ಬೆಂಗಳೂರು: ಚಿರತೆ, ಸಿಂಹ, ಹುಲಿಗಳೆಲ್ಲ ಯಾವುದಾದರೂ ಪ್ರಾಣಿ ಮೇಲೆ ದಾಳಿ ಮಾಡಿದರೆ ಆ ಪ್ರಾಣಿಯ ಕಥೆ ಮುಗಿದಂತೆ. ಅದಕ್ಕೇ ಕಾಡಿನ ಎಲ್ಲ ಪ್ರಾಣಿಗಳು ಈ ಪ್ರಾಣಿಗಳನ್ನು ಕಂಡರೆ ಭಯದಿಂದ ಓಡುತ್ತವೆ. ಚಿರತೆ ಬೇರೆ ಪ್ರಾಣಿಗಳನ್ನು ಅಟ್ಟಾಡಿಸಿಕೊಂಡು ಹೋಗಿ ದಾಳಿ ಮಾಡುವ ಅನೇಕ ವಿಡಿಯೊಗಳನ್ನೂ ನೀವು ನೋಡಿರುತ್ತೀರಿ. ಆದರೆ ಈ ವಿಡಿಯೊ ಆ ರೀತಿಯದ್ದಲ್ಲ. ದಾಳಿ ಮಾಡಲು ಬಂದ ಚಿರತೆಯ ಮೇಲೆ ಮಂಗಗಳೇ ದಾಳಿ ಮಾಡಿ ಹೆದರಿಸಿ ಓಡಿಸುವ ಅಚ್ಚರಿಯ ವಿಡಿಯೊವಿದು. ಈ ವಿಡಿಯೊ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದ್ದು, ಭಾರೀ ವೈರಲ್ (Viral Video) ಆಗಿದೆ.
ದಕ್ಷಿಣ ಆಫ್ರಿಕಾದ ರಸ್ತೆಯೊಂದರ ಮೇಲೆ ಮಂಗಗಳ ಜಾತಿಯಾದ ಬಬೂನ್ಸ್‌ನ ದೊಡ್ಡ ಹಿಂಡೇ ಕುಳಿತಿರುತ್ತದೆ. ಆ ಹಿಂಡನ್ನು ಕಂಡು ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನಗಳು ಕೂಡ ವಾಹನದ ಗ್ಲಾಸ್ ಏರಿಸಿಕೊಂಡು ಸುಮ್ಮನೆ ನಿಲ್ಲಿಸಿಕೊಂಡಿದ್ದವು. ಅಷ್ಟೊತ್ತಿಗೆ ಸೈಡಿನಿಂದ ಚಿರತೆಯೊಂದು ಮಂಗಗಳ ಮೇಲೆ ದಾಳಿ ನಡೆಸಿ ಮಾಂಸ ತಿನ್ನುವ ಆಸೆಯಲ್ಲಿ ಮುಂದೆ ಬರುತ್ತದೆ. ಒಮ್ಮೆಲೆ ಮಂಗಗಳ ಗುಂಪಿನತ್ತ ಜಿಗಿದು ಒಂದು ಮಂಗವನ್ನು ಬಾಯಲ್ಲಿ ಕಚ್ಚಿಕೊಳ್ಳಲು ಯತ್ನಿಸುತ್ತದೆ. ಅಷ್ಟರಲ್ಲಿ ಎಚ್ಚರಗೊಳ್ಳುವ ಮಂಗಗಳ ಗುಂಪು ಒಮ್ಮೆಲೆ ಎಲ್ಲವೂ ಒಟ್ಟಿಗೆ ಚಿರತೆಯ ಮೇಲೆ ದಾಳಿ ನಡೆಸುತ್ತವೆ.
ಇದನ್ನೂ ಓದಿ: Viral News : ಸ್ಮಾರ್ಟ್ ಬೆಂಗಳೂರಿನಲ್ಲಿ ಆಟೊ ಚಾಲಕರೂ ಸ್ಮಾರ್ಟ್! ವಾಚ್‌ನಲ್ಲಿ ಕ್ಯೂಆರ್ ಕೋಡ್!
