ಭಾರತದಲ್ಲಿ ಆಹಾರ ವಿವಿಧತೆ ಕೂಡ ವಿಶಾಲವಾಗಿದೆ. ದೇಶಾದ್ಯಂತ ಒಂದೊಂದು ಭಾಗದಲ್ಲಿ ಒಂದೊಂದು ವಿಧದ ಖಾದ್ಯಗಳು ಜನಪ್ರಿಯ. ಎಲ್ಲ ಸ್ಪೆಶಲ್ ತಿಂಡಿಗಳ ಮಧ್ಯೆಯೂ ಜನಪ್ರಿಯತೆ ಕಾಯ್ದುಕೊಂಡಿರುವುದು ಪಾನಿಪುರಿ (Pani Puri) ಎಂಬ ಪುಟ್ಟಪುಟ್ಟ ಪುರಿಗಳು, ಪಲ್ಯ ಮತ್ತು ಅದಕ್ಕೊಪ್ಪುವ ಪಾನಿಯನ್ನು ಒಳಗೊಂಡ ಸ್ನ್ಯಾಕ್. ಇಡೀ ದೇಶದಲ್ಲಿ ಒಂದೊಂದು ಕಡೆಗಳಲ್ಲಿ ಒಂದೊಂದು ಹೆಸರಿನಿಂದ ಕರೆಯಲ್ಪಡುವ ಪಾನಿಪುರಿಯನ್ನು ಇಷ್ಟಪಡದವರ ಸಂಖ್ಯೆ ಸಣ್ಣದು. ಚಿಕ್ಕಮಕ್ಕಳಿಂದ ಹಿಡಿದು, ವೃದ್ಧರವರೆಗೆ ಬಾಯಿ ಚಪ್ಪರಿಸಿಕೊಂಡು ತಿನ್ನುವ ಇದನ್ನು ಈಗೀಗಂತೂ ಮದುವೆ ಸಮಾರಂಭದಲ್ಲೂ ಇಡಲಾಗುತ್ತಿದೆ..!
ಅಂಥ ಪಾನಿಪುರಿ ಬಗ್ಗೆ ಈಗೊಂದು ಸುದ್ದಿಯಿದೆ. ಆಸ್ಟ್ರೇಲಿಯಾದ ಅಡುಗೆ ರಿಯಾಲಿಟಿ ಶೋ ‘ಮಾಸ್ಟರ್ಶೆಫ್’ನಲ್ಲಿ ಭಾಗವಹಿಸಿದ್ದ ಭಾರತೀಯ ಮೂಲದ ಸ್ಪರ್ಧಿ ಆದಿ ನೇವ್ಗಿ ಅವರು ಅದರಲ್ಲಿ ಪಾನಿಪುರಿ ತಯಾರಿಸಿ ಭಾರತದ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆಸ್ಟ್ರೇಲಿಯಾದ ಮಾಸ್ಟರ್ ಶೆಫ್ ಒಂದು ಖ್ಯಾತ ಅಡುಗೆ ಕಾರ್ಯಕ್ರಮವಾಗಿದ್ದು, ಭಾರತ ಸೇರಿ ವಿವಿಧ ದೇಶಗಳ ಅಡುಗೆಗೆ ವೇದಿಕೆಯಾಗಿದೆ. ಇಲ್ಲಿ ಜಗತ್ತಿನ ಬೇರೆಬೇರೆ ದೇಶಗಳ ಬಾಣಸಿಗರು ಸ್ಪರ್ಧಿಸಿ, ವಿಶೇಷ ಅಡುಗೆಗಳನ್ನು ತಯಾರಿಸುತ್ತಾರೆ. ಜಡ್ಜ್ಗಳು ಅವರ ಅಡುಗೆಯ ಶುಚಿ-ರುಚಿ-ವಿಶೇಷತೆ ಗಮನಿಸಿ ವಿಜೇತರನ್ನು ಘೋಷಣೆ ಮಾಡುತ್ತಾರೆ.
