ಕೋಲ್ಕೊತಾ: ಪ್ರೀತಿ ಕಾಲೇಜಿನಲ್ಲಿ, ಕಚೇರಿಯಲ್ಲಿ, ಬಸ್ಸಿನಲ್ಲಿ, ರೈಲಿನಲ್ಲಿ ಹೀಗೆ ಎಲ್ಲಿ ಬೇಕಾದರೂ ಹುಟ್ಟಬಹುದು. ಈ ರೀತಿಯ ಕಥೆಗಳನ್ನು ನೀವು ಈಗಾಗಲೇ ಕೇಳಿರುತ್ತೀರಿ. ಆದರೆ ಪಶ್ಚಿಮ ಬಂಗಾಳದಲ್ಲಿ ವಿಚಿತ್ರ ಎನ್ನುವಂತ ಪ್ರೇಮ ಕಥೆಯೊಂದು ಹುಟ್ಟಿಕೊಂಡಿದೆ. ಜೈಲಿನಲ್ಲಿರುವ ಇಬ್ಬರು ಕೈದಿಗಳ ನಡುವೇ ಪ್ರೀತಿ ಹುಟ್ಟಿದ್ದು, ಅವರಿಬ್ಬರ ಮದುವೆಯೂ ನಡೆದುಹೋಗಿದೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ (Viral News) ಸುದ್ದಿಯಲ್ಲಿ.
ಭೀರ್‌ಭೂಮ್ ನಿವಾಸಿಯಾಗಿರುವ ಶಹನಾರಾ ಖಾತುನ್ ಕೊಲೆ ಆರೋಪದಲ್ಲಿ ಕಳೆದ ಆರು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಹಾಗೆಯೇ ಅಸ್ಸಾಂ ಮೂಲದ ಅಬ್ದುಲ್ ಹಾಸಿಮ್ ಕೂಡ ಕೊಲೆ ಆರೋಪದಲ್ಲಿ ಕಳೆದ ಎಂಟು ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಇಬ್ಬರೂ ಕೈದಿಗಳು ಪಶ್ಚಿಮ ಬಂಗಾಳದ ಬರ್ಧಮಾನ್ ಕೇಂದ್ರ ತಿದ್ದುಪಡಿ ಸಂಸ್ಥೆಯಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ: Video Viral : ಸೈದಾಪುರದಲ್ಲಿ ಸೀರೆ ಕದ್ದ ನಾರಿಯರಿಗೆ ಧರ್ಮದೇಟು!
ಪರಿಚಯವೇ ಇರದ ಈ ಇಬ್ಬರ ಕುಟುಂಬ ಒಮ್ಮೆ ಒಂದೇ ಸಮಯದಲ್ಲಿ ಅವರನ್ನು ಭೇಟಿ ಮಾಡಲು ಬಂದಿತ್ತಂತೆ. ಆಗ ಅಬ್ದುಲ್ ಮತ್ತು ಶಹನಾರಾಗೆ ಪರಿಚಯವಾಗಿದೆ. ದಿನ ಕಳೆದಂತೆ ಆ ಪರಿಚಯ ಸ್ನೇಹವಾಗಿದೆ. ಸ್ನೇಹ ಪ್ರೀತಿಯಾಗಲು ಹೆಚ್ಚು ದಿನ ಬೇಕಾಗಿರಲಿಲ್ಲ.
ಇಬ್ಬರೂ ಪ್ರೀತಿಯಲ್ಲಿ ಬಿದ್ದ ಮೇಲೆ ಮದುವೆ ಆಗುವ ನಿರ್ಧಾರ ಮಾಡಿದ್ದಾರೆ. ಅದರ ಬಗ್ಗೆ ಕುಟುಂಬದೊಂದಿಗೆ ಮಾತನಾಡಿದ್ದಾರೆ ಕೂಡ. ಎರಡೂ ಕುಟುಂಬಗಳು ಒಪ್ಪಿದ ಮೇಲೆ ಐದು ದಿನಗಳ ಮಟ್ಟಿಗೆ ಪೆರೋಲ್ ಪಡೆದು ಹೊರಗೆ ಬಂದಿದ್ದಾರೆ. ಬರ್ಧಮಾನ್‌ನ ಮಾಂಟೆಸ್ವರ್ ಬ್ಲಾಕ್‌ನ ಕುಸುಮ್‌ಗ್ರಾಮದಲ್ಲಿ ಇಬ್ಬರೂ ಮುಸ್ಲಿಂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪೆರೋಲ್ ಮುಗಿದ ನಂತರ ಇಬ್ಬರೂ ಜೈಲಿಗೆ ದಂಪತಿಯಾಗಿ ವಾಪಸಾಗಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ: Viral Video : ಕೋಯಿ ಲಡಕೀ ಹೈ ಎನ್ನುತ್ತ ಕುಣಿದ ಅಜ್ಜ! ಬೆರಗಾದ ನೆಟ್ಟಿಗರು
ನಮ್ಮಿಬ್ಬರಿಗೆ ಜೈಲಿನಲ್ಲೇ ಪ್ರೀತಿಯಾಯಿತು. ಜೈಲು ಶಿಕ್ಷೆ ಮುಗಿದ ನಂತರ ಎಲ್ಲರಂತೆ ದಂಪತಿಯಾಗಿ ಬದುಕಬೇಕು ಎನ್ನುವ ಆಸೆಯಿದೆ. ಕತ್ತಲ ಬದುಕು ಮುಗಿದ ನಂತರ ಸಾಮಾನ್ಯರಂತೆ ಬದುಕುತ್ತೇವೆ ಎಂದು ನವ ದಂಪತಿ ಹೇಳಿಕೊಂಡಿದ್ದಾರೆ.