ಚಿರತೆಯನ್ನು ರಸ್ತೆಯ ಮೇಲೆ ಕೆಡವಿಕೊಂಡು ಹೊಡೆಯಲಾರಂಭಿಸುತ್ತದೆ. ಊಟದ ಆಸೆಯಿಂದ ಬಂದಿದ್ದ ಚಿರತೆ ಭಯದಿಂದ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನ ಮಾಡಲಾರಂಭಿಸುತ್ತದೆ. ಕಷ್ಟ ಪಟ್ಟು ಮೇಲಕ್ಕೆ ಎದ್ದು ಅಲ್ಲಿಂದ ಕಾಲ್ಕೀಳುತ್ತದೆ. ಆದರೂ ಬಿಡದ ಮಂಗಗಳ ಗುಂಪು ಚಿರತೆಯನ್ನು ಅಟ್ಟಿಸಿಕೊಂಡು ಓಡುತ್ತದೆ. ಚಿರತೆ ಕಣ್ಣಿಗೆ ಕಾಣದಷ್ಟು ದೂರ ಓಡಿ ಹೋದ ಮೇಲೆ ಮಂಗಗಳು ತಮ್ಮ ಪಾಡಿಗೆ ತಾವು ಸುಮ್ಮನಾಗುತ್ತದೆ.
ಈ ವಿಡಿಯೊವನ್ನು ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡಿದ್ದ ಪ್ರಯಾಣಿಕರು ಚಿತ್ರೀಕರಣ ಮಾಡಿದ್ದಾರೆ. ವಿಡಿಯೊವನ್ನು ಲೇಟೆಸ್ಟ್ ಸೈಟಿಂಗ್ಸ್ ಹೆಸರಿನ ಯೂಟ್ಯೂಬ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೊ ಚಿತ್ರೀಕರಣ ಮಾಡಿದವರ ಹೆಸರು ರಿಕಿ ಡಾ ಫೊನ್ಸೆಕಾ ಎಂದು ವಿಡಿಯೊದ ವಿವರಣೆಯಲ್ಲಿ ತಿಳಿಸಲಾಗಿದೆ.
ಈ ವಿಡಿಯೊವನ್ನು ಲೇಟೆಸ್ಟ್ ಸೈಟಿಂಗ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಆಗಸ್ಟ್ 15ರಂದು ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ 2.6 ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆಗೊಂಡಿದೆ. ನೂರಾರು ಮಂದಿ ವಿಡಿಯೊ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Viral video: ಮೋದಿಯಿಂದ ಫ್ರೀ ಸಿಲಿಂಡರ್ ಸಿಗ್ತು ಎಂದ ತರಕಾರಿ ಮಾರಾಟಗಾರ ರಾಮೇಶ್ವರ್; ರಾಹುಲ್ ಗಾಂಧಿಗೆ ಫಜೀತಿ!
“ಮಂಗಗಳ ಗುಂಪಿನ ಮೇಲೆ ದಾಳಿ ಮಾಡಲು ಬಂದವನೇ ದಾಳಿಯಾಗಿಬಿಟ್ಟ. ನನಗೆ ಚಿರತೆಗಳೆಂದರೆ ತುಂಬ ಇಷ್ಟ. ಆದರೆ ಈ ವಿಡಿಯೊದಲ್ಲಿ ಮಂಗಗಳ ಟೀಂ ವರ್ಕ್ ನೋಡಿ ತುಂಬಾನೇ ಸಂತೋಷವಾಯಿತು. ಜೋರಾಗಿ ದಾಳಿ ಮಾಡುವುದೇ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮಾಡಬಲ್ಲ ದೊಡ್ಡ ಉಪಾಯ”, “ಅಬ್ಬಬಾ, ನಮಗೂ ಇಷ್ಟು ಧೈರ್ಯ ಬಂದುಬಿಡಬೇಕು”, “ಮಂಗಗಳಲ್ಲಿ ಇರುವ ಒಗ್ಗಟ್ಟು ಮನುಷ್ಯರಲ್ಲಿ ಇಲ್ಲ”, “ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದಕ್ಕೆ ಈ ವಿಡಿಯೊ ಉತ್ತಮ ಉದಾಹರಣೆ” ಎನ್ನುವಂತಹ ಬಗೆ ಬಗೆಯ ಕಾಮೆಂಟ್‌ಗಳನ್ನು ನೀವು ಇಲ್ಲಿ ನೋಡಬಹುದಾಗಿದೆ.