ವಿದ್ಯೆ ಕಲಿಯುವವನಿಗೆ ಶ್ರದ್ಧೆ ಬೇಕು, ಕಲಿಸುವವನಿಗೆ ತಾಳ್ಮೆ ಬೇಕು ಎಂಬುದು ಅಕ್ಷರಶಃ ಸತ್ಯ. ಆದರೆ ಚೀನಾದ ಈ ಅಣ್ಣ ತನ್ನ ತಂಗಿಗೆ ಗಣಿತ ಹೇಳಿಕೊಡಲು ಸಾಧ್ಯವಾಗದೆ, ಆತನ ತಾಳ್ಮೆಯ ಕಟ್ಟೆ ಒಡೆದು ಹೋಗಿದೆ. ನಾವೆಲ್ಲರೂ ಅಷ್ಟೇ, ನಮ್ಮ ತಂಗಿಗೋ, ತಮ್ಮಂಗೋ ಅಥವಾ ಮಕ್ಕಳಿಗೋ ಒಂದು ವಿಷಯವನ್ನು ಬೋಧಿಸುತ್ತಿದ್ದಾಗ, ಎಷ್ಟೇ ಹೇಳಿದರೂ ಅವರು ಅದನ್ನು ಸರಿಯಾಗಿ ಕಲಿಯದೆ ಇದ್ದರೆ ನಮಗೆ ಕೋಪ ಬರುತ್ತದೆ. ಅವರಿಗೆ ಬೈಯುತ್ತೇವೆ, ಒಂದೇಟು ಹಾಕುವುದೂ ಇದ್ದೇ ಇರುತ್ತದೆ. ಆದರೆ ಪಾಪ, ಈ ಅಣ್ಣ ಮಾತ್ರ ಹಾಗಲ್ಲ. ತಂಗಿಗೆ ತಾನು ಎಷ್ಟೇ ವಿವರಿಸಿ, ಸರಳವಾಗಿ ಹೇಳಿದರೂ ಆಕೆಗೆ ಅರ್ಥವಾಗುತ್ತಿಲ್ಲ ಎಂದು ಹತಾಶೆಯಿಂದ ದೊಡ್ಡದಾಗಿ ಅತ್ತುಬಿಟ್ಟಿದ್ದಾನೆ. ವಿಡಿಯೊ ವೈರಲ್ ಆಗುತ್ತಿದ್ದು, ಸಖತ್ ಫನ್ನಿ ಎನ್ನಿಸಿದೆ.
ಈ ಅಣ್ಣನೂ ತೀರ ದೊಡ್ಡವನೇನೂ ಅಲ್ಲ, ಐದು ಅಥವಾ ಆರನೇ ಕ್ಲಾಸ್ ಇರಬಹುದು. ತನ್ನಗಿಂತ ಚಿಕ್ಕವಳಾದ ತಂಗಿಗೆ ಗಣಿತ ಹೇಳಿಕೊಡುತ್ತಿದ್ದ. ಆಕೆಗೆ ಸ್ಕೂಲ್ನಲ್ಲಿ ಕೊಟ್ಟ ಹೋಂವರ್ಕ್ ಮಾಡಲು ಸಹಾಯ ಮಾಡುತ್ತಿದ್ದ. ಆದರೆ ಏನೇ ಪ್ರಯತ್ನಪಟ್ಟರೂ ಅವಳಿಗೆ ಅದು ಅರ್ಥವಾಗುತ್ತಿಲ್ಲ ಎಂಬುದು ಅವನ ಅಳುವಿಗೆ ಕಾರಣ. ಆತನ ಅಮ್ಮ ವಿಡಿಯೊ ಮಾಡಿದ್ದಾರೆ. ‘ಹೀಗೆಲ್ಲ ಅಳುತ್ತಾರಾ? ಹೀಗಾದರೆ ನೀನೊಬ್ಬ ಉತ್ತಮ ಟೀಚರ್ ಆಗಲು ಸಾಧ್ಯವಿಲ್ಲ’ ಎಂದು ತಾಯಿ ತನ್ನ ಮಗನಿಗೆ ಹೇಳುವುದು ವಿಡಿಯೊದಲ್ಲಿ ಕೇಳಿಸುತ್ತದೆ. ಅದಕ್ಕೆ ಪ್ರತಿಯಾಗಿ ಹುಡುಗ ‘ನಾನಾಗಲೇ ಅವಳಿಗೆ (ತಂಗಿಗೆ) ಉತ್ತರವನ್ನು ಹೇಳಿದ್ದೇನೆ. ಚಿತ್ರದಲ್ಲಿ ಮೂರು ಲಂಬಕೋನಗಳಿವೆ ಎಂಬುದು ಅಲ್ಲಿ ಕಾಣುತ್ತಿದೆ. ಆದರೆ ಎರಡೇ ಎಂದು ಆಕೆ ವಾದಿಸುತ್ತಾಳೆ. ಎಷ್ಟು ಬಾರಿ ಹೇಳಿದರೂ ಅವಳಿಗದು ಅರ್ಥವೇ ಆಗುತ್ತಿಲ್ಲ’ ಎನ್ನುತ್ತ, ಜೋರಾಗಿ ಅಳುವುದನ್ನು ನೋಡಬಹುದು. ಅದೇ ಹೊತ್ತಿಗೆ ಆ ಬಾಲಕಿಯೂ ಗಣಿತ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಅಳುತ್ತಿರುತ್ತಾಳೆ.
ವಿಡಿಯೊಕ್ಕೆ 14 ಮಿಲಿಯನ್ಸ್ಗಳಷ್ಟು ವೀವ್ಸ್ ಬಂದಿವೆ. ಈ ಗಣಿತವೇ ಹಾಗೆ, ಬಹುತೇಕರನ್ನು ಅಳಿಸುತ್ತದೆ ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ‘ನನಗೆ ಯಾರಾದರೂ ಗಣಿತ ಕಲಿಸಲು ಬಂದರೆ, ಅವರೂ ಹೀಗೆ ಕಣ್ಣಲ್ಲಿ ನೀರು ಹಾಕಿಕೊಂಡೇ ಹೋಗಬೇಕಾಗುತ್ತದೆ’ ಎಂದು ಮತ್ತೊಬ್ಬರು ಹೇಳಿದ್ದಾರೆ.