Site icon Vistara News

Viral video | ಈ 90ರ ಅಜ್ಜಿ 120 ಬೀದಿ ನಾಯಿಗಳ ಅನ್ನದಾತೆ! ಬಿಸಿಬಿಸಿ ಬಿರಿಯಾನಿನೂ ಕೊಡ್ತಾರೆ!

ಗಾಜಿಯಾಬಾದ್‌ (ಉತ್ತರ ಪ್ರದೇಶ): ಕೆಲವರ ರಕ್ತದ ಕಣ ಕಣದಲ್ಲೂ ಮಾನವೀಯತೆ, ಪ್ರಾಣಿ ಪ್ರೀತಿ ಇರುತ್ತದೆ ಅನಿಸುತ್ತದೆ. ಅವರು ತಾವು ಪ್ರಾಣಿಗಳನ್ನು ಪ್ರೀತಿಸುವ ಮೂಲಕ ದೊಡ್ಡ ಉಪಕಾರ ಮಾಡುತ್ತಿದ್ದೇವೆ ಅಂದುಕೊಳ್ಳುವುದೇ ಇಲ್ಲ. ಅವುಗಳ ಪ್ರೀತಿಯಿಂದ ತಮ್ಮ ಬದುಕೇ ಸಾರ್ಥಕವಾಯಿತು ಅಂದುಕೊಳ್ಳುತ್ತಾರೆ. ಯಾವ ಫಲಾಪೇಕ್ಷೆಯೂ ಇಲ್ಲದ ನಿಷ್ಕಳಂಕ ಪ್ರೀತಿ ಅಂದರೆ ಇದುವೇನಾ?

ಅದರಲ್ಲೂ ನಾಯಿಗಳೆಂದರೆ, ಅದರಲ್ಲೂ ಬೀದಿ ನಾಯಿಗಳೆಂದರೆ ಮನ ಮಿಡಿಯುವ, ಅಪ್ಪಟ ಪ್ರೀತಿ ತೋರುವ ಕೆಲವರಿಗೆ ಶ್ವಾನಗಳು ಅವರ ಬದುಕಿನ ಅವಿಭಾಜ್ಯ ಅಂಗವೇ ಆಗಿಬಿಡುತ್ತವೆ. ನಾವಿಲ್ಲಿ ಹೇಳಲಿರುವ ೯೦ ವರ್ಷದ ಅಜ್ಜಿಯ ನಾಯಿ ಪ್ರೀತಿಯ ಕಥೆ ನಿಜಕ್ಕೂ ಮನಸಿಗೆ ಹಿತ ನೀಡುತ್ತದೆ. ಉತ್ತರ ಪ್ರದೇಶದ ಗಾಜಿಯಾ ಬಾದ್‌ನ ಈ ಅಜ್ಜಿಗೆ ಸರಿಯಾಗಿ ನಡೆಯಲೂ ಆಗುವುದಿಲ್ಲ. ಆಸ್ಟಿಯೋಪೊರೋಸಿಸ್‌ ಎಂಬ ಮೂಳೆ ಸವೆತದ ಸಮಸ್ಯೆ. ಗಂಟೆಲ್ಲ ನೋವೂ ನೋವು. ಅವರಿಗೆ ಎರಡು ಹೆಜ್ಜೆ ಇಡಬೇಕಾದರೂ ಒಂದೋ ವಾಕರ್‌ ಬೇಕು, ಇಲ್ಲವೇ ಇನ್ನೊಬ್ಬರ ಸಹಾಯ ಬೇಕು.

