ನೀವು ವನ್ಯಜೀವಿ (wildlife enthusiasts) ಪ್ರಿಯರೇ? ನಿಮಗೆ ಸೈಕಲ್ ಸವಾರಿಯೆಂದರೆ (bicycle ride) ಬಹಳ ಇಷ್ಟವೇ? ಹಾಗಿದ್ದರೆ ನಿಮ್ಮ ಮುಂದೊಂದು ಅದ್ಭುತ ಅವಕಾಶ ತೆರೆದಿದೆ. ಮಹಾರಾಷ್ಟ್ರದ ಪೆಂಚ್ ಹುಲಿ (Pench tiger reserve) ರಕ್ಷಿತಾರಣ್ಯದ ದಟ್ಟ ಕಾಡೊಳಗೆ ಇದೀಗ ಮೊದಲ ಬಾರಿಗೆ ಸೈಕಲ್ ಸಫಾರಿ (Bicycle safari) ಆರಂಭವಾಗಿದೆ. ಸೈಕಲ್ ಪ್ರೇಮಿಗಳಿನ್ನು ತಮ್ಮ ಸೈಕಲ್ ಜೊತೆಗೆ ಕಾಡೊಳಗೆ (Wildlife Tourism) ಹೋಗಬಹುದು!
ಹೌದು. ಕೇಳಲು ಕೊಂಚ ಭಯವಾಗುತ್ತಿದೆಯೇ? ಭಯ ಸಹಜ. ಯಾಕೆಂದರೆ, ಪೆಂಚ್ ಟೈಗರ್ ರಿಸರ್ವ್ ಹೇಳಿ ಕೇಳಿ ಹುಲಿಗಳಿಗೆ ಪ್ರಸಿದ್ಧಿ ಪಡೆದ ಕಾಡು. ಕೇವಲ ಹುಲಿಗಳಷ್ಟೇ ಅಲ್ಲ, ಚಿರತೆ, ಕರಡಿ ಮತ್ತಿತರ ಕಾಡು ಪ್ರಾಣಿಗಳು ನಿರ್ಭೀತಿಯಿಂದ ಸುತ್ತುವ ಕಾಡಿದು. ಇಂಥ ರಾಷ್ಟ್ರೀಯ ಉದ್ಯಾನದೊಳಗೆ ಸಫಾರಿ (tiger safari) ಮಾಡುವ ಕನಸು ಪ್ರತಿಯೊಬ್ಬ ವನ್ಯಜೀವಿ ಪ್ರೇಮಿಗೂ ಇದ್ದೇ ಇರುತ್ತದೆ ನಿಜ. ಆದರೆ, ಸೈಕಲ್ ಚಲಾಯಿಸುತ್ತಾ ಸಫಾರಿ ಮಾಡುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ನಿಮ್ಮನ್ನು ಕಾಡದೆ ಇರದು. ಆದರೆ, ಇದು ಸುರಕ್ಷಿತವಾದ್ದರಿಂದಲೇ ಇಂಥದ್ದೊಂದು ಹೊಸ ಅವಕಾಶವನ್ನು ವನ್ಯಜೀವಿ ಪ್ರಿಯರಿಗೆ, ಪ್ರವಾಸಿಗರಿಗೆ ಲಭಿಸಿದೆ. ಈ ಜಾಗದಲ್ಲಿ ಪೆಂಚ್‌ನ ಮುಖ್ಯ ಪ್ರದೇಶದಲ್ಲಿರುವಷ್ಟು ವನ್ಯಜೀವಿಗಳು ಇಲ್ಲದಿರುವುದರಿಂದ ಸುರಕ್ಷಿತವಾಗಿ ಸೈಕಲ್ ಸವಾರಿ ಮಾಡಬಹುದು ಎಂದು ಪೆಂಚ್ ರಕ್ಷಿತಾರಣ್ಯ ಅಧಿಕಾರಿಗಳು ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಆದರೆ, ಈ ಸೈಕಲ್ ಸಫಾರಿಯ ಮೂಲಕ ಪೆಂಚ್‌ನೊಳಗೆ ಎಲ್ಲ ಜಾಗಗಳಿಗೂ ಸವಾರಿ ಮಾಡುವಂತಿಲ್ಲ. ಹೆಚ್ಚು ಭಯವಿಲ್ಲದ, ಸುರಕ್ಷಿತವಾದ ಪ್ರದೇಶವಾಗಿರುವ ಕೊಲಿತ್ಮಾರಾದಿಂದ ಕುನ್ವಾರ ಭಿವ್ಸೆನ್ ಪ್ರದೇಶದವರೆಗೆ ಮಾತ್ರ ಈ ಸೈಕಲ್ ಸಫಾರಿ ಲಭ್ಯವಿದೆ. 48 ಕಿಮೀ ವ್ಯಾಪ್ತಿಯ ಈ ಪ್ರದೇಶದಲ್ಲಿ ಸೈಕಲ್ ಚಲಾಯಿಸುತ್ತಾ, ನರ್ಹರ್, ಬನೇರಾ ಹಾಗೂ ಚಾರ್‌ಗಾಂ ಮತ್ತಿತರ ಪ್ರದೇಶಗಳಲ್ಲಿರುವ ಕಾಡನ್ನು ಸುತ್ತು ಹಾಕಿ ಬರಬಹುದು. ಈ ಮೊದಲು ಪ್ರವಾಸಿಗರು ಕೇವಲ ಜೀಪ್ ಹಾಗೂ ಕ್ಯಾಂಟರ್‌ಗಳ ಮೂಲಕ ಪೆಂಚ್ ಕಾಡನ್ನು ಸುತ್ತಬಹುದಾಗಿತ್ತು.
ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ತಮ್ಮದೇ ಸೈಕಲನ್ನು ತಂದರೆ, ಈ ಸೈಕಲ್ ಸಫಾರಿಗೆ 100 ರೂಪಾಯಿ ಪ್ರವೇಶ ದರವಿರಲಿದೆ. ಆದರೆ, ಸ್ಥಳದಲ್ಲೇ ಬಾಡಿಗೆ ಸೈಕಲ್ ಕೂಡಾ ಲಭ್ಯವಿದ್ದು, ಅವುಗಳ ಮೂಲಕ ಸಫಾರಿ ಮಾಡಲು ಪ್ರತಿಯೊಬ್ಬನಿಗೆ 300 ರೂ ಪ್ರವೇಶ ದರ ವಿಧಿಸಲಿದೆ. ಗುಂಪಿನಲ್ಲಿ ಹೋಗುವುದಾದರೆ, ಎರಡರಿಂದ ಆರು ಮಂದಿ ಜೊತೆಯಾಗಿ ಹೋಗಬಹುದಾಗಿದ್ದು, ಪ್ರತಿ ಗುಂಪಿನ ಜೊತೆಗೆ ಅನುಭವಿ ಗೈಡ್ ಕೂಡಾ ಜೊತೆಗಿರಲಿದ್ದಾರೆ. ಗೈಡ್‌ಗಾಗಿ 1000 ರೂಪಾಯಿಗಳ ಶುಲ್ಕವನ್ನು ನೀಡಬೇಕಾಗಿದ್ದು, ಸುರಕ್ಷಿತತೆಯ ದೃಷ್ಟಿಯಿಂದ ಗೈಡ್ ಇಲ್ಲದೆ, ಪ್ರವೇಶ ನೀಡಲಾಗುವುದಿಲ್ಲ.
ಇದನ್ನೂ ಓದಿ: Travel Insurance : ಪ್ರವಾಸ ಮಾಡುವಾಗ ಪ್ರಯಾಣ ವಿಮೆ ತುಂಬಾನೇ ಅಗತ್ಯ; ಏನಕ್ಕೆಲ್ಲ ಬಳಕೆಗೆ ಬರುತ್ತದೆ ಗೊತ್ತಾ?
ಈಗಾಗಲೇ ಸೈಕಲ್ ಸಫಾರಿ ಆಗಸ್ಟ್ 20ರಂದು ಆರಂಭವಾಗಿದ್ದು, ಸುಮಾರು 80 ಮಂದಿ ಸೈಕಲ್ ಸಫಾರಿ ಮಾಡಿದ್ದಾರೆ. ಸೈಕಲ್ ಸಫಾರಿ ಮಾಡುವುದರಿಂದ ಇನ್ನೂ ಆಳವಾಗಿ, ಪೆಂಚ್ ಕಾಡನ್ನು ಶಾಂತಿಯಿಂದ ನೋಡಬಹುದಾಗಿದ್ದು, ಇಲ್ಲಿನ ಕಾಡಿನ ಸೌಂದರ್ಯವಷ್ಟೇ ಅಲ್ಲ, ಸಸ್ಯ ಪ್ರಬೇಧ, ಭೂವೈವಿಧ್ಯ, ಅಪರೂಪದ ಪಕ್ಷಿ ಸಂಕುಲವನ್ನು ಕೂಲಂಕುಷವಾಗಿ ವೀಕ್ಷಿಸುವ ಅವಕಾಶ ಸಿಗಲಿದೆ. ಅಷ್ಟೇ ಅಲ್ಲದೆ, ಪೆಂಚ್‌ನ ಕೊಲಿತ್ಮಾರಾದಿಂದ ಕುನ್ವಾರ ಭಿವ್ಸೆನ್ ಪ್ರದೇಶದವರೆಗಿನ ಈ ಹಾದಿ ನಯನ ಮನೋಹರವಾದ ಕಾಡಾಗಿದ್ದು, ಕಣಿವೆ, ಬಯಲು, ದಟ್ಟ ಕಾಡು ಹೀಗೆ ಎಲ್ಲ ಬಗೆಯ ಪ್ರಾಕೃತಿಕ ವೈವಿಧ್ಯವನ್ನೂ ಹೊಂದಿರುವ ಪ್ರದೇಶವಾಗಿದೆ. ಬಹಳ ಸಾರಿ, ಜೀಪ್ ಸಫಾರಿ ಗದ್ದಲ, ಕಡಿಮೆ ಅವಧಿ ಇತ್ಯಾದಿಗಳು ನಿಜವಾದ ವನ್ಯಜೀವಿ ಪ್ರಿಯರಿಗೆ ತೃಪ್ತಿಯನ್ನು ಕೊಡಲಾರದು. ಅಂಥವರಿಗೆ, ಕುತೂಹಲದ ಕಣ್ಣು ಇರುವ ನಿಜವಾದ ಪ್ರಕೃತಿಪ್ರೇಮಿಗಳಿಗೆ ಕಾಡೊಳಗೆ ಮೌನವಾಗಿ ಕಳೆದುಹೋಗಲು, ಈ ಹೊಸ ಸೈಕಲ್ ಸಫಾರಿ ಯೋಜನೆ ಚೇತೋಹಾರಿ ಅನುಭವವನ್ನೇ ನೀಡಲಿದೆ!
ಇದನ್ನೂ ಓದಿ: Travel Tips: ದ್ವೀಪಗಳೆಂಬ ಮೋಹಕ ತಾಣಗಳು! ಈ ಮಳೆಗಾಲದಲ್ಲಿ ಇವು ನಿಮ್ಮ ಮೋಹ ಅರಳಿಸಲಿ