ಹಾವು ಎಂದರೆ ಸಾಕು, ನಮ್ಮಲ್ಲಿ ಅನೇಕರಿಗೆ ನಡುಕ ಬರುತ್ತದೆ. ವಿಷಯಕಾರಿ ಸರೀಸೃಪ ಇದು ಕಣ್ಣೆದುರು ಸುಮ್ಮನೆ ಸರಿದು ಹೋದರೂ ಸಾಕು ಭಯವಾಗುತ್ತದೆ. ಹಾವುಗಳು ಮನೆಯೊಳಗೆ ಬರುವುದು, ದಿನಗಟ್ಟಲೇ ಮನೆಯೊಳಗೆ ಇದ್ದು, ನಮ್ಮ ಜೀವವನ್ನು ಬಾಯಿಗೆ ತರುವುದು ಹೊಸದಲ್ಲ. ಆದರೆ ಅಂಥ ಹಾವು ನಮ್ಮ ಹಾಸಿಗೆಗೇ (Snake On Bed) ಬಂದು ಬಿಟ್ಟರೆ ಏನಾಗಬೇಡ?!
ಆಸ್ಟ್ರೇಲಿಯಾದ ಕ್ವೀನ್ಲ್ಯಾಂಡ್ನ ಮಹಿಳೆಯೊಬ್ಬರಿಗೆ ಇಂಥ ಅನುಭವ ಆಗಿದೆ. ಬೆಡ್ಶೀಟ್ ಬದಲಿಸಲು ಬೆಡ್ರೂಮ್ಗೆ ಹೋದ ಆಕೆ ಹೌಹಾರಿದ್ದಾಳೆ. ಸುಮಾರು 6 ಅಡಿ ಉದ್ದದ, ಅತ್ಯಂತ ವಿಷಕಾರಿ, ಕಂದು ಬಣ್ಣದ ಹಾವೊಂದು ಆಕೆಯ ಬೆಡ್ಮೇಲೆ ಮಲಗಿತ್ತು. ಮಹಿಳೆ ಕೋಣೆಗೆ ಕಾಲಿಡುತ್ತಿದ್ದಂತೆ ಅದು ಕಂಬಳಿಯ ಅಡಿಯಲ್ಲಿ ನುಸುಳಿತು. ಮಹಿಳೆ ಕೂಡಲೇ ಬಾಗಿಲು ಕ್ಲೋಸ್ ಮಾಡಿದ್ದಾಳೆ. ಹಾವು ಯಾವುದೇ ಜಾಗದ ಮೂಲಕ ಹೊರಬೀಳದಂತೆ ಎಚ್ಚರಿಕೆ ವಹಿಸಿ, ಕೂಡಲೇ ಹಾವು ಹಿಡಿಯುವವನಿಗೆ ಕರೆ ಮಾಡಿದ್ದಾರೆ.
ಮಹಿಳೆಯ ಮನೆಗೆ ಹೋದ ಸ್ನೇಕರ್ ಜಚೆರಿ ರಿಚರ್ಡ್ಸ್ ಆ ಹಾವನ್ನು ಹಿಡಿದಿದ್ದಾರೆ. ಬಳಿಕ ಮಾತನಾಡಿ ‘ನಾನು ಹೋಗುವಷ್ಟರಲ್ಲಿ ಮಹಿಳೆ ಹೊರಗೇ ನಿಂತಿದ್ದರು. ನಾನೊಬ್ಬನೇ ಬೆಡ್ ರೂಮಿಗೆ ಹೋದೆ. ಹಾವು ಎಲ್ಲಿಂದಲೂ ಹೊರಗೆ ಹೋಗದಂತೆ ಆಕೆ ಖಾಲಿ ಜಾಗದಲ್ಲೆಲ್ಲ ಟವೆಲ್ ಇಟ್ಟಿದ್ದಳು. ನಾನು ರೂಮಿಗೆ ಕಾಲಿಟ್ಟಾಗ ಹಾವು ಬೆಡ್ ಮೇಲೆ ಆರಾಮಾಗಿ ಮಲಗಿತ್ತು. ನನ್ನನ್ನು ನೋಡಿತು‘ ಎಂದು ಹೇಳಿಕೊಂಡಿದ್ದಾರೆ. ಬಿಳಿ ಬಣ್ಣದ ಬೆಡ್ಶೀಟ್, ತಲೆದಿಂಬುಗಳಿರುವ ಬೆಡ್ ಮೇಲೆ, ಕಂದುಬಣ್ಣದ ಉದ್ದನೆಯ ಹಾವು ಪವಡಿಸಿರುವ ಫೋಟೋವನ್ನು ಅವರು ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Brave daughter : ಹಾವು ಕಡಿತಕ್ಕೆ ಒಳಗಾದ ತಾಯಿಯನ್ನು ಬಾಯಿಯಿಂದ ವಿಷ ಹೊರಗೆಳೆದು ರಕ್ಷಿಸಿದ ಮಗಳು
ಈ ಮನೆ ಸುತ್ತಮುತ್ತ ಸ್ವಲ್ಪ ಕಾಡು ಇದೆ. ಯಾವಾಗಲೋ ಬಾಗಿಲು ತೆರೆದುಕೊಂಡಿದ್ದಾಗ ಬಿಸಿಲಿನಿಂದ ರಕ್ಷಿಸಿಕೊಳ್ಳಲೆಂದು ಹಾವು ಹೀಗೆ ಮನೆಯೊಳಗೆ ಬಂದಿರಬಹುದು ಎಂದು ಜಚೆರಿ ರಿಚರ್ಡ್ಸ್ ಊಹಿಸಿದ್ದಾರೆ. ಅದನ್ನು ಹಿಡಿದುಕೊಂಡು ಹೋಗಿ, ವಸತಿ ಪ್ರದೇಶದಿಂದ ದೂರ ಇರುವ ಅರಣ್ಯದ ಸಮೀಪ ಬಿಟ್ಟಿದ್ದಾಗಿ ತಿಳಿಸಿದ್ದಾರೆ. ನೀವು ಹಾವನ್ನು ನೋಡಿದರೆ, ಗಲಾಟೆ ಮಾಡುವುದಾಗಲೀ, ಕೋಲು ತೆಗೆದುಕೊಂಡು ಹೆದರಿಸುವುದಾಗಲೀ ಮಾಡಬಾರದು. ಅದನ್ನು ಅದರ ಪಾಡಿಗೆ ಬಿಟ್ಟು, ಹಾವು ಹಿಡಿಯುವವರನ್ನು ಕರೆಯಬೇಕು ಎಂದು ಸಲಹೆ ನೀಡಿದ್ದಾರೆ.
ಈ ಹಾವಿನ ಹೆಸರು ಈಸ್ಟರ್ನ್ ಬ್ರೌನ್ ಸ್ನೇಕ್ ಎಂದಾಗಿದ್ದು, ಅತ್ಯಂತ ವಿಷಕಾರಿಯಾಗಿದೆ. ಆಸ್ಟ್ರೇಲಿಯಾದಲ್ಲಿರುವ ಎಲ್ಲ ಪ್ರಬೇಧಗಳ ಹಾವುಗಳಿಗಿಂತಲೂ ಈ ಹಾವು ವಿಷಕಾರಿ. ಇದು ಕಚ್ಚಿದರೆ ಆ ಮನುಷ್ಯನ ನರಕ್ಕೆ ಹಾನಿಯುಂಟು ಮಾಡುತ್ತದೆ. ಹೃದಯ, ಶ್ವಾಸಕೋಶದ ನರಗಳು ಅತ್ಯಂತ ವೇಗವಾಗಿ ಹಾಳಾಗುತ್ತವೆ. ಇದರಿಂದ ಉಸಿರಾಟ ನಿಲ್ಲುತ್ತದೆ. ವ್ಯಕ್ತಿ ಪಾರ್ಶ್ವವಾಯುವಿಗೂ ತುತ್ತಾಗಬಹುದು ಎಂದು ಈ ಹಾವಿನ ಬಗ್ಗೆ ಅಧ್ಯಯನ ಮಾಡಿದ ಮೆಲ್ಬೋರ್ನ್ ಯೂನಿರ್ಸಿಟಿಯ ವೇನಮ್ ರಿಸರ್ಚ್ ಯೂನಿಟ್ ತಿಳಿಸಿದೆ.