ಐಜ್ವಾಲ್: ನಾವೆಲ್ಲ 9ನೇ ತರಗತಿ ವಿದ್ಯಾಭ್ಯಾಸ ಮಾಡುವಾಗ ನಮಗೆ ಎಷ್ಟು ವಯಸ್ಸಾಗಿತ್ತು? ಹದಿನಾಲ್ಕು ಅಥವಾ ಹದಿನೈದು ವರ್ಷವಲ್ಲವೇ? ಆದರೆ ಮಿಜೋರಾಂನಲ್ಲಿ ಈಗ 9ನೇ ತರಗತಿ ಓದುತ್ತಿರುವ ವಿಶೇಷ ವ್ಯಕ್ತಿಯೊಬ್ಬರಿದ್ದಾರೆ. ಅವರ ವಯಸ್ಸು ಬರೋಬ್ಬರಿ 78! ಈ ಇಳಿ ವಯಸ್ಸಿನಲ್ಲಿ ಶಾಲೆಗೆ ಹೋಗಿ ವಿದ್ಯಾಭ್ಯಾಸ ಮಾಡುತ್ತಿರುವ ಈ ಅಜ್ಜನ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ (Viral News) ಆಗಿದೆ.
ಹೌದು. ಮಿಜೋರಾಂನ ಚಂಘೈ ಜಿಲ್ಲೆಯ ಹ್ರುಯಿಕಾವ್ನ್ ಗ್ರಾಮದಲ್ಲಿರುವ ಲಾಲ್ರಿಂಗ್ಥರಾ ಪ್ರತಿ ದಿನ ತನ್ನ ಮನೆಯಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಶಾಲೆಗೆ ಪ್ರಯಾಣ ಮಾಡುತ್ತಾರೆ. ಚಿಕ್ಕ ಮಕ್ಕಳಂತೆಯೇ ಸಮವಸ್ತ್ರ ಧರಿಸಿಕೊಂಡು, ಬೆನ್ನಿಗೆ ಬ್ಯಾಗನ್ನು ಹಾಕಿಕೊಂಡು ಶಿಸ್ತಿನಿಂದ ಶಾಲೆಗೆ ಹೋಗುತ್ತಾರೆ. ಅಲ್ಲಿ ಶಿಕ್ಷಕರು ಹೇಳಿಕೊಡುವ ಪಾಠವನ್ನು ಕಲಿಯುವ ಅವರು, ಮನೆಗೆ ಬಂದು ಹೋಮ್ ವರ್ಕ್ ಅನ್ನೂ ಮಾಡಿ, ಅದನ್ನು ಮಾರನೇ ದಿನ ಶಿಕ್ಷಕರಿಗೆ ತೋರಿಸುತ್ತಾರೆ ಕೂಡ.
ಇದನ್ನೂ ಓದಿ: Viral Video: ‘ಬಾಯಿ ಮುಚ್ಚೆ ಸಾಕು’, ಮೆಟ್ರೊದಲ್ಲಿ ಇಬ್ಬರು ನಾರಿಯರ ಜಗಳ; ವಾಗ್ವಾದದಲ್ಲಿ ಗೆದ್ದಿದ್ದು ಯಾರು?
78ರ ವಯಸ್ಸಿನ ಲಾಲ್ರಿಂಗ್ಥರಾ ಅವರು ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಕಷ್ಟ ಕಂಡಿದ್ದರಂತೆ. 1945ರಲ್ಲಿ ಜನಿಸಿದ ಅವರು 2ನೇ ತರಗತಿಯಲ್ಲಿದ್ದಾಗ ತಂದೆ ತೀರಿಕೊಂಡಿದ್ದರಿಂದಾಗಿ ಶಾಲೆ ಬಿಡಬೇಕಾಗಿ ಬಂದಿತಂತೆ. ಶಾಲೆ ಬಿಟ್ಟ ಅವರು ಅಮ್ಮನೊಂದಿಗೆ ಗದ್ದೆಯಲ್ಲಿ ಕೆಲಸ ಮಾಡಿ ಜೀವನ ಸಾಗಿಸಲು ಕಲಿತುಕೊಂಡಿದ್ದಾರೆ. ಅವರಿಗೆ ಮಿಜೋರಾಂನ ಭಾಷೆಯನ್ನು ಓದಲು, ಬರೆಯಲು ಬರುತ್ತದೆಯಂತೆ. ಆದರೆ ಈಗ ಟಿವಿಗಳಲ್ಲಿ ಎಲ್ಲೆಡೆ ಹೆಚ್ಚಾಗಿ ಇಂಗ್ಲಿಷ್ ಪದಗಳ ಬಳಕೆಯಾಗುತ್ತಿರುವುದರಿಂದ ಅದು ಅವರಿಗೆ ಗೊಂದಲವನ್ನುಂಟು ಮಾಡುತ್ತದೆಯಂತೆ. ಹಾಗಾಗಿ ಇಂಗ್ಲಿಷ್ ಕಲಿಯಬೇಕು ಎನ್ನುವ ಕಾರಣಕ್ಕೇ ಅವರು ಪ್ರೌಢಶಾಲೆಯಲ್ಲಿ 9ನೇ ತರಗತಿಗೆ ಸೇರ್ಪಡೆಗೊಂಡಿದ್ದಾರೆ.
