Site icon Vistara News

Viral Video | ಪಂಜಾಬ್​ ಆಮ್​ ಆದ್ಮಿ ಪಕ್ಷದ ಶಾಸಕಿಗೆ ಪತಿಯಿಂದಲೇ ಥಳಿತ

Punjab

ಚಂಡಿಗಢ್​: ಆಮ್​ ಆದ್ಮಿ ಪಕ್ಷದ ಶಾಸಕಿಯೊಬ್ಬರು ತನ್ನ ಪತಿಯಿಂದಲೇ ಥಳಿತಕ್ಕೆ (AAP MLA Baljinder Kaur assaulted) ಒಳಗಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹಲವರು ವಿಡಿಯೋವನ್ನು ಶೇರ್ ಮಾಡಿಕೊಂಡು, ಮಹಿಳೆ ಯಾವುದೇ ಸ್ಥಾನದಲ್ಲಿ ಇರಲಿ, ಆಕೆಯೊಬ್ಬ ಜನಪ್ರತಿನಿಧಿಯೇ ಆಗಿರಲಿ, ಅವಳ ಮೇಲಿನ ದೌರ್ಜನ್ಯ ಮಾತ್ರ ನಿಲ್ಲೋದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಂಜಾಬ್​ನ ಆಮ್​ ಆದ್ಮಿ ಪಕ್ಷದ (AAP)ಶಾಸಕಿ ಬಲ್ಜಿಂದರ್​ ಕೌರ್​ಗೆ ಆಕೆಯ ಪತಿ ಸುಖ್​ರಾಜ್ ಬಾಲ್​, ಮನೆಯಲ್ಲೇ ಹೊಡೆದಿರುವ ವಿಡಿಯೋ ಇದು. ಕುಟುಂಬದ ಏಳೆಂಟು ಜನ ಅಲ್ಲಿದ್ದಾರೆ. ಸುಖ್​ರಾಜ್​ ಮತ್ತು ಬಲ್ಜಿಂದರ್​ ಕೌರ್​ ಇಬ್ಬರೂ ಜಗಳವಾಡುತ್ತಾರೆ. ಮಾತಿಗೆ ಮಾತು ಬೆಳೆಸುತ್ತ ಸುಖ್​ರಾಜ್​ ಪಕ್ಕಕ್ಕೆ ಬಂದು ಕುಳಿತಿದ್ದಾನೆ. ಮತ್ತೆ ಅವನ ಎದುರು ಬಂದು ನಿಂತ ಬಲ್ಜಿಂದರ್​ ಕೌರ್​ ಏನೋ ಹೇಳಿದ್ದಾರೆ. ಆಗ ಒಮ್ಮೆಲೇ ಕುಪಿತಗೊಂಡ ಸುಖ್​ರಾಜ್​ ಎದ್ದು, ತನ್ನ ಪತ್ನಿಗೆ ಹೊಡೆದಿದ್ದಾನೆ. ಅಲ್ಲೇ ಇದ್ದ ಇಬ್ಬರು ಅವಳನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿದ್ದಾರೆ. ಇನ್ನಷ್ಟು ಜನ ಈತನನ್ನು ದೂರಕ್ಕೆ ಕರೆದುಕೊಂಡು ಹೋಗಿದ್ದಾರೆ. ನಂತರ ಶಾಸಕಿ ಅಳುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ಎರಡು ತಿಂಗಳ ಹಳೇದಾಗಿದ್ದರೂ ಈಗ ಭರ್ಜರಿ ವೈರಲ್ ಆಗುತ್ತಿದೆ. ಇದು ಪಂಜಾಬ್ ಆಪ್​ ಪಕ್ಷಕ್ಕೆ ಮುಜುಗರವನ್ನೂ ತಂದಿದೆ.

ಪಂಜಾಬ್​ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮನೀಶಾ ಗುಲಾಟಿ ಈ ಬಗ್ಗೆ ಮಾತನಾಡಿ, ‘ಬಲ್ಜಿಂದರ್​ ಕೌರ್​ಗೆ ಆಕೆಯ ಪತಿ ಹೊಡೆದ ವಿಡಿಯೋವನ್ನು ನಾನು ಸೋಷಿಯಲ್ ಮೀಡಿಯಾದಲ್ಲಿ ನೋಡಿದೆ. ಈ ಕೇಸ್​​ನ್ನು ನಾವು ಸುಮೊಟೊ ಆಗಿ ಕೈಗೆತ್ತಿಕೊಳ್ಳುತ್ತೇವೆ. ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಬೇಕಾದ, ಸಾಮಾನ್ಯ ಮಹಿಳೆಯರು ಶೋಷಣೆಗೊಳಗಾದಾಗ ಅದರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಒಬ್ಬ ಶಾಸಕಿ ತನ್ನ ಮನೆಯಲ್ಲೇ, ಪತಿಯಿಂದಲೇ ದೌರ್ಜನ್ಯಕ್ಕೀಡಾಗುತ್ತಿದ್ದಾಳೆ. ಇದು ನಾಚಿಕೆಗೇಡು. ನಾನು ಬಲ್ಜಿಂದರ್​ ಕೌರ್ ಖಾಸಗಿತನಕ್ಕೆ ಗೌರವ ಕೊಡುತ್ತೇನೆ. ಆದರೆ ವಿಡಿಯೋ ಈಗ ಪಬ್ಲಿಕ್​ ಆಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲೇಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video | ಜೋರಾಗಿ ಉಯ್ಯಾಲೆ ಆಡುತ್ತ ತಿರುತಿರುಗಿ ಬಿದ್ದ ಮಹಿಳೆ; ಜೋಕಾಲಿ ಜೋಕೆ !

Exit mobile version