Site icon Vistara News

Travel Tips: ನಿಮಗೆ ಹೀಗೆಲ್ಲ ಆಗುತ್ತಿದೆಯೇ? ಹಾಗಾದರೆ ನಿಮಗೆ ಪ್ರವಾಸದ ಅಗತ್ಯವಿದೆ!

solo travel

ಆಗಾಗ ಸಿಟ್ಟು ಬರುತ್ತಿದೆಯೇ? ಇತ್ತೀಚೆಗೆ ಸಿಕ್ಕಾಪಟ್ಟೆ ಜಂಕ್‌ ತಿನ್ನುತ್ತಾ ಇದ್ದೀರಾ? ಅಥವಾ ಯಾವುದೂ ಬೇಡ, ಆಸಕ್ತಿಯೇ ಇಲ್ಲ ಎಂಬ ಮನಸ್ಥಿತಿ ತಲುಪಿದ್ದೀರಾ? ಹಾಗಾದರೆ ನಿಮಗೆ ತುರ್ತಾಗಿ ಒಂದು ಪ್ರವಾಸ ಅಗತ್ಯವಿದೆ ಎಂದೇ ಅರ್ಥ.

1. ನಿಮಗೆ ಆಗಾಗ ಸಿಟ್ಟು ಬರುತ್ತದೆ, ಒತ್ತಡ ಹೆಚ್ಚಾಗಿ, ಸುತ್ತಮುತ್ತಲಿನವರು, ಆತ್ಮೀಯರ ಮಾತೂ ಕಿರಿಕಿರಿಯೆನಿಸುತ್ತಿದೆ, ಮನೆಯವರೊಂದಿಗೂ ವೃಥಾ ವಿಷಯವೇ ಇಲ್ಲದೆ ಜಗಳವಾಗಿಬಿಡುತ್ತದೆ ಎಂಬಿತ್ಯಾದಿ ತೊಂದರೆಗಳು ನಿಮ್ಮನ್ನು ಕಾಡುತ್ತಿದ್ದರೆ, ಕೆಲಸದ ಒತ್ತಡ ಅಧಿಕವಾಗಿದ್ದರೂ, ಈ ಎಲ್ಲ ಸಮಸ್ಯೆಯಿಂದ ಮುಕ್ತಿ ಸುಲಭವಾಗಿ ಬೇಕು ಎಂದಾದಲ್ಲಿ ಕೆಲವು ದಿನಗಳ ಪ್ರವಾಸ ಹೋಗಿ. ಪ್ರೀತಿಪಾತ್ರರ ಜೊತೆಗಾದರೂ ಸರಿ, ಒಬ್ಬರೇ ಆದರೂ ಸರಿ, ಮನಸ್ಸು ಪ್ರಫುಲ್ಲವಾಗಿ, ಕೆಲಸ ಮಾಡಲು ಚೈತನ್ಯ ದೊರೆತು, ಸುತ್ತಮುತ್ತಲಿನವರ ಜೊತೆಗೆ ಶಾಂತವಾಗಿ ಮಾತನಾಡಲು ಸಾಧ್ಯವಾಗಿ ಬದುಕು ಸರಾಗವಾಗುತ್ತದೆ. ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ.

2. ಅತಿಯಾದ ಒತ್ತಡ ಸುಸ್ತಾಗಿಸುತ್ತದೆ. ಈ ಸುಸ್ತು ಕೆಟ್ಟ ಆಯ್ಕೆಗಳನ್ನು ಮಾಡಲು ಪ್ರೇರೇಪಿಸುತ್ತದೆ. ಮುಖ್ಯವಾಗಿ ಆಹಾರದ ವಿಷಯದಲ್ಲಿ. ಉದಾಹರಣೆಗೆ, ಅತಿಯಾದ ಒತ್ತಡದಲ್ಲಿದ್ದಾಗ, ಅಗತ್ಯವಿದ್ದೂ ಇಲ್ಲದೆಯೂ ಸುಮ್ಮನೆ ತಿನ್ನಬೇಕೆನಿಸುತ್ತೆ. ನಿಮ್ಮ ನಿತ್ಯದ ಆಹಾರ ಕ್ರಮದ ಹೊರತಾಗಿ ಬೇರೆಯದನ್ನು ತಿನ್ನಲು ಮನಸ್ಸು ಬಯಸುತ್ತದೆ. ಇಂಥ ಸಮಯದಲ್ಲಿ ಜಂಕ್‌ ಸಹವಾಸ ಮಾಡುವುದೇ ಹೆಚ್ಚು.

