Site icon Vistara News

Assembly Session : ಗಾಂಧಿ ಮೇಲೋ, ಬಸವಣ್ಣ ಮೇಲೋ; ಅಧಿವೇಶನದಲ್ಲಿ ಫೋಟೊ ವಿವಾದ

Mahathma gandhi Basavanna Assembly session

ಬೆಳಗಾವಿ: ಕಳೆದ ಅಧಿವೇಶನದ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಬೆಳಗಾವಿಯ ಸುವರ್ಣ ಸೌಧದಲ್ಲಿ (Belagavi suvarna soudha) ವೀರ ಸಾವರ್ಕರ್‌ ಅವರ ಫೋಟೊ (Veer savarkar Photo) ಅಳವಡಿಸಲು ಮುಂದಾದಾಗ ಭಾರಿ ವಿವಾದವಾಗಿತ್ತು. ಆದರೆ, ಈಗ ಅದು ತಣ್ಣಗಾಗಿದೆ. ಸ್ವತಃ ಸ್ಪೀಕರ್‌ ಯು.ಟಿ. ಖಾದರ್‌ (Speaker UT Khader) ಅವರೇ ಸಾವರ್ಕರ್‌ ಫೋಟೊ ಉಳಿಸಿಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಇದರ ನಡುವೆಯೇ ಇನ್ನೊಂದು ಫೋಟೊ ಪಾಲಿಟಿಕ್ಸ್‌ ಶುರುವಾಗಿದೆ (Assembly Session).

ಅದೇನೆಂದರೆ, ಸುವರ್ಣ ಸೌಧದ ವಿಧಾನಸಭೆಯ ಸಭಾಂಗಣದಲ್ಲಿ ಯಾರ ಪೋಟೋ ಇರಬೇಕು ಎನ್ನುವ ಗಂಭೀರ ಚರ್ಚೆಯನ್ನು ಹುಟ್ಟುಹಾಕಲು ಸ್ವತಃ ಆಡಳಿತ ಪಕ್ಷದ ಹಿರಿಯ ಶಾಸಕರಾಗಿರುವ ಕಾಂಗ್ರೆಸ್‌ ನಾಯಕ ಬಸವರಾಜ ರಾಯರೆಡ್ಡಿ ನಿರ್ಧರಿಸಿದ್ದಾರೆ. ಅವರು ಹುಟ್ಟು ಹಾಕಲು ಮುಂದಾಗಿರುವ ಚರ್ಚೆ: ಗಾಂಧಿ ಮೇಲೋ, ಬಸವಣ್ಣ ಮೇಲೋ?‌ (Who is on top? Gandhi or Basavanna?) ಇದಕ್ಕೆ ನಿಖರ ಉತ್ತರ ದೊರೆಯಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಧಾನಸೌಧದಲ್ಲಿ ಈಗ ಜಗಜ್ಜೋತಿ ಬಸವೇಶ್ವರರ ಪೋಟೊವನ್ನು ಮೇಲೆ ಹಾಕಲಾಗಿದೆ. ಅದರ ಕೆಳಗೆ ಗಾಂಧೀಜಿ ಪೋಟೊ ಇದೆ. ಹಾಗಿದ್ದರೆ ಯಾರ ಫೋಟೊ ನಿಜಕ್ಕೂ ಮೇಲಿರಬೇಕು ಎಂಬ ವಿಷಯವನ್ನು ಚರ್ಚಿಸಿ ಅಂತಿಮ ತೀರ್ಮಾನ ಪಡೆಯಲು ಶಾಸಕ ಬಸವರಾಜ ರಾಯ ರೆಡ್ಡಿ ನಿರ್ಧರಿಸಿದ್ದಾರೆ. ಹೀಗಾಗಿ ಬೆಳಗಾವಿ ವಿಧಾನಸಭಾ ಅಧಿವೇಶನದದಲ್ಲಿ ಮತ್ತೆ ಫೋಟೊ ಸದ್ದು ಮಾಡುವುದು ಖಚಿತವಾಗಿದೆ.

