Site icon Vistara News

Viral news | ಐದು ಟನ್‌ಗಳ ಈ ಬೃಹತ್‌ ರುದ್ರವೀಣೆ ತಯಾರಾದದ್ದು ಕಸದಿಂದ!

rudraveena

ಕಸದಿಂದ ರಸ ಅಂತಾರಲ್ಲ, ಅದಕ್ಕೆ ಇದು ಅತ್ಯುತ್ತಮ ಉದಾಹರಣೆ. ಕಲಾವಿದರ ಕೈಗೆ ಕಸ ಸಿಕ್ಕರೂ ಅದು ಏನೋ ಕಲಾಕೃತಿ ಆಗಿ ರೂಪಾಂತರಗೊಳ್ಳುವ ಪ್ರಕ್ರಿಯೆಯೇ ವಿಸ್ಮಯ. ಇದೀಗ ಭೋಪಾಲ್‌ ತ್ಯಾಜ್ಯಕ್ಕೀಗ ಕಲಾಕೃತಿಯಾಗುವ ಯೋಗ ಬಂದಿದೆ. ಅದೂ ಅಂತಿಂಥ ಕಲಾಕೃತಿಯಲ್ಲ. ರುದ್ರವೀಣೆ!

ಮಧ್ಯಪ್ರದೇಶದ ಭೋಪಾಲ್‌ನ ಕಲಾವಿದರ ಗುಂಪೊಂದು ತ್ಯಾಜ್ಯದಿಂದಲೇ ಐದು ಟನ್‌ಗಳಷ್ಟು ಭಾರದ ಬೃಹತ್‌ ರುದ್ರವೀಣೆಯೊಂದನ್ನು ತಯಾರಿಸಿದ್ದಾರೆ! ಈ ವೀಣೆ ೨೮ ಅಡಿಗಳಷ್ಟು ಉದ್ದವಿದ್ದು, ೧೦ ಅಡಿಗಳಷ್ಟು ಅಗಲವೂ ೧೨ ಅಡಿಗಳಷ್ಟು ಎತ್ತರವೂ ಇರುವ ಭಾರೀ ಗಾತ್ರವನ್ನು ಹೊಂದಿದೆ. ಈ ರುದ್ರವೀಣೆ ತಯಾರಿಸಲು ಸುಮಾರು ೧೦ ಲಕ್ಷ ರುಪಾಯಿಗಳು ಖರ್ಚಾಗಿದ್ದು, ಆರು ತಿಂಗಳ ಕಾಲ ಕಲಾವಿದರು ಇದಕ್ಕೆ ರೂಪ ಕೊಡಲು ಶ್ರಮಿಸಿದ್ದಾರೆ.

ವೀಣೆಯನ್ನು ನಿರ್ಮಿಸಲು ವಾಹನಗಳಲ್ಲಿ ಬಳಸಿ ಎಸೆದ ವೈರು, ಚೈನ್‌, ಗೇರ್‌, ಬಾಲ್‌ ಬೇರಿಂಗ್‌ ಮುಂತಾದವುಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಸಂಗ್ರಹಿಸಿ ಬಳಸಲಾಗಿದೆಯಂತೆ. ೧೫ ಕಲಾವಿದರು ಹಗಲಿರುಳು ಈ ಕಲಾಕೃತಿ ರೂಪುಗೊಳ್ಳಲು ಶ್ರಮಿಸಿದ್ದು, ಕೊನೆಗೂ ಆರು ತಿಂಗಳ ಬಳಿಕ ಈ ಬೃಹತ್‌ ಗಾತ್ರದ ವೀಣೆಗೆ ಜೀವ ಬಂದಿದೆ.