ಆದರೆ, ಆ ತಾಯಿಯ ಶಕ್ತಿ ನೋಡಿ, ಅವರು ಆ ಊರಿನ ೧೨೦ಕ್ಕೂ ಅಧಿಕ ಬೀದಿ ನಾಯಿಗಳಿಗೆ ತಾವೇ ಆಹಾರ ತಯಾರಿಸುತ್ತಾರೆ. ಮೊಮ್ಮಗಳ ಕೈಗೆ ಕೊಟ್ಟು ಊಟ ತಿನ್ನಿಸಿ ಬಾ ಅಂತಾರೆ. ಅವರದೊಂದು ವಿಡಿಯೊ ವಾರದ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್‌ ಆಗಿದ್ದು, ಕೆಲವೇ ದಿನದಲ್ಲಿ ೧.೪೨ ಲಕ್ಷ ಮಂದಿ ನೋಡಿ ಖುಷಿಪಟ್ಟಿದ್ದಾರೆ. ಅಜ್ಜಿಯ ನಾಯಿ ಪ್ರೀತಿಗೆ ಶಹಭಾಸ್‌ ಎಂದಿದ್ದಾರೆ. ಅಜ್ಜಿ ಬಿರಿಯಾನಿ ಬೇಯಿಸುವುದರೊಂದಿಗೆ ಆರಂಭವಾಗುವ ಈ ವಿಡಿಯೊದಲ್ಲಿ ಅವರು ವಾಕರ್‌ ಹಿಡಿದು ನಡೆಯುವುದು, ಮೊಮ್ಮಗಳೊಂದಿಗೆ ಸೇರಿಕೊಂಡು ಕಾರಿನಲ್ಲಿ ನಾಯಿಗಳಿದ್ದಲ್ಲಿಗೆ ಹೋಗುವುದು, ಅಲ್ಲಿ ನಾಯಿಗಳಿಗೆ ಆಹಾರ ನೀಡುವುದು, ಕೈಯಲ್ಲೇ ತಿನ್ನಿಸುವುದು ಮೊದಲಾದ ಸನ್ನಿವೇಶಗಳು ದಾಖಲಾಗಿವೆ. ಒಂದೊಂದೇ ನಾಯಿಯನ್ನು ಮಾತನಾಡಿಸಿ ಖುಷಿಯಿಂದ ಮೈದಡವಿ ತಿನ್ನಿಸುವುದು ನಿಜಕ್ಕೂ ಮನಸು ತುಂಬುವಂತೆ ಮಾಡುತ್ತದೆ.

ಅಜ್ಜಿ ಹುಷಾರಾಗಿದ್ದೇ ನಾಯಿಗಳ ಪ್ರೀತಿಯಿಂದ..

ಇದು ಸೋಷಿಯಲ್‌ ಮೀಡಿಯಾದ ಕಾಲ. ಜನಪ್ರಿಯತೆಯನ್ನು ಪಡೆದುಕೊಳ್ಳುವುದಕ್ಕಾಗಿ ಪ್ರಾಣಿ ಪ್ರೇಮದ ನಾಟಕವಾಡಿ ವಿಡಿಯೊ ಮಾಡೋರು ಸಾಕಷ್ಟು ಜನರಿದ್ದಾರೆ. ಅದರೆ, ಈ ಅಜ್ಜಿ ಹಾಕಲ್ಲ. ವಿಡಿಯೊ ಮಾಡಿದ್ದು ಇದು ಫಸ್ಟ್‌ ಟೈಮ್‌. ಅವರ ಕಾಯಕ ಪ್ರತಿ ದಿನವೂ ನಡೆಯುತ್ತದೆ.
ಅಜ್ಜಿಗೆ ನಾಯಿಗಳ ಮೇಲೆ ಮೊದಲಿನಿಂದಲೂ ಪ್ರೀತಿ. ಇತ್ತೀಚೆಗೆ ಅವರಿಗೆ ಓಸ್ಟಿಯೋಪೊರೊಸಿಸ್‌ಗೆ ಶಸ್ತ್ರ ಚಿಕಿತ್ಸೆ ನಡೆದಿತ್ತು. ಇನ್ನು ಹಾಸಿಗೆ ಬಿಟ್ಟೇಳುವುದಿಲ್ಲವೇನೋ ಎಂಬಂಥ ಸ್ಥಿತಿ. ಆದರೆ, ಅವರಿಗಿದ್ದ ನಾಯಿ ಪ್ರೀತಿಯೇ ಅವರನ್ನು ಈಗ ಎದ್ದು ನಡೆಯುವಂತೆ ಮಾಡಿದೆ ಎನ್ನುತ್ತಾರೆ ಆಕೆಯ ಮೊಮ್ಮಗಳು.