ಮಂಗಳವಾರದ ಅಧಿವೇಶನದ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಲು ಮುಂದಾಗಿದ್ದಾರೆ ಕಾಂಗ್ರೆಸ್ ನ ಬಸವರಾಜ್ ರಾಯರೆಡ್ಡಿ.. ನಿಯಮಗಳ ಪ್ರಕಾರ ವಿಧಾನಸಭಾ ಸಭಾಂಗಣದಲ್ಲಿ ಯಾವುದೇ ಫೋಟೊ ಹಾಕುವಂತಿಲ್ಲ. ಕಾನ್‌ಸ್ಟಿಟುಯೆಂಟ್‌ ಅಸೆಂಬ್ಲಿ ಅಧ್ಯಕ್ಷರಾಗಿದ್ದ ಬಾಬು ರಾಜೇಂದ್ರ ಪ್ರಸಾದ್‌ ಅವರ ಫೋಟೊವನ್ನೇ ಹಾಕಿಲ್ಲ. ಆದರೆ, ಇಲ್ಲಿ ಬಸವೇಶ್ವರರ ಫೋಟೊ ಕೆಳಗೆ ಗಾಂಧೀಜಿ ಪೋಟೊ ಹಾಕಲಾಗಿದೆ. ವೀರ ಸಾವರ್ಕರ್ ಫೋಟೊ ಹಾಕುವಾಗ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂದು ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಹೀಗಾಗಿ ಸಭಾಂಗಣದಲ್ಲಿ ಫೋಟೊ ಹಾಕುವ ಕುರಿತು ಮಾರ್ಗಸೂಚಿ ಪಾಲನೆ ಮಾಡಬೇಕು. ಆ ಮಾರ್ಗಸೂಚಿ ಏನು ಎನ್ನುವುದರ ಬಗ್ಗೆ ಸ್ಪಷ್ಟ ಉತ್ತರಕ್ಕೆ ಒತ್ತಾಯಿಸಿ ಶೂನ್ಯವೇಳೆಯಲ್ಲಿ ಪ್ರಸ್ತಾಪ ಮಾಡಲು ರಾಯರೆಡ್ಡಿ ತೀರ್ಮಾನ ಮಾಡಿದ್ದಾರೆ.

ಇದನ್ನೂ ಓದಿ: Assembly Session : ಅಧಿವೇಶನದಲ್ಲಿ ನನಗೆ ಮೊದಲ ಸಾಲೇ ಬೇಕು; ಪಟ್ಟು ಹಿಡಿದಿರುವ ಎಚ್.ಡಿ. ರೇವಣ್ಣ!

ಸದನದಲ್ಲಿ ಈ ವಿಚಾರ ಪ್ರಸ್ತಾಪವಾದರೆ ಸಾವರ್ಕರ್‌ ಫೋಟೊವೂ ಸೇರಿದಂತೆ ಎಲ್ಲ ವಿಚಾರಗಳು ಚರ್ಚೆಗೆ ಬರಲಿವೆ. ಹೀಗಾಗಿ ಫೋಟೊ ರಾಜಕಾರಣಕ್ಕೆ ಹೊಸ ಸ್ವರೂಪ ಸಿಗುವ ಸಾಧ್ಯತೆಗಳು ದಟ್ಟವಾಗಿದೆ. ಯಾರ ಪೋಟೋ ಹಾಕಬೇಕು – ಯಾರ ಪೋಟೋ ತೆಗೆಯಬೇಕು ಅನ್ನುವ ಬಗ್ಗೆಯೂ ನಿರ್ಣಯ ಆಗುವ ಸಾಧ್ಯತೆ ಇದೆ.

ಹಾಗಿದ್ದರೆ ಸ್ಪೀಕರ್ ಯು.ಟಿ.ಖಾದರ್ ಅವರು ಈ ಸಂಬಂಧ ಸೂಕ್ತ ಕ್ರಮಕ್ಕೆ ಆದೇಶ ಮಾಡ್ತಾರಾ? ಏನಾದರೂ ಸಮಿತಿ ರಚನೆ ಮಾಡುತ್ತಾರಾ? ಸಭಾಂಗಣದಲ್ಲಿರುವ ಎಲ್ಲಾ ಫೋಟೊಗಳ ಭವಿಷ್ಯ ನಿರ್ಣಯ ಆಗುತ್ತದಾ? ಹೀಗೆ ಹಲವು ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ. ರಾಜ್ಯ ಕಾಂಗ್ರೆಸ್ ಶಾಸಕ ರಾಯರೆಡ್ಡಿ ಪ್ರಸ್ತಾವನೆ.

Exit mobile version