ಖಾಸಗಿ ಸುದ್ದಿ ಸಂಸ್ಥೆಯೊಂದರ ಜೊತೆಗೆ ಮಾತನಾಡಿರುವ ಈ ಕಲಾಕೃತಿ ಮಾಡಿದ ಕಲಾವಿದರುಗಳಲ್ಲಿ ಒಬ್ಬರಾದ ಪವನ್‌ ದೇಶಪಾಂಡೆ, ಈ ರುದ್ರವೀಣೆಯನ್ನು ʻಕಬಾಡ್‌ ಸೇ ಕಾಂಚನ್‌ʼ (ಕಸದಿಂದ ರಸ) ಹೆಸರಿನಡಿ ತಯಾರಿಸಲಾಗಿದ್ದು, ಸುಮಾರು ೧೫ ಮಂದಿ ನಾವು ಕಲಾವಿದರು ಇದಕ್ಕಾಗಿ ಶ್ರಮಿಸಿದ್ದೇವೆ. ಇದಕ್ಕಾಗಿ, ಹಲವಾರು ಹಾಳಾದ, ಗುಜರಿ ವಸ್ತುಗಳನ್ನು ಸಂಗ್ರಹಿಸಿದ್ದು ಸುಮಾರು ಆರು ತಿಂಗಳು ಕೆಲಸ ಮಾಡಿದ್ದೇವೆ. ಕೊನೆಗೂ ಇವೆಲ್ಲ ಶ್ರಮದ ಪ್ರತಿಫಲ ಇಂದು ಕಾಣುತ್ತಿದೆ. ಅದಕ್ಕಾಗಿ ಖುಶಿಯಿದೆ ಎಂದಿದ್ದಾರೆ.

ಇದನ್ನೂ ಓದಿ | Viral news | ಕುರ್ಕುರೆ ಪ್ಯಾಕೆಟ್‌ಗಳಲ್ಲಿ 500 ರೂ. ನೋಟುಗಳು ಪತ್ತೆ, ಖರೀದಿಗೆ ಮುಗಿಬಿದ್ದ ಜನ!

ಮುಂದಿನ ಜನಾಂಗ ಭಾರತದ ಸಾಂಸ್ಕೃತಿಕ ಹಾಗೂ ಪಾರಂಪರಿಕ ವಿಚಾರಗಳ ಬಗ್ಗೆ ತಿಳುವಳಿಕೆ ಹೊಂದಬೇಕು. ನಾವು ಇಲ್ಲಿ ರುದ್ರವೀಣೆಯನ್ನು ತಯಾರಿಸಬೇಕೆಂದು ಅಂದುಕೊಂಡಿದ್ದೂ ಇದೇ ಕಾರಣಕ್ಕೆ. ಮುಂದಿನ ಜನಾಂಗ ನಮ್ಮ ದೇಶದ ಅತ್ಯದ್ಭುತ ಕಲೆ, ಸಂಸ್ಕೃತಿಯನ್ನು ತಿಳಿದುಕೊಳ್ಳಲಿ, ಅವರಿಗೆ ಕುತೂಹಲ ಹುಟ್ಟಲಿ ಎಂಬ ಕಾರಣಕ್ಕೆ. ರುದ್ರವೀಣೆಯೇ ಒಂದು ವಿಶೇಷ ತಂತಿವಾದ್ಯವಾಗಿದ್ದು, ಇದರ ಬಗ್ಗೆ ಮುಂದಿನ ಜನಾಂಗಕ್ಕೂ ತಿಳುವಳಿಕೆ ಬೇಕು ಎಂದು ಹೇಳಿದರು.

ಈ ವಿಶೇಷ ರುದ್ರವೀಣೆಯ ಕಲಾಕೃತಿಯನ್ನು ಭೋಪಾಲ್‌ ನಗರದ ಮಧ್ಯಭಾಗದ ಅಟಲ್‌ ಪಥ್‌ ಎಂಬ ಜಾಗದಲ್ಲಿ ಪ್ರತಿಷಷ್ಠಾಪಿಸಲಾಗುವುದು. ಜನರು ಪ್ರವಾಸಿಗರು ಇದರ ಜೊತೆಗೆ ಸೆಲ್ಫಿಗಳನ್ನು ತೆಗೆಯಬಹುದು. ಇದನ್ನು ಇನ್ನೂ ಆಕರ್ಷಕವಾಗಿ ಕಾಣಿಸಲು ಇದಕ್ಕೆ ಲೈಟಿಂಗ್‌ ಹಾಗೂ ಮ್ಯೂಸಿಕ್‌ ಅಳವಡಿಸುವ ಚಿಂತನೆಯೂ ಇದೆ ಎಂದು ಅವರು ಹೇಳಿದ್ದಾರೆ.

