ಪಾಟ್ನಾ: ಅಂತ್ಯಸಂಸ್ಕಾರವಾಗಿದ್ದ ಮಗಳು ಕೆಲವು ದಿನಗಳ ನಂತರ ಕುಟುಂಬಕ್ಕೆ ವಿಡಿಯೊ ಕಾಲ್ ಮಾಡಿ ತಾನಿನ್ನೂ ಬದುಕಿದ್ದೇನೆ ಎಂದು ಹೇಳಿರುವ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ. ಈ ವಿಚಾರ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದ್ದು, ಭಾರೀ ವೈರಲ್ (Viral News) ಆಗಿದೆ.
ಪುರ್ಣಿಯಾ ಪಟ್ಟಣದಲ್ಲಿ ವಾಸವಾಗಿದ್ದ ಅಂಶು ಕುಮಾರಿ ಹೆಸರಿನ ಯುವತಿ ತಿಂಗಳ ಹಿಂದೆ ತನ್ನ ಪ್ರಿಯತಮನೊಂದಿಗೆ ಓಡಿ ಹೋಗಿದ್ದಳು. ಆಕೆ ಓಡಿಹೋದ ನಂತರ ಆಕೆಗಾಗಿ ಇಡೀ ಕುಟುಂಬ ಎಲ್ಲ ಕಡೆಗಳಲ್ಲಿ ಹುಡುಕಾಡಿತ್ತು. ಮಗಳು ಕಾಣೆಯಾಗಿರುವುದಾಗಿ ಪೊಲೀಸರಿಗೂ ದೂರು ನೀಡಲಾಗಿತ್ತು. ಕಳೆದ ವಾರ ಸ್ಥಳೀಯ ನೀರಿನ ಕಾಲುವೆಯಲ್ಲಿ ಯುವತಿಯ ದೇಹವೊಂದು ಸಿಕ್ಕಿತ್ತು. ಶವದ ಗುರುತು ಹಿಡಿಯುವ ಪರಿಸ್ಥಿತಿಯಲ್ಲಿ ಇರಲಿಲ್ಲವಾದ್ದರಿಂದ ಪೊಲೀಸರು ಅಂಶು ಕುಮಾರಿ ಕುಟುಂಬವನ್ನು ಕರೆಸಿದ್ದರು. ಸ್ಥಳಕ್ಕೆ ಬಂದ ಅಂಶು ಕುಮಾರಿ ಕುಟುಂಬ ಶವ ತೊಟ್ಟಿದ್ದ ಉಡುಪನ್ನು ನೋಡಿ ಅದು ತಮ್ಮದೇ ಮಗಳು ಎಂದು ಹೇಳಿದ್ದರು.
ಇದನ್ನೂ ಓದಿ: Viral News : ಬಾರ್ಬಿಯಾಗಿ ಮಿಂಚುತ್ತಿದ್ದಾರೆ ದಕ್ಷಿಣ ಭಾರತದ ನಟಿಯರು!
ನಂತರ ಶವವನ್ನು ಅಂಶು ಕುಮಾರಿ ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು. ಮಗಳ ಸಾವಿನಿಂದಾಗಿ ಅಂಶು ಕುಮಾರಿ ತಂದೆ ತೀವ್ರ ನೊಂದಿದ್ದರು. ಅವರ ಕೈನಲ್ಲಿ ಅಂತ್ಯಸಂಸ್ಕಾರ ಮಾಡುವುದಕ್ಕೂ ಸಾಧ್ಯವಾಗಿಲ್ಲವಾದ್ದರಿಂದ ಯುವತಿಯ ಅಜ್ಜನೇ ಅಂತಿಮ ಕಾರ್ಯಗಳನ್ನು ನಡೆಸಿದ್ದರು.
ಇದಾದ ಕೆಲ ದಿನಗಳಲ್ಲಿ ಅಂಶು ಕುಮಾರಿ ತನ್ನ ಕುಟುಂಬಸ್ಥರಿಗೆ ವಿಡಿಯೊ ಕಾಲ್ ಮಾಡಿದ್ದಾಳೆ. “ನಾನಿನ್ನೂ ಬದುಕೇ ಇದ್ದೇನೆ” ಎಂದು ಅಂಶು ಕುಮಾರಿ ಕುಟುಂಬಸ್ಥರಿಗೆ ತಿಳಿಸಿದ್ದಾಳೆ. ತಾನು ಹುಡುಗನೊಬ್ಬನನ್ನು ಪ್ರೀತಿಸಿದ್ದು, ಆತನನ್ನು ಮದುವೆಯಾಗಲೆಂದು ಆತನೊಂದಿಗೆ ಓಡಿಬಂದಿರುವುದಾಗಿ ತಿಳಿಸಿದ್ದಾಳೆ. ಸದ್ಯ ಅತ್ತೆ ಮಾವ ಮತ್ತು ಆ ಯುವಕನೊಂದಿಗೆ ಜಾನಕಿ ನಗರದಲ್ಲಿ ವಾಸವಿರುವುದಾಗಿ ತಿಳಿಸಿದ್ದಾಳೆ. ಪೊಲೀಸರು ಕೂಡ ಆಕೆಗೆ ಕರೆ ಮಾಡಿ ವಿಚಾರವನ್ನು ಸ್ಪಷ್ಟಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: Viral Video: ಕಣ್ಣೀರು ಸುರಿಸಿದ ಅಲ್ಕರಾಜ್, ಜೆರ್ಸಿ ಹರಿದು ಸಂಭ್ರಮಿಸಿದ ಜೊಕೋವಿಕ್
ಇದೀಗ ಅಂತ್ಯಸಂಸ್ಕಾರ ಮಾಡಲಾದ ಯುವತಿಯ ಗುರುತನ್ನೂ ಪೊಲೀಸರು ಪತ್ತೆ ಹೆಚ್ಚಿದ್ದಾರೆ. ಅದು ಮತ್ತೊಂದು ಕತೆ. ಅದು ಮರ್ಯಾದಾ ಹತ್ಯೆಯ ಪ್ರಕರಣವಾಗಿದ್ದು, ಆಕೆಯನ್ನು ಪ್ರೀತಿಯ ಕಾರಣಕ್ಕಾಗಿ ಕೊಂದ ತಂದೆ – ತಾಯಿ ಪೊಲೀಸರಿಂದ ಕಣ್ತಪ್ಪಿಸಿಕೊಂಡಿದ್ದಾರೆ. ಪೊಲೀಸರ ಅವರ ಪತ್ತೆಗೆ ಬಲೆ ಬೀಸಿದ್ದಾರೆ.