ಬೆಳಗಾವಿ: ಯು.ಟಿ. ಖಾದರ್ ಅವರು ವಿಧಾನಸಭೆಯ ಸ್ಪೀಕರ್ (Speaker UT Khader) ಆದ ಬಳಿಕ ಹೊಸ ಪದ್ಧತಿ ಶುರು ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಅಧಿವೇಶನಕ್ಕೆ ಶಾಸಕರು ತಡವಾಗಿ (Attendance Issue) ಬರುವುದನ್ನು ತಡೆಯಲು ಮೊದಲು ಬಂದವರಿಗೆ ಟೀ ಕಪ್ ಕೊಡುವುದು, ಹೆಸರು ಹೇಳುವುದು ಮೊದಲಾದ ಕ್ರಮಗಳಿಂದ ಸದನಕ್ಕೆ ಬೇಗ ಬರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಹೇಗಿದೆ ಎಂದರೆ ಶಾಸಕರು ನಾ ಮುಂದು ತಾ ಮುಂದು ಎಂಬಂತೆ ಬೇಗ ಬೇಗನೆ ಬರುತ್ತಿದ್ದಾರೆ, ಮಾತ್ರವಲ್ಲ, ನಾನು ಬೇಗ ಬಂದಿದ್ದೀನಿ, ನನ್ನ ಹೆಸರು ಹೇಳಿಲ್ಲ ಎಂದು ಮಕ್ಕಳಂತೆ ವರಾತ ತೆಗೆಯಲು ಶುರು ಮಾಡಿದ್ದಾರೆ!
ಗುರುವಾರ ಕಲಾಪ ಆರಂಭದಲ್ಲೂ ಹೀಗೇ ಆಯಿತು. ಸ್ಪೀಕರ್ ಯು.ಟಿ. ಖಾದರ್ ಅವರು ಸದನದ ಕಲಾಪ ಆರಂಭವಾಗುತ್ತಿದ್ದಂತೆಯೇ ಸದನಕ್ಕೆ ಸಮಯಕ್ಕೆ ಸರಿಯಾಗಿ ಬಂದ ಸದಸ್ಯರ ಹೆಸರನ್ನು ಅವರು ಓದಿ ಹೇಳಿದರು. ಆದರೆ, ಇದನ್ನು ಕೇಳಿದ ಶಾಸಕರು ನಾನೂ ಟೈಮಿಗೆ ಸರಿಯಾಗಿ ಬಂದಿದ್ದೇನೆ, ನನ್ನ ಹೆಸರು ಯಾಕೆ ಹೇಳ್ತಿಲ್ಲ ಎಂದು ಜಗಳ ಶುರು ಮಾಡಿದರು.
ಹೀಗೆ ವರಾತ ತೆಗೆದವರು ಸಣ್ಣ ಸಣ್ಣ ನಾಯಕರೇನೂ ಅಲ್ಲ. ಹಿಂದೆ ಗೃಹ ಸಚಿವರಾಗಿದ್ದ ಆರಗ ಜ್ಞಾನೇಂದ್ರ ಅವರು ಕೂಡಾ ಇದ್ದಾರೆ. ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ್ದನ್ನು ನೋಡಿದ ಅವರು, ನಾನು ಸಮಯಕ್ಕೆ ಸರಿಯಾಗಿ ಬಂದಿದ್ದೇನೆ, ನನ್ನನ್ನು ಯಾಕೆ ಗುರುತಿಸಿಲ್ಲ ಎಂದು ಸ್ಪೀಕರ್ ಅವರನ್ನು ಕೇಳಿದ್ದಾರೆ. ಅವರಲ್ಲದೆ ಇನ್ನೂ ಹಲವರು ಇದೇ ವಾದ ಮಾಡಿದರು.
ಆಗ ಯು.ಟಿ. ಖಾದರ್ ಅವರು, ಸದನ ಆರಂಭಕ್ಕೆ ಕೋರಂ ಬೇಕು ಅಲ್ವಾ? ಕೋರಂ ಭರ್ತಿಗೆ ಮೊದಲ 25 ಸದಸ್ಯರನ್ನು ಅಧಿಕಾರಿಗಳು ನೋಟ್ ಮಾಡಿ ಪಟ್ಟಿ ಕೊಡ್ತಾರೆ. ಸಿಸಿ ಕ್ಯಾಮೆರಾದಲ್ಲಿ ಎಲ್ಲವೂ ನೋಟ್ ಆಗಿರುತ್ತದೆ. ಏನಾದರೂ ಸಂಶಯ ಇದ್ದರೆ ನಿಮ್ಮನ್ನು ಕರೆಸಿ ಚೆಕ್ ಮಾಡ್ತೇವೆ, ಅನ್ಯಾಯ ಆದರೆ ನ್ಯಾಯ ಕೊಡ್ತೇವೆ ಎಂದು ಹೇಳಿದರು.
