ಲಕ್ನೋ: ನ್ಯಾಯಾಲಯದ ಮೆಟ್ಟಿಲೇರುವ ಪ್ರಕರಣಗಳು ವರ್ಷಗಟ್ಟಲೆ ಎಳೆದಾಡುತ್ತವೆ ಎನ್ನುವುದು ಅನೇಕರ ಮಾತು. ಹಲವು ಪ್ರಕರಣಗಳಲ್ಲಿ ಅದು ಸತ್ಯ ಕೂಡ. ಅದೇ ರೀತಿಯಲ್ಲಿ ಉತ್ತರ ಪ್ರದೇಶದಲ್ಲಿ 28 ವರ್ಷಗಳ ಹಿಂದೆ ಲಾರಿಗೆ ಸಿಕ್ಕು ಸಾವನ್ನಪ್ಪಿದ್ದ ಎಮ್ಮೆಯೊಂದು ಇದೀಗ ಮತ್ತೆ ಚಾಲಕನಿಗೆ ಕಾಟ ಕೊಡುತ್ತಿರುವ ವಿಶೇಷ ಘಟನೆ (Viral News) ನಡೆದಿದೆ.
ಅಚನ್ ಹೆಸರಿನ ವ್ಯಕ್ತಿ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ವಾಸಿಸುತ್ತಿದ್ದಾರೆ. ಈ ಹಿಂದೆ ಸರ್ಕಾರದ ಸಾರಿಗೆ ಇಲಾಖೆಯಲ್ಲಿ ಚಾಲಕನಾಗಿ ಕೆಲಸ ಮಾಡಿದ್ದ ಅವರಿಗೆ ಇದೀಗ 83 ವರ್ಷ. ಕೆಲಸದಿಂದ ನಿವೃತ್ತರಾಗಿಯೇ 20 ವರ್ಷಗಳು ಕಳೆದಿವೆ. ಪಾರ್ಶ್ವವಾಯುವಾಗಿರುವ ಅವರು ಅದರಿಂದ ಚೇತರಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಆದರೆ ತಾನು ಚಾಲಕನಾಗಿದ್ದಾಗ ಮಾಡಿದ್ದ ಅಪಘಾತವೊಂದರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಇದೀಗ ಅವರಿಗೆ ಸಮನ್ಸ್ ನೀಡಿದೆಯಂತೆ.
ಇದನ್ನೂ ಓದಿ: Viral News : ಪುಟಾಣಿ ಮಗುವನ್ನು ಕುದಿಯುವ ಹಾಲಿನಲ್ಲಿ ಸ್ನಾನ ಮಾಡಿಸಿದ ಪೂಜಾರಿ! ಇದೆಂಥಾ ಸಂಪ್ರದಾಯ?
“1994ರಲ್ಲಿ ನಾನು ಕೆಲಸದ ನಿಮಿತ್ತ ಬರೇಲಿಗೆ ಹೋಗಿದ್ದೆ. ಅಲ್ಲಿಂದ ಗಾಡಿಗೆ ಸರಕನ್ನು ತುಂಬಿಸಿಕೊಂಡು ಫರೀದ್‌ಪುರಕಜ್ಕೆ ತೆರಳಿದ್ದೆ. ರಾತ್ರಿ ಹೊತ್ತು ರಸ್ತೆ ಮೇಲೆ ಹೋಗುವಾಗ ಎಮ್ಮೆಯೊಂದು ಇದ್ದಕ್ಕಿದ್ದಂತೆ ಗಾಡಿಗೆ ಅಡ್ಡ ಬಂದು ಸಾವನ್ನಪ್ಪಿತು. ಈ ವಿಚಾರವನ್ನು ನಾನು ತಕ್ಷಣವೇ ಫರೀದ್‌ಪುರ ಪೊಲೀಸ್ ಠಾಣೆಗೆ ಹೋಗಿ ತಿಳಿಸಿದ್ದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯ ಎರಡು ಬಾರಿ ಸಮನ್ಸ್ ಕೊಟ್ಟಿತ್ತು. ನನಗೆ ಜಾಮೀನು ಕೂಡ ಸಿಕ್ಕಿತ್ತು. ಮರೆತೇ ಹೋಗಿದ್ದ ಈ ಪ್ರಕರಣದಲ್ಲಿ ಇದೀಗ ಮತ್ತೆ ಸಮನ್ಸ್ ಬಂದಿದೆ” ಎಂದು ಅಚನ್ ಹೇಳಿದ್ದಾರೆ.
ಬರೇಲಿಯ ಪೊಲೀಸರು ಅಚನ್ ಸೋಮವಾರ ಅಚನ್ ಅವರ ಮನೆಗೆ ತೆರಳಿ ಸಮನ್ಸ್ ಕೊಟ್ಟು ಬಂದಿದ್ದಾರೆ. ಒಂದು ವೇಳೆ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದಿದ್ದರೆ ಪೊಲೀಸ್ ವಶಕ್ಕೆ ಪಡೆಯಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.