Site icon Vistara News

Viral Video: ಕ್ರೂರ ಮೊಸಳೆ-ಜಾಣ ಜಿಂಕೆ; ಒಂದೇ ಜಂಪ್​​ ನಲ್ಲಿ ಜೀವ ಉಳಿಯಿತು!

Deer Drinking Water

#image_title

ಉದ್ಯಮಿ ಆನಂದ್ ಮಹೀಂದ್ರಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ಆ್ಯಕ್ಟಿವ್​. ವಿಶೇಷವಾದ, ಹೊಸತನ ತುಂಬಿರುವ ವಿಡಿಯೊ, ಫೋಟೋಗಳನ್ನು ಅವರು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ನೀವು ಒಮ್ಮೆ ಅವರ ಟ್ವಿಟರ್ ಅಕೌಂಟ್​ಗೆ ಭೇಟಿ ಕೊಟ್ಟರೆ ಅಂಥ ಹಲವು ವಿಡಿಯೊಗಳನ್ನು ನೋಡಬಹುದು.ಅಂದಹಾಗೇ ಆನಂದ್ ಮಹೀಂದ್ರಾ ಅವರು ಈಗ ಶೇರ್​ ಮಾಡಿಕೊಂಡಿದ್ದು ಒಂದು ಜಿಂಕೆ ಮತ್ತು ಮೊಸಳೆ ವಿಡಿಯೊವನ್ನು. ಆ ವಿಡಿಯೊ (Viral Video) ನೋಡಿದರೆ ಒಂದು ಕ್ಷಣ ಮೈ-ಮನಸ್ಸು ಜುಂ ಎನ್ನುತ್ತದೆ.

ವನ್ಯಜೀವಿಗಳ ಲೋಕವೇ ಹಾಗೆ, ಅಲ್ಲಿ ಬೇಟೆಯಾಡುವ ದೊಡ್ಡ ಪ್ರಾಣಿಗಳ ಚುರುಕುತನ, ಅದನ್ನು ತಪ್ಪಿಸಿಕೊಳ್ಳುವ ಚಿಕ್ಕಪುಟ್ಟ ಪ್ರಾಣಿಗಳ ಚಾಣಾಕ್ಷತನ ಪ್ರಕೃತಿ ಸಹಜ. ಪ್ರತಿನಿತ್ಯವೂ ಇಂಥದ್ದೆಲ್ಲ ನಡೆಯುತ್ತಿದ್ದರೂ, ಅಪರೂಪಕ್ಕೆ ಅದು ಮನುಷ್ಯರ ಕಣ್ಣಿಗೆ ಗೋಚರಿಸುತ್ತದೆ. ವನ್ಯಜೀವಿ ಫೋಟೋ ಗ್ರಾಫರ್​ಗಳ ಕ್ಯಾಮರಾದಲ್ಲಿ ಅಂಥ ದೃಶ್ಯಗಳು ಸೆರೆಯಾಗುತ್ತವೆ. ಇದೀಗ ಆನಂದ್​ ಮಹೀಂದ್ರಾ ಶೇರ್ ಮಾಡಿಕೊಂಡಿರುವ ವಿಡಿಯೊ ಸಿಕ್ಕಾಪಟೆ ವೈರಲ್​ ಆಗುತ್ತಿದೆ.

ಇಲ್ಲಿ ಬೇಟೆಗೆ ಬರುವ ಮೊಸಳೆಯ ಕ್ರೌರ್ಯ, ಒಂದೇ ಕ್ಷಣದಲ್ಲಿ ಜಿಂಕೆಯನ್ನು ಹಿಡಿದು ಬಾಯಿಗೆ ಹಾಕಿಕೊಳ್ಳಲು ಅದಕ್ಕಿರುವ ತವಕ ಮತ್ತು ಅಷ್ಟೇ ಸೆಕೆಂಡ್​​ಗಳಲ್ಲಿ ಜಿಂಕೆ ಒಂದು ಜಂಪ್​ ಮಾಡಿ, ತಪ್ಪಿಸಿಕೊಳ್ಳುವ ದೃಶ್ಯವನ್ನು ನೋಡಬಹುದು. ಆ ಜಿಂಕೆ ನೀರು ಕುಡಿಯಲೆಂದು ಒಂದು ಕೊಳದ ಬಳಿ ಬಂದು ಇನ್ನೇನು ನೀರಿಗೆ ಬಾಯಿ ಹಾಕಿತ್ತು, ಅಷ್ಟರಲ್ಲಿ ಬೃಹದಾಕಾರದ ಮೊಸಳೆ ಜಿಂಕೆಯನ್ನು ಹಿಡಿದು ತಿನ್ನಲು, ದೊಡ್ಡದಾಗಿ ಬಾಯ್ತೆರೆದುಕೊಂಡು ನೀರಿಂದ ಹೊರಗೆ ಬಂದಿತ್ತು. ಆಹಾ..ಆ ಜಿಂಕೆಯ ಜಿಗಿತವನ್ನು ನೀವು ವಿಡಿಯೋದಲ್ಲೇ ನೋಡಬೇಕು..! ಕ್ರಿಕೆಟ್​ನಲ್ಲೆಲ್ಲ 1 ಬಾಲ್​ಗೆ 6 ರನ್​ ಬೇಕಿದ್ದಾಗ, ಲಾಸ್ಟ್​ ಬಾಲ್​​ನಲ್ಲಿ ಸಿಕ್ಸರ್​ ಹೊಡೆದು ಗೆಲ್ಲಿಸುತ್ತಾರಲ್ಲ, ಜಿಂಕೆಯ ಜಿಗಿತವೂ ಹಾಗೇ ಗೋಚರಿಸುತ್ತದೆ. ಎಷ್ಟಾದರೂ ಜೀವದ ವಿಷಯ ಇದು ನೋಡಿ..ಅತ್ಯಂತ ಚಾಣಾಕ್ಷತನದಿಂದ ಜಿಂಕೆ ತನ್ನನ್ನು ತಾನು ಉಳಿಸಿಕೊಂಡಿದೆ.

ಆನಂದ್ ಮಹೀಂದ್ರಾ ಅವರು ಸೋಮವಾರದ ಸ್ಫೂರ್ತಿ (Monday Motivation) ಎಂದು ಕ್ಯಾಪ್ಷನ್ ಬರೆದು ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ. ಹಾಗೆ ಸಂದೇಶವೊಂದನ್ನು ಕೊಟ್ಟಿದ್ದಾರೆ. ನಾವು ಯಾವತ್ತೂ ಅಲರ್ಟ್​ ಆಗಿರಬೇಕು. ನಾವೆಲ್ಲಿದ್ದೇವೆ, ಏನಾಗುತ್ತಿದೆ ಎಂಬ ಬಗ್ಗೆ ಸದಾ ಗಮನ ಇಟ್ಟಿರಬೇಕು ಎಂದು ಹೇಳಿದ್ದಾರೆ. ಈಗಾಗಲೇ 3.56 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿರುವ ವಿಡಿಯೊಕ್ಕೆ 10 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ಸ್​ ಕೊಟ್ಟಿದ್ದಾರೆ. ನೆಟ್ಟಿಗರು ಅಚ್ಚರಿ ಮತ್ತು ಜಿಂಕೆಯ ಜಾಣತನವನ್ನು ಹೊಗಳುತ್ತಿದ್ದಾರೆ.

Exit mobile version