ಸಾಮಾಜಿಕ ಜಾಲತಾಣವೆಂಬುದು ವೈವಿಧ್ಯಗಳ ಆಗರ. ಇಲ್ಲಿ ಎಲ್ಲ ರೀತಿಯ ವಿಡಿಯೋಗಳು-ವಿಷಯಗಳು ವೈರಲ್ ಆಗುತ್ತಿರುತ್ತವೆ. ಫನ್ನಿ, ಭಾವನಾತ್ಮಕ, ಕಣ್ಣಲ್ಲಿ ನೀರು ತರಿಸುವ, ಕೋಪ ತರಿಸುವ, ಹತಾಶೆ ಮೂಡಿಸುವ-ಹೀಗೆ ವಿವಿಧ ಭಾವಗಳನ್ನು ಕಟ್ಟಿಕೊಡುವ ವಿಡಿಯೋಗಳನ್ನು-ಪೋಸ್ಟ್ಗಳನ್ನು ನಾವು ಆಗಾಗ ನೋಡುತ್ತಿರುತ್ತವೆ. ಹಾಗೇ ಈಗೊಂದು ಕರುಳು ಕಿವುಚುವ ದೃಶ್ಯ ಇನ್ಸ್ಟಾಗ್ರಾಂನಲ್ಲಿ ತುಂಬ ಹರಿದಾಡುತ್ತಿದೆ.
ಅದೊಂದು ಎರಡು ವರ್ಷದ ಮಗು. ಆ ಪುಟಾಣಿ ಬಾಲಕನ ಅಮ್ಮ ತೀರಿಕೊಂಡಿದ್ದಾಳೆ. ಆಕೆಯನ್ನು ಮಣ್ಣಿನಡಿ ಹೂಳಲಾಗಿದೆ. ಸಮಾಧಿಯ ಮೇಲ್ಭಾಗವನ್ನು ಮಣ್ಣಿನಿಂದ ಮುಚ್ಚಲಾಗಿದೆ. ಆ ಮಗುವಿಗೆ ನನ್ನ ಅಮ್ಮ ಕಾಣುತ್ತಿಲ್ಲ ಎಂಬುದು ಅರ್ಥವಾಗುತ್ತಿದ್ದರೂ, ಆಕೆ ಎಲ್ಲಿ ಹೋದಳು ಎಂಬುದು ಗೊತ್ತಾಗುತ್ತಿಲ್ಲ. ಸೀದಾ ಅಜ್ಜಿಯ ಬಳಿ ಹೋಗಿ ಅಮ್ಮ ಎಲ್ಲಿ ಎಂದು ಕೇಳುತ್ತಿದ್ದ. ಅಜ್ಜಿಯಾದರೂ ಎಷ್ಟೆಂದು, ಏನು ಹೇಳಿ ಅವನನ್ನು ಸಮಾಧಾನ ಮಾಡುತ್ತಾರೆ?-ಅವನ ತಾಯಿಯನ್ನು ಹೂತ ಜಾಗಕ್ಕೆ ಕರೆದುಕೊಂಡು ಹೋಗಿ, ‘ನಿನ್ನಮ್ಮ ಇದೇ ಮಣ್ಣಿನಡಿ ಮಲಗಿದ್ದಾಳೆ, ಅಳಬೇಡ‘ ಎಂದು ಹೇಳಿದ್ದಾರೆ. ಆದರೆ ಬಾಲಕ ಸುಮ್ಮನಾಗದೆ, ಆ ಮಣ್ಣಿನ ಸಮಾಧಿಗೆ ಒಂದು ಕಿಂಡಿ ಮಾಡಿಕೊಂಡು ಅದರಲ್ಲಿ ಮುಖವಿಟ್ಟು, ನೋಡುತ್ತ ‘ಅಮ್ಮಾ..ಅಮ್ಮಾ’ ಎಂದು ಕರೆದಿದ್ದಾನೆ. ಅಲ್ಲಿಂದ ತನ್ನಮ್ಮ ಕಾಣಿಸಬಹುದಾ ಎಂಬ ಮಹದಾಸೆ ಅವನದು. ಎಷ್ಟು ಕರೆದರೂ ಅಮ್ಮನಿಂದ ಪ್ರತಿಕ್ರಿಯೆ ಬರದಾಗ ‘ಅಮ್ಮಾ…‘ಎನ್ನುತ್ತ ಅತ್ತಿದ್ದಾನೆ. ಈ ವಿಡಿಯೋ ನೋಡಿದರೆ ನಮಗೂ ಕಣ್ಣಲ್ಲಿ ನೀರು ಬಾರದೆ ಇರದು.
ವಿಡಿಯೋ ನೋಡಿದ ನೆಟ್ಟಿಗರೂ ಕೂಡ ಅಳುವ ಸ್ಮೈಲಿ ಹಾಕಿಯೇ ಕಮೆಂಟ್ ಮಾಡಿದ್ದಾರೆ. ‘ಹೃದಯ ವಿದ್ರಾವಕ ವಿಡಿಯೋ ಇದು‘ ಎಂದು ಒಬ್ಬರು ಹೇಳಿದ್ದರೆ, ‘ಆ ಮಗುವನ್ನು ಅಪ್ಪಿಕೊಂಡು ಸಂತೈಸಬೇಕೆನ್ನಿಸುತ್ತಿದೆ‘ ಎಂದು ಮತ್ತೊಬ್ಬರು ಹೇಳಿದ್ದಾರೆ. ‘ಮಗುವಿಗೆ ತಿಳಿವಳಿಕೆ ಬರುವುದಕ್ಕೂ ಮೊದಲು ಇನ್ನೊಂದು ಮದುವೆಯಾಗಿ‘ ಎಂದು ಬಾಲಕನ ತಂದೆಗೆ ಸಲಹೆಯನ್ನೂ ಕೊಟ್ಟಿದವರಿದ್ದಾರೆ.
ಇದನ್ನೂ ಓದಿ: Viral Video | ಗರಗಸ ಹಚ್ಚಿದವನ ಮೇಲೆ ಪ್ರತೀಕಾರ ತೀರಿಸಿಕೊಂಡ ಮರ! ಕರ್ಮ ಫಲವೆಂದ ನೆಟ್ಟಿಗರು