ಪ್ರತಿ ವರ್ಷವೂ ವಿಶ್ವದೆಲ್ಲೆಡೆ ಸಾವಿರಾರು ಮಂದಿ ಪ್ರಕೃತಿಯ ಮಧ್ಯೆ ಎಲ್ಲೋ ಕಾಣೆಯಾಗುತ್ತಾರೆ. ಅವರ ಹುಡುಕಾಟದ ನಿರಂತರ ಕಾರ್ಯಕ್ಕೂ ಹಲವು ಸಾರಿ ಫಲ ಸಿಗುವುದಿಲ್ಲ. ಏಕಾಂಗಿ ಪ್ರವಾಸಕ್ಕೆಂದು ಹೋದವರು, ಏಕಾಂಗಿಯಾಗಿ ಪರ್ವತವನ್ನೇರುವ ಸಾಹಸ ಮಾಡುವವರು, ಪ್ರಕೃತಿ ವಿಕೋಪದಲ್ಲೆಲ್ಲೋ ಸಿಲುಕಿ ಹಾಕಿಕೊಂಡು ಉತ್ತರವೇ ಸಿಗದಂತೆ ಕಾಣೆಯಾದವರು… ಹೀಗೆ ಕಾಣೆಯಾದವರು ಅನೇಕರು. ಭಾರತದಲ್ಲೂ ಹಿಮಾಲಯ ಪರ್ವತಗಳೆಡೆಯಲ್ಲೆಲ್ಲೋ ಕಾಣೆಯಾಗಿ ಬರದೇ ಹೋದವರೆಷ್ಟೋ ಮಂದಿ. ಮೊನ್ನೆ ಮೊನ್ನೆ ಹಿಮಾಚಲ, ಉತ್ತರಾಖಂಡಗಳಾದಿಯಾಗಿ ಸುರಿದ ಭಾರೀ ಮಳೆಗೂ, ಹಲವೆಡೆ ದಿನಗಟ್ಟಲೆ ಪ್ರವಾಸಿಗರು, ಚಾರಣಿಗರು ಸಿಕ್ಕಿ ಹಾಕಿಕೊಂಡರು. ಹಲವರು ಮರಳಿ ಸುರಕ್ಷಿತ ಸ್ಥಳಗಳಿಗೆ ಸೇರಿಕೊಂಡರು. ಇನ್ನೂ ಹಲವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಯಿತು. ಎಷ್ಟೋ ಮಂದಿಗೆ ತಪ್ಪಿದ ನೆಟ್‌ವರ್ಕ್‌ನಿಂದಾಗಿ, ತಮ್ಮ ತಮ್ಮ ಮನೆಗಳಿಗೆ ತಮ್ಮ ಸುರಕ್ಷಿತತೆಯ ಬಗ್ಗೆ ವಿಷಯ ಮುಟ್ಟಿಸಲು ಸಾಧ್ಯವಾಗದೆ, ಮನೆಯವರು ಚಿಂತಾಕ್ರಾಂತರಾದರು. ಹೀಗೆ ಪ್ರಕೃತಿಯ ಮಡಿಲಲ್ಲಿ ಇದ್ದಕ್ಕಿದ್ದಂತೆ ಏನು ಬೇಕಾದರೂ ಆಗಬಹುದು. ಪ್ರವಾಸ, ಚಾರಣ ಮಾಡುವಾಗ, ದಿಕ್ಕು ತಪ್ಪಿದಾಗ, ದಾರಿ ತಪ್ಪಿ ಹೋದಾಗ, ಪ್ರಕೃತಿ ವಿಕೋಪಗಳಲ್ಲಿ ಸಿಲುಕಿಕೊಂಡಾಗ ಏನು ಮಾಡಬಹುದು ಹಾಗೂ ಪರಿಸ್ಥಿತಿಯಿಂದ ಹೊರಬರಲು ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದನ್ನು ನೋಡೋಣ.
೧. ಚಾರಣ ಇತ್ಯಾದಿಗಳ ಸಂದರ್ಭ ಯಾವಾಗಲೂ ನಿಮ್ಮ ಬಳಿ ನಿಮ್ಮ ಅಗತ್ಯಕ್ಕಿಂತ ಹೆಚ್ಚೇ ನೀರು ಹಾಗೂ ಆಹಾರ ಇರಲಿ.
೨. ಈಗ ಆಫ್‌ಲೈನ್ ಮ್ಯಾಪ್‌ಗಳಿಗೇನೂ ಕೊರತೆಯಿಲ್ಲ. ಹೋಗುವ ಜಾಗದ ಆಫ್‌ಲೈನ್ ಮ್ಯಾಪ್ ಇಟ್ಟುಕೊಳ್ಳಿ. ಕಂಪಾಸ್ ಇದ್ದರೆ ಒಳ್ಳೆಯದು. ಚಾರಣವಾಗಿದ್ದರೆ, ನೀವು ಹೋಗುವ ಪರ್ವತಬ ಬಗೆಗೆ ಮಾಹಿತಿ ನಿಮಗಿರಲಿ. ಗೈಡ್‌ಗೆ ಗೊತ್ತಿದ್ದರೆ ಸಾಕು ಎಂಬ ಉಡಾಫೆ ಬೇಡ. ಆ ಬಗ್ಗೆ ಗೂಗಲ್ ರೀಸರ್ಚ್ ಮಾಡಿ ಓದಿ, ಗೈಡ್ ಬಳಿ ವಿಚಾರಗಳನ್ನು ಕೇಳಿ ಮೊದಲೇ ತಿಳಿದುಕೊಳ್ಳಿ.