ಇದಷ್ಟೇ ಅಲ್ಲ. ಅವರು ಈ ಹಿಂದೆ 2018ರಲ್ಲಿ ಹತ್ತಿರದ ನ್ಯೂ ಹ್ರುಯಿಕಾನ್ ಮಾಧ್ಯಮಿಕ ಶಾಲೆಯಲ್ಲಿ 5ನೇ ತರಗತಿ ಸೇರಿಕೊಂಡಿದ್ದರು. ಆ ವಿಚಾರ ಕೂಡ ಎಲ್ಲೆಡೆ ಭಾರೀ ಸದ್ದು ಮಾಡಿತ್ತು.
ಆಗ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಲಾಲ್ರಿಂಗ್ಥರಾ ಅವರು, “ನನಗೆ ಮಿಜೋ ಭಾಷೆಯಲ್ಲಿ ಓದಲು, ಬರೆಯಲು ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಆದರೆ ಇಂಗ್ಲಿಷ್ ಭಾಷೆಯನ್ನು ಕಲಿಯಲು ನನಗೆ ಉತ್ಸಾಹವಿದೆ. ಇತ್ತೀಚಿನ ದಿನಗಳಲ್ಲಿ ಸಾಹಿತ್ಯದ ಪ್ರತಿಯೊಂದು ತುಣುಕಿನಲ್ಲೂ ಇಂಗ್ಲಿಷ್ ಪದಗಳನ್ನು ಅಳವಡಿಸಲಾಗುತ್ತಿದೆ. ಅದು ನನಗೆ ಗೊಂದಲ ಉಂಟು ಮಾಡುತ್ತದೆ. ಅದಕ್ಕಾಗಿ ನಾನು ನನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ನಿರ್ಧರಿಸಿದೆ. ಅದರಲ್ಲೂ ಇಂಗ್ಲಿಷ್‌ನಲ್ಲಿ ಜ್ಞಾನಾರ್ಜನೆ ಮಾಡಿಕೊಳ್ಳಬೇಕು ಎಂದು ಶಾಲೆಗೆ ಹೋಗಲಾರಂಭಿಸಿದ್ದೇನೆ” ಎಂದು ಹೇಳಿದ್ದರು.
ಇದನ್ನೂ ಓದಿ: Viral Video: ಧೈರ್ಯ ಇದ್ರೆ ಮಾತ್ರ ಈ ವಿಡಿಯೋ ನೋಡಿ! ಎನ್‌ಸಿಸಿ ಕೆಡೆಟ್‌ನ ಅಮಾನವೀಯ ಕೃತ್ಯ
ಈ ಬಗ್ಗೆ ನ್ಯೂ ಹ್ರುಯೈಕಾನ್ ಶಾಲೆಯ ಮುಖ್ಯೋಪಾಧ್ಯಾಯರು ಮಾತನಾಡಿದ್ದು, ಲಾಲ್ರಿಂಗ್ಥರಾ ಅವರ ಆಸಕ್ತಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದರು. “ಲಾಲ್ರಿಂಗ್ಥರಾ ಅವರು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸ್ಫೂರ್ತಿಯಾಗಿದ್ದಾರೆ. ಅವರಿಗೆ ಇಳಿ ವಯಸ್ಸಿನಲ್ಲೂ ಕಲಿಯುವ ಬಗ್ಗೆ ಇರುವ ಉತ್ಸಾಹ ಮತ್ತು ಆಸಕ್ತಿಯು ಪ್ರಶಂಸನೀಯ. ಅವರಿಗೆ ಎಲ್ಲ ರೀತಿಯಲ್ಲಿ ಬೆಂಬಲ ನೀಡಲು ನಾವು ಸಿದ್ಧರಿದ್ದೇವೆ” ಎಂದು ಅವರು 2018ರಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದರು.