ಸತ್ತುಹೋಗಿದ್ದಾನೆ ಎಂದುಕೊಂಡಿದ್ದ ವ್ಯಕ್ತಿಯೊಬ್ಬ ನಾಲ್ಕು ತಿಂಗಳ ನಂತರ ಮೊಮೊಸ್ ತಿನ್ನುತ್ತ, ರಸ್ತೆ ಬದಿಯಲ್ಲಿ ನಿಂತಿದ್ದ..!. ಇಂಥ ಘಟನೆಗಳು ಈಗೀಗ ಸಹಜವಾಗುತ್ತಿವೆ. ಸತ್ತು ಹೋಗಿದ್ದಾರೆ ಎಂದುಕೊಂಡು ಸ್ಮಶಾನಕ್ಕೆ ಕರೆದೊಯ್ದಾಗ ಚಿತೆಯ ಮೇಲೆ ಎದ್ದುಕುಳಿತಿದ್ದು, ಶವಯಾತ್ರೆ ಮಾಡುವಾಗ ಮಾರ್ಗ ಮಧ್ಯೆ ಎಚ್ಚೆತ್ತುಕೊಂಡವರು..ಹೀಗೆ ಇಂಥ ಹಲವು ವರದಿಗಳನ್ನು ನಾವು ಓದಿದ್ದೇವೆ. ಹಾಗೇ, ಬಿಹಾರದ ಭಗಲ್ಪುರದಲ್ಲಿ ಕೂಡ ಆಗಿತ್ತು. ಆದರೆ ಇದೊಂದು ಕ್ರೈಂ..ಅಪಹರಣ ಕೇಸ್!
ಭಾಗಲ್ಪುರದ ನಿಶಾಂತ್ ಕುಮಾರ್ ನಾಲ್ಕು ತಿಂಗಳ ಹಿಂದೆ, ಅಂದರೆ ಜನವರಿ 31ರಂದು ನಿಗೂಢವಾಗಿ ನಾಪತ್ತೆಯಾಗಿದ್ದ. ಅವರ ತಂದೆ ಸಚ್ಚಿದಾನಂದ ಸಿಂಗ್ ಪೊಲೀಸರಿಗೆ ದೂರು ಕೊಟ್ಟಿದ್ದರು. ‘ನನ್ನ ಮಗನನ್ನು ಆತನ ಮಾವ ನವೀನ್ ಸಿಂಗ್ ಮತ್ತು ಅವನ ಮಗ ರವಿಶಂಕರ್ ಸಿಂಗ್ ಸೇರಿ ಅಪಹರಣ ಮಾಡಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಆದರೆ ಎಷ್ಟೇ ಹುಡುಕಿದರೂ ನಿಶಾಂತ್ ಸಿಕ್ಕಿರಲಿಲ್ಲ. ಆತ ಸತ್ತೇ ಹೋಗಿದ್ದಾನೆ ಎಂದು ಕುಟುಂಬದವರು, ಸಂಬಂಧಿಕರು ಭಾವಿಸಿದ್ದರು.
ಆದರೆ ನೊಯ್ಡಾದ ಮೊಮೊ ತಿನಿಸಿನ ಶಾಪ್ ಎದುರು ನಿಶಾಂತ್ ಪತ್ತೆಯಾಗಿದ್ದಾನೆ. ಅಪಹರಣ ಕೇಸ್ನಲ್ಲಿ ಆರೋಪಿಯಾಗಿರುವ ರವಿಶಂಕರ್ ಸಿಂಗ್ ಕಣ್ಣಿಗೇ ಬಿದ್ದಿದ್ದಾನೆ. ನಿಶಾಂತ್ ಕೂದಲು ಕೆದರಿತ್ತು. ಕೊಳಕಾದ ಬಟ್ಟೆ ಧರಿಸಿ ಅಂಗಡಿಯ ಎದುರು ನಿಂತಿದ್ದ. ಅವನಿಗೆ ಅಂಗಡಿಯವನು ತಿನ್ನಲು ಮೊಮೊಸ್ ಕೊಟ್ಟಿದ್ದರೂ, ಅದೇನೋ ಬೈಯ್ಯುತ್ತಿದ್ದ. ರವಿಶಂಕರ್ ಸಿಂಗ್ ಹತ್ತಿರ ಹೋಗಿ ನಿಶಾಂತ್ನನ್ನು ನೋಡಿದ್ದಾನೆ. ನಿಶಾಂತ್ ಹೌದೋ-ಅಲ್ಲವೋ ಎಂದು ಸ್ಪಷ್ಟಪಡಿಸಿಕೊಂಡಿದ್ದಾನೆ. ಆತ ನಿಶಾಂತ್ ಎಂಬುದು ಅವನಿಗೆ ಸ್ಪಷ್ಟವಾದ ಮೇಲೆ ಒಂದು ಕ್ಷಣ ಶಾಕ್ಗೂ ಒಳಗಾಗಿದ್ದಾನೆ.
ಇದನ್ನೂ ಓದಿ: Viral Video: ಮೊಸಳೆ ಕ್ರೂರಿಯೋ? ಮಾನವ ಕಟುಕನೋ?-ಗಂಗಾನದಿ ತಟದಲ್ಲಿ ಭಯಾನಕ ಘಟನೆ!
ರವಿಶಂಕರ್ ಸಿಂಗ್ ಬಳಿಕ ನಿಶಾಂತ್ನನ್ನು ಕರೆದುಕೊಂಡು ಬಿಹಾರಕ್ಕೆ ಹೋಗಿ, ತನ್ನ ವಿರುದ್ಧ ದೂರು ದಾಖಲಾಗಿದ್ದ ಸುಲ್ತಾನ್ಗಂಜ್ ಠಾಣೆಯಲ್ಲಿ ಹಾಜರುಪಡಿಸಿದ್ದಾನೆ. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಿಶಾಂತ್ ಸಿಂಗ್ ನಿಜವಾಗಲೂ ಕಿಡ್ನ್ಯಾಪ್ ಆಗಿದ್ದನಾ? ಇದು ನಾಟಕವಾ? ಎಂಬಿತ್ಯಾದಿ ಆಯಾಮಗಳಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ನಿಶಾಂತ್ ದೆಹಲಿಯನ್ನು ತಲುಪಿದ್ದು ಹೇಗೆಂಬ ಬಗ್ಗೆಯೂ ವಿಚಾರಣೆ ನಡೆಸುತ್ತಿದ್ದಾರೆ. ನಿಶಾಂತ್ನನ್ನು ಠಾಣೆಗೆ ಹಾಜರುಪಡಿಸಿದ ರವಿಶಂಕರ್ ಸಿಂಗ್ ‘ನಾವು ನಿಶಾಂತ್ಗೆ ಏನೂ ಮಾಡಿಲ್ಲ. ನಿಶಾಂತ್ ಕುಟುಂಬದವರು ಮೊದಲಿನಿಂದಲೂ ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ನಾವು ಅಪಹರಣ ಮಾಡಿದ್ದರೆ, ಈಗ ನಿಶಾಂತ್ನನ್ನು ಇಲ್ಲಿಗೆ ಕರೆದುಕೊಂಡು ಬರುತ್ತಿರಲಿಲ್ಲ. ಈ ಕಿಡ್ನ್ಯಾಪ್ ಕೇಸ್ನಲ್ಲಿ ನಮಗೆ ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದ್ದಾರೆ. ಈ ಮೂಲಕ ಘಟನೆಗೆ ಸಿನಿಮೀಯ ಮಾದರಿಯಲ್ಲಿ ಟ್ವಿಸ್ಟ್ ಸಿಕ್ಕಿದೆ.