Site icon Vistara News

Travel Tips: ವಿಸಾ ಜಂಜಡವಿಲ್ಲದೆ ಈ ದೇಶಗಳಲ್ಲಿ ನೀವು ಸುತ್ತಾಡಿ ಬರಬಹುದು!

travel with kids

ಈ ಬೇಸಿಗೆಯಲ್ಲಿ ಎಲ್ಲಾದರೂ ಹೋಗಬೇಕು ಎಂದು ಯೋಚನೆ ಮಾಡುತ್ತಿದ್ದೀರಾ? ವಿದೇಶವಾಗಿರಬೇಕು, ಆದರೆ, ವಿಸಾ ಮತ್ತಿತರ ತಲೆಬಿಸಿಗಳಿಂದ ಹೊರತಾಗಿರಬೇಕು (visa less travel) ಎಂದರೆ, ಈ ಕೆಲವು ದೇಶಗಳು ಭಾರತೀಯರ ಪಾಲಿಗೆ ಸದಾ ತೆರೆದಿರುತ್ತವೆ. ಈ ದೇಶಗಳಿಗೆ ನೀವು ಹೆಚ್ಚಿನ ಯಾವ ಟೆನ್ಶನ್‌ ಇಲ್ಲದೆ, ಸುಲಭವಾಗಿ ಕಡಿಮೆ ಬಜೆಟ್‌ನಲ್ಲಿ ಈ ದೇಶಗಳಿಗೆ ನೀವು ಹೋಗಿ ಅಲ್ಲಿನ ಜನಜೀವನ, ಸಂಸ್ಕೃತಿ, ಆಹಾರ, ಪ್ರಕೃತಿ ಸೌಂದರ್ಯವನ್ನು ನೋಡಿ ಅನುಭವಿಸಿ ಬರಬಹುದು. ಅಂಥ ದೇಶಗಳ ವಿವರ (travel tips) ಇಲ್ಲಿದೆ.

1. ಭೂತಾನ್:‌ ಭಾರತದ ನೆರೆ ರಾಷ್ಟ್ರವಾದ ಭೂತಾನ್‌ ಅತ್ಯಂತ ಸುಂದರ ದೇಶಗಳಲ್ಲೊಂದು. ಇಲ್ಲಿಗೆ ಭಾರತೀಯರು ಭೇಟಿ ಕೊಡಲು ವಿಸಾದ ಅಗತ್ಯವಿಲ್ಲ. ಆದರೆ ಒಮ್ಮೆ ಕೊಡುವ ಭೇಟಿ ಗರಿಷ್ಟ ೧೪ ದಿನಗಳಿಗಿಂತ ಹೆಚ್ಚಾಗಿರಬಾರದು. ಅತ್ಯಂತ ಸಂತೋಷದಾಯಕ ದೇಶ ಎಂದೇ ಪ್ರಸಿದ್ಧವಾಗಿರುವ ಈ ದೇಶ ಶಾಂತಿಪ್ರಿಯವಾದುದು. ಅತ್ಯಂತ ಸುಂದರ ಬೌದ್ಧ ವಿಹಾರಗಳು, ನಿಸರ್ಗ ವಿಸ್ಮಯಗಳಿಂದ ಕೂಡಿರುವ ಈ ಪುಟ್ಟ ದೇಶ ಹಲವು ಅಚ್ಚರಿಗಳನ್ನು ತನ್ನಲ್ಲಿರಿಸಿಕೊಂಡಿದೆ.

2. ಫಿಜಿ: ಫಿಜಿಯಲ್ಲಿ ೧೨೦ ದಿನಗಳ ಕಾಲ ವಿಸಾ ಇಲ್ಲದೆ ಭಾರತೀಯರು ಸುತ್ತಾಡಬಹುದಂತೆ. ರಮಣೀಯ ದೃಶ್ಯಗಳು, ಹವಳದ ದಂಡೆಗಳು, ಸುಂದರ ಸಮುದ್ರ ತೀರಗಳು, ಪ್ರಾಕೃತಿಕ ಅದ್ಭುತಗಳು ಫಿಜಿಯನ್ನು ಆಕರ್ಷಣೀಯವಾಗಿಸಿದೆ ಎಂದರೆ ಅನುಮಾನವೇ ಇಲ್ಲ.

3. ಜಮೈಕಾ: ಭಾರತೀಯ ಪಾಸ್‌ಪೋರ್ಟ್‌ದಾರರಿಗೆ ವಿಸಾ ಫ್ರೀ ಪ್ರವೇಶ ನೀಡುವ ಮತ್ತೊಂದು ಸುಂದರ ದೇಶ ಎಂದರೆ ಜಮೈಕಾ. ಇಲ್ಲಿನ ಪರ್ವತಗಳು, ಮಳೆಕಾಡುಗಳು, ಸಮುದ್ರ ತೀರಗಳು ಈ ದೇಶವನ್ನು ಎಷ್ಟು ಸುಂದರವಾಗಿಸಿದೆ ಎಂದರೆ ಮತ್ತೆ ಮತ್ತೆ ಜಮೈಕಾ ಕಡೆ ತಿರುಗಿ ನೋಡುವಂತೆ ಮಾಡುತ್ತದೆ. ಈ ಹಸಿರು ದೇಶದಲ್ಲಿ ಐಷಾರಾಮಿ ಹೊಟೇಲುಗಳೂ, ರೆಸಾರ್ಟುಗಳೂ ಕೂಡಾ ನಿಮ್ಮ ಪ್ರವಾಸವನ್ನು ಅದ್ಭುತವಾಗಿಸುವ ಎಲ್ಲ ಆಕರ್ಷಣೀಯ ಗುಣಗಳನ್ನು ಹೊಂದಿದೆ.

