ಪ್ರವಾಸ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದರೂ ಮನಸೋ ಇಚ್ಛೆ ಪ್ರವಾಸ ಮಾಡಲು ಬಹುತೇಕರಿಗೆ ಸಾಧ್ಯವಾಗುವುದಿಲ್ಲ. ʻಹಲ್ಲಿದ್ದವನಿಗೆ ಕಡಲೆ ಸಿಗುವುದಿಲ್ಲ, ಕಡಲೆ ಸಿಕ್ಕಿದವನಿಗೆ ಹಲ್ಲಿರುವುದಿಲ್ಲʼ ಎಂಬ ಗಾದೆಯಂತೆ, ಮನೆಯಲ್ಲಿ ಖಾಲಿ ಕೂತಿದ್ದರೂ ದುಡ್ಡಿಲ್ಲ, ದುಡ್ಡಿದ್ದರೂ ಕೆಲಸದ ಒತ್ತಡ ಎಂದು ಪ್ರವಾಸ ಮಾಡಲಾಗದೇ ಒದ್ದಾಡುವವರೇ ಹೆಚ್ಚು. ಇಂಥದ್ದರಲ್ಲಿ ಇತ್ತೀಚೆಗೆ ಕೊರೋನಾ ಯುಗದಲ್ಲಿ ಬಹಳಷ್ಟು ಮಂದಿ ವರ್ಕ್ ಫ್ರಂ ಹೋಂ ನೆಪದಲ್ಲಿ, ತಮಗೆ ಬೇಕಾದ ಪ್ರವಾಸೀ ಸ್ಥಳದಲ್ಲಿ ತಿಂಗಳುಗಟ್ಟಲೆ ಕುಳಿತು ಕೆಲಸ ಮಾಡುವ ಪ್ರವೃತ್ತಿ ಬೆಳೆಸಿಕೊಂಡು ಮನಸ್ಸಿದ್ದಲ್ಲಿ ಮಾರ್ಗ ಎಂದು ಕಂಡುಕೊಂಡಿದ್ದಾರೆ.
ಆದರೂ ಎಲ್ಲರಿಗೂ ಸಾಧ್ಯವಾಗುವ ವಿಚಾರ ಇದಲ್ಲ. ಅನೇಕರಿಗೆ ಮನಸ್ಸಿದ್ದರೂ ಮಾಡಲು ಸಾಧ್ಯವಾಗುವುದಿಲ್ಲ. ಅಂಥದ್ದರಲ್ಲಿ ಕೆಲಸ ಮಾಡುವ ಸಂಸ್ಥೆಯೇ ನಿಮ್ಮ ಎದುರೊಂದು ಐಷಾರಾಮಿ ಹಾಲಿಡೇ ಪ್ಯಾಕೇಜೊಂದನ್ನು ಇಟ್ಟು, ಎಲ್ಲರೂ ಜೊತೆಯಾಗಿ ಕೆಲಸ ಮಾಡುತ್ತಾ ಹಾಲಿಡೇ ಮಾಡೋಣ ಎಂದರೆ!? ಯಾರಿಗುಂಟು ಯಾರಿಗಿಲ್ಲ ಈ ಜಾಕ್‌ಪಾಟ್ ಅಂತ ಒಂದೇ ಬಾರಿಗೆ ಕುಣಿದು ಕುಪ್ಪಳಿಸಿ ಈ ಅವಕಾಶವನ್ನು ಮಾತ್ರ ಹೆಂಗಾದರೂ ಸರಿ ಬಳಸಿಕೊಳ್ಳಲೇಬೇಕು ಎಂದು ಸರದಿಯಲ್ಲಿ ನಾ ಮುಂದು ತಾ ಮುಂದು ಎಂದು ನಿಲ್ಲುವುದಿಲ್ಲವೇ! ಆದರೂ ಇಂಥದ್ದೆಲ್ಲ ನಡೆಯುವುದುಂಟಾ ಎಂದು ನೀವು ವಾಸ್ತವ ಲೋಕಕ್ಕೆ ಬಂದರೆ, ನಿಜಕ್ಕೂ ಇಲ್ಲೊಂದು ವಿಶಿಷ್ಟ ಆದರೂ ಸತ್ಯ ಎಂಬಂಥ ಇಂಥದ್ದೇ ಘಟನೆ ನಡೆದಿದೆ.
ಸೂಪ್ ಏಜೆನ್ಸಿ ಎಂಬ ಸಿಡ್ನಿಯಲ್ಲಿರುವ ಆಸ್ಟ್ರೇಲಿಯನ್ ಮೂಲದ ಡಿಜಿಟಲ್ ಮಾರ್ಕೆಟಿಂಗ್ ಕಂಪನಿಯೊಂದು ತನ್ನೆಲ್ಲ ನೌಕರರನ್ನು ಎರಡು ವಾರಗಳ ಬಾಲಿ ಪ್ರವಾಸಕ್ಕೆ ಕರೆದುಕೊಂಡು ಹೋಗಿರುವುದು ಸದ್ಯಕ್ಕೀಗ ಇಂಟರ್ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೇವಲ ಒಬ್ಬರೋ ಇಬ್ಬರೋ, ಅಥವಾ ಆಯ್ಕೆ ಮಾಡಿದ ಒಂದು ಟೀಮ್ ಅನ್ನು ಕರೆದೊಯ್ಯುವುದು ಹಲವೆಡೆ ಚಾಲ್ತಿಯಲ್ಲಿದ್ದರೂ, ತನ್ನ ಎಲ್ಲ ನೌಕರರ ಎಲ್ಲ ಖರ್ಚುವೆಚ್ಚಗಳನ್ನು ಭರಿಸಿ ಐಷಾರಾಮಿ ಪ್ರವಾಸಕ್ಕೆ ಬಾಲಿ ಐಲ್ಯಾಂಡ್‌ಗೆ ಕರೆದೊಯ್ದಿರುವುದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಕಂಪನಿಯೀಗ ಎಲ್ಲರ ಫೇವರಿಟ್ ಕಂಪನಿಯಾಗಿದ್ದು ಇದರ ಬಾಸ್‌ಗೆ ʻಜಗತ್ತಿನ ಅತ್ಯುತ್ತಮ ಬಾಸ್ʼ ಎಂದು ಹೆಸರಿಟ್ಟು ಜನರು ಜಾಲತಾಣಗಳಲ್ಲಿ ಹೊಗಳುತ್ತಿದ್ದಾರೆ.