ನಾನೇ ಮಾಡಬೇಕು, ಅದಲ್ಲೇ ಖುಷಿ
ಅಜ್ಜಿ ಪ್ರತಿ ದಿನ ಬೆಳಗ್ಗೆ ೪.೩೦ಕ್ಕೇ ಏಳುತ್ತಾರೆ. ತಮಗೆ ತಿಂಡಿ ಮಾಡಿಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ನಾಯಿಗಳಿಗೆ ಆಹಾರ ಬೆಳಗಿನಿಂದಲೇ ತಯಾರಾಗಲು ಶುರುವಾಗುತ್ತದೆ. ನಾಯಿಗಳಿಗೆ ತಾವೇ ಸ್ವತಃ ತಯಾರಿಸಿ ಹಾಕಬೇಕು ಎನ್ನುವುದು ಅಜ್ಜಿಯ ಹಠ. ಯಾರಾದರೂ ಹೆಲ್ಪ್‌ ಮಾಡ್ಲಾ ಅಂತ ಕೇಳಿದ್ರೂ ಇಷ್ಟವಾಗಲ್ಲವಂತೆ. ಯಾಕೆಂದರೆ ನಾನೇ ನನ್ನ ಕೈಯಾರೆ ಮಾಡಿಕೊಟ್ಟರೆ ಮಾತ್ರ ನನಗೆ ಖುಷಿ ಅಂತಾರೆ ಅಜ್ಜಿ.

ಅಜ್ಜಿ ಮೊಮ್ಮಗಳ ಕೈಯಲ್ಲಿ ಆಹಾರ ಕಳುಹಿಸುತ್ತಾರೆ. ತಿಂಡಿ ಕೊಟ್ಟು ಬಂದ ಮೊಮ್ಮಗಳ ಬಳಿ ʻಅದು ಸರಿ ತಿನ್ತಾ? ಇದು ಏನು ಮಾಡ್ತು? ಊಟ ಇಷ್ಟ ಆಯ್ತಾʼ ಅಂತ ನೂರು ಪ್ರಶ್ನೆ ಕೇಳ್ತಾರೆ ಅಂತ ಮೊಮ್ಮಗಳು ಬರೆದುಕೊಂಡಿದ್ದಾರೆ.

ಅದೊಂದು ದಿನ ಮೊಮ್ಮಗಳು ಅಜ್ಜಿಯನ್ನೂ ಕಾರಿನಲ್ಲಿ ಕೂರಿಸಿಕೊಂಡು ನಾಯಿಗಳಿದ್ದಲ್ಲಿಗೆ ಹೋಗುತ್ತಾಳೆ. ಆವತ್ತು ತನ್ನ ಕೈಯಾರೆ ನಾಯಿಗಳಿಗೆ ಆಹಾರ ನೀಡಿದ ಆ ಮಹಾತಾಯಿ ಎಷ್ಟೊಂದು ಖುಷಿಯಾಗಿದ್ದರು ಎಂದರೆ ತಮಗಿರುವ ಕಾಯಿಲೆಯನ್ನೇ ಮರೆತುಬಿಟ್ಟಿದ್ದರು. ಇಂದು ನಾನು ಬದುಕಿದ್ದರೆ ಅದಕ್ಕೆ ಕಾರಣ ಈ ನಾಯಿಗಳು ಎನ್ನುವಾಗ ಅವರ ಮಾತಿನಲ್ಲಿ ಉಕ್ಕುವ ಕೃತಜ್ಞತಾ ಭಾವ ನಿಜಕ್ಕೂ ಅದ್ಭುತ.

ಇದನ್ನೂ ಓದಿ: ನಾಗಿನ್‌ ಹಾರ್ನ್‌ ಸದ್ದಿಗೆ ರಸ್ತೆಯಲ್ಲೇ ಕುಣಿದ ಯುವಕರು, ವಿಡಿಯೋ ವೈರಲ್

Exit mobile version