ಲಕ್ನೋ: ಸೀರೆಗಳ ಬೆಲೆ ಎಷ್ಟಿರುತ್ತದೆ? ನೂರರಿಂದ ಲಕ್ಷದವರೆಗೂ ಸೀರೆಗಳು ಸಿಗುತ್ತವೆ. ಮದುವೆಗೆಂದು ವಧುವಿಗೆ ಎರಡು-ಮೂರು ಲಕ್ಷ ರೂ. ಬೆಲೆಯ ಸೀರೆ ಖರೀದಿಸುವವರೂ ಇದ್ದಾರೆ. ಆದರೆ ಅದೇ ಸೀರೆಯ ಬೆಲೆ 21 ಲಕ್ಷ ರೂ. ಆಗಿಬಿಟ್ಟರೆ?! ಅಷ್ಟು ದುಬಾರಿಯ ಸೀರೆಗಳು ಇರಲು ಸಾಧ್ಯವೇ ಎಂದು ಯೋಚಿಸುವವರು ಈ ಸುದ್ದಿಯನ್ನೊಮ್ಮೆ (Viral News) ಓದಿ.
ಉತ್ತರ ಪ್ರದೇಶದ ಲಕ್ನೋದಲ್ಲಿ ಇಂಥದ್ದೊಂದು ದುಬಾರಿ ಸೀರೆ ಸಿದ್ಧವಾಗಿ ಮಾರಾಟಕ್ಕಿಡಲಾಗಿದೆ. ಅಂದ ಹಾಗೆ ಇದು ಅಂತಿಂಥ ಸೀರೆಯಲ್ಲ. ಹಲವಾರು ವಿಶೇಷತೆಗಳು ಈ ಸೀರೆಗಿದೆ. ಅದಾ ಡಿಸೈನರ್ ಚಿಕನ್ ಸ್ಟುಡಿಯೋದಲ್ಲಿ ಈ ಸೀರೆಯನ್ನು ತಯಾರಿಸಲಾಗಿದೆ. ಈ ಸೀರೆ ತಯಾರಿಕೆಗೇ ಬರೋಬ್ಬರಿ ಎರಡು ವರ್ಷ ತಗುಲಿದೆಯಂತೆ.
ಇದನ್ನೂ ಓದಿ: Viral Video: ಈಗೇಕೆ ಬಂದಿದ್ದೀರಿ? ನೆರೆ ಬಂದಾಗ ಕ್ಷೇತ್ರ ನೆನಪಾದ ಶಾಸಕನ ಕಪಾಳಕ್ಕೆ ಏಟು ಕೊಟ್ಟ ಮಹಿಳೆ!
ಸ್ಟೋರ್ ಮ್ಯಾನೇಜರ್ ಆಗಿರುವ ಹೈದರ್ ಅಲಿ ಖಾನ್ ಅವರು ಈ ದುಬಾರಿ ಸೀರೆಯನ್ನು ಎರಡು ವರ್ಷಗಳ ಹಿಂದೆಯೇ ಆರ್ಡರ್ ಕೊಟ್ಟಿದ್ದರು. ಅದು ಈಗ ತಯಾರಾಗಿ ಅಂಗಡಿಗೆ ಬಂದಿದೆ. ಬಿಳಿ ಬಣ್ಣದ ಈ ಸೀರೆಯನ್ನು ಮಾಡುವಾಗ ಕಣ್ಣಿಗೆ ಸಾಕಷ್ಟು ಕೆಲಸ ಕೊಟ್ಟಂತಾಗಿದೆಯಂತೆ. ಸೀರೆಯ ತುಂಬ ಚಿಕನ್ಕಾರಿ ಥ್ರೆಡ್ ವರ್ಕ್ ಮತ್ತು ಜರಿ ವರ್ಕ್ ಮಾಡಲಾಗಿದೆ. ಇದರಲ್ಲಿ ಹಲವಾರು ಮುತ್ತುಗಳನ್ನೂ ಬಳಸಲಾಗಿದೆ. ಹಾಗೆಯೇ ಸ್ವರೋವ್ಸ್ಕಿ ಹರಳುಗಳನ್ನೂ ಬಳಸಲಾಗಿದೆ. ಈ ಸೀರೆಯಲ್ಲಿನ ಕಲೆಗೆ ಬಳಸಲಾಗಿರುವ ಬಹುತೇಕ ವಸ್ತುಗಳನ್ನು ಜಪಾನ್‌ನಿಂದ ಆಮದು ಮಾಡಿಕೊಳ್ಳಲಾಗಿದೆ.
ಇದು ಸದ್ಯಕ್ಕೆ ಲಕ್ನೋದ ರಾಯಲ್ ಸೀರೆ ಎನ್ನುವ ಹೆಗ್ಗಳಿಕೆಯನ್ನೂ ಪಡೆದುಕೊಂಡಿದೆ. ಸೀರೆಯನ್ನು ಹೊಳೆಯುವಂತೆ ಮಾಡುವುದಕ್ಕೆ ಹಲವಾರು ಹರಳುಗಳನ್ನು ಬಳಸಿಕೊಳ್ಳಲಾಗಿದೆ. ಈ ಸೀರೆಯ ಬಾರ್ಡರ್ ಕೂಡ ಹಲವು ವಿಶೇಷತೆಗಳಿಂದ ಕೂಡಿದೆ. ಹಗಲು ರಾತ್ರಿ ಕುಳಿತುಕೊಂಡು ಬಾರ್ಡರ್ ಅನ್ನು ಕೈಯಾರೆ ತಯಾರಿಸಲಾಗಿದೆ. ಕೇವಲ ಬಾರ್ಡರ್ ತಯಾರಿಕೆಗೇ ಬರೋಬ್ಬರಿ ಎರಡೂವರೆ ಲಕ್ಷ ರೂ. ಖರ್ಚಾಗಿದೆಯಂತೆ.
ಇದನ್ನೂ ಓದಿ: Viral News: ತೂಕ ಹೆಚ್ಚಾಯ್ತೆಂದು 19 ಪ್ರಯಾಣಿಕರನ್ನು ಕೆಳಗಿಳಿಸಿ ಹೊರಟು ಹೋದ ವಿಮಾನ!
ಇದಲ್ಲದೆ ಹೈದರ್ ಅಲಿ ಅವರ ಅಂಗಡಿಯಲ್ಲಿ 10 ಲಕ್ಷ ರೂ. ಬೆಲೆ ಬಾಳುವ ಸೀರೆಯೂ ಇದೆಯಂತೆ. ಅದನ್ನು ದುಬೈನ ಕುಟುಂಬವೊಂದು ಮದುವೆಗೆಂದು ಖರೀದಿಸಿದೆಯಂತೆ. ಹಾಗಾಗಿ ಅದೇ ಬೆಲೆಯ ಮತ್ತೊಂದು ಸೀರೆ ನಿರ್ಮಾಣಕ್ಕೆ ಆರ್ಡರ್ ಕೊಡಲಾಗಿದೆಯಂತೆ.