ಕುಂದಾಪುರ: ಮೂಕ ಪ್ರಾಣಿಗಳಿಗೆ ನೋವಾದರೆ ಅದನ್ನು ಹೇಳಿಕೊಳ್ಳಲು ಬರುವುದಿಲ್ಲ. ಮನುಷ್ಯರೇ ಅದನ್ನು ಅರಿತುಕೊಂಡು ಸಹಾಯ ಮಾಡಬೇಕಿದೆ. ಆ ರೀತಿಯಲ್ಲಿ ಪ್ರಾಣಿಗಳಿಗೆ ಸಹಾಯ ಮಾಡಲಿಕ್ಕೆಂದೇ ಹಲವಾರು ಮಂದಿ ಎನ್‌ಜಿಒಗಳನ್ನು ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ ಕೂಡ. ಇದೀಗ ಬೈಕರ್ ಒಬ್ಬ ಕೆಸರಿನಲ್ಲಿ ಸಿಕ್ಕು ಒದ್ದಾಡುತ್ತಿದ್ದ ಹಸುವನ್ನು ರಕ್ಷಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜಾಲಿ ರೈಡ್ ಮಾಡುವ ಬೈಕರ್‌ಗಳಲ್ಲಿ ಈ ರೀತಿ ಪ್ರಾಣಿ ರಕ್ಷಣಾ ಮನೋಭಾವವನ್ನು ಕಂಡು ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸಲಾರಂಭಿಸಿದ್ದು, ವಿಡಿಯೊ ಭಾರೀ ವೈರಲ್ (Viral Video) ಆಗಿದೆ.
ಈ ರೀತಿಯ ಘಟನೆ ನಡೆದಿರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿ ಅಮಾಸೆಬೈಲಿನಲ್ಲಿ. ಬೈಕರ್ ತನ್ನ ಬೈಕಿನಲ್ಲಿ ಪ್ರಯಾಣಿಸುತ್ತಿದ್ದಾಗ ರಸ್ತೆ ಬದಿಯಲ್ಲಿನ ಕೆಸರಿನಲ್ಲಿ ಸಿಲುಕಿಕೊಂಡ ಹಸುವೊಂದು ಮೇಲೆ ಏಳಲೂ ಆಗದೆ ಅಲ್ಲೇ ಬಿದ್ದುಕೊಂಡಿರುವುದ ಆತನ ಕಣ್ಣಿಗೆ ಬಂದಿದೆ. ಬೇರೆ ಏನನ್ನೂ ಯೋಚನೆ ಮಾಡದ ಆತ, ಬೈಕ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ, ಹಸುವಿನ ಸಹಾಯಕ್ಕೆ ಮುಂದಾಗಿದ್ದಾನೆ. ಮಧ್ಯ ಪ್ರದೇಶದಿಂದ ಬಂದಿದ್ದ ಮತ್ತೋರ್ವ ವ್ಯಕ್ತಿಯೂ ಆತನ ಸಹಾಯಕ್ಕೆ ಬಂದಿದ್ದಾರೆ.
ಇದನ್ನೂ ಓದಿ: Viral News : ಎಕ್ಸ್ ಆಗಿರುವ ಟ್ವಿಟರ್ ಕಂಪನಿಯಲ್ಲಿದ್ದ ವಸ್ತುಗಳೆಲ್ಲ ಹರಾಜಿಗೆ! ಹೇಗೆ ಭಾಗವಹಿಸುವುದು?
