ಮಳೆಗಾಲವೆಂದರೆ ಒಂಥರಾ ಖುಷಿ. ಆದರೆ, ಪ್ರವಾಸ ಪ್ರಿಯರು ಮಳೆಗಾಲದಲ್ಲಿ ತಿರುಗಾಟ ಕಷ್ಟ ಎಂದುಕೊಂಡು ತಮ್ಮ ಆಸೆಗಳಿಗೆ ಎಳ್ಳುನೀರು ಬಿಟ್ಟು ಸುಮ್ಮನೆ ಕೂರುವುದುಂಟು. ಸುಮ್ಮನೆ ಮಳೆಯಲ್ಲೊಂದು ಡ್ರೈವ್ ಹೋಗಿ ಬಂದು ಬಿಸಿಲಿಗಾಗಿ ಕಾಯುವ ಇಂಥ ಮಂದಿ ನಿರಾಸೆಪಡಬೇಕಾಗಿಲ್ಲ. ಮಳೆಗಾಲಕ್ಕೆಂದೇ ಹೇಳಿ ಮಾಡಿಸಿದ ಜಾಗಗಳಿವೆ, ಹೋಗಬಹುದು, ಚಾರಣ ಮಾಡಬಹುದು. ಅದರಲ್ಲೂ ಮಳೆಗಾಲದಲ್ಲಿ ಹಿಮಾಲಯದ ಚಾರಣಗಳ ರುಚಿಯನ್ನೊಮ್ಮೆ ನೋಡಿ ಬಂದರೆ, ಮತ್ತದು ನಿಮ್ಮನ್ನು ಮುಂದಿನ ಮಳೆಗಾಲದಲ್ಲಿ ಸುಮ್ಮನೆ ಕೂರಲು ಬಿಡುವುದಿಲ್ಲ. ಮತ್ತೆ ಮತ್ತೆ ತನ್ನೆಡೆಗೆ ಸೆಳೆಯುತ್ತದೆ.
ಹಾಗಾದರೆ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಮಳೆಗಾಲದಲ್ಲೇ ಮಾಡಬಹುದಾದ ಹಿಮಾಲಯನ್ ಚಾರಣಗಳು ಯಾವುವು ಎಂದು ನೋಡೋಣ.
೧. ಹೂಕಣಿವೆ (ವ್ಯಾಲಿ ಆಫ್ ಫ್ಲವರ್ಸ್), ಉತ್ತರಾಖಂಡ: ಇದು ಮಳೆಗಾಲದಲ್ಲಿ ಮಾತ್ರ ತೆರೆದಿರುವ ಮಳೆಗಾಲದಲ್ಲೇ ಮಾಡಬೇಕಾದ ಚಾರಣ. ಉತ್ತರಾಖಂಡದ ಕುಂಭದ್ರೋಣ ಮಳೆಯ ಆರ್ಭಟ ನೋಡುತ್ತಾ, ಮಳೆಯಲ್ಲಿನ ಪ್ರಕೃತಿ ವೈಭವವನ್ನು ಕಣ್ತುಂಬಿಕೊಳ್ಳುತ್ತಾ, ನೂರಾರು ಸಾವಿರಾರು ಕಾಡು ಹೂಗಳಲಿ ನಲಿಯುವ ಸುಂದರ ದೃಶ್ವನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಬೇಕು ಎನಿಸಿದರೆ ಅದಕ್ಕೆ ಹೂಕಣಿವೆಗೆ ಹೋಗಲೇಬೇಕು. ಅಂದಹಾಗೆ, ಇದು ಸುಲಭದ ಚಾರಣವಲ್ಲ. ಮಳೆರಾಯ ನಿಮ್ಮ ಮೇಲೆ ದಯೆ ತೋರಿ, ನೀವು ಚಾರಣ ಮಾಡುವಾಗ ಮಳೆ ನಿಲ್ಲಿಸಿದರೆ, ಭೂಮಿಯನ್ನೂ ಆಗಸವನ್ನೂ ಒಂದು ಮಾಡುವ ಮಂಜಿನ ಪರದೆಯನ್ನು ಸರಿಸಿ ಸೂರ್ಯ ಇಣುಕಿದರೆ ಪ್ರಕೃತಿ ರಮಣೀಯವಾಗಿ ಕಾಣುತ್ತದೆ. ಪ್ರತಿಯೊಬ್ಬ ಚಾರಣಿಗನೂ ಜೀವಿತಾವಧಿಯಲ್ಲಿ ಒಮ್ಮೆ ಹೋಗಬೇಕಾದ ಇದು ಐದು ದಿನಗಳ ಚಾರಣವಾಗಿದ್ದು, ಪ್ರತಿದಿನ ಅಂದಾಜು ೧೦ ಕಿಮೀನಂತೆ ಸುಮಾರು ೪೦ಕ್ಕೂ ಹೆಚ್ಚು ಕಿಮೀ ನಡೆಯಬೇಕಾಗುತ್ತದೆ.
