ವಿಶ್ವದ ಅತ್ಯಂತ ಎತ್ತರದ ಮಹಿಳೆ ಎಂದು ಗಿನ್ನೀಸ್ ವಿಶ್ವ ದಾಖಲೆ ನಿರ್ಮಿಸಿರುವ ಟರ್ಕಿಯ ರುಮೆಯ್ಸಾ ಗೆಲ್ಗಿ (25) ತಮ್ಮ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡಿದ್ದಾರೆ. ಈಕೆ 7 ಅಡಿಗೂ ಹೆಚ್ಚು ಎತ್ತರವಿದ್ದು, ಈಗಾಗಲೇ ಸಖತ್ ಫೇಮಸ್. ತಮ್ಮ ಎತ್ತರದ ಕಾರಣಕ್ಕೇ ಖ್ಯಾತರಾಗಿರುವ ರುಮೆಯ್ಸಾ ಗೆಲ್ಗಿ ಈಗ ಅದೇ ಎತ್ತರದ ಕಾರಣದಿಂದ ತಮ್ಮ ಮೊದಲ ವಿಮಾನ ಪ್ರಯಾಣದಲ್ಲಿ ಪರದಾಡುವಂತಾಯಿತು. ಆಕೆ ಅತಿ ಎತ್ತರ ಇರುವ ಕಾರಣಕ್ಕೆ ವಿಮಾನದ ಸೀಟ್ಗಳಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದೆ ಸಂಕಷ್ಟ ಪಡುವಂತಾಯ್ತು.
ರುಮೆಯ್ಸಾ ಗೆಲ್ಗಿ ಅವರು ಟರ್ಕಿಯ ಇಸ್ತಾಂಬುಲ್ನಿಂದ ಯುಎಸ್ನ ಸ್ಯಾನ್ ಫ್ರ್ಯಾನ್ಸಿಸ್ಕೋಕ್ಕೆ ಹೊರಟಿದ್ದರು. ಆಕೆ ಅತಿಯಾದ ಎತ್ತರ ಇರುವ ಕಾರಣದಿಂದ ಸರಿಯಾಗಿ ನಡೆದಾಡಲೂ ಕಷ್ಟಪಡುತ್ತಾರೆ. ಹೀಗಾಗಿ ಅವರು ಎಲ್ಲಿಗೇ ಪ್ರಯಾಣ ಮಾಡುವುದಾದರೂ ವೀಲ್ ಚೇರ್ ಮೇಲೆಯೇ ಹೋಗುತ್ತಾರೆ. ಆದರೆ ವಿಮಾನದಲ್ಲಿ ಅದೂ ಸಾಧ್ಯವಿಲ್ಲ. ಹೀಗಾಗಿ ರುಮೆಯ್ಸಾ ಗೆಲ್ಗಿಗಾಗಿ ವಿಮಾನದಲ್ಲಿ ಆರು ಸೀಟ್ಗಳನ್ನು ತೆಗೆದು, ಆಕೆಗೊಂದು ಪ್ರತ್ಯೇಕ ಕೊಠಡಿಯಂತೇ ಮಾಡಿ, ಅಲ್ಲಿ ಗೆಲ್ಗಿ ಮಲಗಿ ಹೋಗುವಂತೆ ವ್ಯವಸ್ಥೆ ಮಾಡಲಾಗಿತ್ತು.
ಟರ್ಕಿಶ್ ಏರ್ಲೈನ್ ತನಗಾಗಿ ಮಾಡಿಕೊಟ್ಟ ವ್ಯವಸ್ಥೆಯ ಫೋಟೋಗಳನ್ನು ಗೆಲ್ಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆರು ಸೀಟುಗಳನ್ನು ತೆಗೆದು ಆ ಸ್ಥಳದಲ್ಲಿ ಸ್ಟ್ರೆಚರ್ ಇಡಲಾಗಿತ್ತು. ಅದರ ಮೇಲೆ ಗೆಲ್ಗಿ ಆರಾಮವಾಗಿ ಮಲಗಿ ಪ್ರಯಾಣ ಮಾಡಿದ್ದಾರೆ. ವಿಶ್ವದ ಅತ್ಯಂತ ಎತ್ತರ ಮಹಿಳೆ ತಮ್ಮ ವಿಮಾನ ಹತ್ತಿದ್ದರಿಂದ ಅದರ ಸಿಬ್ಬಂದಿಯೂ ಫುಲ್ ಖುಷಿಯಾಗಿದ್ದರು.
ಇದನ್ನೂ ಓದಿ: Viral video | ಊಟಿಯ ಗಾಲ್ಫ್ ಕೋರ್ಸ್ ಪಕ್ಕದಲ್ಲೇ ಹುಲಿ ಹಸುವನ್ನು ತಿನ್ನುವ ದೃಶ್ಯ ವೈರಲ್!