ಇದೊಂದು ಫ್ಯಾಷನ್ ಪ್ರಿಯ ಆಮೆ! ಇದಕ್ಕೆ ಕಪ್ಪು ಶೂ ಕಂಡರೆ ಆಗುವುದಿಲ್ಲವಂತೆ. ತನ್ನ ಏರಿಯಾದಲ್ಲಿ, ಯಾರೊಬ್ಬರೂ ಕಪ್ಪು ಶೂ ಹಾಕಿದ್ದು ಕಂಡರೆ ಸೀದಾ ಹೋಗಿ ಅವರ ಮೇಲೆ ದಾಳಿ ಮಾಡುತ್ತದಂತೆ. ೧೨ ವರ್ಷದ ಈ ಸಾಕುಪ್ರಾಣಿ ಆಮೆ ಇದೀಗ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್ಸು!
ಕೆಲವೊಮ್ಮೆ ಪ್ರಾಣಿಗಳ ಚಿತ್ರ ವಿಚಿತ್ರ ನಡೆಗಳ ಹಿಂದಿನ ಕಾರಣ ಮನುಷ್ಯರಿಗೆ ಅರ್ಥವಾಗುವುದಿಲ್ಲ. ಇದೂ ಅಂಥದ್ದೇ ಒಂದು ವಿಚಿತ್ರವಾದ ನಡತೆ. ಹೌದು. ಕಪ್ಪು ಶೂಗೂ ಆಮೆಗೂ ಸಂಬಂಧವೇನು, ಯಾಕೆ ಆಮೆ ಹೀಗೆ ಮಾಡುತ್ತಿದೆ ಎಂದು ಕೇಳಿದರೆ ಯಾರಿಗೂ ಉತ್ತರ ಮಾತ್ರ ಗೊತ್ತಿಲ್ಲ. ಆದರೆ ಕಪ್ಪು ಶೂ ಮಾತ್ರ ಹಾಕಿದವರಿಗೆ ಸರಿಯಾದ ಪಾಠವನ್ನಂತೂ ಇದು ಕಲಿಸುತ್ತಿದೆ. ೨೪ರ ಹರೆಯದ ಕೇಂಬ್ರಿಡ್ಜ್‌ಶೈರ್‌ನ ಹ್ಯಾರಿ ವೀನ್ಸ್ ಎಂಬಾತ ಈ ವಿಚಾರವನ್ನು ಹಂಚಿಕೊಂಡಿದ್ದು, ತನ್ನ ಅಜ್ಜಿಯ ತೋಟದಲ್ಲಿ ಇರುವ ಟಾಮಿ ಶೆಲ್ಬಿ ಎಂಬ ಆಮೆಗಾಗಿ ನಾನು ಶೂ ಹಾಕುವುದನ್ನೇ ಬಿಟ್ಟು ಬರಿಗಾಲಲ್ಲಿ ನಡೆಯುತ್ತೇನೆ. ಯಾವಾಗ ನಾನು ಕಪ್ಪು ಶೂ ಹಾಕುತ್ತೇನೋ ಆಗ ಅದು ನನ್ನ ಮೇಲೆ ದಾಳಿ ಮಾಡುತ್ತದೆ ಎಂದು ಹೇಳಿದ್ದಾನೆ.
ಅಜ್ಜಿಯ ಮನೆಯಲ್ಲಿ ನಾನು ಕೆಲಸದವರ ಜೊತೆಗೆ ಉದ್ಯಾನದಲ್ಲಿ ಹೂಗಿಡಗಳ ಆರೈಕೆ ಮಾಡಲು ಹೋದರೆ ಈ ಆಮೆ ಓಡಿ ಬರುತ್ತದೆ. ನಾನೇನಾದರೂ ಕಪ್ಪು ಶೂ ಹಾಕಿದ್ದರೆ ತನ್ನ ತಲೆಯಿಂದ ಸೀದಾ ಅಟ್ಯಾಕ್ ಮಾಡಿಬಿಡುತ್ತದೆ. ತನ್ನ ಚಿಪ್ಪಿನಿಂದ ಕಾಲಿನ ಮೂಳೆಗೆ ಹೊಡೆದುಬಿಡುತ್ತದೆ. ಇದರಿಂದ ಬಹಳ ನೋವೂ ಆಗುತ್ತದೆ. ಹಾಗಾಗಿ ಇತ್ತೀಚೆಗೆ ನಾನಂತೂ ಕಪ್ಪು ಶೂ ಹಾಕಲು ಭಯಪಡುತ್ತೇನೆ ಎಂದಿದ್ದಾನೆ.
೮೨ರ ಹರೆಯದ ಅಜ್ಜಿಯ ತೋಟದಲ್ಲಿ ವಾಸವಾಗಿರುವ ಈ ಆಮೆಯ ಮೇಲೆ ಕೆಲಸಗಾರರು ಪ್ರಯೋಗಗಳನ್ನೂ ಮಾಡಿದ್ದಾರೆ. ಕಪ್ಪು ಶೂ ಹಾಕಿದಾಗ ಅದರ ನಡತೆಯನ್ನೂ, ಬಿಳಿ ಅಥವಾ ಬೇರೆ ಬಣ್ಣದ ಶೂ ಹಾಕಿದಾಗ ಅದರ ನಡತೆಯನ್ನೂ ತುಲನೆ ಮಾಡಿದ್ದು ಇವುಗಳಲ್ಲಿ ಭಾರೀ ವ್ಯತ್ಯಾಸ ಕಂಡಿದೆ. ಬಿಳಿ ಬಣ್ಣದ ಶೂವನ್ನು ಈ ಆಮೆ ಇಷ್ಟಪಡುತ್ತಿದ್ದು, ಕಪ್ಪು ಮಾತ್ರ ಕಂಡರಾಗುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ | Viral news | ಫ್ರೀಜರ್ ತುಂಡಿನಲ್ಲಿ ತೇಲುತ್ತಾ 11 ದಿನ ಸಮುದ್ರದಲ್ಲಿ ಬದುಕುಳಿದ!
