ಬೆಕ್ಕುಗಳ ಸಾಮಾಜಿಕ ವರ್ತನೆ ಮತ್ತು ತರಬೇತಿ ಸ್ವರೂಪಗಳ ಅಧ್ಯಯನಕ್ಕೆ ತಮಗೆ ನೆರವು ನೀಡುವಂತೆ ಬೆಕ್ಕಿನ ಒಡೆಯರನ್ನು ಅಮೆರಿಕದ ಕ್ಯಾಲಿಫೋರ್ನಿಯಾದ ಕೆಲವು ವಿಜ್ಞಾನಿಗಳು ಕೋರಿದ್ದಾರೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಡೆವಿಸ್ ಆವರಣದಲ್ಲಿ ನಡೆಯುತ್ತಿರುವ ಈ ಅಧ್ಯಯನದಲ್ಲಿ, ಬೆಕ್ಕುಗಳ ಸಾಮಾಜಿಕ ವರ್ತನೆಯ ಬಗ್ಗೆ ಮಾಹಿತಿ ನೀಡಿ ಎಂದು ಬೆಕ್ಕುಗಳ ಒಡೆಯರನ್ನು ವಿಜ್ಞಾನಿಗಳು ಕೇಳಿದ್ದಾರೆ. ಇದರಿಂದ ಬೆಕ್ಕು ಹಾಗೂ ಮಾನವರ ನಡುವಿನ ಬಾಂಧವ್ಯ ವೃದ್ಧಿ ಸಾಧ್ಯವೇ ಎಂಬುದನ್ನು ಅವರು ಪರಿಶೀಲಿಸುತ್ತಿದ್ದಾರೆ.
ʻಬೆಕ್ಕುಗಳ ಸಾಮಾಜಿಕ ವರ್ತನೆಯನ್ನು ಗಮನಿಸುವಾಗ ಹೊಸ ಜನ, ಜಾಗ ಮತ್ತು ವಸ್ತುಗಳು ಎದುರಾದರೆ, ಅವುಗಳ ವರ್ತನೆ ಹೇಗಿರುತ್ತದೆ ಎಂಬುದು ಪ್ರಮುಖವಾದದ್ದು. ಇದಕ್ಕಾಗಿ ಬೆಕ್ಕುಗಳ ಶಿಶು ವಿಹಾರದಿಂದ (ಕಿಟೆನ್ ಕಿಂಡರ್‌ಗಾರ್ಟನ್) ಹಿಡಿದು, ತಮ್ಮ ಮಾಲೀಕರೊಂದಿಗೆ ತಿರುಗಾಡುವ ದೊಡ್ಡ ಬೆಕ್ಕುಗಳವರೆಗೆ ಎಲ್ಲವನ್ನೂ ಪರಿಶೀಲಿಸಲಾಗುವುದುʼ ಎಂದು ಈ ಅಧ್ಯಯನದಲ್ಲಿ ಪಾಲ್ಗೊಂಡಿರುವ ಸಂಶೋಧನಾ ವಿದ್ಯಾರ್ಥಿನಿ ಜೆನ್ನಿಫರ್ ಲಿಂಕ್ ಹೇಳಿದ್ದಾರೆ. ಈ ಅಧ್ಯಯನದ ವರದಿಯನ್ನು ಬೆಕ್ಕುಗಳ ಆಶ್ರಯ ತಾಣಗಳು, ವರ್ತನೆ ಅಧ್ಯಯನಕಾರರು ಮತ್ತು ಆಸಕ್ತರೊಂದಿಗೆ ಹಂಚಿಕೊಳ್ಳಲಾಗುವುದು.
ನಾಯಿಗಳಂತೆಯೇ ಬೆಕ್ಕುಗಳೂ ಸಾಕು ಪ್ರಾಣಿಗಳೇ ಆದರೂ, ಶ್ವಾನಗಳಷ್ಟು ಸುಲಭವಾಗಿ ಮಾರ್ಜಾಲಗಳು ಅಧ್ಯಯನಕ್ಕೆ ನಿಲುಕುವುದಿಲ್ಲ. ಅಪರಿಚಿತ ಸ್ಥಳ, ವ್ಯಕ್ತಿ, ವಸ್ತುಗಳ ಸಮ್ಮುಖದಲ್ಲಿ ಅವುಗಳು ಮುಗುಮ್ಮಾಗಿ ವರ್ತಿಸುತ್ತವೆ. ತನಗೆ ಆರಾಮವೆನಿಸುವ ಆವರಣದಲ್ಲಿ ಬೇರೆಯದೇ ರೀತಿಯಲ್ಲಿ ವರ್ತಿಸುತ್ತವೆ. ಹಾಗಾಗಿ ಬೆಕ್ಕುಗಳ ಮಾಲೀಕರಲ್ಲಿ ಈ ಬಗ್ಗೆ ನೆರವಾಗುವಂತೆ ಸಂಶೋಧಕರು ಕೋರಿದ್ದಾರೆ. ಮುಂದಿನ ಒಂದೂವರೆ ವರ್ಷಗಳಲ್ಲಿ ತಮ್ಮ ವರದಿಯನ್ನು ಸಿದ್ಧಪಡಿಸುವ ಯೋಜನೆ ಹೊಂದಿರುವ ಈ ಅಧ್ಯಯನಕಾರರು, ಇದಕ್ಕಾಗಿ ಸುಮಾರು 2,500 ಮಂದಿಯ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದಾರೆ. ಮಾತ್ರವಲ್ಲ, ಬೆಕ್ಕುಗಳ ವರ್ತನೆಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಹಾಯವಾಗುವ ವಿಡಿಯೋಗಳನ್ನೂ ವೀಕ್ಷಿಸುವಂತೆ ಈ ಮಾಲೀಕರನ್ನು ಕೋರಲಾಗಿದೆ.
ಇದನ್ನೂ ಓದಿ: ನಾಯಿಗಳ ʼಸೌಂದರ್ಯ ಸ್ಪರ್ಧೆʼಯಲ್ಲಿ ಗೆದ್ದ ಮಿ. ಹ್ಯಾಪಿ ಫೇಸ್ ಹೇಗಿದೆ ನೋಡಿ!