ಲಂಡನ್: ಇತ್ತೀಚೆಗೆ ಚೀನಾ ದೇಶದ ಮೃಗಾಲಯವೊಂದರ ಕರಡಿಯ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವೈರಲ್ ಆಗಿತ್ತು. ಮನುಷ್ಯರಂತೇ ನಿಂತು, ನಡೆದುಕೊಂಡು ಇರುವ ಕರಡಿಯೊಂದರ ವಿಡಿಯೊ ಅದಾಗಿತ್ತು. ಆ ವಿಡಿಯೊ ಹರಿದಾಡಿದ ತಕ್ಷಣ ನೆಟ್ಟಿಗರು, ಮೃಗಾಲಯ ಜನರ ಕಣ್ಣು ಸೆಳೆಯುವುದಕ್ಕೆಂದು ಮನುಷ್ಯರಿಗೇ ಕರಡಿ ವೇಷ ಹಾಕಿ ಮೋಸ ಮಾಡುತ್ತಿದೆ ಎಂದು ಹೇಳಲಾರಂಭಿಸಿದ್ದರು. ಆದರೆ ಮೃಗಾಲಯ ಆ ಆರೋಪವನ್ನು ತಳ್ಳಿ ಹಾಕಿತ್ತು. ಅದು ನಿಜವಾದ ಕರಡಿ ಎಂದೇ ವಾದಿಸಿತ್ತು. ಇದೀಗ ಅಂಥದ್ದೇ ಮತ್ತೊಂದು ಕರಡಿ ಚೀನಾದಿಂದ ಬಹಳಷ್ಟು ದೂರದಲ್ಲಿರುವ ಬ್ರಿಟನ್‌ನಲ್ಲಿ ಕಾಣಿಸಿಕೊಂಡಿದೆ. ಅದರ ವಿಡಿಯೊ ಕೂಡ ವೈರಲ್ (Viral Video) ಆಗಿದೆ.
ಹೌದು. ಬ್ರಿಟನ್‌ನ ಪ್ಯಾರಡೈಸ್ ವನ್ಯಜೀವಿ ಉದ್ಯಾನದಿಂದ ಇಂಥದ್ದೊಂದು ಕರಡಿಯ ವಿಡಿಯೊವನ್ನು ಹರಿಬಿಡಲಾಗಿದೆ. ವಿಡಿಯೊದಲ್ಲಿ ಕರಡಿ ಮೊದಲಿಗೆ ನಾಲ್ಕು ಕಾಲುಗಳಿಂದ ನಡೆದುಕೊಂಡು ಬರುತ್ತಾದರೂ ಕೆಲವೇ ಸೆಕೆಂಡುಗಳಲ್ಲಿ ಮನುಷ್ಯರ ರೀತಿಯಲ್ಲಿ ನಿಂತುಕೊಳ್ಳುತ್ತದೆ. ಹಾಗೆಯೇ ನಿಂತುಕೊಂಡು ತಲೆಯನ್ನು ಅತ್ತ ಇತ್ತ ಆಡಿಸುತ್ತದೆ.
ಈ ರೀತಿ ಮನುಷ್ಯರಂತೆಯೇ ನಿಲ್ಲುವ, ಓಡಾಡುವ ಕರಡಿಯ ಹೆಸರು ಕೈರಾ ಎಂದು ಮೃಗಾಲಯ ಹೇಳಿದೆ. ಇದು ಸನ್ ಬಿಯರ್ ಪ್ರಭೇದ ಎಂದು ತಿಳಿಸಲಾಗಿದೆ. “ಕೈರಾ ಸನ್ ಬಿಯರ್ ಎನ್ನುವುದನ್ನು ನಾವು ದೃಢೀಕರಿಸಬಲ್ಲೆವು” ಎಂದು ವಿಡಿಯೊಗೆ ಕ್ಯಾಪ್ಶನ್ ರೀತಿಯಲ್ಲಿ ಮೃಗಾಲಯ ತಿಳಿಸಿದೆ.