ಇದನ್ನೂ ಓದಿ: Viral News: ಮಹಿಳೆಗೆ ನಿಗದಿತ ಸಮಯಕ್ಕೆ ಸ್ಕೂಟಿ ಡೆಲಿವರಿ ಮಾಡದ ಓಲಾಗೆ ಬಿತ್ತು 2.05 ಲಕ್ಷ ರೂ. ದಂಡ!
ಇದೀಗ 31 ವರ್ಷದ ಆದಿ ನೆವ್ಗಿ ಅವರು ಆಸ್ಟ್ರೇಲಿಯಾ ಮಾಸ್ಟರ್ ಶೆಫ್ನ 15ನೇ ಸೀಸನ್ನಲ್ಲಿ ಭಾಗವಹಿಸಿ, ಪಾನಿಪುರಿ ತಯಾರಿಸಿದ್ದರು. ಅದಕ್ಕೆ ಮೆಕ್ಸಿಕನ್ ಟಚ್ ಕೊಟ್ಟಿದ್ದರು. ಅಂದರೆ ಪಾನಿಪುರಿಯ ಪಲ್ಯವನ್ನು ಆಲೂಗಡ್ಡೆ, ಬಟಾಣಿಯಲ್ಲಿ ತಯಾರಿಸುವ ಬದಲು ಬಟರ್ಫ್ರುಟ್ (ಅವಕಾಡೊ ಅಥವಾ ಬೆಣ್ಣೆಹಣ್ಣು), ಸಾಲ್ಮೋನ್ ರೊ (ಸಾಲ್ಮೋನೈಡ್ ಮೀನುಗಳಿಂದ ತಯಾರಿಸುವುದು) ಗಳನ್ನು ಹಾಕಿದ್ದರು. ಇವರ ಈ ಪಾನಿಪುರಿಯನ್ನು ಜಡ್ಜ್ಗಳಾದ ಮೆಲಿಸ್ಸಾ ಲಿಯಾಂಗ್, ಆಂಡಿ ಅಲೆನ್ ಮತ್ತು ಜಾಕ್ ಝೊನ್ಫ್ರಿಲ್ಲೊ ಅವರು ಹೊಗಳಿದ್ದಾರೆ. ಸಖತ್ ಆಗಿದೆ ಎಂದು ಹೇಳಿದ್ದಾರೆ.
ಆದರೆ ನೆಟ್ಟಿಗರು ಮಾತ್ರ ಈ ಬಟರ್ಫ್ರುಟ್ ಪಾನಿಪುರಿಯನ್ನು ಜೀರ್ಣಿಸಿಕೊಳ್ಳಲು ಸಿದ್ಧರಿಲ್ಲ. ತಿನ್ನೋದಿರಲಿ, ನೋಡಿದರೆ ಅಜೀರ್ಣವಾದಂತೆ ಆಗುತ್ತಿದೆ ಎನ್ನುತ್ತಿದ್ದಾರೆ. ಭಾರತೀಯರು ಇದನ್ನು ಮನಸಿಗೆ ತೆಗೆದುಕೊಂಡುಬಿಟ್ಟಿದ್ದಾರೆ. ಪಾನಿಪುರಿಗೆ ಆ ಯುವತಿ ಮಾಡಿದ್ದು ಅವಮಾನ ಎನ್ನುತ್ತಿದ್ದಾರೆ. ‘ಇಂಥ ಅಪರಾಧಕ್ಕಾಗಿ ಆಕೆಯನ್ನು ಜೈಲಿಗೆ ಹಾಕಬೇಕು’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಹಾಗೇ, ಸಾಲ್ಮೋನ್ ರೊ ಹಾಕೋದು ಒಕೆ, ಆ ಅವಕಾಡೊ ಹಣ್ಣು ಯಾಕೆ? ಅದರಲ್ಲೇನು ರುಚಿಯಿದೆ?’ ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ. ಒಟ್ನಲ್ಲಿ ಆಕೆಯ ಅವಕಾಡೊ ಪಾನಿಪುರಿಯನ್ನು ನೆಟ್ಟಿಗರು ಒಪ್ಪಿಕೊಳ್ತಿಲ್ಲ.
time to unsubscribe hotstar pic.twitter.com/48MYRHJYMP
— Ishita Sengupta (@MadameSengupta) June 22, 2023