ಬೆಳಗಾವಿ: “ಬಿಡಿಎ, ಬಿಬಿಎಂಪಿ ಆಸ್ತಿಯನ್ನು ಯಾರೇ ಒತ್ತುವರಿ (BDA, BBMP Asset encroachment) ಮಾಡಿದ್ದರೂ ಮುಲಾಜಿಲ್ಲದೆ ತೆರವಿಗೆ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ಹೇಳಿದ್ದಾರೆ. ವಿಧಾನಸಭೆಯಲ್ಲಿ (Assembly Session) ಮಂಗಳವಾರ ಪ್ರಶ್ನೋತ್ತರ ಕಲಾಪದಲ್ಲಿ, ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ (MLA Munirathna) ಅವರ ಪ್ರಶ್ನೆಗೆ ಶಿವಕುಮಾರ್ ಅವರು ಉತ್ತರಿಸಿದರು. ಬಿಡಿಎ ಅಧೀನದಲ್ಲಿ ಇರುವ ಉದ್ಯಾನಗಳ ಸಂಖ್ಯೆ ಮತ್ತು ಉದ್ಯಾನಗಳ ಒತ್ತುವರಿಯ ಬಗ್ಗೆ ಮುನಿರತ್ನ ಪ್ರಶ್ನೆ ಕೇಳಿದ್ದರು.
“ನಮ್ಮ ಸರ್ಕಾರ ಅಧಿಕಾರ ವಹಿಸಿಕೊಂಡ ತಕ್ಷಣ ಬೆಂಗಳೂರಿನ ಆಸ್ತಿಗಳನ್ನು ಹೊಸ ತಂತ್ರಜ್ಞಾನದ ಮೂಲಕ ಮ್ಯಾಪಿಂಗ್ ಕೆಲಸ ಮಾಡುತ್ತಿದೆ. ಒಂದಷ್ಟು ಆಸ್ತಿ ವ್ಯಾಜ್ಯಗಳು ನ್ಯಾಯಾಲಯದಲ್ಲಿವೆ. ಸರ್ಕಾರಿ ಆಸ್ತಿಗಳನ್ನು ಉಳಿಸಿ ಸಾರ್ವಜನಿಕರ ಉಪಯೋಗಕ್ಕೆ ಬಳಕೆ ಮಾಡಲಾಗುವುದು ಎಂದರು.
ಒತ್ತುವರಿಯ ಬಗ್ಗೆ ನಿಮ್ಮ ಬಳಿ ನಿರ್ದಿಷ್ಟ ದಾಖಲೆಗಳು ಇದ್ದರೆ ಈಗಲೇ ಕೊಡಿ, ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ. ಯಾರನ್ನೂ ರಕ್ಷಣೆ ಮಾಡುವ ಸಂದರ್ಭ ಬರುವುದಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಭಾವಿಗಳ ಹೆಸರು ಹೇಳಿಕೊಂಡು ಪಾರ್ಕ್ ನಿರ್ಮಾಣವಾಗಬೇಕಿದ್ದ ಜಾಗದಲ್ಲಿ ನಮ್ಮ ಸ್ವತ್ತು ಎಂದು ಯಾರೋ ಬೋರ್ಡ್ ಹಾಕಿದ್ದಾರೆ. ಇದೇ ರೀತಿ ಅನೇಕ ಉದ್ಯಾನದ ಜಾಗಗಳು ಒತ್ತುವರಿಯಾಗಿವೆ ಎಂದು ಶಾಸಕರು ಹೇಳಿದಾಗ ಡಿಸಿಎಂ ಅವರು, “ಶಾಸಕ ಮುನಿರತ್ನ ಅವರು ಹೇಳಿರುವ ಕೊಟ್ಟಿಗೆಪಾಳ್ಯ ವಾರ್ಡ್ ನಂಬರ್ 73ರ ಸರ್ವೆ ನಂಬರ್ 19 ಅನ್ನು ಯಾರೋ ಒಬ್ಬರು ತಮಗೆ ಸೇರಿದ್ದು ಎಂದು ಕೆಳ ನ್ಯಾಯಾಲಯದಲ್ಲಿ ಆದೇಶ ಪಡೆದುಕೊಂಡು ಬಂದಿದ್ದಾರೆ. ಶೀಘ್ರವೇ ಈ ಒತ್ತುವರಿ ತೆರವಿಗೆ ಕ್ರಮ ತೆಗೆದುಕೊಳ್ಳಲಾಗುವುದು” ಎಂದರು.
ಇದನ್ನೂ ಓದಿ: Belagavi Winter Session: ಕರ್ನಾಟಕ ಮೋಟಾರು ವಾಹನ ತೆರಿಗೆ ವಿಧೇಯಕ ಮಂಡನೆ; ಏರಲಿದೆಯೇ ದರ?
ಪ್ರಮೋದ್ ಲೇಔಟ್ ಸೇರಿದಂತೆ ಇತರೆಡೆ ಪ್ರಭಾವಿಗಳ ಜೊತೆ ಇರುವ ಫೋಟೊ ತೋರಿಸಿ ಭೂಮಿ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ ಎಂದ ಶಾಸಕ ಮುನಿರತ್ನ ಅವರಿಗೆ “ನಿನಗಿಂತ ಪ್ರಭಾವಿ ಯಾರಿದ್ದಾರಪ್ಪ” ಎಂದು ಡಿಸಿಎಂ ಅವರು ಕಾಲೆಳೆದರು.