ವಿಶಾಖಪಟ್ಟಣ: ಇಲ್ಲೊಬ್ಬಳು 21 ವರ್ಷದ ಯುವತಿ ಪರೀಕ್ಷೆ ಬರೆಯುವ ಸಲುವಾಗಿ ತನ್ನ ಪ್ರಾಣವನ್ನೇ ಒತ್ತೆಯಿಟ್ಟಿದ್ದರು. ಯುವತಿ ಮಾತ್ರವಲ್ಲ, ಆಕೆಯ ಇಬ್ಬರು ಸಹೋದರರೂ ರಿಸ್ಕ್ ತೆಗೆದುಕೊಂಡಿದ್ದಾರೆ. ಆಂಧ್ರಪ್ರದೇಶದಲ್ಲಿ ಪ್ರವಾಹದಿಂದ ತುಂಬಿ ಹರಿಯುತ್ತಿದ್ದ ಚಂಪಾವತಿ ನದಿಯನ್ನು ಈಜಿಕೊಂಡು ಹೋಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ತದ್ದಿ ಕಲಾವತಿ ಎಂಬ ಯುವತಿ ಆಂಧ್ರಪ್ರದೇಶದ ಮಾರಿವಿಲಾಸಾ ಗ್ರಾಮದ ನಿವಾಸಿ. ವಿಶಾಖಪಟ್ಟಣದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಹಾಗೇ ಯಾವುದೋ ಒಂದು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ತುರ್ತು ಕೆಲಸದ ನಿಮಿತ್ತ ತಮ್ಮ ಹಳ್ಳಿಗೆ ಬಂದಿದ್ದರು. ಆದರೆ ಶನಿವಾರವೇ (ಇಂದು) ಪರೀಕ್ಷೆ ನಡೆಯಲಿದೆ ಎಂದು ಗೊತ್ತಾಗುತ್ತಿದ್ದಂತೆ ವಾಪಸ್ ವಿಶಾಖಪಟ್ಟಣಕ್ಕೆ ಹೊರಡಲು ಸಿದ್ಧರಾದರು. ಆದರೆ ಈಕೆ ದಾಟಬೇಕಿದ್ದ ಚಂಪಾವತಿ ನದಿ ಉಕ್ಕುಕ್ಕಿ ಹರಿಯುತ್ತಿತ್ತು. ವಿಪರೀತ ಮಳೆಯಿಂದಾಗಿ ಆಂಧ್ರಪ್ರದೇಶದ ಉತ್ತರ ಕರಾವಳಿ ಭಾಗದಲ್ಲಿ ನದಿಗಳೆಲ್ಲ ಅಪಾಯ ಮಟ್ಟ ಮೀರಿವೆ. ಅದರಲ್ಲಿ ಈ ಚಂಪಾವತಿಯೂ ಒಂದು.
ಆದರೆ ಪರೀಕ್ಷೆ ತಪ್ಪಿಸಿಕೊಳ್ಳಲು ಇಷ್ಟಪಡದ ಕಲಾವತಿ ಹೋಗಲೇಬೇಕು ಎಂದಿದ್ದಾಳೆ. ಅದಕ್ಕೆ ಆಕೆಯ ಸಹೋದರರೂ ಸಹಾಯಕ್ಕೆ ನಿಂತರು. ಇಬ್ಬರೂ ತಮ್ಮ ಹೆಗಲ ಮೇಲೆ ಆಕೆಯನ್ನು ಕೂರಿಸಿಕೊಂಡು ಪ್ರವಾಹದ ನದಿಯಲ್ಲಿ ಈಜುತ್ತ ಸಾಗಿದ್ದಾರೆ. ಇಲ್ಲಿ ಮೂವರ ಜೀವವೂ ಅಪಾಯದಲ್ಲೇ ಇತ್ತು. ಆದರೆ ಅದನ್ನೆಲ್ಲ ಲೆಕ್ಕಿಸದೆ ಇನ್ನೊಂದು ದಡವನ್ನು ಸೇರಿಕೊಂಡಿದ್ದಾರೆ. ಅದೃಷ್ಟಕ್ಕೆ ಯಾವುದೇ ಅಪಾಯವೂ ಅವರಿಗೆ ಆಗಲಿಲ್ಲ. ವಿಡಿಯೋ ನೋಡಿದ ಜನರು ‘ಇದು ಅಪಾಯಕಾರಿ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಮೊಸಳೆಗಳಿಗೂ ಅಂಜದೆ ಈಜಿಕೊಂಡೇ ಭಾರತಕ್ಕೆ ಬಂದು ಪ್ರಿಯತಮನ ತೆಕ್ಕೆ ಸೇರಿದ ಬಾಂಗ್ಲಾ ಯುವತಿ