ಇದನ್ನೂ ಓದಿ: Viral News : ಬಾನೆಟ್ ಮೇಲೆ ಕುಳಿತು ಜಾಲಿ ರೈಡ್; ಯೂಟ್ಯೂಬರ್ ಗೌರಿಯ ಥಾರ್ ಪೊಲೀಸ್ ವಶಕ್ಕೆ!
ಈ ವಿಡಿಯೊವನ್ನು ಆಗಸ್ಟ್ 1ರಂದು ಪ್ಯಾರಡೈಸ್ ವನ್ಯಜೀವಿ ಉದ್ಯಾನವನವು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊವನ್ನು ಎರಡು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಾಗೆಯೇ 17 ಸಾವಿರಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್ ಮಾಡಿದ್ದಾರೆ. ನೂರಾರು ಮಂದಿ ವಿಡಿಯೊಗೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ಮೂಲಕ ವ್ಯಕ್ತಪಡಿಸಿದ್ದಾರೆ.
“ಈ ಕರಡಿ ಇಷ್ಟೇಕೆ ಮುದ್ದಾಗಿದೆ? ಇದನ್ನು ನೋಡಿದ ತಕ್ಷಣ ತಬ್ಬಿಕೊಳ್ಳಬೇಕು ಎನಿಸುತ್ತಿದೆ”, “ಅಯ್ಯೋ ದೇವರೇ… ಈ ಕರಡಿಯ ಕುತ್ತಿಗೆ ಏಕೆ ಅಷ್ಟೊಂದು ಅಗಲವಾಗಿದೆ. ಇದರ ಬಗ್ಗೆ ವದಂತಿ ಏಕಾಗಿ ಹಬ್ಬಿತು ಎನ್ನುವುದು ಈಗ ಗೊತ್ತಾಗುತ್ತಿದೆ”, “ಈ ಕರಡಿ ನಿಜಕ್ಕೂ ನಕಲಿ ರೀತಿಯಲ್ಲೇ ಕಾಣುತ್ತಿದೆ. ಇದು ತೀರಾ ವಿಭಿನ್ನವಾಗಿದೆ”, “ಇತ್ತೀಚೆಗೆ ಜನರು ಪರಿಸರ ಬಗ್ಗೆ ಗಮನ ಹರಿಸದಿರುವುದು ಅವಮಾನಕರ. ಸನ್ ಬಿಯರ್ ಮತ್ತು ಮೂನ್ ಬಿಯರ್‌ಗಳು ಇವೆ. ಅವೆರೆಡೂ ಒಂದೇ ರೀತಿಯಲ್ಲಿ ಕಾಣುತ್ತವೆ” ಎಂದು ಜನರು ಕಮೆಂಟ್‌ಗಳನ್ನು ಮಾಡಿದ್ದಾರೆ.
ಇದಾದ ಮೇಲೆ ಪ್ಯಾರಡೈಸ್ ವನ್ಯಜೀವಿ ಉದ್ಯಾನವು ಈ ಕೈರಾ ಹೆಸರಿನ ಕರಡಿ ನಿಂತುಕೊಂಡು ಆಹಾರವನ್ನು ತಿನ್ನುತ್ತಿರುವ ವಿಡಿಯೊವನ್ನೂ ಹಂಚಿಕೊಂಡಿದೆ. “ನಾವು ಈಗಲೂ ಕೈರಾಳನ್ನು ಸನ್ ಬಿಯರ್ ಎಂದು ದೃಢೀಕರಿಸಲ್ಲೆವು” ಎಂದು ವಿಡಿಯೊಗೆ ಕ್ಯಾಪ್ಶನ್ ಅನ್ನು ಕೊಡಲಾಗಿದೆ. ಆ ವಿಡಿಯೊ ಕೂಡ ಸಾವಿರಾರು ಮಂದಿಯಿಂದ ವೀಕ್ಷಣೆ ಪಡೆದುಕೊಂಡಿದೆ.