ಜಮ್ಮು : ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಗಣೇಶೋತ್ಸವ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು ಆಂಜನೇಯ ವೇಷಧರಿಸಿ ಕುಣಿಯುತ್ತಲೇ ಕುಸಿದು ಬಿದ್ದು ಮೃತಪಟ್ಟಿದ್ದರು. ಆ ವಿಡಿಯೋ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಈಗ ಅಂಥದ್ದೇ ಮತ್ತೊಂದು ಘಟನೆ ನಡೆದಿದೆ. ಜಮ್ಮುವಿನ ಬಿಷ್ಣಾಹ್ ಎಂಬಲ್ಲಿ ನಡೆಯುತ್ತಿದ್ದ ಗಣೇಶೋತ್ಸವ ಸಮಾರಂಭದಲ್ಲಿ ಪಾರ್ವತಿ ದೇವಿಯ ವೇಷ ಧರಿಸಿ ನೃತ್ಯ ಮಾಡುತ್ತಿದ್ದ ಯುವ ಕಲಾವಿದನೊಬ್ಬ ಹೀಗೆ ಡ್ಯಾನ್ಸ್ ಮಾಡುತ್ತಲೇ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅವರನ್ನು ಯೋಗೇಶ್ ಗುಪ್ತಾ ಎಂದು ಗುರುತಿಸಲಾಗಿದ್ದು, ಅವರ ವಯಸ್ಸು ಇನ್ನೂ 20 ವರ್ಷ.
ಈತ ಹುಡುಗ ಆಗಿದ್ದರೂ ಪಾರ್ವತಿ ದೇವಿಯ ವೇಷ ಹಾಕಿದ್ದ. ಥೇಟ್ ಮಹಿಳೆಯರು ನೃತ್ಯ ಮಾಡಿದಂತೆ ಉತ್ಸಾಹದಲ್ಲಿ ಡ್ಯಾನ್ಸ್ ಮಾಡುತ್ತಿದ್ದ. ಆ ನೃತ್ಯದ ಒಂದು ಭಾಗವಾಗಿಯೇ ಅವನು ಮೊದಲು ನೆಲಕ್ಕೆ ಬಿದ್ದ. ಆದರೆ ನಂತರ ಎದ್ದರೂ ಕೂಡ ಮತ್ತೆ ಬಳಲಿ ಬಿದ್ದಿದ್ದಾನೆ. ಆತ ಏಳಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಲ್ಲಿಯೇ ಉಸಿರು ನಿಲ್ಲಿಸಿದ್ದಾನೆ. ಆದರೆ ಆ ಹುಡುಗ ಬಿದ್ದಿದ್ದರೂ ಆತ ಅಸ್ವಸ್ಥನಾಗಿ ಬಿದ್ದು ಜೀವ ಬಿಟ್ಟಿದ್ದಾನೆ ಎಂಬುದು ಅಲ್ಲಿದ್ದವರಿಗೆ ಎಷ್ಟೋ ಹೊತ್ತಿನವರೆಗೆ ಗೊತ್ತಾಗಲಿಲ್ಲ. ಆದರೆ ಸ್ವಲ್ಪ ಹೊತ್ತಾದರೂ ಅವನು ಹಾಗೇ ಮಲಗಿದ್ದಾಗ ಶಿವನ ಪಾತ್ರಧಾರಿ ಬಂದು ಚೆಕ್ ಮಾಡಿದ್ದಾನೆ. ಆಗಲೇ ವಿಷಯ ಗೊತ್ತಾಗಿದೆ. ನಂತರ ಎಲ್ಲರೂ ಸೇರಿ ಯೋಗೇಶ್ ಗುಪ್ತಾನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಅಷ್ಟರಲ್ಲಿ ಕಾಲ ಮಿಂಚಿತ್ತು.
ಇತ್ತೀಚೆಗೆ ಇಂಥ ಹಲವು ಸನ್ನಿವೇಶಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ನೃತ್ಯ ಮಾಡುತ್ತಿದ್ದವರು, ಹಾಡು ಹೇಳುತ್ತಲೇ ಕುಸಿದು ಬಿದ್ದು ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವಿಡಿಯೋ ನೋಡಿದ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯೋಗೇಶ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: Viral Video | ಉತ್ತರ ಪ್ರದೇಶದಲ್ಲಿ ಆಂಜನೇಯನ ವೇಷ ಧರಿಸಿ ಕುಣಿಯುವಾಗಲೇ ಕುಸಿದು ವ್ಯಕ್ತಿ ಸಾವು!