ಸಮಯಕ್ಕೆ ಮೊದಲು ಬರುವ ಎಲ್ಲರನ್ನೂ ಪರಿಗಣಿಸಿ
ಈ ವೇಳೆ ಮಧ್ಯ ಪ್ರವೇಶ ಮಾಡಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಧ್ಯಪ್ರವೇಶ ಮಾಡಿದರು. ಈಗ ಕೋರಂ ಆಗುವವರೆಗೆ ಬರುವ ಸದಸ್ಯರನ್ನು ಮಾತ್ರ ಲೆಕ್ಕ ಹಾಕಲಾಗುತ್ತದೆ. ನಂತರ ಬರುವವರನ್ನೂ ಪರಿಗಣಿಸುತ್ತಿಲ್ಲ. ಆದರೆ ಕೋರಂ ಬಿಟ್ಟು ತಾವು ಸದನ ಆರಂಭಕ್ಕೆ ಮೊದಲು ಯಾರೇ ಬಂದರು ಪರಿಗಣಿಸಿ ಎಂದು ಮನವಿ ಮಾಡಿದರು.
ಆಗ ತಮಾಷೆಯಾಗಿ ಕಾಳೆದ ಯು.ಟಿ. ಖಾದರ್ ಅವರು, ಅಶೋಕ್ ಅವರೇ ಇದನ್ನು ನೀವು ಸ್ಪೀಕರ್ ಆದಾಗ ಅದನ್ನೂ ಮಾಡಿ ಎಂದು ಹೇಳಿದರು. ಇಷ್ಟು ಹೊತ್ತಿಗೆ ಮಧ್ಯ ಪ್ರವೇಶ ಮಾಡಿದ ಸುನಿಲ್ ಕುಮಾರ್ ಅವರು, ನಿಮ್ಮ ಹಾಗೂ ಅಶೋಕ್ ಗೆಳೆತನ ಚೆನ್ನಾಗಿದೆ ಎಂದು ಬಹಿರಂಗವಾಯಿತು. ಅಶೋಕ್ ಸ್ಪೀಕರ್ ಆಗಬೇಕು ಎಂದು ನೀವು ಹೇಳಿದ್ದನ್ನು ಅನುಮೋದಿಸುತ್ತೇನೆ ಎಂದರು.
ಯು.ಟಿ. ಖಾದರ್ ಅವರು ಯಾರೆಲ್ಲ ಸಮಯಕ್ಕೆ ಸರಿಯಾಗಿ ಹಾಜರಾಗಿದ್ದಾರೆ ಎಂದು ಪಟ್ಟಿ ಓದಿ ಹೇಳುವುದರಿಂದ ಉಳಿದವರು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂಬ ಸಂದೇಶ ಕ್ಷೇತ್ರಕ್ಕೆ ರವಾನೆಯಾದರೆ ತಮ್ಮ ಕಥೆ ಏನು ಎನ್ನುವುದು ಎಲ್ಲ ಶಾಸಕರಿಗೂ ಆತಂಕ ಮೂಡಿಸಿದೆ. ಹೀಗಾಗಿ ಎಲ್ಲರೂ ತಾಮುಂದು, ನಾ ಮುಂದು ಎಂಬಂತೆ ಬರುತ್ತಿದ್ದಾರೆ!
ಇದನ್ನೂ ಓದಿ: UT Khader: ಉಡುಪಿ ಶ್ರೀಕೃಷ್ಣನಲ್ಲಿಗೆ ಸ್ಪೀಕರ್ ಖಾದರ್ ಭೇಟಿ; ಪ್ರಾರ್ಥಿಸಿದ್ದೇನು?
ವಿಧಾನಸಭೆಗೆ ಶಾಸಕರ ಹಾಜರಾತಿ ಕೊರತೆ
ಅಂದ ಹಾಗೆ ಕಲಾಪ ಆರಂಭದ ಹೊತ್ತಿನಲ್ಲಿ ಕಾಂಗ್ರೆಸ್ ನಿಂದ 55, ಬಿಜೆಪಿಯಿಂದ 40 ಮತ್ತು ಜೆಡಿಎಸ್‌ನಿಂದ 10 ಶಾಸಕರು ಹಾಜರಾಗಿದ್ದರು. ಉಳಿದವರು ಗೈರು ಹಾಜರಾಗಿದ್ದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ಜನಪ್ರತಿನಿಧಿಗಳು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹೋಗಿದ್ದರು.