ಈ ಕಂಪನಿ ತನ್ನ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಹಂಚಿಕೊಂಡ ವಿಡಿಯೋ ಇದೀಗ ವೈರಲ್ ಆಗಿದ್ದು, ಈ ಸಂಸ್ಥೆಯ ನೌಕರರೆಲ್ಲರೂ, ಚಾರಣ, ಪ್ರತಿದಿನ ಮಾಡುತ್ತಿದ್ದ ಯೋಗ, ಈಜುಕೊಳದಲ್ಲಿ ಮೋಜು ಮಸ್ತಿ, ತಿನ್ನುವುದು ಹಾಗೂ ಕುಡಿಯುವುದನ್ನು ಜೊತೆಯಾಗಿ ಮಾಡಿದ್ದು, ಇವೆಲ್ಲವುಗಳ ಜತೆ ಎಲ್ಲರೂ ಸೇರಿ ಕೆಲಸವನ್ನೂ ಮಾಡಿದ್ದಾರೆ. ಕಚೇರಿಯಲ್ಲಿ ಕೆಲಸ ಮಾಡುವಂತೆಯೇ ಬಾಲಿಯಲ್ಲೂ ಒಂದು ನಿರ್ದಿಷ್ಟ ಸಮಯದಲ್ಲಿ ಕೆಲಸ ನಿರ್ವಹಿಸಿದ್ದು, ಉಳಿದ ಸಮಯದಲ್ಲಿ ಮನಸ್ಸಿಗೆ ಉಲ್ಲಾಸ ನೀಡುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ʻನಮ್ಮ ಸಂಸ್ಥೆಯ ಮೊದಲ ವರ್ಕಿಂಗ್ ಹಾಲಿಡೇʼ ಎಂದು ಸಂಸ್ಥೆ ತನ್ನ ವಿಡಿಯೋಗೆ ಟೈಟಲ್ ನೀಡಿದ್ದು, ಮಿಲಿಯಗಟ್ಟಲೆ ಜನರು ನೋಡಿ ಖುಷಿಪಟ್ಟಿದ್ದಾರೆ.
ಹಲವಾರು ಮಂದಿ ಇದಕ್ಕೆ ಪ್ರತಿಕ್ರಿಯಿಸುತ್ತಿದ್ದು, ʻನನಗಾದರೂ ಇಂಥದ್ದೊಂದು ಸಂಸ್ಥೆಯಲ್ಲಿ ಕೆಲಸ ಸಿಕ್ಕಿದ್ದಿದ್ದರೆʼ ಎಂದು ಅನೇಕರು ಕಾಮೆಂಟಿಸಿದ್ದಾರೆ. ಇನ್ನೂ ಕೆಲವರು, ʻಕೆಲಸ ಖಾಲಿ ಇದ್ಯಾ?ʼ ಎಂದೂ ತಮಾಷೆ ಮಾಡಿದ್ದಾರೆ.
ಲಾಸ್ ವೇಗಾಸ್‌ನ ಕ್ಯಾಸಿನೊ ಒಂದು ತನ್ನ ೫೪೦೦ ಮಂದಿ ನೌಕರರಲ್ಲಿ ಪ್ರತಿಯೊಬ್ಬರಿಗೂ ತಲಾ ೫೦೦೦ಡಾಲರ್ (೩.೮೬ ಲಕ್ಷ ರೂ) ಬೋನಸ್ ನೀಡಿ ಸರ್ಪ್ರೈಸ್ ನೀಡಿತ್ತು. ಇದೂ ಅಂಥದ್ದೇ ಒಂದು ವಿಶಿಷ್ಟ ಪ್ರಕರಣವಾಗಿದ್ದು ಎಲ್ಲರೂ ಕಂಪನಿಯ ಬಾಸನ್ನು ಕೊಂಡಾಡುತ್ತಿದ್ದಾರೆ. ನೌಕರರನ್ನು ಖುಷಿಯಾಗಿಟ್ಟುಕೊಳ್ಳುವುದು ಹೀಗೂ ಸಾಧ್ಯ ಎಂದು ತೋರಿಸಿಕೊಟ್ಟಿದೆ.
ಇದನ್ನೂ ಓದಿ: Solo Travel: ಸೋಲೋ ಪ್ರವಾಸ ಗೆಲ್ಲೋಕೆ 15 ಸೂತ್ರಗಳು!