ಜಾತ್ರೆ, ಕಿಕ್ಕಿರಿದ ಜನಸಂದಣಿ ಇರುವ ಸಂತೆಯಲ್ಲೆಲ್ಲ ಮಕ್ಕಳು ಪಾಲಕರ ಕೈ ತಪ್ಪಿಸಿಕೊಳ್ಳುವ ಘಟನೆ ಅಲ್ಲಲ್ಲಿ-ಆಗಾಗ ನಡೆಯುತ್ತಿರುತ್ತದೆ. ಈಗೆಲ್ಲ ಹೀಗೆ ಕಳೆದು ಹೋದ ಮಕ್ಕಳು ಮತ್ತೆ ಅವರ ತಂದೆ-ತಾಯಿ ಮಡಿಲು ಸೇರಲು ವಿಳಂಬ ಆಗುವುದಿಲ್ಲ. ಮೈಕ್ನಲ್ಲಿ ಹೇಳಿಯೋ, ಅಲ್ಲಿರುವ ಪೊಲೀಸರ ಹುಡುಕಾಟದೊಂದಿಗೋ ಸಿಕ್ಕಿಬಿಡುತ್ತಾರೆ. ಹೀಗೆ ಅರ್ಜಂಟೀನದಲ್ಲೂ ಇಂಥದ್ದೇ ಒಂದು ಪ್ರಮಾದ ಆಗಿತ್ತು.
ಅದ್ಯಾವುದೋ ರಸ್ತೆ ಬದಿಯ ರೆಸ್ಟೋರೆಂಟ್. ಅಲ್ಲಿ ಅನೇಕರು ಸೇರಿದ್ದರು. ಒಂದಷ್ಟು ಜನ ಸಂಗೀತ ವಾದ್ಯಗಳನ್ನೂ ನುಡಿಸುತ್ತಿದ್ದರು. ಅಲ್ಲೊಬ್ಬ ಉದ್ದನೆಯ ವ್ಯಕ್ತಿ, ತನ್ನ ತಲೆಯ ಮೇಲೆ ಪುಟ್ಟ ಬಾಲಕನನ್ನು ಕೂರಿಸಿಕೊಂಡು ಅತ್ತಿಂದತ್ತ ಓಡಾಡುತ್ತಿದ್ದಾನೆ. ಆ ಬಾಲಕ ಒಂದೇ ಸಮ ಮೂಗು-ಕಣ್ಣು ಉಜ್ಜಿಕೊಳ್ಳುತ್ತ, ದೊಡ್ಡದಾಗಿ ಅಳುತ್ತಿದ್ದಾನೆ. ಅದ್ಯಾಕೆ ಅಂದರೆ, ಆ ಜನಸಂದಣಿ ಮಧ್ಯೆ ಬಾಲಕ ತನ್ನ ತಂದೆಯ ಕೈ ತಪ್ಪಿಸಿಕೊಂಡಿದ್ದ. ಅಪ್ಪ ಕಾಣದೆ ಕಂಗಾಲಾಗಿ, ಅಳುತ್ತಿದ್ದ. ಅವನನ್ನು ಸಂತೈಸುವ ಸಲುವಾಗಿ ವ್ಯಕ್ತಿಯೊಬ್ಬ ಆತನನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡಿದ್ದ.
ಬಾಲಕನಿಗೆ ಸಹಾಯ ಮಾಡಲು ಎಲ್ಲರೂ ನಿಶ್ಚಯಿಸಿದ್ದರು !
ಬಾಲಕ ತನ್ನ ಅಪ್ಪ ಕಾಣದೆ ಅಳುತ್ತಿದ್ದಾನೆಂಬ ವಿಷಯ ಶರವೇಗದಲ್ಲಿ ಅಲ್ಲಿದ್ದವರಿಗೆಲ್ಲ ಗೊತ್ತಾಗಿತ್ತು. ಅಲ್ಲಿ ಸಂಗೀತ ವಾದ್ಯಗಳನ್ನು ನುಡಿಸುತ್ತ, ಹಾಡುತ್ತಿದ್ದವರಿಗೂ ಅರಿವಿಗೆ ಬಂದಿತ್ತು. ಹಾಗಾಗಿ ಎಲ್ಲರೂ ಸೇರಿ ಹುಡುಗನಿಗೆ ಸಹಾಯ ಮಾಡಲು ನಿಶ್ಚಿಯಿಸಿಬಿಟ್ಟಿದ್ದರು. ಬಾಲಕನಿಂದ ಅವನ ಅಪ್ಪನ ಹೆಸರನ್ನು ಕೇಳಿ ತಿಳಿದು, ಎಲ್ಲರೂ ಒಟ್ಟಿಗೇ ಚಪ್ಪಾಳೆ ಹೊಡೆಯುತ್ತ ಆ ಹೆಸರನ್ನೇ ಕರೆಯತೊಡಗಿದರು. ಅಲ್ಲಿದ್ದ ಮ್ಯೂಸಿಷಿಯನ್ಸ್ ಕೂಡ ವಾದ್ಯ ಸ್ವರದೊಂದಿಗೆ ಆ ಹುಡುಗನ ತಂದೆ ಹೆಸರನ್ನು ಗಾಯನ ಮಾದರಿಯಲ್ಲೇ ಕರೆಯತೊಡಗಿದರು. ಹೀಗೆ ಎಲ್ಲರೂ ಒಂದೇ ಸಮ ಹೆಸರು ಉಚ್ಚರಿಸತೊಡಗಿದಾಗ ಕೊನೆಗೂ ಬಾಲಕನ ತಂದೆಗೆ ಕರೆ ತಲುಪಿದೆ. ಆ ಸ್ಥಳಕ್ಕೆ ಅವರು ಬಂದಿದ್ದಾರೆ. ಕಣ್ಣೆದುರು ಬಂದ ಅಪ್ಪನನ್ನು ಪುಟ್ಟ ಹುಡುಗ ಓಡಿ ಹೋಗಿ ತಬ್ಬಿಕೊಂಡಿದ್ದಾನೆ.
ಈ ವಿಡಿಯೋ ನೋಡಿದವರೆಲ್ಲ ಫುಲ್ ಖುಷಿಯಾಗಿದ್ದಾರೆ. ಇದೊಂದು ಭಾವನಾತ್ಮಕ ವಿಡಿಯೋ ಎಂದು ಕಮೆಂಟ್ ಮಾಡಿದ್ದಾರೆ. ವಿಡಿಯೋ ಭರ್ಜರಿ ವೈಲರ್ ಆಗುತ್ತಿದ್ದು 2 ಮಿಲಿಯನ್ಗೂ ಅಧಿಕ ವೀವ್ಸ್ ಕಂಡಿದೆ. ‘ನಮಗೆ ಕಣ್ಣಲ್ಲಿ ನೀರು ಬಂತು’ ಎಂದು ಅನೇಕರು ಹೇಳಿಕೊಂಡಿದ್ದಾರೆ.