ಮುಂಬೈ: ನಟಿ ತಾಪ್ಸೀ ಪನ್ನು ತಮ್ಮ ಅಭಿನಯ ಹಾಗೂ ಬೋಲ್ಡ್ ಮಾತುಗಳಿಂದ ಗಮನ ಸೆಳೆದವರು. ಪಿಂಕ್ ಚಿತ್ರದ ಮೂಲಕ ಮಹಿಳೆಯರ ಸ್ವಾಭಿಮಾನವನ್ನು ಎತ್ತಿಹಿಡಿದ ಆಕೆ ಈಗ ಮಹಿಳಾ ಕ್ರಿಕೆಟ್ ಲೋಕದ ದಂತಕಥೆ ಮಿಥಾಲಿ ರಾಜ್ ಅವರ ಜೀವನಾಧರಿತ ಶಭಾಷ್ ಮಿಥು ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಜುಲೈ ೧೫ರಂದು ತೆರೆಗೇರಲು ಸಜ್ಜಾಗಿರುವ ಈ ಚಿತ್ರದ ಟ್ರೇಲರ್, ಪೋಸ್ಟರ್‌ಗಳು ಆಗಲೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ.
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿಯಾಗಿರುವ ಮಿಥಾಲಿ ರಾಜ್ ಅವರ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿರುವ ತಾಪ್ಸಿ ಪನ್ನು ಇದಕ್ಕಾಗಿ ದೊಡ್ಡ ಅಧ್ಯಯನವನ್ನೇ ನಡೆಸಿದ್ದಾರೆ. ಅದರ ಜತೆಗೆ ಕ್ರಿಕೆಟ್ ಲೋಕದಲ್ಲಿರುವ ಪುರುಷ ಪ್ರಧಾನ ವ್ಯವಸ್ಥೆಯ ಬಗ್ಗೆ ಕೂಡಾ ಧ್ವನಿ ಎತ್ತಿದ್ದಾರೆ. ಹಲವು ಗಂಭೀರ ಆಕ್ರೋಶಗಳ ನಡುವೆ ಅವರ ಪ್ರಧಾನ ಸಿಟ್ಟಿರುವುದು ಮಿಥಾಲಿ ರಾಜ್ ಅವರನ್ನು ಲೇಡಿ ಸಚಿನ್ ತೆಂಡೂಲ್ಕರ್ ಎಂದು ಕರೆಯುತ್ತಿರುವುದರ ಬಗ್ಗೆ.
ಪದೇಪದೆ ಮತ್ತು ಬೇರೆ ಬೇರೆ ಕಾರಣಗಳಿಗಾಗಿ ಜನರು ಮಹಿಳಾ ಆಟಗಾರರನ್ನು ಅಥವಾ ಮಹಿಳಾ ನಟಿಯರನ್ನು ಕೆಲವು ಪುರುಷ ಆಟಗಾರ/ ನಟರ ಸ್ತ್ರೀ ಆವೃತ್ತಿ ಎಂದು ಕರೆಯುವುದು ತಪ್ಪು, ಮಾನದಂಡ ಯಾವಾಗಲೂ ಮನುಷ್ಯರೆ. ನಾವಿನ್ನೂ ಪಿತೃಪ್ರಧಾನ ಸಮಾಜದಲ್ಲಿ ಇದ್ದೇವೆ. ಈಗ ಸ್ವಲ್ಪ ಮಟ್ಟಿಗೆ ಬದಲಾಗುತ್ತಿದೆಯಾದರೂ ಬದಲಾಗಬೇಕಾದದ್ದು ತುಂಬಾ ಇದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ ತಾಪ್ಸಿ ಪನ್ನು.
ಪುರುಷ ಪ್ರಧಾನವಾಗಿರುವ ಉದ್ಯಮದಲ್ಲಿ ಏನಾದರೂ ಬದಲಾವಣೆಯಾಗಿದೆಯೇ ಎಂದು ಸಂದರ್ಶನದಲ್ಲಿ ಕೇಳಿದಾಗ, ತಾಪ್ಸಿ ಪನ್ನು ಹೀಗೆ ಉತ್ತರಿಸಿದ್ದಾರೆ, “ಬದಲಾವಣೆ ಖಚಿತವಾಗಿ ಆಗಿದೆ. ಹತ್ತು ವರ್ಷಗಳ ಹಿಂದೆ ನಾನು ನನ್ನದೇ ಬ್ಯಾನರ್ ಸಿನಿಮಾ ಮುಖ್ಯಸ್ಥಳಾಗುತ್ತೇನೆ. ಅದನ್ನು ಬೆಂಬಲಿಸುವ ಜನರು ಇರುತ್ತಾರೆ, ಅದಕ್ಕೆ ಉತ್ತಮವಾದ ಹಣವನ್ನು ಖರ್ಚು ಮಾಡುತ್ತಾರೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ಈಗ ಅದೆಲ್ಲ ಬದಲಾಗಿದೆ. ಆದರೆ ನಾವು ಸಮಾನತೆಯಿಂದ ದೂರದಲ್ಲಿದ್ದೇವೆʼʼ ಎಂದು ಹೇಳಿದ್ದಾರೆ. ಈಗಲೂ ನನ್ನ ಇಡೀ ಚಿತ್ರದ ಬಜೆಟ್ ಒಬ್ಬ ಪುರುಷ ನಟನ ಸಂಭಾವನೆಯಷ್ಟಿರುತ್ತದೆ ಎಂದರೆ ಅಸಮಾನತೆ ಎಷ್ಟರ ಮಟ್ಟಿಗೆ ಇದೆ ಎಂದು ಅರ್ಥ ಮಾಡಿಕೊಳ್ಳಬಹುದು ಎನ್ನುತ್ತಾರೆ ತಾಪ್ಸಿ ಪನ್ನು.
ಇದನ್ನೂ ಓದಿ: Driver Jamuna Movie |ನಟಿ ಐಶ್ವರ್ಯಾ ರಾಜೇಶ್ ನಟನೆಯ ‘ಡ್ರೈವರ್ ಜಮುನಾ’ ಟ್ರೈಲರ್ ಔಟ್