ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಸರಯೂ ನದಿಯ ಸ್ನಾನ ಘಟ್ಟದಲ್ಲಿ ಪತ್ನಿಯೊಂದಿಗೆ ಸ್ನಾನ ಮಾಡುತ್ತಿದ್ದ ಯುವಕನೊಬ್ಬನಿಗೆ ಸ್ಥಳೀಯರ ಗುಂಪೊಂದು ಥಳಿಸಿದೆ. ಪವಿತ್ರ ನದಿಯಲ್ಲಿ ಸ್ನಾನ ಮಾಡುವಾಗ ಆತ ಪತ್ನಿಗೆ ಮುತ್ತು ಕೊಟ್ಟ ಎಂಬ ಕಾರಣಕ್ಕೆ ಹೀಗೆ ಹೊಡೆಯಲಾಗಿದೆ. ಸರಯೂ ಪವಿತ್ರ ನದಿ. ಇಲ್ಲಿ ಯಾರೇ ಆಗಲಿ ಅಸಭ್ಯವಾಗಿ ವರ್ತಿಸಲು ನಾವು ಅವಕಾಶ ಕೊಡುವುದಿಲ್ಲ ಎಂದು ಹಲ್ಲೆ ಮಾಡಿದವರು ಹೇಳಿಕೊಂಡಿದ್ದಾರೆ.
ಸರಯೂ ನದಿಯಲ್ಲಿ ಈ ದಂಪತಿ ಮುಳುಗೆದ್ದು ಸ್ನಾನ ಮಾಡುತ್ತಿದ್ದರು. ಒಬ್ಬರಿಗೊಬ್ಬರು ಹಿಡಿದುಕೊಂಡಿದ್ದರು. ಈ ವೇಳೆ ಪತಿ ತನ್ನ ಪತ್ನಿಗೆ ಚುಂಬಿಸಿದ್ದಾನೆ. ಅಷ್ಟರಲ್ಲಿ ಅವರ ಹಿಂದೆ ಸ್ನಾನ ಮಾಡುತ್ತಿದ್ದ ಒಂದಷ್ಟು ಜನ ಬಂದು ಆತನನ್ನು ಎಳೆದುಕೊಂಡು ಹೋಗಿ ನಿಂದಿಸಿದ್ದಲ್ಲದೆ, ಹಲ್ಲೆಯನ್ನೂ ಮಾಡಿದ್ದಾರೆ. ಸಾರ್ವಜನಿಕ ಸ್ಥಳ, ಅದರಲ್ಲೂ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಇಂಥ ಕೃತ್ಯ ನಡೆಯುವುದನ್ನು ನಾವು ಸಹಿಸುವುದಿಲ್ಲ ಎಂದಿದ್ದಾರೆ. ಆ ಮಹಿಳೆ ತನ್ನ ಪತಿಯನ್ನು ಕಾಪಾಡಲು ಹೋಗಿ ವಿಫಲಳಾಗಿದ್ದಾಳೆ. ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ʼಪತಿ-ಪತ್ನಿ ಮಧ್ಯೆ ಚುಂಬನ, ರೊಮ್ಯಾನ್ಸ್‌ಗಳು ತಪ್ಪಲ್ಲ. ಆದರೆ ಅದಕ್ಕೊಂದು ಸ್ಥಳ ಎಂದಿರುತ್ತದೆ. ಇಂಥ ಪವಿತ್ರ ಪ್ರದೇಶದಲ್ಲಿ, ಸಾರ್ವಜನಿಕವಾಗಿ ಮುತ್ತುಕೊಡುವುದು ಭಾರತೀಯ ಸಂಸ್ಕೃತಿಯೂ ಅಲ್ಲʼ ಎಂಬ ಅಭಿಪ್ರಾಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಅಂದಹಾಗೇ, ಘಟನೆ ನಡೆದಿದ್ದು ತಮ್ಮ ಗಮನಕ್ಕೂ ಬಂದಿದೆ. ವಿಡಿಯೋವನ್ನು ನೋಡಿದ್ದೇವೆ. ಆದರೆ ನಮಗೆ ಯಾರೂ ದೂರು ಕೊಟ್ಟಿಲ್ಲ. ಹಾಗಿದ್ದಾಗ್ಯೂ ದಂಪತಿಯನ್ನು ಪತ್ತೆಹಚ್ಚಲು ಪ್ರಯತ್ನ ನಡೆಸಿದ್ದೇವೆ. ಅವರೇನಾದರೂ ದೂರು ಕೊಟ್ಟರೆ ಹಲ್ಲೆ ಮಾಡಿದವರ ವಿರುದ್ಧ ಎಫ್‌ಐಆರ್ ದಾಖಲು ಮಾಡುತ್ತೇವೆ ಎಂದು ಅಯೋಧ್ಯೆ ಹಿರಿಯ ಪೊಲೀಸ್ ಅಧೀಕ್ಷಕ ಶೈಲೇಶ್ ಪಾಂಡೆ ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಅಸಭ್ಯ ವರ್ತನೆ; ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಉಗುಳಿದ ಕಾಂಗ್ರೆಸ್ ನಾಯಕಿ