4. ಕಜಕಿಸ್ತಾನ್:‌ ಕಜಕಿಸ್ತಾನ್‌ ಎಂಬ ದೇಶ ಅಷ್ಟಾಗಿ ಪ್ರವಾಸಿಗರ ಪಟ್ಟಿಯಲ್ಲಿ ಕಾಣ ಸಿಗದಿದ್ದರೂ, ಪ್ರವಾಸಕ್ಕೆ ನಿಜಕ್ಕೂ ಯೋಗ್ಯವಾದ ದೇಶ. ಇದೂ ಕೂಡಾ ಭಾರತೀಯರಿಗೆ ೧೪ ದಿನಗಳ ಕಾಲ ವಿಸಾಮುಕ್ತ ಸೇವೆಯನ್ನು ಒದಗಿಸುತ್ತದೆ. ಇಲ್ಲಿನ ಪ್ರಾಕೃತಿಕ ಸೌಂದರ್ಯದ ಜೊತೆಗೆ ಇಲ್ಲಿರುವ ವಾಸ್ತುಶಿಲ್ಪವೂ ಕೂಡಾ ಅತ್ಯಂತ ಆಕರ್ಷಣೀಯ.

5. ಮಾರಿಷಿಯಸ್:‌ ಮಾರಿಷಿಯಸ್‌ಗೆ ಪ್ರವಾಸ ಮಾಡಿದರೆ ವಿಸಾಮುಕ್ತವಾಗಿ ನೀವು ೯೦ ದಿನಗಳ ಕಾಲ ತಿರುಗಾಡಬಹುದು. ಪ್ರವಾಸಿಗರ ಪಾಲಿಗೆ ಸ್ನೇಹಪರವಾದ ಈ ದೇಶ ಅತ್ಯದ್ಭುತ ಪ್ರವಾಸದ ಅನುಭವ ನೀಡಬಲ್ಲುದು. ಚಂದನೆಯ ಸಮುದ್ರ ತೀರಗಳು ಸದಾ ಕಾಲ ನೆನಪಿನಲ್ಲಿ ಉಳಿಯಬಲ್ಲುದು.

ಇದನ್ನೂ ಓದಿ: Travel Tips: ನೀವು ತಿಂಡಿಪೋತರಾದರೆ ಈ ಜಾಗಗಳಿಗೆ ಪ್ರವಾಸ ಮಾಡಲೇಬೇಕು!

6. ನೇಪಾಳ: ನಮ್ಮದೇ ದೇಶಕ್ಕೆ ಅಂಟಿಕೊಂಡಿರುವ ನೇಪಾಳವೂ ಕೂಡಾ ಭಾರತೀಯರಿಗೆ ಸ್ನೇಹಪರವಾದ ದೇಶ. ವಿಸಾಮುಕ್ತ ಪ್ರವಾಸ ಭಾರತೀಯರಿಗೆ ಇಲ್ಲಿ ಲಭ್ಯ. ಹಿಮಾಲಯದ ಅದ್ಭುತ ದೃಶ್ಯಗಳನ್ನು ನೋಡಲು ನೇಪಾಳಕ್ಕೆ ಹೋಗಲೇ ಬೇಕು. ಅಷ್ಟೇ ಅಲ್ಲ, ಇಲ್ಲಿನ ಹಿಂದೂ ದೇವಾಲಯಗಳು, ಬೌದ್ಧ ಮಂದಿರಗಳೂ ಕೂಡಾ ಮನಸ್ಸಿಗೆ ಶಾಂತಿ ನೀಡುವ ಪ್ರವಾಸದ ಅನುಭವವನ್ನು ನೀಡುತ್ತವೆ.

7. ಬಾರ್ಬಡೋಸ್‌: ಮುದ್ದಾದ ಕೆರಿಬಿಯನ್‌ ದೇಶಗಳ ಪೈಕಿ ಬಾರ್ಬಡೋಸ್‌ ಕೂಡಾ ಒಂದು. ಇಲ್ಲಿನ ಐಷಾರಾಮಿ ಹೋಟೇಲುಗಳು, ಬಿಳಿಯ ಮರಳದಂಡೆಗಳು, ಇಲ್ಲಿನ ಅತಿಥಿ ಸತ್ಕಾರ ಎಲ್ಲವೂ ಕೂಡಾ ಬಹುಕಾಲ ನೆನಪಿನಲ್ಲಿಡಬಹುದಾದಂಥದ್ದು. ಭಾರತೀಯರಿಗೆ ವಿಸಾಮುಕ್ತ ಪ್ರವಾಸದ ಅನುಭವ ನೀಡುವ ಈ ದೇಶದಲ್ಲಿ ವಿಸಾ ಇಲ್ಲದೆ ೯೦ ದಿನ ತಂಗಬಹುದಂತೆ. 

ಇದನ್ನೂ ಓದಿ: Travel Tips: ನಿಮಗೆ ಹೀಗೆಲ್ಲ ಆಗುತ್ತಿದೆಯೇ? ಹಾಗಾದರೆ ನಿಮಗೆ ಪ್ರವಾಸದ ಅಗತ್ಯವಿದೆ!

Exit mobile version