Site icon Vistara News

Assembly Session : ಬಿಜೆಪಿಯವರು ಇಷ್ಟು ದಿನ ಎಲ್ಲಿ ಹೋಗಿದ್ರು; ಜಮೀರ್‌ ಪ್ರಶ್ನೆ ‌

Zameer ahmad Khan about Speaker post

ಬೆಳಗಾವಿ: ಸ್ಪೀಕರ್‌ ಹುದ್ದೆಯ (Speaker Post) ವಿಚಾರದಲ್ಲಿ ಅಪಮಾನಕಾರಿ ಹೇಳಿಕೆ ನೀಡಿದ್ದಾರೆಂಬ ಆರೋಪದೊಂದಿಗೆ (Assembly Session) ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿರುವ (BJP Attack on Zameer Khan) ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ (Zameer Ahmad Khan) ಅವರು, ತನ್ನ ಹೇಳಿಕೆಗೆ ಬದ್ಧ, ಹೇಳಿಕೆಯಿಂದ ಹಿಂದೆ ಸರಿಯುವ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ (No chance of Resignation) ಎಂದು ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿ ಅಧಿವೇಶನ ಆರಂಭವಾಗಿ ಒಂದು ವಾರ ಕಳೆದಿದೆ. ಎರಡನೇ ವಾರದ ಆರಂಭದ ದಿನವೇ ಬಿಜೆಪಿ ಶಾಸಕರು ಜಮೀರ್‌ ಅಹಮದ್‌ ಖಾನ್‌ ಅವರನ್ನು ಸದನದಿಂದ ವಜಾ ಮಾಡಬೇಕು, ಅವರಿಗೆ ಸದನ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಸದನದಲ್ಲಿ ಗದ್ದಲವೆಬ್ಬಿಸಿದ್ದಾರೆ. ಸೋಮವಾರ ಮುಂಜಾನೆ ಸದನದಲ್ಲಿ ಈ ಸಂಬಂಧ ಭಾರಿ ಗಲಾಟೆ ನಡೆದಿದೆ. ಜಮೀರ್‌ ಅಹಮದ್‌ ಖಾನ್‌ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಲು ಮುಂದಾದಾಗ ಈ ಬಿಜೆಪಿ ನಾಯಕರು ಆಕ್ಷೇಪಿಸಿದ ಬಳಿಕ ಜಗಳ ತಾರಕಕ್ಕೆ ಏರಿದೆ. ಸ್ಪೀಕರ್‌ ಯು.ಟಿ. ಖಾದರ್‌ ಅವರು ಸದನವನ್ನು ಮುಂದೂಡಿ ಉಭಯ ನಾಯಕರ ಜತೆಗೆ ಸಂಧಾನ ಮಾತುಕತೆ ನಡೆಸಿದರೂ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಪಟ್ಟು ಸಡಿಲಿಸಲಿಲ್ಲ.

ತಮ್ಮ ರಾಜೀನಾಮೆ, ಪದಚ್ಯುತಿ, ವಜಾ ಮಾಡಬೇಕು ಎಂಬ ಬೇಡಿಕೆಗಳ ಬಗ್ಗೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿರುವ ಜಮೀರ್‌ ಅಹಮದ್‌ ಖಾನ್‌, ಬಿಜೆಪಿಯವರು ಇಷ್ಟು ದಿನ ಎಲ್ಲಿದ್ದರು ಎಂದು ಕೇಳಿದ್ದಾರೆ. ಹೈಕಮಾಂಡ್‌ನಿಂದ ಸೂಚನೆ ಬಂದಿರಬೇಕು. ಹೀಗಾಗಿ ಎಚ್ಚೆತ್ತುಕೊಂಡು ನನ್ನನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ನಾನು ತಪ್ಪು ಮಾಡಿಲ್ಲ, ಹೇಳಿಕೆಗೆ ಈಗಲೂ ಬದ್ಧ ಎಂದ ಜಮೀರ್

‌ವಿಧಾನ ಮಂಡಲದ ಅಧಿವೇಶನ ಡಿಸೆಂಬರ್‌ 4ಕ್ಕೆ ಆರಂಭಗೊಂಡಿದೆ. ಬಿಜೆಪಿಯವರು ಮೊದಲ ವಾರ ಏನೂ ಮಾತಾಡಿಲ್ಲ. ಎರಡನೇ ವಾರ ಅಂದರೆ ಸೋಮವಾರ ವಿಷಯ ಎತ್ತಿಕೊಂಡಿದ್ದಾರೆ. ಇದ್ದಕ್ಕೆ ಇದ್ದ ಹಾಗೆ ಈ ವಿಷಯ ಎತ್ತುಕೊಂಡಿರುವುದಕ್ಕೆ ಏನು ಕಾರಣ? ಎಂದು ಜಮೀರ್‌ ಅಹಮದ್‌ ಖಾನ್‌ ಪ್ರಶ್ನೆ ಮಾಡಿದ್ದಾರೆ.