ಇಬ್ಬರೂ ಸೇರಿಕೊಂಡು ಹಸುವನ್ನು ಕೆಸರಿನಿಂದ ಆಚೆ ತೆಗೆದು, ರಸ್ತೆ ಮೇಲೆ ಬಿಟ್ಟಿದ್ದಾರೆ. ಅದಾದ ನಂತರ ಹಸು ಎದ್ದು ನಿಂತಿದ್ದು, ತನ್ನ ಪಾಡಿಗೆ ತಾನು ರಸ್ತೆಯಲ್ಲಿ ನಡೆದು ಹೋಗಲಾರಂಭಿಸಿದೆ. ಈ ವೇಳೆ ಅವರಿಗೆ ಸ್ಥಳೀಯ ಮಹಿಳೆಯೊಬ್ಬರು ಕೂಡ ಸಹಾಯ ಮಾಡಿದ್ದಾರೆ. ಈ ಎಲ್ಲ ಸಮಯದಲ್ಲಿ ಮಳೆಯೂ ಸುರಿಯುತ್ತಿರುವುದನ್ನು ನೀವು ಗಮನಿಸಬಹುದು. ಕೊನೆಗೆ ಆ ಸ್ಥಳೀಯ ಮಹಿಳೆಯ ಮನೆಯಲ್ಲಿನ ನಲ್ಲಿಯಲ್ಲೇ ಬೈಕರ್ ತನ್ನ ಕೈಕಾಲುಗಳನ್ನು ತೊಳೆದುಕೊಂಡು ಪ್ರಯಾಣವನ್ನು ಮುಂದುವರಿಸಿದ್ದಾರೆ.
ಈ ವಿಡಿಯೊವನ್ನು ಅನ್ನಿ ಅರುಣ್ ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೊದ ಜತೆಯಲ್ಲಿ ಅದರ ಬಗ್ಗೆ ವಿವರಣೆಯನ್ನೂ ಕ್ಯಾಪ್ಶನ್ ರೂಪದಲ್ಲಿ ಕೊಡಲಾಗಿದೆ. ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೊ 85 ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆಗೊಂಡಿದೆ. 13 ಲಕ್ಷದಷ್ಟು ಮಂದಿ ಈ ವಿಡಿಯೊಗೆ ಲೈಕ್ ಮಾಡಿದ್ದಾರೆ. ಸಾವಿರಾರು ಮಂದಿ ಈ ವಿಡಿಯೊವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ ಕೂಡ. ಹಾಗೆಯೇ ಸಾವಿರಾರು ಮಂದಿ ವಿಡಿಯೊ ಬಗ್ಗೆ ಮೆಚ್ಚುಗೆಯ ಕಾಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ.
ಇದನ್ನೂ ಓದಿ: Viral News : ವೃಂದಾವನದ ಲಡ್ಡು ಕೃಷ್ಣ ಈಕೆಯ ಮಗನಂತೆ! ಕೃಷ್ಣನ ಮೂರ್ತಿಗ ಟಿ ಶರ್ಟ್, ಜೀನ್ಸ್ ತೊಡಿಸುವವರಿವರು!
“ಈ ಕಾಲದಲ್ಲಿ ಪ್ರಾಣಿಗಳು ಮತ್ತು ಪಕ್ಷಿಗಳನ್ನು ರಕ್ಷಣೆ ಮಾಡುವಂತಹ ನಿಮ್ಮಂತವರನ್ನು ನೋಡಿದಾಗ ಇನ್ನೂ ಮಾನವೀಯತೆ ಉಳಿದುಕೊಂಡಿದೆ ಎಂದು ಅನಿಸುತ್ತದೆ. ಈ ರೀತಿ ಕೆಲಸ ಮಾಡುವ ಎಲ್ಲ ಜನರು ನಮ್ಮ ಪಾಲಿಗೆ ಅಮೂಲ್ಯವಾದವರು” ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ. ಹಾಗೆಯೇ ಅನೇಕ ಮಂದಿ ವಿಡಿಯೊಗೆ “ಅಮೇಜಿಂಗ್ ಕೆಲಸ”, “ಗ್ರೇಟ್ ಸೋಲ್”, “ಗ್ರೇಟ್ ವರ್ಕ್” ಎನ್ನುವಂತಹ ಕಾಮೆಂಟ್‌ಗಳನ್ನು ಮಾಡಿದ್ದಾರೆ.