3. ಫೋಕಸ್‌ ಕಡಿಮೆಯಾಗುತ್ತದೆ. ಒತ್ತಡದ ಪರಿಸ್ಥಿತಿಯಲ್ಲಿ ಮನಸ್ಸು ಬುದ್ಧಿ ಹಾಗೂ ದೇಹ ಒಂದಕ್ಕೊಂದು ಸಾಥ್‌ ಕೊಡುವುದಿಲ್ಲ. ಬದಲಾಗಿ ಈ ಒತ್ತಡ, ಹೆಚ್ಚು ತಪ್ಪುಗಳನ್ನು ಮಾಡಿಸುತ್ತದೆ. ಕೆಲಸದ ವಿಚಾರದಲ್ಲಿರಬಹುದು, ಸಂಬಂಧಗಳ ವಿಚಾರದಲ್ಲಿರಬಹುದು. ತಪ್ಪುಗಳಿಂದ ದೂರವಿರಲು ಒತ್ತಡ ನಿವಾರಣೆ ಮುಖ್ಯ. ಅದಕ್ಕಾಗಿ ಬ್ರೇಕ್‌ ಬೇಕು!

4. ಸುಸ್ತಾದರೂ ನಿದ್ದೆ ಬರುವುದಿಲ್ಲ. ಒತ್ತಡ ನಿದ್ದೆ ಮಾಡಲು ಬಿಡುವುದಿಲ್ಲ. ವೃಥಾ ಚಿಂತೆ, ಮನಸ್ಸಿನ ಅಶಾಂತಿ ಎಲ್ಲವೂ ಹೈರಾಣು ಮಾಡುತ್ತದೆ. ನಿದ್ದೆ ಮಾಡಿದರೂ ಎದ್ದರೆ ತಾಜಾತನ ಸಿಗುವುದಿಲ್ಲ.

5. ಖಾಸಗಿ ಜೀವನವೆಂಬುದೇ ಇಲ್ಲ ಅನಿಸತೊಡಗುತ್ತದೆ. ಒತ್ತಡ ನಿಮ್ಮನ್ನು ಎಲ್ಲಿಗೆ ತಳ್ಳಿರುತ್ತದೆ ಎಂದರೆ, ಖಾಸಗಿ ಸಮಯ ಸಿಗಲೇ ಇಲ್ಲ ಎಂಬ ಹಪಹಪಿ, ಬೇಸರ ಮನೆಮಾಡುತ್ತದೆ. ಕೆಲಸ ಹಾಗೂ ಖಾಸಗಿ ಜೀವನದಲ್ಲಿ ಒಂದಕ್ಕೊಂದು ಸಮತೋಲನ ಇಲ್ಲ ಅನಿಸತೊಡಗುತ್ತದೆ.

6. ಕೊನೆಯ ಬಾರಿ ಪ್ರವಾಸ ಮಾಡಿದ ನೆನಪು ಅಸ್ಪಷ್ಟವಾಗಿ ಎಲ್ಲೋ ಇದ್ದಂತೆ ಭಾಸವಾಗುತ್ತದೆ. ಪ್ರವಾಸದ ಬಗ್ಗೆ ಮರೆತೇ ಹೋದಂತೆ ಅನಿಸತೊಡಗುತ್ತದೆ.

ಹೌದು. ಹೀಗೆಲ್ಲ ಅನಿಸಿದರೆ ನಿಮ್ಮ ಬ್ಯಾಟರಿ ವೀಕಾಗಿದೆ, ಅದನ್ನು ಚಾರ್ಜ್‌ ಮಾಡಬೇಕೆಂದಾದರೆ ಒಂದು ತಿರುಗಾಟ, ಹೊಸ ಜಾಗ, ಹೊಸ ಪರಿಸರದ ಅಗತ್ಯವಿದೆ ಎಂದೇ ಅರ್ಥ. ಎಲ್ಲ ದುಗುಡ ದುಮ್ಮಾನಗಳನ್ನು ಬಿಟ್ಟು, ಕೆಲಸದ ಒತ್ತಡವನ್ನು ಬಿಟ್ಟು ಕೆಲವು ದಿನಗಳ ಕಾಲ ನೀವು ಇಂಥದ್ದೊಂದು ಬದಲಾವಣೆ ಮಾಡಿಕೊಂಡಿರೆಂದಾದಲ್ಲಿ ಒಂದಿಷ್ಟು ತಿಂಗಳಿಗೆ ಬೇಕಾದಷ್ಟು ಉತ್ಸಾಹ, ಆತ್ಮ ಸಂತೋಷ, ಕೆಲಸ ಮಾಡಲು ಬೇಕಾದಷ್ಟು ಚೈತನ್ಯ ಎಲ್ಲವೂ ಸಿಗುತ್ತದೆ.