೨. ಗ್ರೇಟ್ ಲೇಕ್ಸ್ ಚಾರಣ, ಕಾಶ್ಮೀರ: ಏಳು ಸರೋವರಗಳು ಒಂದಾದ ಮೇಲೊಂದರಂತೆ ಪ್ರತಿದಿನ ನೀವು ನಡೆಯುತ್ತಿರುವಾಗ ಸಿಕ್ಕರೆ! ಎತ್ತರೆತ್ತರದ ಪರ್ವತಗಳೆಡೆಯಲ್ಲಿ ವಿಶಾಲ ನೀಲಿಹಸಿರು ಸರೋವರಗಳನ್ನು ನೋಡಲು ಎರಡು ಕಣ್ಣು ಸಾಲದು. ಇಂಥದ್ದೊಂದು ಅನುಭವ ಬೇಕಾದರೆ ಅದಕ್ಕೆ ನೀವು ಕಾಶ್ಮೀರದ ಗ್ರೇಟ್ ಲೇಕ್ಸ್ ಚಾರಣ ಮಾಡಬೇಕು. ಪ್ರತಿಯೊಂದು ಸರೋವರವೂ ಭಿನ್ನವಾಗಿದ್ದು, ಸುತ್ತಲ ಮೇಪಲ್ ಮರಗಳ ಸಮೃದ್ಧ ಕಾಡು, ವಿಶಾಲ ಹುಲ್ಲುಗಾವಲುಗಳು ನೀಡುವ ಅನುಭವ ಸ್ವರ್ಗ ಸಮಾನ. ಇದಕ್ಕೆ ಬೇಕಾಗುವ ಸಮಯ ಎಂಟು ದಿನಗಳು.
೩. ಹಮ್ಟಾ ಪಾಸ್, ಹಿಮಾಚಲ ಪ್ರದೇಶ: ಹಮ್ಟಾ ಪಾಸ್ ಚಾರಣ ಹಿಮಾಚಲ ಪ್ರದೇಶದ ಹೂಕಣಿವೆ ಎನ್ನಬಹುದೇನೋ. ಮಳೆಗೆ ಅರಳಿದ ಸಾವಿರಾರು ಪುಟ್ಟ ಪುಟ್ಟ ಹೂಗಳ ಹಾದಿಯಲ್ಲಿ ಮನಾಲಿಯಿಂದ ಸ್ಪಿತಿ ಕಣೆವೆಯ ಕಡೆಗೆ ಹೆಜ್ಜೆ ಹಾಕಿ ಚಂದ್ರತಾಲ್ ಸರೋವರ ತಲುಪುವುದು. ಸ್ಪಿತಿ ಕಣಿವೆಯಲ್ಲಿರುವ ಚಂದ್ರತಾಲ್ ಸರೋವರ ಅತ್ಯಂತ ಸುಂದರ ಸರೋವರವಾಗಿದೆ. ಆಗಸಕ್ಕೆ ಕನ್ನಡಿಯಿಟ್ಟಂತೆ ಇರುವ ಈ ಸರೋವರದಲ್ಲಿ ಎತ್ತರೆತ್ತರದ ಬೋಳು ಪರ್ವತಗಳ ಪ್ರತಿಬಿಂಬ ನೋಡುವುದೇ ಸೊಗಸು. ೨೫ ಕಿಮೀ ಚಾರಣ ಇದಾಗಿದ್ದು ೬ ದಿನಗಳು ಬೇಕಾಗುತ್ತವೆ.