೩. ಚಾರಣಕ್ಕೆ ಅಗತ್ಯವಿರುವ ಒಳ್ಳೆಯ ಶೂ ಹಾಗೂ ಕಂಫರ್ಟ್ ಎನಿಸುವ ಬಟ್ಟೆ ಅತ್ಯಗತ್ಯ. ಅಲ್ಲಿನ ಹವಾಮಾನಕ್ಕೆ ಅನುಗುಣವಾಗಿ ಬಟ್ಟೆ ನಿಮ್ಮಲ್ಲಿರಲಿ. ಟಾರ್ಚ್, ಬೆಂಕಿಪೊಟ್ಟಣ, ಹೆಡ್‌ಲೈಟ್ ಇತ್ಯಾದಿ ಅತ್ಯಗತ್ಯ ಸಾಮಾಗ್ರಿಗಳನ್ನು ಮಾತ್ರ ಮರೆಯಲೇಬೇಡಿ.
೪. ಲ್ಯಾಂಡ್ ಮಾರ್ಕ್ ಗಮನಿಸುತ್ತಿರಿ. ಹೋಗುವಾಗ ರಸ್ತೆಯ ಮೇಲೆಯೂ ಗಮನ ಇರಲಿ. ಮರಳಿ ಬರುವಾಗ ಹಾದಿ ತಪ್ಪುತ್ತದೆ ಎಂಬ ಭಯ ಇದ್ದರೆ, ಹೋಗುವಾಗ ಕವಲುಗಳಲ್ಲಿ ಮಾರ್ಕ್ ಮಾಡುತ್ತಾ ಸಾಗಿ. ಫೋಟೋಗಳನ್ನು ತೆಗೆದುಕೊಳ್ಳಿ.
೫. ಮುಖ್ಯವಾಗಿ, ಚಾರಣಗಳನ್ನು ಯಾವತ್ತೂ ಒಬ್ಬರೇ ಮಾಡಬೇಡಿ. ಸೋಲೋ ಚಾರಣ ಹೆಸರು ಕೇಳಿದರೆ ಸಾಹಸೀ ಪ್ರವೃತ್ತಿಯ ಮಂದಿ ಆಕರ್ಷಿತರಾಗುವುದು ಸಹಜವೇ. ಆದರೆ ಎಷ್ಟೇ ಈಬಗ್ಗೆ ನೀವು ಮಾಹಿತಿ ಕಲೆ ಹಾಕಿ ತಯಾರಿ ಮಾಡಿ ಹೊರಟರೂ, ಪ್ರಕೃತಿಯ ಮುಂದೆ ನಾವು ಸಣ್ಣವರೇ. ಹಾಗಾಗಿ ಜೊತೆಗೆ ಮತ್ತೊಬ್ಬರಾದರೂ ಇರುವುದು, ಅಥವಾ ಸ್ಥಳೀಯ ಅನುಭವಿಗಳು ಜೊತೆಗಿರುವುದು ಒಳ್ಳೆಯದು.
೬. ಗುಂಪಿನಲ್ಲಿ ಚಾರಣ ಮಾಡುವಾಗ, ಹಿಂದೆಯೇ ಉಳಿದುಬಿಟ್ಟು ಹಾದಿ ತಪ್ಪಿದಾಗ ಆದಷ್ಟೂ ಮತ್ತೆ ಕನ್‌ಫ್ಯೂಸ್ ಮಾಡಿಕೊಂಡು ಗುಂಪನ್ನು ಹುಡುಕಿಕೊಂಡು ಮುಂದೆ ಮುಂದೆ ಹೋಗಬೇಡಿ. ಹಾದಿ ತಪ್ಪಿದೆ ಎಂದು ಗೊತ್ತಾದ ತಕ್ಷಣ ಒಂದೇ ಜಾಗದಲ್ಲಿ ನಿಲ್ಲಿ. ನಿಮ್ಮ ತಂಡವನ್ನು ಸಂಪರ್ಕಿಸುವ ಉಪಾಯಗಳನ್ನು ನಿಧಾನವಾಗಿ ಯೋಚಿಸಿ. ಮುಖ್ಯವಾಗಿ, ಹಾದಿ ತಪ್ಪಿದೆ ಎಂದು ತಿಳಿದಾಗ ಹೆಚ್ಚು ಶಾಂತರಾಗಿ, ಎಲ್ಲಿಂದ ತಪ್ಪಿರಬಹುದು ಎಂದು ಯೋಚಿಸಲು ಪ್ರಯತ್ನಿಸಿ. ಹಾದಿಯ ಚಿತ್ರಣವನ್ನು ನೆನಪು ಮಾಡಿಕೊಳ್ಳಲು ಪ್ರಯತ್ನಿಸಿ. ಗಡಿಬಿಡಿಯಲ್ಲಿ ಎಡವಟ್ಟುಗಳಾಗುವುದೇ ಹೆಚ್ಚು. ಮುಖ್ಯವಾಗಿ ನದೀ ಹರಿವು, ಬೆಟ್ಟಗಳು ಅಲ್ಲಿಂದ ಕಾಣುವ ಭಂಗಿ ಇತ್ಯಾದಿಗಳ ಲ್ಯಾಂಡ್‌ಮಾರ್ಕ್‌ಗಳ ಮೂಲಕ ಹಾದಿ ಕಂಡುಹಿಡಿಯಲು ಪ್ರಯತ್ನಿಸಿ.
