ಭೋಪಾಲ್: ಬುಲ್ಡೋಜರ್ ಬಳಕೆಯಾಗುವುದೇ ಕಟ್ಟಡಗಳ ಕೆಡವಲು, ರಸ್ತೆ ಮಾಡಲು, ಗುಡ್ಡ ತೆರವುಗೊಳಿಸುವ ಕಾರ್ಯಕ್ಕೆ. ಆದರೆ ಮಧ್ಯಪ್ರದೇಶದಲ್ಲಿ ಬುಲ್ಡೋಜರ್ವೊಂದು ಆ್ಯಂಬುಲೆನ್ಸ್ ಕೆಲಸ ಮಾಡಿದೆ. ಮಧ್ಯಪ್ರದೇಶದ ಕಾಟ್ನಿ ಜಿಲ್ಲೆಯ ಖಿತೌಲಿ ರಸ್ತೆಯಲ್ಲಿ ಎರಡು ಬೈಕ್ಗಳ ನಡುವಿನ ಡಿಕ್ಕಿಯಿಂದ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದ. ಸ್ಥಳೀಯರು ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದರು. ಆದರೆ ಅರ್ಧತಾಸು ಕಳೆದರೂ ಅದು ಬಂದಿರಲಿಲ್ಲ. ಇತ್ತ ಅಪಘಾತಕ್ಕೀಡಾದವನ ಆರೋಗ್ಯ ಸ್ಥಿತಿ ಹದಗೆಡುತ್ತಿತ್ತು. ಆಟೋದವರ ಬಳಿ ಸಹಾಯ ಕೇಳಿದರೆ ಅವರೂ ಬರಲಿಲ್ಲ. ಅದನ್ನೆಲ್ಲ ನೋಡುತ್ತಿದ್ದ ಅಲ್ಲಿಯೇ ಇದ್ದ ಅಂಗಡಿಯವನೊಬ್ಬ ತನ್ನ ಜೆಸಿಬಿಯನ್ನು ಹೊರತೆಗೆದ. ಬಳಿಕ ಗಾಯಗೊಂಡು ನರಳುತ್ತಿದ್ದ ವ್ಯಕ್ತಿಯನ್ನು ಜೆಸಿಬಿಯಲ್ಲಿಟ್ಟುಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಗಾಯಗೊಂಡ ಯುವಕನನ್ನು ಮಹೇಶ್ ಬುರ್ಮಾನ್ (25) ಎಂದು ಗುರುತಿಸಲಾಗಿದೆ. ಬೈಕ್ ಆ್ಯಕ್ಸಿಡೆಂಟ್ನಿಂದ ಗಾಯಗೊಂಡು ನರಳಾಡುತ್ತಿದ್ದರೂ ಒಬ್ಬೇಒಬ್ಬ ವಾಹನ ಸವಾರನೂ ಆತನ ನೆರವಿಗೆ ಬಂದಿರಲಿಲ್ಲ. ಸ್ಥಳೀಯರೂ ಕಂಗಾಲಾಗಿದ್ದರು. ದಾರಿಯಲ್ಲಿ ಬರುತ್ತಿದ್ದ ವಾಹನಗಳಿಗೆಲ್ಲ ಕೈ ಅಡ್ಡ ಮಾಡುತ್ತಿದ್ದರು. ಆಗ ಸಹಾಯಕ್ಕೆ ಬಂದಿದ್ದು ಪುಷ್ಪೇಂದ್ರ ವಿಶ್ವಕರ್ಮ ಎಂಬುವರು. ಅವರು ಅಲ್ಲೇ ಅಟೋಮೊಬೈಲ್ ಅಂಗಡಿ ಇಟ್ಟುಕೊಂಡಿದ್ದರು. ಅವರದ್ದೇ ಆದ ಒಂದು ಜೆಸಿಬಿಯೂ ಇತ್ತು. ಅದನ್ನು ತನ್ನ ಸ್ನೇಹಿತ ರಫೀಕ್ಗೆ ಕೊಟ್ಟು, ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದಾರೆ. ರಫೀಕ್ ಮತ್ತು ಇನ್ನಿಬ್ಬರು ಸೇರಿ ಜೆಸಿಬಿಯ ಎದುರಿನ ಬಕೆಟ್ನಲ್ಲಿ ಆ ಹುಡುಗನನ್ನು ಮಲಗಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಅವನಿಗೆ ಚಿಕಿತ್ಸೆ ನಡೆಯುತ್ತಿದೆ.
ಇದನ್ನೂ ಓದಿ: Accident In Bangalore | ಜೀವ ಉಳಿಸಬೇಕಾದ ಆ್ಯಂಬುಲೆನ್ಸ್‌ನಿಂದ ಅಪಘಾತ : ದ್ವಿಚಕ್ರ ವಾಹನ ಚೂರುಚೂರು