ಇಟಾಲಿಯನ್ ಫುಡ್ ಪಿಜ್ಜಾ ಯಾರಿಗೆ ಇಷ್ಟವಿಲ್ಲ ಹೇಳಿ?. ಆದರೆ ಪಿಜ್ಜಾವನ್ನು ಪದೇಪದೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದೂ ಸತ್ಯ. ಅದರಲ್ಲೂ ಯಾರ ಮೈಯಲ್ಲಿ ಬೊಜ್ಜು ಇರುತ್ತದೆಯೋ ಅವರಿಗೆ ಪಿಜ್ಜಾ ಒಳ್ಳೇದಲ್ಲ. ತೂಕ ಇಳಿಸಲು ಡಯೆಟ್ ಮಾಡುವವರೂ ಪಿಜ್ಜಾ ಮತ್ತು ಅದರಂಥ ಜಂಕ್ ಫುಡ್ಗಳನ್ನು ತಿನ್ನೋದನ್ನು ಬಿಡಲೇಬೇಕಾಗುತ್ತದೆ. ಯಾಕೆಂದರೆ ಪಿಜ್ಜಾದಲ್ಲಿ ಕ್ಯಾಲೋರಿ, ಕೊಬ್ಬಿನಾಂಶ, ಸೋಡಿಯಂಗಳೆಲ್ಲ ಜಾಸ್ತಿಯೇ ಇರುತ್ತದೆ. ಇದರಿಂದಾಗಿ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚು ಮಾಡುತ್ತದೆ. ಗೊತ್ತಿರಲಿ, ಪಿಜ್ಜಾದ ಅತಿಯಾದ ಸೇವನೆಯಿಂದ ಹೃದಯಸಮಸ್ಯೆ ಅಪಾಯವೂ ಹೆಚ್ಚಿರುತ್ತದೆ.
ಇಷ್ಟೆಲ್ಲ ಇದ್ದರೂ, ಉತ್ತರ ಐರ್ಲ್ಯಾಂಡ್ನ ವ್ಯಕ್ತಿ ಪಿಜ್ಜಾ ತಿಂದುತಿಂದು ತೂಕ ಇಳಿಸಿಕೊಂಡಿದ್ದಾರೆ..! 34 ವರ್ಷದ Ryan Mercer (ರಯಾನ್ ಮರ್ಸರ್) ಎಂಬ ವ್ಯಕ್ತಿ ಹೀಗೆ ದಿನಕ್ಕೆ ಮೂರು ಹೊತ್ತೂ ಪಿಜ್ಜಾವನ್ನೇ ತಿಂದು ತಿಂಗಳಲ್ಲಿ ಮೂರೂವರೆ ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಬೆಳಗ್ಗೆ ತಿಂಡಿಗೆ, ಮಧ್ಯಾಹ್ನ ಊಟಕ್ಕೆ ಮತ್ತು ರಾತ್ರಿ ಊಟಕ್ಕೆ ಸೇರಿ, ದಿನಕ್ಕೆ ಪಿಜ್ಜಾದ 10 ತುಂಡುಗಳನ್ನು ಆತ ತಿನ್ನುತ್ತಿದ್ದ. ಹೀಗೆ ಮಾಡಿಯೇ ತೂಕ ಕಡಿಮೆಮಾಡಿಕೊಂಡಿದ್ದಾನೆ.