ಮನಃಶಾಸ್ತ್ರಜ್ಞರ ಪ್ರಕಾರ, ಮನುಷ್ಯ ಹುಟ್ಟಾ ಅಲೆಮಾರಿ. ಒಂದೇ ಜಾಗದಲ್ಲಿ ಕೂತಿರುವುದು ಅವನಿಗೆ ತಕ್ಕುದಲ್ಲ. ನನ್ನ ಬಳಿ ಇರುವುದಿಷ್ಟೇ ಸಮಯ, ರಜೆಯೂ ಇಲ್ಲದಂತೆ ಕೆಲಸ ಮಾಡಿಬಿಡುತ್ತೇನೆಂದು ಎಷ್ಟೇ ಯಾರೇ ಎಷ್ಟೇ ಅಂದುಕೊಂಡರೂ, ದೇಹದ ದಣಿವಿನಂತೆ ಮನಸ್ಸಿಗೂ ಬುದ್ಧಿಗೂ ದಣಿಯುತ್ತದೆ. ಅದಕ್ಕೆ ಆಗಾಗ ಬ್ರೇಕ್‌ ಕೊಟ್ಟರಷ್ಟೇ ಮತ್ತೆ ಚೈತನ್ಯದಿಂದ ಕೆಲಸ ಮಾಡಲು ಸಾಧ್ಯವಾಗುವುದು. ಹಾಗಾಗಿಯೇ, ಹೊಸತೊಂದು ಜಾಗ, ಪರಿಸರ ಬದಲಾವಣೆ ಆತನ ಮಾನಸಿಕ ಆರೋಗ್ಯದ ಮೇಲೆ ಉತ್ತಮ ಪರಿಣಾಮಗಳನ್ನೇ ಬೀರುತ್ತದೆ, ಅದಕ್ಕಾಗಿಯೇ ಪ್ರವಾಸ ಮಾಡಬೇಕು. ಅದು ಅತ್ಯಂತ ಅಗತ್ಯ ಕೂಡಾ ಎನ್ನುತ್ತಾರೆ.

ಇದನ್ನೂ ಓದಿ: Travel Tips: ನೀವು ತಿಂಡಿಪೋತರಾದರೆ ಈ ಜಾಗಗಳಿಗೆ ಪ್ರವಾಸ ಮಾಡಲೇಬೇಕು!

ಸಂಶೋಧನೆಗಳೂ ಕೂಡಾ, ಆಗಾಗ ಬ್ರೇಕ್‌ ತೆಗೆದುಕೊಂಡು ಪ್ರವಾಸ ಮಾಡುವವರು ಹೃದಯದ ಕಾಯಿಲೆ ಹಾಗೂ ಇತರ ಎಲ್ಲ ಆರೋಗ್ಯ ಸಮಸ್ಯೆಗಳಿಗೆ ಬಲಿ ಬೀಳುವುದು ಕಡಿಮೆ ಎಂದು ಸಾಬೀತುಪಡಿಸಿವೆ. ಕೆಲಸದ ಒತ್ತಡ, ದೇಹದ ಸುಸ್ತು, ಎಲ್ಲವುಗಳಿಂದ ದೈಹಿಕ ಪರಿಣಾಮಗಳಂತೆಯೇ ಮಾನಸಿಕ ಪರಿಣಾಮವೂ ಇದೆ. ಹೀಗೆ ಮನಸ್ಸಿನ ಸಂತೋಷಕ್ಕೂ ದೇಹಾರೋಗ್ಯಕ್ಕೂ ಒಂದಕ್ಕೊಂದು ಸಂಬಂಧವಿರುವುದರಿಂದಲೇ ಸಂತೋಷದಿಂದ, ಉಲ್ಲಾಸದಿಂದ ಇರುವ ಮಂದಿಗೆ ಆರೋಗ್ಯ ಸಮಸ್ಯೆಗಳು ಕಡಿಮೆ ಎಂದೂ ಸಾಬೀತಾಗಿವೆ.

ಈಗ ಬೇಸಿಗೆ. ಎಲ್ಲ ಕಡೆಯೂ ಪ್ರವಾಸದ ಅಗ್ಗದ ಪ್ಯಾಕೇಜ್‌ಗಳು ಲಭ್ಯವಿವೆ. ಸ್ವಲ್ಪ ಕ್ರೌಡ್‌ ಇರುತ್ತದೆ ಎಂಬುದು ನಿಜ. ಆದರೆ ಆಫರ್‌ಗಳು ಹೆಚ್ಚು ಸಿಗುತ್ತವೆ. ಮತ್ತಿನ್ಯಾಕೆ ತಡ. ಬ್ಯಾಗ್‌ ಪ್ಯಾಕ್‌ ಮಾಡೋದು, ಹೊರಡೋದು ಅಷ್ಟೇ ಉಳಿದಿರೋದು! ಪ್ರವಾಸ ಮಾಡಿ, ಆರೋಗ್ಯ ವೃದ್ಧಿಸಿಕೊಳ್ಳಿ.

ಇದನ್ನೂ ಓದಿ: Travel Tips: ಈ ಜನುಮವೇ ರುಚಿ ಸವಿಯಲು! ಕೇವಲ ತಿನ್ನಲಿಕ್ಕಾದರೂ ಈ ಜಾಗಗಳಿಗೆ ಪ್ರವಾಸ ಮಾಡಿ!

Exit mobile version