ಹ್ಯಾರಿ ಮಾತ್ರ ತಮಾಷೆಯಾಗಿ, ಈ ಟಾಮಿಗೆ ವಿಶೇಷವಾದ ಫ್ಯಾಷನ್ ಅಭಿರುಚಿಯಿದ್ದು ಇದು ನನಗೆ ಯಾವ ಬಣ್ಣದ ಶೂ ಚೆನ್ನಾಗಿ ಒಪ್ಪುತ್ತದೆ ಎಂದು ಕರೆಕ್ಟಾಗಿ ಹೇಳುತ್ತದೆ. ಅದರ ಪ್ರಕಾರ ಕಪ್ಪು ಬಣ್ಣದ ಶೂ ನನಗೆ ಒಪ್ಪುವುದೇ ಇಲ್ಲವಂತೆ. ಬಿಳಿ ಬಣ್ಣದ ಶೂ ಹಾಕಿದರೆ ನೋಡು ನೀನು ಎಷ್ಟು ಸುಂದರವಾಗಿ ಕಾಣುತ್ತಿ ಎಂದು ಹೇಳಲು ಪಾಪ ಪ್ರಯತ್ನ ಪಡುತ್ತಿರಬಹುದು, ಯಾರಿಗ್ಗೊತ್ತು! ಪಾಪ ಅದರ ಭಾವನೆ ನಮಗೆ ಅರ್ಥವಾಗುವುದಿಲ್ಲ ಅಷ್ಟೆ ಎಂದಿದ್ದಾನೆ.
ಇದು ನಿಜವಾಗಿಯೂ ತಮಾಷೆಯಲ್ಲ. ಸತ್ಯ. ಹ್ಯಾರಿ ಸ್ವತಃ ಹಲವು ಶೂಗಳನ್ನು ಆಮೆಯ ಎದುರಿಟ್ಟು ಪ್ರಯೋಗಗಳನ್ನೂ ಮಾಡಿದ್ದಾನೆ. ಮೊದಮೊದಲು ಶೂಗಳೇ ಈ ಆಮೆಗೆ ಕಂಡರಾಗದು ಅಂದುಕೊಂಡಿದ್ದೆ, ಆದರೆ ಆಮೇಲೆ, ಇದು ಕೇವಲ ಕಪ್ಪು ಶೂಗೆ ಮಾತ್ರ ಮಾಡುತ್ತಿದೆಯಾ ಎಂಬ ಅನುಮಾನ ಬಂತು. ಅದಕ್ಕಾಗಿ ಬೇರೆ ಬಣ್ಣದ, ಬಿಳಿಯ ಬಣ್ಣದ ಶೂಗಳನ್ನು ಕಪ್ಪು ಬಣ್ಣದ್ದರ ಜೊತೆಗೆ ಸಾಲಾಗಿ ಇಟ್ಟು ಈ ಆಮೆಯ ಮೇಲೆ ಪ್ರಯೋಗವನ್ನೂ ಮಾಡಿದೆ. ಆಗೆಲ್ಲ, ಈ ಹನ್ನೆರಡು ವರ್ಷದ ಟಾಮಿ ಆಮೆ, ಬೇರೆ ಬಣ್ಣದ ಎಷ್ಟೇ ಶೂಗಳು ಕಣ್ಣ ಮುಂದಿದ್ದರೂ ಸೀದಾ ಹೋಗಿ ಕಪ್ಪು ಬಣ್ಣದ ಶೂಗೇ ಆಕ್ರಮಣ ಮಾಡುವುದು ನೋಡಿ, ಇದಕ್ಕೆ ಕಪ್ಪು ಬಣ್ಣ ಕಂಡರೆ ಆಗುವುದಿಲ್ಲ ಎಂಬ ಸತ್ಯ ತಿಳಿಯಿತು ಎನ್ನುತ್ತಾನೆ.
ಅಜ್ಜಿಯ ಮನೆಯಲ್ಲಿ ಕೂತು ಟಾಮಿಯ ಮೂಲಕ ಫ್ಯಾಷನ್ ಅಡ್ವೈಸ್ ಸಿಗುತ್ತಿರುವುದು ಮಾತ್ರ ತಮಾಷೆಯಾಗಿದೆ ಎಂದು ಹ್ಯಾರಿ ನಗೆಯಾಡಿದ್ದಾನೆ. ಸದ್ಯ, ಅಜ್ಜಿಯ ಈ ಸಾಕುಪ್ರಾಣಿ ಟಾಮಿ ಆಮೆ, ಇಂಟರ್ನೆಟ್ ಜಗತ್ತಿನಲ್ಲಿ ಸಕತ್ ಫೇಮಸ್ ಆಗಿದ್ದು, ಮಿಲಿಯಗಟ್ಟಲೆ ಫ್ಯಾನುಗಳನ್ನು ಸಂಪಾದಿಸಿದೆಯಂತೆ!
ಇದನ್ನೂ ಓದಿ | Guinness world record | ಓಡುತ್ತಿರುವ ಕಾರಿನ ಚಕ್ರ ಬದಲಿಸಿ ಗಿನ್ನೆಸ್ ದಾಖಲೆ!