ಈ ಕಲಾವಿದರ ತಂಡ ಹೇಳಿಕೊಂಡಂತೆ, ಈಷ್ಟರವರೆಗೆ ಇಷ್ಟು ದೊಡ್ಡ ವೀಣೆಯ ಕಲಾಕೃತಿಯನ್ನು ಯಾರೂ ಎಲ್ಲೂ ಮಾಡಿಲ್ಲ. ಕೇವಲ ಭೋಪಾಲಿನಲ್ಲಷ್ಟೇ ಅಲ್ಲ, ಇಡೀ ವಿಶ್ವದಲ್ಲೇ ಇದು ಬೃಹತ್‌ ವೀಣೆಯಾಗಿದೆ. ಅಷ್ಟೇ ಅಪರೂಪದ ವಿಶೇಷ ಕಲಾಕೃತಿಯೂ ಹೌದು.

ದೇಶಪಾಂಡೆ ಹಾಗೂ ತಂಡ ʻರಿಯೂಸ್‌, ರಿಸೈಕಲ್‌, ರೆಡ್ಯೂಸ್‌ʼ ಎಂಬ ಧ್ಯೇಯದೊಂದಿಗೆ ಹಲವು ಕಲಾಯೋಜನೆಗಳನ್ನು ಮಾಡುತ್ತಿವೆ. ಈ ಹಿಂದೆ ಕೊರೋನಾ ಬಗ್ಗೆ ಜಾಗೃತಿ ಮೂಡಿಸಲು ಬೃಹತ್ ವ್ಯಾಕ್ಸಿನ್‌ ಸಿರಿಂಜ್‌ ಹಾಗೂ ಮಾಸ್ಕ್‌ನ ಪ್ರತಿಕೃತಿಯನ್ನು ನಿರ್ಮಿಸಿತ್ತು. ಈವರೆಗೆ ಈ ತಂಡ ೩೦,೦೦೦ ಎಸೆದ ಪ್ಲಾಸ್ಟಿಕ್‌ ಬಾಟಲಿಗಳು, ಐದು ಟನ್‌ಗಳಷ್ಟು ವಾಹನಗಳ ತ್ಯಾಜ್ಯಗಳು, ಎಸೆದ ಟಾಯ್ಲೆಟ್‌ಗಳು, ಮುರಿದ ಬಾಗಿಲುಗಳು ಸೇರಿದಂತೆ ಹಲವಾರು ಬಗೆಯ ಹಳೆಯ ವಸ್ತುಗಳನ್ನೇ ಬಳಸಿ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ. ಈ ವೀಣೆಯೂ ಅಂಥದ್ದೇ ಪ್ರಕಾರದ ತ್ಯಾಜ್ಯದಿಂದಲೇ ನಿರ್ಮಿತವಾದುದಾಗಿದ್ದು, ಈವರೆಗೆ ಈ ತಂಡ ಮಾಡಿದ ಕಲಾಕೃತಿಗಳ ಪೈಕಿ, ಇದು ಪ್ರಮುಖವಾದುದಾಗಿದೆ.

ಇದನ್ನೂ ಓದಿ | Viral news | ಮಹಾರಾಷ್ಟ್ರದಲ್ಲಿ ಬೆಡ್‌ರೂಂ, ತೆಲಂಗಾಣದಲ್ಲಿ ಕಿಚನ್!‌ ಎರಡು ರಾಜ್ಯದಲ್ಲಿ ಒಂದೇ ಮನೆ!

Exit mobile version