ತಮ್ಮ ತೂಕ ಇಳಿಕೆ ಜರ್ನಿ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿಕೊಂಡ ರಯಾನ್ ಮರ್ಸರ್, ‘ನೀವು ನಿಮ್ಮ ದೇಹದ ಕೊಬ್ಬು ಕಡಿಮೆ ಮಾಡಿಕೊಂಡು, ತೂಕ ಇಳಿಸಿಕೊಳ್ಳಬೇಕು ಎಂದರೆ, ನಿಮ್ಮ ನೆಚ್ಚಿನ ತಿಂಡಿಗಳನ್ನು ಬಿಟ್ಟೇಬಿಡಬೇಕು ಎಂದೇನೂ ಇಲ್ಲ ಎಂದು ಜನರಿಗೆ ತೋರಿಸುವ ಸಲುವಾಗಿ, ನಾನು ನನ್ನಿಷ್ಟದ ಫುಡ್ ಆದ ಪಿಜ್ಜಾವನ್ನೇ ಮುಖ್ಯವಾಗಿಟ್ಟುಕೊಂಡು ‘ಪಿಜ್ಜಾ ಡಯೆಟ್’ ಶುರು ಮಾಡಿದೆ. ಈ ಪೋಸ್ಟ್ಗೆ 6 ಮಿಲಿಯನ್ಗಳಷ್ಟು ಜನ ಲೈಕ್ಸ್ ಕೊಟ್ಟಿದ್ದಾರೆ. ಅಂದರೆ ಪಿಜ್ಜಾ ತಿಂದು ಕೂಡ ತೂಕ ಇಳಿಕೆ ಮಾಡಿಕೊಳ್ಳಬಹುದು ಎಂಬುದು ಆ 6 ಮಿಲಿಯನ್ ಜನರಿಗೆ ಗೊತ್ತಾಗಿದೆ. ಅಂದಹಾಗೇ, ನನ್ನ ಈ ಡಯೆಟ್ ಬಗ್ಗೆ ಹಲವು ಪ್ರಮುಖ ಮಾಧ್ಯಮಗಳೂ ವರದಿ ಮಾಡಿವೆ’ ಎಂದು ಬರೆದುಕೊಂಡಿದ್ದಾರೆ.
‘ಪಿಜ್ಜಾ ಅನಾರೋಗ್ಯಕರವಲ್ಲ. ಅದನ್ನು ತಯಾರಿಸುವ ವಿಧಾನದ ಮೇಲೆ ಅವಲಂಬಿತವಾಗಿರುತ್ತದೆ. ಸರಿಯಾಗಿ, ಆರೋಗ್ಯಕರವಾಗಿ, ಸ್ವಚ್ಛವಾಗಿ ತಯಾರು ಮಾಡದೆ ಇರುವ ಸಲಾಡ್ಗಳೂ ಕೂಡ ಆರೋಗ್ಯಕ್ಕೆ ಹಾನಿಕರವೇ ಆಗಿದೆ. ನಾನು ಈ ಪಿಜ್ಜಾ ಡಯೆಟ್ ಕಾರಣಕ್ಕೆ, ನನಗೆ ಬೇಕಾದ ಫ್ಲೇವರ್ನ ಪಿಜ್ಜಾವನ್ನು ನಾನೇ ತಯಾರಿಸಿಕೊಳ್ಳುವುದನ್ನೂ ಕಲಿತೆ’ ಎಂದು ರಯಾನ್ ಮರ್ಸರ್ ಹೇಳಿಕೊಂಡಿದ್ದಾರೆ.
(ನಾವಿಲ್ಲಿ ರಯಾನ್ ಮರ್ಸರ್ ಇನ್ಸ್ಟಾಗ್ರಾಂ ಪೋಸ್ಟ್ ಆಧಾರವಾಗಿಟ್ಟುಕೊಂಡು ಸುದ್ದಿ ಮಾಡಿದ್ದೇವೆ. ತೂಕ ಇಳಿಸಿಕೊಳ್ಳಲು/ ಏರಿಸಿಕೊಳ್ಳಲು ಸೂಕ್ತ ವೈದ್ಯರ/ತಜ್ಞರ ಸಲಹೆ ತೆಗೆದುಕೊಳ್ಳಲೇಬೇಕಾಗುತ್ತದೆ. ಸ್ವಯಂ ವಿಧಾನಗಳನ್ನು ಅನುಸರಿಸುವುದು ಆರೋಗ್ಯಕ್ಕೆ ಹಾನಿಕರ)