ಯವೆನ್ನುವ ಅನುಭೂತಿ ನೀಡುತ್ತದೆ.
ಇದನ್ನೂ ಓದಿ: Travel Tips: ಈ ಹೆದ್ದಾರಿಯ ಮೂಲಕ ಕೋಲ್ಕತಾದಿಂದ ಬ್ಯಾಂಕಾಕ್‌ಗೆ ರೋಡ್‌ಟ್ರಿಪ್ ಮಾಡಿ!