ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ, ಖ್ಯಾತ ಉದ್ಯಮಿ, ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಅವರು ರೊಟ್ಟಿ ತಯಾರಿಸಿದ್ದಾರೆ. ಅದೂ ಕೂಡ ಭಾರತದಲ್ಲಿ ತಯಾರಿಸುವಂತೆ ಹಿಟ್ಟು ಕಲೆಸಿ, ಅದನ್ನು ಲಟ್ಟಣಿಗೆಯಿಂದ ಲಟ್ಟಿಸಿ ಬೇಯಿಸಿ, ಮೇಲಿಂದ ತುಪ್ಪ ಸವರಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
ಬಿಲ್ ಗೇಟ್ಸ್ ಅವರು ರೊಟ್ಟಿ ಮಾಡಿದ ವಿಡಿಯೊವನ್ನು ಅಮೆರಿಕದ ಪ್ರಸಿದ್ಧ ಬಾಣಸಿಗ, ಜನಪ್ರಿಯ ಬ್ಲಾಗರ್ ಆಗಿರುವ ಐಟಾನ್ ಬರ್ನಾಥ್ ಅವರು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬಿಲ್ಗೇಟ್ಸ್-ಐಟಾನ್ ಜತೆಯಾಗಿಯೇ ರೊಟ್ಟಿ ಮಾಡಿದ್ದನ್ನು ವಿಡಿಯೊದಲ್ಲಿ ನೋಡಬಹುದು. ‘ಬಿಲ್ ಗೇಟ್ಸ್ ಮತ್ತು ನಾನು ಒಟ್ಟಾಗಿ ಭಾರತದ ರೊಟ್ಟಿ ಮಾಡಿದ್ದೇವೆ’ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಹಾಗೇ, ‘ನಾನು ಇತ್ತೀಚೆಗೆ ಭಾರತದ ಬಿಹಾರಕ್ಕೆ ಹೋಗಿ ಬಂದೆ. ಅಲ್ಲಿ ಹೊಸ ಬಿತ್ತನೆ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಗೋಧಿ ಬೆಳೆದು, ಅಧಿಕ ಇಳುವರಿ ಪಡೆಯುತ್ತಿರುವ ರೈತರನ್ನು ಭೇಟಿ ಮಾಡಿದೆ. ಹಾಗೇ, ರೊಟ್ಟಿ ಮಾಡುವುದರಲ್ಲಿ ಪಳಗಿರುವ ‘Didi Ki Rasoi’ ಕ್ಯಾಂಟೀನ್ಗಳ ಮಹಿಳೆಯರನ್ನೂ ಭೇಟಿ ಮಾಡಿದೆ’ ಎಂದು ಬರೆದುಕೊಂಡಿದ್ದಾರೆ.
ಬಿಲ್ ಗೇಟ್ಸ್ ಮತ್ತು ಐಟಾನ್ ಅವರು ಪರಸ್ಪರ ಮಾತನಾಡುತ್ತ ರೊಟ್ಟಿ ಮಾಡಿದರು. ಬಿಲ್ ಗೇಟ್ಸ್ ಅವರು ಮೊದಲು ಹಿಟ್ಟು ಕಲೆಸಿದರು. ಆದರೆ ಅದನ್ನು ಲಟ್ಟಣಿಗೆಯಿಂದ ಲಟ್ಟಿಸುವಾಗ ಐಟಾನ್ ಅದನ್ನು ಸರಿಯಾಗಿ ಅಂದರೆ ವೃತ್ತಾಕಾರದಲ್ಲಿಯೇ ಲಟ್ಟಿಸಿದರು. ಆದರೆ ಬಿಲ್ ಗೇಟ್ಸ್ ರೊಟ್ಟಿ ಆಕಾರ ಪಡೆಯಲೇ ಇಲ್ಲ..! ಇದೇ ವೇಳೆ ತಮ್ಮ ಅಡುಗೆ ಬಗ್ಗೆ ಮಾತನಾಡಿದ ಬಿಲ್ ಗೇಟ್ಸ್, ‘ನಾನು ಅಡುಗೆ ಮಾಡದೆ ತುಂಬ ಕಾಲವಾಯಿತು. ಈಗ ಪ್ರತಿದಿನ ಸೂಪ್ ಬಿಸಿ ಮಾಡುತ್ತೇನೆ ಅಷ್ಟೇ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: New York Auction | ಗಳಿಕೆಯಲ್ಲಿ ದಾಖಲೆ ಸೃಷ್ಟಿಸಲಿದೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕರ ಕಲಾಕೃತಿಗಳು
ಅಮೆರಿಕದ ಇಬ್ಬರು ಗಣ್ಯರು ಸೇರಿಕೊಂಡು ಭಾರತದ ರೊಟ್ಟಿ ಮಾಡಿದ್ದು, ಭಾರತೀಯರಿಗೆ ಸಖತ್ ಖುಷಿಕೊಟ್ಟಿದೆ. ಇಂಟರ್ನೆಟ್ನಲ್ಲಿ ವಿಡಿಯೊ ವೈರಲ್ ಆಗುತ್ತಿದ್ದಂತೆ ಅದನ್ನು ಹೊಗಳಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಬಿಲ್ ಗೇಟ್ಸ್ ಅವರ ಕಾಲೆಳೆದಿದ್ದಾರೆ. ‘ರೊಟ್ಟಿಗೆ ಆಕಾರವೇ ಇಲ್ಲ, ರೊಟ್ಟಿ ಹೇಗೆ ಮಾಡಬಾರದು ಎಂಬುದನ್ನು ಬಿಲ್ ಗೇಟ್ಸ್ ತೋರಿಸಿಕೊಟ್ಟಿದ್ದಾರೆ’ ಎಂದೂ ಕಮೆಂಟ್ ಹಾಕಿದ್ದಾರೆ.