೪. ಪಿನ್ ಪಾರ್ವತಿ ಚಾರಣ, ಹಿಮಾಚಲ ಪ್ರದೇಶ: ಇದು ಅತ್ಯಂತ ಹಳೆಯ ಹಿಮಾಲಯನ್ ಚಾರಣ. ಹಾಗೇ ಕಷ್ಟದ್ದೂ ಕೂಡಾ. ಇದು ದೇವತೆಗಳು ನಡೆದಾಡುವ ದಾರಿ ಎಂಬ ಪ್ರತೀತಿಯೂ ಇದೆ. ಪಾರ್ವತೀ ಕಣಿವೆಯ ಹಿಮಾಲಯನ್ ನ್ಯಾಷನಲ್ ಪಾರ್ಕ್ ಮೂಲಕವಾಗಿ ಸಾಗಿ ದಟ್ಟ ಕಾಡುಗಳು, ಕಣಿವೆಗಳು, ಹುಲ್ಲುಗಾವಲುಗಳಿಗೆ ಸಾಕ್ಷಿಯಾಗುತ್ತಾ ಸ್ಪಿತಿಯ ಪಿನ್ ಕಣಿವೆ ತಲುಪುವುದು ಈ ಚಾರಣದ ಉದ್ದೇಶ. ೧೧ ದಿನಗಳ ಕಷ್ಟಕರ ಚಾರಣ ಇದಾಗಿದ್ದು ಹಲವು ಚಾರಣಗಳ ಅನುಭವ ಇದ್ದವರು ಹೋಗಬಹುದು.
೫. ಭೃಗು ಸರೋವರ, ಹಿಮಾಚಲ ಪ್ರದೇಶ: ಭೃಗು ಮಹರ್ಷಿಗಳು ತಪಸ್ಸು ಮಾಡಿದ ಪುಣ್ಯಸ್ಥಳ ಎಂಬ ಹಿನ್ನೆಲೆಯನ್ನು ಹೊಂದಿದ ಪ್ರದೇಶವಿದು. ಇದೂ ಕೂಡಾ ಹಿಮಾಚಲ ಪ್ರದೇಶದ ಮನಾಲಿಯಿಂದ ಸುಮಾರು ೨೨ ಕಿಮೀ ದೂರದ ಗುಲಾಬಾ ಎಂಬಲ್ಲಿಂದ ಆರಂಭವಾಗುವ ಚಾರಣ. ನಿಮ್ಮ ಬಳಿ ಹೆಚ್ಚು ದಿನವಿಲ್ಲದಿದ್ದರೆ, ಬೇಗ ಮುಗಿಸಿ ಬರಬಹುದಾದ ಚಾರಣವಿದು. ಆಗಸ್ಟ್ ತಿಂಗಳ ಸಂದರ್ಭ ಈ ಹಾದಿಯಿಡೀ ಹಸಿರಿನಲ್ಲಿ ನಳನಳಿಸುತ್ತದೆ. ಕಣ್ಣು ಹಾಯಿಸಿದಲ್ಲೆಲ್ಲ ಹರಡಿಕೊಂಡಿರುವ ಹಸಿರು ಹುಲ್ಲುಗಾವಲಿನಲ್ಲಿ ನಡೆಯುತ್ತಾ ಸಾಗುವುದು ಒಂದು ಅಮೋಘ ಅನುಭವ. ಸುಮಾರು ೨೪ ಕಿಮೀ ಚಾರಣ ಇದಾಗಿದ್ದು ನಾಲ್ಕು ದಿನಗಳು ಬೇಕಾಗುತ್ತವೆ.
ಇದನ್ನೂ ಓದಿ: ಎಲ್ಲ ನೌಕರರಿಗೂ ಐಷಾರಾಮಿ ಪ್ರವಾಸ; ಕಂಪನಿಲಿ ಕೆಲಸ ಖಾಲಿ ಇದೆಯಾ ಅಂತ ಕೇಳಿದ ನೆಟಿಜನ್ಸ್!