ಇದನ್ನೂ ಓದಿ: Monsoon trekking: ರಕ್ತ ಹೀರುವ ಜಿಗಣೆಗಳಿಗೆ ಹೆದರುವ ಮುನ್ನ ಇವಿಷ್ಟು ನಿಮಗೆ ತಿಳಿದಿರಲಿ!
೭. ಚಾರಣದಲ್ಲಿ ಕಾಡಿನಲ್ಲಿ ಪಯಣಿಸುವಾಗ ಇದ್ದಕ್ಕಿದ್ದಂತೆ ಕಾಡ್ಗಿಚ್ಚಿನ ಮದ್ಯದಲ್ಲಿ ಸಿಕ್ಕಿ ಹಾಕಿಕೊಂಡರೆ, ಮೊದಲು ಶಾಂತವಾಗಿ ಪರಿಸ್ಥಿತಿಯಿಂದ ಹೊರಬರಲು ಹಾದಿ ಹುಡುಕಿ. ಬಂಡೆ ಅಥವಾ ಬೇರೆ ಮಾರ್ಗದಿಂದ ಕಿಚ್ಚಿನಿಂದ ತಪ್ಪಿಸಿಕೊಳ್ಳುವ ಹಾದಿಯೇನಾದರೂ ಇದೆಯಾ ಎಂದು ಹುಡುಕಿ. ನೆಟ್‌ವರ್ಕ್ ಇದ್ದರೆ, ಸಹಾಯಕ್ಕಾಗಿ ಹೊರಪ್ರಪಂಚವನ್ನು ಸಂಪರ್ಕಿಸಬಹುದು. ಆದರೆ, ಉಳಿದ ಸಂದರ್ಭಗಳಲ್ಲಿ ನಿಮ್ಮ ತಾಳ್ಮೆ ಹಾಗೂ ಶಾಂತ ಚಿತ್ತತೆ ಬಹಳ ಮುಖ್ಯ.
೮. ಪ್ರಕೃತಿ ವಿಕೋಪಗಳಾದ ಮೇಘ ಸ್ಪೋಟ, ಹಿಮಪಾತ ಇತ್ಯಾದಿಗಳಲ್ಲಿ ಸಿಲುಕಿಕೊಂಡಾಗಲೂ ಅಷ್ಟೇ, ಶಾಂತಚಿತ್ತತೆ ಬಹಳ ಮುಖ್ಯ. ತಂಡದ ಜೊತೆಗೆ ಇರಿ. ಗೈಡ್ ಹೇಳುವ ಮಾತಿಗೆ ಕಿವಿಗೊಡಿ. ಹೊಸ ಸಾಹಸಗಳನ್ನು ಒಬ್ಬರೇ ಮಾಡಲು ಹೊರಡಬೇಡಿ. ರಾತ್ರಿ ಇದ್ದಕ್ಕಿದ್ದಂತೆ ಉಳಿಯಬೇಕಾದ ಪರಿಸ್ಥಿತಿ ಬಂದರೆ ಸೂಕ್ತ ಜಾಗ ಹುಡುಕಿ. ಬೆಚ್ಚಗಿನ ಬಟ್ಟೆಗಳನ್ನು ಧರಿಸಿ. ನೀರಿನ ಆಶ್ರಯಗಳನ್ನು ಹುಡುಕಿ. ಮನುಷ್ಯ ಆಹಾರವಿಲ್ಲದೆ ಮೂರು ವಾರಗಳಷ್ಟು ಕಾಲ ಬದುಕಬಲ್ಲ, ಆದರೆ, ನೀರಿಲ್ಲದೆ, ಮೂರು ದಿನಕ್ಕಿಂತ ಹೆಚ್ಚು ಬದುಕಲಾರ ನೆನಪಿಡಿ.
ಇದನ್ನೂ ಓದಿ: Monsoon Trekking: ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮಾಡಲೇಬೇಕಾದ ಮಳೆಗಾಲದ ಚಾರಣಗಳಿವು!