ಮೊಸಳೆಗಳ ದೈತ್ಯ ದೇಹ, ಹರಿತವಾದ ದವಡೆ, ಸುರಂಗ ಮಾರ್ಗದ ದ್ವಾರದಂತಿರುವ ಬಾಯಿ, ಚೂಪಾದ ಹಿಂಭಾಗವನ್ನೆಲ್ಲ ನೋಡಿದರೆ, ಅದೊಂದು ಮಿನಿ ಡೈನೋಸರ್ ತರ ಅನ್ನಿಸುತ್ತವೆ. ಈ ಮೊಸಳೆಗಳು ಮಹಾನ್ ಭಯಂಕರ. ಅವುಗಳನ್ನು ನೋಡಿದರೇ ಭಯವಾಗುತ್ತಿರುತ್ತದೆ. ಅವು ಪರಭಕ್ಷಕ ಸರೀಸೃಪಗಳಾಗಿದ್ದು, ಮನುಷ್ಯನನ್ನೂ ಕಚ್ಚಿ, ಎಳೆದು ತಿಂದುಬಿಡಬಲ್ಲವು. ಇಂಥ ಮೊಸಳೆ ವಿರುದ್ಧ ಯಾವುದೇ ಪ್ರಾಣಿ ಅಥವಾ ಮನುಷ್ಯ ಅಷ್ಟು ಬೇಗ ಹೋರಾಟಕ್ಕೆ ನಿಲ್ಲುವುದಿಲ್ಲ. ಅಂಥದ್ದರಲ್ಲಿ ಒಂದು ಪುಟ್ಟ ನಾಯಿ ಮರಿ ದೊಡ್ಡ ಮೊಸಳೆಯನ್ನು ಹೆದರಿಸಿ, ಕೊಳಕ್ಕೆ ಓಡಿಸಿದ ದೃಶ್ಯ ವೈರಲ್ ಆಗಿದೆ. ಆದರೂ ಈ ವಿಡಿಯೊ ನೋಡಿದ ಮೇಲೆ ಮನಸಿಗೆ ತುಂಬ ನೋವಾಗುತ್ತದೆ…
ಅಲ್ಲೊಂದು ಕೊಳ ಇದೆ. ಅದರಲ್ಲಿದ್ದ ಮೊಸಳೆ ನೀರು ಬಿಟ್ಟು ದಡಕ್ಕೆ ಬಂದಿದೆ. ಅದನ್ನು ಬೆದರಿಸಲು ಒಂದು ನಾಯಿಮರಿಯನ್ನು ಯಾರೋ ಬಿಟ್ಟಿದ್ದಾರೆ. ಅದು ವಿಡಿಯೊ ಮಾಡುತ್ತಿರುವವರಿಗೆ ಸೇರಿದ ನಾಯಿಮರಿಯೇ ಆಗಿರಬಹುದು. ಮೊಸಳೆ ಎದುರಿಗೆ ಹೋದ ನಾಯಿಮರಿ ಒಂದೇ ಸಮನೆ ಕೂಗುತ್ತದೆ. ಆಗ ಮೊಸಳೆ ಹಿಂದಕ್ಕೆ ಸರಿಯುತ್ತ ಹೋಗಿ ನೀರಿನೊಳಗೆ ಸೇರಿಕೊಳ್ಳುತ್ತದೆ. ಈ ವೇಳೆ ನಾಯಿ ಆ ಮೊಸಳೆಯ ಹಿಂಭಾಕ್ಕೆ ಕಚ್ಚುತ್ತದೆ. ಹಾಗೇ, ಮತ್ತೊಂದು ಬಾರಿಯೂ ಮೊಸಳೆ ದಡಕ್ಕೆ ಬಂದಾಗ ಇದೇ ನಾಯಿಮರಿ ಅದನ್ನು ಕೂಗಿಕೂಗಿ ಓಡಿಸುತ್ತದೆ. ಆಗ ಒಂದಷ್ಟು ಜನ ಜೋರಾಗಿ ನಗುವುದು ಕೇಳಿಸುತ್ತದೆ. ಹಾಗೇ, ಮೂರನೇ ಬಾರಿ ಮೊಸಳೆ ನೀರಿನಿಂದ ಸ್ವಲ್ಪವೇ ದೂರ ಬಂದು ಮಲಗಿತ್ತು. ಆಗಲೂ ನಾಯಿಮರಿ ಅಲ್ಲಿಗೆ ಓಡಿ ಹೋಗಿ, ಅದನ್ನು ಓಡಿಸಲೆಂದು ಬೊಗಳಿದೆ. ಆದರೆ ಮೊಸಳೆ ಪಟ್ಟನೆ ಆ ನಾಯಿಮರಿಯನ್ನು ಬಾಯಲ್ಲಿ ಕಚ್ಚಿಕೊಂಡು, ನೀರಿಗೆ ಇಳಿದು ಹೋಗಿದೆ. ಅಲ್ಲಿಯವರೆಗೆ ಸಖತ್ ಫನ್ನಿ ಎನ್ನಿಸುತ್ತಿದ್ದ ದೃಶ್ಯ ಕೊನೆಯಲ್ಲಿ ದುರಂತವಾಗಿ ಮಾರ್ಪಾಡಾಗುತ್ತದೆ.
ವಿಡಿಯೊಕ್ಕೆ 58 ಸಾವಿರಕ್ಕೂ ಅಧಿಕ ವೀವ್ಸ್ಗಳು ಬಂದಿವೆ. ಆದರೆ ನಾಯಿ ಮರಿ ಮೊಸಳೆ ಬಾಯಿಗೆ ಸಿಕ್ಕಿದ್ದಕ್ಕೆ ಅನೇಕರು ಮರುಗಿದ್ದಾರೆ. ‘ಪ್ರೀತಿಯಿಂದ ಸಾಕಿದ ನಾಯಿಮರಿಯನ್ನು ಮೊಸಳೆಯಂಥ ಪರಭಕ್ಷಕ ಸರೀಸೃಪದ ಎದುರು ಹೀಗೆಲ್ಲ ಬಿಟ್ಟಿದ್ದೇ ತಪ್ಪು’ ಎಂದು ಅನೇಕರು ಅದನ್ನು ಸಾಕಿದವರನ್ನೇ ಕಟುವಾಗಿ ಟೀಕಿಸಿದ್ದಾರೆ.