ʻʻಬಿಜೆಪಿ ಅವರಿಗೆ ಬೇರೆ ಯಾವ ವಿಷಯವೂ ಇರಲಿಲ್ಲ. ಹಾಗಾಗಿ ಇವತ್ತು ಈ ವಿಷಯ ತೆಗೆದುಕೊಂಡಿದ್ದಾರೆ. ಸ್ಪಷ್ಟನೆ ಕೊಡಲು ನಾನು ಸಿದ್ಧವಾಗಿದ್ದೇನೆ. ಅದನ್ನು ಕೇಳಲು ಬಿಜೆಪಿಯವರು ರೆಡಿಯಾಗಿಲ್ಲ. ಬಿಜೆಪಿಯಲ್ಲಿ ಗೊಂದಲವಿದೆ. ಹೊಂದಾಣಿಕೆಯಿಲ್ಲ. ಅವರ ಹೈಕಮಾಂಡ್‌ ನಿಂದ ಸೂಚನೆ ಬಂದಿದೆ‌. ಹೀಗಾಗಿ ಮಾತನಾಡುತ್ತಿದ್ದಾರೆʼʼ ಎಂದು ಹೇಳಿರುವ ಜಮೀರ್‌ ಅಹಮದ್‌ ಖಾನ್‌, ನಾನೇನು ತಪ್ಪು ಮಾತನಾಡಿಲ್ಲ. ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ ಎಂದು ಹೇಳಿದರು.

ನಾನು ಹಿಂದುಗಳು ನಮಸ್ಕಾರ ಮಾಡಬೇಕು ಅಂತ ಹೇಳಿದ್ದೇನಾ?

ನಾ‌ನು ಏನು ತಪ್ಪು ಮಾತಾಡಿದ್ದೇನೆ? ಹೈದರಾಬಾದ್ ಸಭೆಯಲ್ಲಿ ಮಾತಾಡಿದ್ದೇನೆ. ಸಭೆಯಲ್ಲಿ ಯಾರೋ ಒಬ್ಬರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾನ ಅವಕಾಶ ಕೊಡಲ್ಲ ಅಂತ ಹೇಳಿದರು. ಅವರಿಗೆ ವಿವರಣೆ ಕೊಡುತ್ತಾ ಕೆಲವೊಂದು ಸತ್ಯ ಸಂಗತಿಗಳನ್ನು ವಿವರಿಸಿದೆ.

ನಿಮಗೆ ತಪ್ಪು ಭಾವನೆಯಿದೆ. ಕರ್ನಾಟಕದಲ್ಲಿ 17 ಮಂದಿ ಮುಸ್ಲಿಮರಿಗೆ ಟಿಕೆಟ್ ಕೊಟ್ಟಿದ್ದಾರೆ. ಅದರಲ್ಲಿ ಒಂಬತ್ತು ಜನ ಗೆದ್ದಿದ್ದಾರೆ. 9 ಮಂದಿಯಲ್ಲಿ ಐದು ಜನರಿಗೆ ಅಧಿಕಾರ ಕೊಟ್ಟಿದ್ದಾರೆ.. ನನ್ನನ್ನು, ರಹೀಮ್ ಖಾನ್‌ ಅವರನ್ನು ಮಂತ್ರಿ ಮಾಡಿದ್ದಾರೆ. ಸಲೀಂ ಅಹ್ಮದ್ ಅವರನ್ನು ಚೀಫ್ ವಿಪ್ ಮಾಡಿದ್ದಾರೆ. ನಜೀರ್ ಅಹ್ಮದ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಮಾಡಿದ್ದಾರೆ ಎಂದು ವಿವರಿಸಿದ್ದೆ.

ಕರ್ನಾಟಕದಲ್ಲಿ ಯುಟಿ ಖಾದರ್ ಅವರನ್ನು ಸ್ಪೀಕರ್ ಮಾಡಿದ್ದಾರೆ. ಸ್ಪೀಕರ್ ಅವರಿಗೆ ನನ್ನನ್ನು ಸೇರಿದಂತೆ ಬಿಜೆಪಿ ಅವರು ನಮಸ್ಕಾರ ಮಾಡಬೇಕು ಎಂದು ಹೇಳಿದ್ದೇನೆ. ಇದು ಹೇಗೆ ಅಪಮಾನ ಆಗುತ್ತದೆ? ಪೀಠಕ್ಕೆ ಎಲ್ಲರೂ ನಮಸ್ಕಾರ ಮಾಡಲೇ ಬೇಕು ತಾನೇ? ಕಾಂಗ್ರೆಸ್ ಪಕ್ಷ ಸ್ಪೀಕರ್ ಸ್ಥಾನ ಕೊಟ್ಟಿದೆ. ಯಾರೇ ಇದ್ದರೂ ಪೀಠಕ್ಕೆ ನಮಸ್ಕಾರ ಮಾಡಲೇಬೇಕು ತಾನೆ? ಅಂತಹಾ ಸ್ಥಾನ ಕಾಂಗ್ರೆಸ್ ಕೊಟ್ಟಿದೆ ಎಂದು ಹೇಳಿದ್ದೇನೆ. ಹಿಂದುಗಳು ನಮಸ್ಕಾರ ಮಾಡಬೇಕು ಎಂದು ನಾನು ಹೇಳಿದ್ದೀನಾ? ಎಂದು ಜಮೀರ್‌ ಖಾನ್‌ ಹೇಳಿದ್ದಾರೆ.

Exit mobile version